Advertisement

ಖಿನ್ನತೆ ಮತ್ತು ಸ್ವಸಂಶಯ ಹೋರಾಟ, ನಿವಾರಣೆ ಹೇಗೆ?

07:08 PM Jan 18, 2020 | Sriram |

ಇದು ಆಧುನಿಕ ಯುಗ. ಔದ್ಯಮೀಕರಣ ಭಾರೀ ವೇಗದಲ್ಲಿದ್ದು, ಜನರು ತಮ್ಮ ಮೂಲಗಳಿಂದ ದೂರವಾಗುತ್ತಿದ್ದಾರೆ. ಇದರಿಂದಾಗಿ ಖಿನ್ನತೆ ಮತ್ತು ಉದ್ವಿಗ್ನತೆಯಂತಹ ಸಮಸ್ಯೆಗಳು ಸಾಮಾನ್ಯವಾಗಿಬಿಟ್ಟಿವೆ. ಹದಿಹರಯದವರು ಮತ್ತು ಯುವ ವಯಸ್ಕರು ಈ ಸಮಸ್ಯೆಗಳಿಗೆ ತುತ್ತಾಗುವುದು ಹೆಚ್ಚು. ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿಯೂ ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿದೆ. ಒತ್ತಡ, ಖಿನ್ನತೆಯಿಂದಾಗಿ ಆತ್ಮಹತ್ಯೆಗೆ ಶರಣಾದವರ ಸುದ್ದಿಗಳನ್ನು ಆಗಾಗ ಕೇಳುತ್ತಿರುತ್ತೇವೆ, ಓದುತ್ತಿರುತ್ತೇವೆ.

Advertisement

ಹಾಗಾದರೆ ಪರಿಹಾರ ಏನು?
ಏರುಗತಿಯಲ್ಲಿರುವ ಈ ಸಮಸ್ಯೆಗೆ ಪರಿಹಾರವು ನಮ್ಮೊಳಗೆಯೇ ಇದೆ. ನಾವೆಲ್ಲ ಇಂದು ಸಾಮಾಜಿಕ ಜಾಲತಾಣಗಳ ಚಟವನ್ನು ಹತ್ತಿಸಿಕೊಂಡು ಬಿಟ್ಟಿದ್ದೇವೆ ಮತ್ತು ದಿನದ 24 ತಾಸು ಕೂಡ ಸ್ಮಾರ್ಟ್‌ಫೋನ್‌ಗಳಿಗೆ ಅಂಟಿಕೊಳ್ಳುತ್ತಿದ್ದೇವೆ. ಇದರಿಂದಾಗಿ ನಾವು ಸುಳ್ಳು ಜಗತ್ತಿನಲ್ಲಿ ಬದುಕುವಂತಾಗಿದೆಯಲ್ಲದೆ ನಮ್ಮ ಭಾವನೆಗಳನ್ನು ಇತರರ ಜತೆಗೆ ಹೇಳಿಕೊಂಡು, ಹಂಚಿಕೊಳ್ಳುವುದರಿಂದ ವಂಚಿತರಾಗಿದ್ದೇವೆ. ಹೆಚ್ಚುತ್ತಿರುವ ಈ ಸಮಸ್ಯೆಗೆ ಪರಿಹಾರವು ಪಂಚಭೂತಗಳಲ್ಲಿದೆ1. ಭೂಮಿ, 2. ಅಗ್ನಿ, 3. ನೀರು, 4. ವಾಯು. 5. ಆಕಾಶಹೇಗೆ ಎಂಬುದನ್ನು ನೋಡೋಣ.

1. ಭೂಮಿ: ನೀವು ಖನ್ನರಾಗಿದ್ದರೆ ಅಥವಾ ಏಕಾಂಗಿತನದ ಭಾವನೆ ನಿಮ್ಮನ್ನು ಕಾಡುತ್ತಿದ್ದರೆ ಬರಿಗಾಲಿನಿಂದ ನೆಲದ ಮೇಲೆ ನಡೆದಾಡಿ. ತಾಯಿ ಭೂಮಿಗೆ ಎಷ್ಟು ಸಾಧ್ಯವೋ ಅಷ್ಟು ನಿಕಟವಾಗುವುದಕ್ಕೆ ಪ್ರಯತ್ನ ಮಾಡಿ. ಹೂದೋಟ, ತರಕಾರಿ ತೋಟದಲ್ಲಿ ಕೆಲಸ ಮಾಡುವುದು ಮಾನಸಿಕ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರೋಪಾಯ. ಮಗುವೊಂದು ಮಣ್ಣಿನಲ್ಲಿ ಆಟವಾಡುತ್ತಿರುವುದನ್ನು ಎಂದಾದರೂ ಗಮನಿಸಿದ್ದೀರಾ? ಮಗುವನ್ನು ಮಣ್ಣಿನೊಡನೆ ಅದರ ಪಾಡಿಗೆ ಬಿಟ್ಟುಬಿಟ್ಟರೆ ಅದು ಅತ್ಯಂತ ಸಂತೋಷಪಡುತ್ತದೆ. ನಾವು ಕೂಡ ಮಕ್ಕಳಿಂದ ಇದನ್ನು ಕಲಿಯಬೇಕಿದೆ ಮತ್ತು ಮಣ್ಣಿಗೆ ಎಷ್ಟು ಸಾಧ್ಯವೋ ಅಷ್ಟು ನಿಕಟವಾಗಿರುವುದಕ್ಕೆ ಪ್ರಯತ್ನ ಪಡಬೇಕಿದೆ.
ಹಾಗೆಯೇ, ಪೌಷ್ಟಿಕಾಂಶಯುಕ್ತವಾದ ಆಹಾರಗಳನ್ನು ಸೇವಿಸುವುದು ಮತ್ತು ಜಂಕ್‌ ಆಹಾರಗಳನ್ನು ದೂರವಿರಿಸುವುದು ಮಾನಸಿಕ ಖಿನ್ನತೆಯನ್ನು ದೂರಮಾಡಲು ತುಂಬಾ ಸಹಕಾರಿಯಾಗಿದೆ.

2. ಅಗ್ನಿ: ಪಂಚಭೂತಗಳಲ್ಲಿ ನಾವು ಹತ್ತಿರವಾಗಬೇಕಿರುವ ಇನ್ನೊಂದು ಅಗ್ನಿ. ದಿನವೂ ಬೆಳಗ್ಗೆ ಸೂರ್ಯೋದಯಕ್ಕೆ ಮುನ್ನ ಎದ್ದೇಳುವುದನ್ನು ಕಲಿತುಕೊಳ್ಳಿ ಮತ್ತು ಉದಯಿಸುತ್ತಿರುವ ಸೂರ್ಯನೆದುರು ಸಮಯ ಕಳೆಯಿರಿ. ಮನೆಯಲ್ಲಿ ಕೊಠಡಿಗಳು ತೆರೆದಿದ್ದು, ಸೂರ್ಯ ಕಿರಣಗಳು ಒಳಗೆ ಪ್ರವೇಶಿಸುವಂತಿರಬೇಕು. ಚಳಿಯ ಸಮಯದಲ್ಲಿ ಶಿಬಿರಾಗ್ನಿಯ ಮುಂದೆ ಕುಳಿತುಕೊಳ್ಳುವುದರಿಂದಲೂ ನಮ್ಮಲ್ಲಿ ಧನಾತ್ಮಕ ಶಕ್ತಿ ಉದಯಿಸುತ್ತದೆ, ಶಕ್ತಿ ಜಾಗೃತಗೊಳ್ಳುತ್ತದೆ.

3. ನೀರು: ನೀರಿನ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಕಡಿಮೆ ಅಂದಾಜು ಮಾಡಲಾಗದು. ಒಂದು ಸ್ನಾನ ಮಾಡಿದಾಗ ಅದು ಉಂಟು ಮಾಡುವ ಚೈತನ್ಯ ಮತ್ತು ತಾಜಾತನ ನಮಗೆಲ್ಲ ಗೊತ್ತಿರುವುದೇ ಆಗಿದೆ. ಜತೆಗೆ ನಮ್ಮ ದೇಹದಲ್ಲಿ ಸಾಕಷ್ಟು ಜಲಾಂಶವನ್ನು ಕಾಯ್ದುಕೊಳ್ಳಲು ಸರಿಯಾಗಿ ನೀರು ಕುಡಿಯುವುದು ಕೂಡ ಬಹಳ ಮುಖ್ಯ.

Advertisement

4. ಗಾಳಿ: ತಾಜಾ ಗಾಳಿ ಪವಾಡಗಳನ್ನು ಉಂಟು ಮಾಡುವಂತಹ ಶಕ್ತಿಯುಳ್ಳದ್ದು. ಅದು ನಮ್ಮನ್ನು ಪುನಶ್ಚೇತನಗೊಳಿಸುತ್ತದೆ. ಮುಂಜಾನೆ ತಾಜಾ ಗಾಳಿಗೆ ಒಡ್ಡಿಕೊಂಡು ಸ್ವಲ್ಪ ಹೊತ್ತು ಧ್ಯಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ನಸುಕಿನಲ್ಲಿ ತಂಪಾದ ತಾಜಾ ಗಾಳಿಯನ್ನು ಸೇವಿಸುತ್ತ ಅರ್ಧ ತಾಸು ನಡೆದಾಡುವುದು ಹಿತಕರ.

5. ಆಕಾಶ: ನೀವು ನಿದ್ರಿಸುವ ಕೊಠಡಿಯಿಂದ ಆಕಾಶ ಚೆನ್ನಾಗಿ ಕಾಣಲಿ. ಬೆಳಗ್ಗೆ ಎದ್ದಾಗ ಮತ್ತು ರಾತ್ರಿ ಮಲಗುವಾಗ ವಿಶಾಲ ಆಕಾಶವನ್ನು ನೋಡುವುದು ಸಕಾರಾತ್ಮಕ ಆಲೋಚನೆಗಳು, ಭಾವನೆಗಳು ಮೂಡಲು ಸಹಕಾರಿ.

ಇಲ್ಲಿ ಹೇಳಿರುವ ಮಾರ್ಗೋಪಾಯಗಳು ನನ್ನ ವೈಯಕ್ತಿಕ ಅನುಭವದಿಂದ ಕಲಿತ ಪಾಠಗಳಾಗಿವೆ. ಖನ್ನತೆಯು ಯಾರಿಗೂ ಉಂಟಾಗಬಹುದಾದಂಥದ್ದು, ಅದರ ಬಗ್ಗೆ ನಾಚಿಕೆಪಡಬೇಕಿಲ್ಲ. ನೀವು ಖನ್ನತೆಯಿಂದ ಬಳಲುತ್ತಿರುವಿರಾದರೆ ವೃತ್ತಿಪರ ಮನೋವೈದ್ಯರು, ಆಪ್ತ ಸಮಾಲೋಚಕರ ಸಹಾಯ ಪಡೆಯಿರಿ.

ನಿಸರ್ಗಕ್ಕೆ ಎಷ್ಟು ಸಾಧ್ಯವೋ ಅಷ್ಟು ನಿಕಟರಾಗಿರಿ, ಸಾಮಾಜಿಕ ಜಾಲತಾಣಗಳ ಮಿಥ್ಯಾಜಗತ್ತಿನಿಂದ ದೂರವಿರಿ.ಮೇಲೆ ನೀಡಿರುವ ಸಲಹೆಗಳನ್ನು ಪಾಲಿಸಲು ಪ್ರಯತ್ನಿಸಿ, ನಿಮ್ಮ ಬದುಕು ಸುಂದರವಾಗುತ್ತದೆ.

ಖಿನ್ನತೆ ಮತ್ತು ಉದ್ವಿಗ್ನತೆಯಿಂದ ಬಳಲುತ್ತಿರುವ ಯಾರಾದರೂ ನಿಮಗೆ ಗೊತ್ತಿದ್ದರೆ,ಅದರಿಂದ ಹೊರಬರಲು ಅವರಿಗೆ ಸಹಾಯ ಮಾಡಿ.ಖನ್ನತೆಯು ಆದಷ್ಟು ಬೇಗನೆ ನಿವಾರಣೆಯಾಗಬೇಕಾದಂತಹ ಸಮಸ್ಯೆಯಾಗಿದೆ.

-ಡಾ| ಆನಂದ್‌ದೀಪ್‌ ಶುಕ್ಲಾ,
ಅಸೊಸಿಯೇಟ್‌ ಪ್ರೊಫೆಸರ್‌
ಓರಲ್‌ ಮತ್ಯು ಮ್ಯಾಕ್ಸಿಲೊಫೇಶಿಯಲ್‌ ಸರ್ಜರಿ ವಿಭಾಗ, ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next