Advertisement

ಪರಿಹಾರ ಪಡೆಯುವುದು ಹೇಗೆ?

11:53 PM May 15, 2020 | Sriram |

ಉಡುಪಿ: ಕೋವಿಡ್‌ 19 ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿದ್ದವರಿಗೆ ರಾಜ್ಯ ಸರಕಾರ ನೀಡಿದ ಪ್ಯಾಕೇಜ್‌ ಸವಲತ್ತು ಪಡೆಯಲು ಫ‌ಲಾನುಭವಿಗಳು ಹರಸಾಹಸಪಡುತ್ತಿದ್ದಾರೆ.

Advertisement

ಮೇ 6ರಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹೂವು, ಹಣ್ಣು, ತರಕಾರಿ ಬೆಳೆದ ರೈತರು, ನೇಕಾರರು, ಕುಲಕಸುಬು ಆಧಾರಿತ ಶ್ರಮಿಕರು, ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಉದ್ಯಮ ವಲಯಕ್ಕೆ 1,610 ಕೋ.ರೂ. ಮೊತ್ತದ ಬೃಹತ್‌ ಪರಿಹಾರ ಪ್ಯಾಕೇಜನ್ನು ಘೋಷಿಸಿದ್ದರು. ಕ್ಷೌರಿಕ, ಮಡಿವಾಳ, ಆಟೋ ಮತ್ತು ಟ್ಯಾಕ್ಸಿ ಚಾಲಕ ವೃತ್ತಿಯವರಿಗೆ ಒಂದು ಕಂತಿನ ಪರಿಹಾರವಾಗಿ 5 ಸಾವಿರ ರೂ., ನೇಕಾರರಿಗೆ ಸಾಲ ಮನ್ನಾ ಮತ್ತು ವಾರ್ಷಿಕ ಎರಡು ಸಾವಿರ ರೂ., ಕಟ್ಟಡ ಕಾರ್ಮಿಕರಿಗೆ ಈಗಾಗಲೇ ನೀಡಿರುವ ಎರಡು ಸಾವಿರ ರೂ. ಜತೆಗೆ ಹೆಚ್ಚುವರಿಯಾಗಿ ಮೂರು ಸಾವಿರ ರೂ. ಪರಿಹಾರ ಘೋಷಿಸಿದ್ದ‌ರು.

ಆದರೆ ಸವಲತ್ತುಗಳನ್ನು ಹೇಗೆ ಪಡೆಯಬೇಕು ಎಂಬ ಬಗ್ಗೆ ಸರಕಾರ ಯಾವುದೇ ಸುತ್ತೋಲೆ ಹೊರಡಿಸದ ಕಾರಣ ಫ‌ಲಾನುಭವಿಗಳ ಗೊಂದಲಕ್ಕೆ ಕಾರಣವಾಗಿದೆ.

ಫ‌ಲಾನುಭವಿಗಳು
ಉಡುಪಿ ಜಿಲ್ಲೆಯಲ್ಲಿ ಸವಿತಾ ಸಮಾಜದಲ್ಲಿ ನೋಂದಾಯಿಸಿದ ಕ್ಷೌರದಂಗಡಿಯ ಮಾಲಕರು ಮತ್ತು ಕೆಲಸಗಾರರು 3 ಸಾವಿರ ಮಂದಿ ಇದ್ದಾರೆ. ಸದ್ಯ ಸರಕಾರಕ್ಕೆ ಬೇಕಾದ ಆಧಾರ್‌ ಕಾರ್ಡ್‌, ಬ್ಯಾಂಕ್‌ ಸಂಬಂಧಿ ಮಾಹಿತಿಯನ್ನು ಸವಿತಾ ಸೇವಾ ಸಮಾಜ ಸಂಗ್ರಹಿಸಿ ನೀಡುತ್ತಿದೆ. ಉಳಿದಂತೆ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್‌ ಚಾಲಕರ ಸಂಖ್ಯೆಯು 3,600ರಷ್ಟಿದೆ.

ಬೇಕಿದೆ ತಾಂತ್ರಿಕ ನೆರವು
ಫ‌ಲಾನುಭವಿಗಳಿಗೆ ಸವಲತ್ತು, ಅನ್ಯ ರಾಜ್ಯ, ಜಿಲ್ಲೆಗಳಿಗೆ ತೆರಳುವ ವಲಸೆ ಕಾರ್ಮಿಕರಿಗೆ ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಲು ತಾಂತ್ರಿಕವಾಗಿ ಕಷ್ಟಕರವಾಗುತ್ತಿದೆ. ಇದನ್ನೇ ಬಂಡವಾಳವನ್ನಾಗಿಸಿ ಹಣ ಮಾಡುವ ವರ್ಗವೂ ಇದೆ. ಈ ನಡುವೆ ಕೆಲವು ಸ್ವಯಂ ಸೇವಕರು ಉಚಿತವಾಗಿ ಈ ಬಗ್ಗೆ ತಿಳಿಹೇಳುತ್ತಿದ್ದಾರೆ. ಇಂತಹದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಸರಕಾರವೇ ಉಚಿತವಾಗಿ ಕಲ್ಪಿಸಿದರೆ ಜನರಿಗೆ ಮತ್ತಷ್ಟು ಅನುಕೂಲವಾಗಲಿದೆ.

Advertisement

ಸೇವಾ ಸಿಂಧುವಿನಲ್ಲಿ ಶೀಘ್ರ ಲಭ್ಯ
ಫ‌ಲಾನುಭವಿಗಳು ಸವಲತ್ತು ಪಡೆಯುವ ಮಾರ್ಗಸೂಚಿಗಳ ಬಗ್ಗೆ ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಶೀಘ್ರದಲ್ಲಿ ಮಾಹಿತಿಗಳು ಲಭ್ಯವಾಗಲಿವೆ. ಈ ಮೂಲಕ ಫ‌ಲಾನುಭವಿಗಳಿಗೆ ಸವಲತ್ತು ಸಿಗಲಿದೆ. ಈ ಬಗೆಗಿನ ಕೆಲಸ ಕಾರ್ಯಗಳು ನಡೆಯುತ್ತಿವೆ.
-ಸದಾಶಿವ ಪ್ರಭು, ಅಪರ ಜಿಲ್ಲಾಧಿಕಾರಿ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next