Advertisement

ಸಾಲ ಪ್ರಳಯದಿಂದ ಕೃಷಿ ಕುಟುಂಬಗಳ ರಕ್ಷಣೆ ಹೇಗೆ?

01:07 PM Sep 03, 2018 | |

ರೈತರಿಗೆ ಪರಿಹಾರ ಒದಗಿಸಲಿಕ್ಕಾಗಿ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ, ಪಂಜಾಬ್‌ ಮತ್ತು ಕರ್ನಾಟಕ ರಾಜ್ಯಗಳು ಸಾಲ ಮನ್ನಾ ಘೋಷಿಸಿವೆ. ಇದು ರೈತರಿಗೆ ತಾತ್ಕಾಲಿಕ ಪರಿಹಾರ ಒದಗಿಸುತ್ತದೆ. ಆದರೆ, ಶೇಕಡಾ.40ರಷ್ಟು ರೈತರ ಆತ್ಮಹತ್ಯೆಗಳಿಗೆ ಕಾರಣವಾದ ರೈತರ ಸಾಲದ ಹೊರೆಗೆ ಇದು ಶಾಶ್ವತ ಪರಿಹಾರವಲ್ಲ. ಮತ್ತೆ ಮತ್ತೆ ಸಾಲ ಮನ್ನಾ ಮಾಡಿದರೆ, ಸಾಲ ಮರುಪಾವತಿ ಸಾಮರ್ಥ್ಯವಿರುವ ರೈತರೂ ಸಾಲ ಮರುಪಾವತಿಗೆ ಉತ್ಸಾಹ ತೋರುವುದಿಲ್ಲ. 

Advertisement

ಕಳೆದ ತಿಂಗಳು ಆಗಸ್ಟ್‌ ಎರಡನೇ ವಾರದಿಂದ ಮೂರು ವಾರಗಳ ಕಾಲ ದಿನದಿನವೂ ಕೇರಳ ಮತ್ತು ಕರ್ನಾಟಕದ ಕೊಡಗಿನಿಂದ ಜಲ ಪ್ರಳಯದ ಸುದ್ದಿ ಬರುತ್ತಲೇ ಇತ್ತು.  ಈ ನಡುವೆ, ಗ್ರಾಮೀಣ ಕೃಷಿಕುಟುಂಬಗಳು ಸಾಲ ಪ್ರಳಯದಲ್ಲಿ ಮುಳುಗುತ್ತಿರುವ ಸುದ್ದಿ ಸದ್ದು ಮಾಡಲೇ ಇಲ್ಲ.

ಗ್ರಾಮೀಣ ಕೃಷಿ ಕುಟುಂಬಗಳ ಹತಾಶೆ ದಿಗಿಲು ಹುಟ್ಟಿಸುತ್ತದೆ. ಉತ್ತಮ ಇಳುವರಿಗೆ ಹೆಸರಾದ ಆಂಧ್ರ ಪ್ರದೇಶದ ಪೂರ್ವ-ಗೋದಾವರಿ ಜಿಲ್ಲೆಯ ಕಳೆದ 36 ವರುಷಗಳ ಆಗುಹೋಗು ಪರಿಶೀಲಿಸಿದರೆ ತಿಳಿದು ಬರುವ ಸತ್ಯಾಂಶ: ಈ ಅವಧಿಯಲ್ಲಿ 19 ವರ್ಷಗಳಲ್ಲಿ ಅಲ್ಲಿನ ಭತ್ತದ ಬೆಳೆಗಾರರು ನಷ್ಟ ಅನುಭವಿಸಿದ್ದರು ಎಂಬುದು. ಹಾಗಾಗಿ, ಈ ಅವಧಿಯಲ್ಲಿ ಹಲವು ವರ್ಷಗಳಲ್ಲಿ ಅಲ್ಲಿನ ರೈತರು ಏನನ್ನೂ ಬೆಳೆಯಲಿಲ್ಲ. 2011ರಲ್ಲಂತೂ 40,468 ಹೆಕ್ಟೇರ್‌ ವಿಸ್ತಾರದಲ್ಲಿ ಅಲ್ಲಿ ಯಾವುದೇ ಬೆಳೆ ಬೆಳೆಯಲಿಲ್ಲ.

ಇಂಥ ಸಂಕಟಗಳೇ ರೈತರನ್ನು ಆತ್ಮಹತ್ಯೆಗೆ ತಳ್ಳುತ್ತವೆ. ಕಳೆದ 20 ವರ್ಷಗಳಲ್ಲಿ ಪ್ರತಿ ವರ್ಷವೂ ಸಾವಿರಾರು ರೈತರ ಆತ್ಮಹತ್ಯೆ. ರೈತರ ಒಟ್ಟು ಆತ್ಮಹತ್ಯೆಗಳ ಸಂಖ್ಯೆ ಮೂರು ಲಕ್ಷ ದಾಟಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋದ ಅನುಸಾರ, 2016 ಒಂದೇ ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 8,007. ರೈತರಿಗೆ ಪರಿಹಾರ ಒದಗಿಸಲಿಕ್ಕಾಗಿ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ, ಪಂಜಾಬ್‌ ಮತ್ತು ಕರ್ನಾಟಕ ರಾಜ್ಯಗಳು ಸಾಲ ಮನ್ನಾ ಘೋಷಿಸಿವೆ. ಇದು ರೈತರಿಗೆ ತಾತ್ಕಾಲಿಕ ಪರಿಹಾರ ಒದಗಿಸುತ್ತದೆ. ಆದರೆ, ಶೇಕಡಾ.40ರಷ್ಟು ರೈತರ ಆತ್ಮಹತ್ಯೆಗಳಿಗೆ ಕಾರಣವಾದ ರೈತರ ಸಾಲದ ಹೊರೆಗೆ ಇದು ಶಾಶ್ವತ ಪರಿಹಾರವಲ್ಲ.

ಮತ್ತೆ ಮತ್ತೆ ಸಾಲ ಮನ್ನಾ ಮಾಡಿದರೆ, ಸಾಲ ಮರುಪಾವತಿ ಸಾಮರ್ಥ್ಯವಿರುವ ರೈತರೂ ಸಾಲ ಮರುಪಾವತಿಗೆ ಉತ್ಸಾಹ ತೋರುವುದಿಲ್ಲ. ಹಾಗಾಗಿ, ಸಾಲಮನ್ನಾದಿಂದ ಇನ್ನೊಂದು ತೊಂದರೆ ಇದೆ. ಸಾಲ ಮರುಪಾವತಿ ಕಡಿಮೆಯಾಗುತ್ತಾ ಬಂದಂತೆ, ಬ್ಯಾಂಕುಗಳು ಸಾಲ ನೀಡುವುದನ್ನೇ ನಿಲ್ಲಿಸುತ್ತವೆ. ಮುಖ್ಯವಾಗಿ ಸಣ್ಣ ರೈತರಿಗೆ ಮತ್ತು ಗೇಣಿದಾರ ರೈತರಿಗೆ ಬ್ಯಾಂಕುಗಳು ಸಾಲ ಮಂಜೂರು ಮಾಡಲು ನಿಧಾನಿಸುತ್ತವೆ. ಇಲ್ಲವಾದರೆ ಸಾಲದ ಮೊತ್ತವನ್ನೇ ಕಡಿಮೆ ಮಾಡುತ್ತವೆ. ಅದಲ್ಲದೆ ಬ್ಯಾಂಕುಗಳು ಸಾಲಗಳಿಗೆ ಹೆಚ್ಚೆಚ್ಚು ಭದ್ರತೆ ಕೇಳುತ್ತವೆ.

Advertisement

ಇದರಿಂದಾಗಿ, ಸಣ್ಣರೈತರು ಮತ್ತು ಗೇಣಿದಾರ ರೈತರು ಬೀಜ, ಗೊಬ್ಬರ ಮತ್ತು ಪೀಡೆನಾಶಕಗಳ ಖರೀದಿಗಾಗಿ ಲೇವಾದೇವಿದಾರರನ್ನು ಸಂಪರ್ಕಿಸಬೇಕಾಗುತ್ತದೆ. ಜೊತೆಗೆ, ಬೋರ್‌ವೆಲ್‌ ಕೊರೆಸಲು, ಕುಟುಂಬದವರ ವೈದ್ಯಕೀಯ ವೆಚ್ಚ ಭರಿಸಲು, ಮಕ್ಕಳ ಮದುವೆ, ಶಿಕ್ಷಣ ವೆಚ್ಚಕ್ಕಾಗಿಯೂ ರೈತರಿಗೆ ಹಣ ಬೇಕಾಗುತ್ತದೆ.

ಗಮನಿಸಿ: ಬೀಜ-ಗೊಬ್ಬರ ಮಾರಾಟಗಾರರು, ಸ್ಥಳೀಯ ವ್ಯಾಪಾರಿಗಳು ಮತ್ತು ದಲ್ಲಾಳಿಗಳು  ಇವರೆಲ್ಲರೂ ಲೇವಾದೇವಿದಾರರೇ ಆಗಿದ್ದಾರೆ. ಇವರು ಒಳಸುರಿಗಳ ಬೆಲೆ ಹೆಚ್ಚಿಸುವ ಮತ್ತು ಫ‌ಸಲಿನ ಬೆಲೆ ಇಳಿಸುವ ಮೂಲಕ ಆತ್ಮಹತ್ಯೆರು ಭಾರೀ ನಷ್ಟ ಅನುಭವಿಸಲು ಕಾರಣರಾಗುತ್ತಾರೆ. ಎಲ್ಲ ಹಳ್ಳಿಗಳಲ್ಲಿಯೂ ಕಾರ್ಯಾಚರಿಸುವ ಲೇವಾದೇವಿದಾರರು ಎಲ್ಲರಿಗೂ ಪರಿಚಿತ ವ್ಯಕ್ತಿಗಳೇ ಆಗಿದ್ದಾರೆ. ಏಕೆಂದರೆ ಅವರು ಕೆಲವೇ ಕಾಗದಪತ್ರಗಳಿಗೆ ಸಹಿ ಪಡೆದು, ರೈತರಿಗೆ ತಕ್ಷಣವೇ ಸಾಲ ನೀಡುತ್ತಾರೆ. ಆದರೆ, ಅವರು ವಸೂಲಿ ಮಾಡುವ ಬಡ್ಡಿಯ ದರ ಜಾಸ್ತಿ  ವಾರ್ಷಿಕ ಶೇ.18ರಿಂದ 36. ಕೆಲವೊಮ್ಮೆ ಈ ಬಡ್ಡಿದರ ಶೇ.60. ಆಗುವುದೂ ಇದೆ. ಜೊತೆಗೆ ಸಾಲ ವಸೂಲಿಗಾಗಿ ಅವರು ಬೆದರಿಕೆ ತಂತ್ರಗಳನ್ನೂ ಬಳಸುತ್ತಾರೆ. ಹಾಗಾದರೆ ಬ್ಯಾಂಕುಗಳು ಸಾಮಾನ್ಯವಾಗಿ ಯಾರಿಗೆ ಸಾಲ ನೀಡುತ್ತವೆ ಅಂದಿರಾ? ಸಾಲಕ್ಕಾಗಿ ಭದ್ರತೆ ಒದಗಿಸಬಲ್ಲ ಶ್ರೀಮಂತ ರೈತರಿಗೆ ಬ್ಯಾಂಕುಗಳ ಸಾಲ ಸಿಗುತ್ತದೆ.  ಹಲವು ಪ್ರಕರಣಗಳಲ್ಲಿ, ಬ್ಯಾಂಕುಗಳು ಸಾಕಷ್ಟು ವಿಳಂಬ ಮಾಡಿ, ಅಂಥವರಿಗೆ ದೊಡ್ಡ ಮೊತ್ತದ ಸಾಲ ನೀಡುತ್ತವೆ.

ಲೇವಾದೇವಿದಾರರನ್ನು ಗ್ರಾಮೀಣ ಸಾಲ ಮಾರುಕಟ್ಟೆಯಿಂದ ತೊಲಗಿಸಲು ಕಳೆದ 50 ವರ್ಷಗಳಲ್ಲಿ ಸರಕಾರಗಳು ಕೈಗೊಂಡ ಪ್ರಧಾನ ಕ್ರಮಗಳು: ಬ್ಯಾಂಕುಗಳ ರಾಷ್ಟ್ರೀಕರಣ ಹಾಗೂ ಸಹಕಾರಿ ಸೊಸೈಟಿಗಳನ್ನು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಜಾಲವನ್ನು ಬಲಪಡಿಸುವುದು. ಆದರೆ, ಈ ಎಲ್ಲ ಹಣಕಾಸು ಸಂಸ್ಥೆಗಳಿಂದ ರೈತರ ಹೆಚ್ಚುತ್ತಿರುವ ಸಾಲ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಿಲ್ಲ.

ಇಂದಿಗೂ ಗ್ರಾಮೀಣ ಕೃಷಿಕುಟುಂಬಗಳ ಸಾಲ ಬೇಡಿಕೆಯ ಸುಮಾರು ಶೇ.40ರಷ್ಟನ್ನು ಪೂರೈಸುತ್ತಿರುವುದು ಖಾಸಗಿ ಮೂಲಗಳು! ಇದನ್ನು ಆಗಸ್ಟ್‌ 2018ರಲ್ಲಿ ಪ್ರಕಟವಾದ ಸರ್ವೆಯ ಫ‌ಲಿತಾಂಶಗಳು ಖಚಿತ ಪಡಿಸಿವೆ. ಅದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮಿಣ ಅಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) ನಡೆಸಿದ 2016-17ರ ಗ್ರಾಮೀಣ ಆರ್ಥಿಕರಂಗದ ಒಳಗೊಳ್ಳುವಿಕೆ ಸರ್ವೆ. ಅದರ ಪ್ರಕಾರ, ಅರೆವಾಸಿಗಿಂತ ಅಧಿಕ, ಅಂದರೆ ಶೇ.52.5 ಕೃಷಿಕುಟುಂಬಗಳು ಸಾಲದಲ್ಲಿ ಮುಳುಗಿವೆ. ಯಾಕೆಂದರೆ, ಸರ್ವೆಯ ದಿನದಂದು ಈ ಕೃಷಿಕುಟುಂಬಗಳು ಪಡೆದಿರುವ ಸರಾಸರಿ ಸಾಲ ರೂ.1,04,602 ಆಗಿದ್ದರೆ, ಇವುಗಳ ಸರಾಸರಿ ವಾರ್ಷಿಕ ಆದಾಯ ರೂ.1.07 ಲಕ್ಷ. ಅಂದರೆ, ಅವೆರಡೂ ಸರಿಸಮವಾಗಿವೆ ಎನ್ನಬಹುದು. ಗ್ರಾಮೀಣ ಕೃಷಿಕುಟುಂಬಗಳ ಹತಾಶೆಗೆ ಇದುವೇ ಮುಖ್ಯ ಕಾರಣ. (ಈ ಸರ್ವೆಗಾಗಿ 40,327 ಗ್ರಾಮೀಣ ಕುಟುಂಬಗಳ 1.88 ಲಕ್ಷ ಸದಸ್ಯರಿಂದ ಮಾಹಿತಿ ಸಂಗ್ರಹಿಸಲಾಗಿತ್ತು.)

ರೈತರ ಅಸಹಾಯಕ ಹಾಗೂ ಹತಾಶ ಸ್ಥಿತಿಗತಿ ಬಗ್ಗೆ ರಾಷ್ಟ್ರೀಯ ಸ್ಯಾಂಪಲ… ಸರ್ವೆಯ ಇತ್ತೀಚೆಗಿನ ವರದಿ ಏನೆನ್ನುತ್ತದೆ? ಬದಲಿ ಉದ್ಯೋಗದ ಅವಕಾಶಗಳಿದ್ದರೆ ಶೇ. 40ರಷ್ಟು ರೈತರು ಕೃಷಿಯನ್ನೇ ತೊರೆಯಲು ತಯಾರು ಎನ್ನುತ್ತದೆ. ಆದ್ದರಿಂದ, ರೈತರು ಕೃಷಿಯಲ್ಲೇ ಮುಂದುವರಿಯುವುದನ್ನು ಖಚಿತಪಡಿಸಲು ಕೆಲವು ಕ್ರಮಗಳನ್ನು ಸರಕಾರ ಜಾರಿ ಮಾಡಲೇ ಬೇಕಾಗಿದೆ: ಮೊದಲನೆಯದಾಗಿ, ರೈತರು ಬೆಳೆಸಿದ ಫ‌ಸಲಿಗೆ ಉತ್ಪಾದನಾ ವೆಚ್ಚದ ಕನಿಷ್ಠ ಶೇ. 150ರಷ್ಟು ಬೆಂಬಲ ಬೆಲೆ ನಿಗದಿ ಪಡಿಸುವುದು; ಎರಡನೆಯದಾಗಿ, ಸಹಕಾರಿ ಸೊಸೈಟಿಗಳು, ರೈತರ ಉತ್ಪಾದಕರ ಕಂಪೆನಿಗಳು ಮತ್ತು ಸ್ವಸಹಾಯ ಸಂಘಗಳು  ಇವನ್ನು ಬಲಪಡಿಸುವುದು; ಮೂರನೆಯದಾಗಿ, ಕೃಷಿ ಜಮೀನಿನ ಸಾಂದ್ರೀಕರಣ, ಸಮುದಾಯ ಕೃಷಿ ಮತ್ತು ಕೃಷಿ ಉತ್ಪನ್ನಗಳ ಮಾರಾಟಕ್ಕೆ ಬೆಂಬಲ ನೀಡುವುದು. ಇದರಿಂದಾಗಿ, ಸಣ್ಣರೈತರ ಚೌಕಾಸಿ ಸಾಮರ್ಥ್ಯ ಹೆಚ್ಚಾಗಿ, ಅವರ ಬವಣೆ ದೂರವಾಗಲು ಸಾಧ್ಯ. 

ಜೊತೆಗೆ, ಕೃಷಿಸಾಲಗಳ ವಾರ್ಷಿಕ ಬಡ್ಡಿದರ ಶೇ.8ಕ್ಕಿಂತ ಜಾಸ್ತಿ ಇರಬಾರದು ಎಂದು ಕೇಂದ್ರ ಸರಕಾರ ಕಾಯಿದೆಯನ್ನೇ ಜಾರಿ ಮಾಡಲಿ. ಹಣಕಾಸು ಸಂಸ್ಥೆಗಳು ಗ್ರಾಮೀಣ ಜನರಿಗೆ ಸಾಲ ನೀಡುವಾಗ ಮಾಡುವ ಅಧಿಕ ವೆಚ್ಚವನ್ನು (ನಗರವಾಸಿಗಳಿಗೆ ಸಾಲ ನೀಡುವ ವೆಚ್ಚಕ್ಕೆ ಹೋಲಿಸಿದಾಗ) ಸರಕಾರಗಳು ಭರಿಸಲಿ. ಸಾಲ ಮನ್ನಾ ಮಾಡುವ ಬದಲಾಗಿ, ಬೆಳೆ ವಿಮೆ ಕಡ್ಡಾಯ ಮಾಡಬೇಕು; ಹಾಗೂ ಎಲ್ಲ ರೈತರ (ಗೇಣಿದಾರ ರೈತರ ಸಹಿತ) ನಷ್ಟಕ್ಕೆ ವಿಮಾ ಪರಿಹಾರ ಪಡೆಯುವ ಹಕ್ಕನ್ನು ಮಾನ್ಯ ಮಾಡಬೇಕು (ಈಗ, ಬ್ಯಾಂಕ್‌/ ಸೊಸೈಟಿ ಸಾಲ ಪಡೆಯದ ರೈತರಿಗೆ ಬೆಳೆವಿಮೆ ಕಡ್ಡಾಯವಲ್ಲ.)

ಈ ಎಲ್ಲ ಸುಧಾರಣೆಗಳನ್ನು ಸರಕಾರ ಚಾಚೂ ತಪ್ಪದೆ ಕಾರ್ಯಗತಗೊಳಿಸಿದರೆ, ಕೃಷಿಕುಟುಂಬಗಳನ್ನು ಸಾಲ ಪ್ರಳಯದಿಂದ ರಕ್ಷಿಸಬಹುದು. ಆಗ, ಅವರ ಹತಾಶೆ ಮಾಯವಾಗಿ, ಅವರಿಗೆ ಭವಿಷ್ಯದಲ್ಲಿ ಭರವಸೆ ಮೂಡಬಹುದು, ಅಲ್ಲವೇ?

– ಅಡ್ಡೂರು ಕೃಷ್ಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next