Advertisement
ಮೊದಲ ಹಂತವೆಂದರೆ ಸಾಮಾನ್ಯ ತುರ್ತು ಕಾಯಿಲೆಗಳ ಬಗ್ಗೆ ಪ್ರಾಥಮಿಕ ಮಾಹಿತಿ ಪಡೆದುಕೊಳ್ಳುವುದು. ನಮ್ಮ ಆಸುಪಾಸಿನಲ್ಲಿ ಅಥವಾ ಸ್ಥಳೀಯ ಮಾಧ್ಯಮಗಳಲ್ಲಿ ಕಂಡು ಕೇಳಿ ಬರುವ ಸಾಮಾನ್ಯ ತುರ್ತು ಕಾಯಿಲೆಗಳ ಬಗ್ಗೆ ಪ್ರಜ್ಞಾವಂತರು ತುಸು ತಿಳಿದಿರುವುದು ಲೇಸು. ಇವು ಶೀತ, ನೆಗಡಿ, ಫ್ಲ್ಯೊ ಚಿಕನ್ ಪಾಕ್ಸ್ (ಕೋಟಲೆ) ಇತ್ಯಾದಿ ಪ್ರಾಣಾಂತಿಕವಲ್ಲದ ಸೋಂಕುಗಳಿರಬಹುದು ಅಥವಾ ದಡಾರ, ಡೆಂಗಿ, ಮಲೇರಿಯಾ, ಚಿಕುನ್‌ಗುನ್ಯಾ ಇತ್ಯಾದಿ ತುಸು ಮಟ್ಟಿಗೆ ಅಪಾಯಕಾರಿ ರೋಗಗಳೂ ಆಗಿರಬಹುದು. ಅಥವಾ ಪ್ರಾಚೀನ ಕಾಲದಿಂದಲೂ ಮನುಕುಲವನ್ನು ಬಾಧಿಸುತ್ತಿರುವ ಕ್ಷಯ ರೋಗವೇ ಆಗಿರಬಹುದು. ಇವೆಲ್ಲದರಲ್ಲಿಯೂ ಮುಖ್ಯ ರೋಗಲಕ್ಷಣಗಳ ಬಗ್ಗೆ ಮಾಹಿತಿ ಇದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆಯಲು ಸಹಾಯವಾಗುತ್ತದೆ. “”ಜ್ವರ ಕಾಣಿಸಿಕೊಂಡ ಕೂಡಲೇ ವೈದ್ಯರ ಬಳಿ ಹೋದರಾಯಿತಲ್ಲವೇ? ಮತ್ತೇಕೆ ಚಿಂತೆ? ಎಂಬ ಸುಲಭ ಉಪಾಯ ಹಲವರಿಗೆ ಹೊಳೆಯಬಹುದು. ನಾವು ಕೂಡಲೇ ವೈದ್ಯರ ಬಳಿ ಹೋಗಿ ಸಲಹೆ ಪಡೆಯುವುದು ತಪ್ಪಲ್ಲ.
Related Articles
Advertisement
ಆರ್ಥಿಕ ವಿಚಾರಕ್ಕೆ ಬಂದಾಗ ಇನ್ನೊಂದು ಮುಖ್ಯ ಮಾಹಿತಿ ಗಮನದಲ್ಲಿಟ್ಟು ಕೊಳ್ಳಬೇಕು. ಮೇಲ್ಕಾಣಿಸಿದ ಹೆಚ್ಚಿನ ಸೋಂಕು ರೋಗಗಳು ಆಕಸ್ಮಿಕವಾಗಿ ಬರುವಂತಹವು ಮತ್ತು ಇವುಗಳನ್ನು ಬರದಂತೆ ನಿರೋಧಿಸುವುದು ಕಷ್ಟ ಸಾಧ್ಯ. ಎಷ್ಟೇ ಜಾಗರೂಕರಾಗಿದ್ದರೂ ಕಾಯಿಲೆ ಬರಬಹುದು. ರೋಗದ ಬಗೆಗಿನ ಮಾಹಿತಿ ನಮ್ಮನ್ನು ಮಾನಸಿಕವಾಗಿ ಸಿದ್ಧಗೊಳಿಸಬಹುದೇ ಹೊರತು ಆರ್ಥಿಕವಾಗಿ ಅಲ್ಲ. ಆದ್ದರಿಂದ ಪ್ರಾಜ್ಞನಾದ ವ್ಯಕ್ತಿ ತನಗೆ ಲಭ್ಯವಿರುವ ವೈದ್ಯಕೀಯ ವಿಮಾ ಸೌಲಭ್ಯಗಳ ಬಗ್ಗೆಯೂ ಮಾಹಿತಿ ಇಟ್ಟುಕೊಂಡಿದ್ದು, ಸೂಕ್ತ ದಾಖಲೆಪತ್ರಗಳನ್ನು ಸಿದ್ಧಪಡಿಸಿಕೊಳ್ಳುವುದು ಮುಖ್ಯ. ವಿಮೆಯನ್ನು ನವೀಕರಿಸಲಾಗಿದೆಯೇ ಎಂಬುದನ್ನೂ ಖಾತರಿ ಪಡಿಸಿಕೊಳ್ಳಬೇಕು. ವೈದ್ಯಕೀಯ ವಿಮೆಯ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿ ಅಪ್ರಸ್ತುತವಾದ್ದರಿಂದ ಕೊಟ್ಟಿಲ್ಲ. ವ್ಯಕ್ತಿಯ ಅಥವಾ ಕುಟುಂಬದ ಮೇಲೆ ಧುತ್ತೆಂದು ಎರಗುವ ಇನ್ನೊಂದು ವೈದ್ಯಕೀಯ ವೆಚ್ಚವೆಂದರೆ ಶಸ್ತ್ರಚಿಕಿತ್ಸೆಯದ್ದು.
ಇಲ್ಲಿಯೂ ಆಯಾ ರೋಗಗಳ ಬಗ್ಗೆ ಪ್ರಾಥಮಿಕ ಮಾಹಿತಿ, ಚಿಕಿತ್ಸೆಯ ಬಗ್ಗೆ ಪ್ರಾಥಮಿಕ ಮಾಹಿತಿಯು ಚಿಕಿತ್ಸೆಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ಸಹಕಾರಿಯಾಗಬಲ್ಲುದಾದರೂ ಶಸ್ತ್ರಚಿಕಿತ್ಸೆ ಬೇಕಾಗಬಹುದಾದಂತಹಾ ಕಾಯಿಲೆಗಳಿರಬಹುದಾದ ಸಂದರ್ಭಗಳಲ್ಲಿ ಚಿಕಿತ್ಸೆಯಲ್ಲಿ ವಿಳಂಬ ಸಲ್ಲದು, ಮಾತ್ರವಲ್ಲ ಪ್ರಾಣಾಪಾಯವನ್ನು ತಂದೊಡ್ಡಬಲ್ಲುದು. ಉದಾಹರಣೆಗೆ, ಅಪೆಂಡಿಸೈಟಿಸ್, ಪಿತ್ತಕೋಶದಲ್ಲಿನ ಸೋಂಕು, ಕರುಳಿನ ರಕ್ತಸ್ರಾವ, ಜಠರ ಅಥವಾ ಸಣ್ಣ ಕರುಳಿನ ತೂತಿನಿಂದುಂಟಾಗುವ ಉದರದ ಸೋಂಕು (ಪೆರಿಟೋನೈಟಿಸ್), ಮೂತ್ರನಾಳಗಳಲ್ಲಿನ ಕಲ್ಲು, ಅಂಡಾಶಯದ ತಿರುಚುವಿಕೆ ಇತ್ಯಾದಿ. ಇವೆಲ್ಲದರಲ್ಲಿಯೂ ಹೊಟ್ಟೆನೋವು (ಉದರಶೂಲೆ) ಅತಿಮುಖ್ಯ ರೋಗಲಕ್ಷಣವಾಗಿರುತ್ತದೆ.
ಎಲ್ಲಾ ಕಾಯಿಲೆಗಳ ತೀವ್ರತೆಯೂ ಒಂದೇ ಸಮಾನವಾಗಿರುವುದಿಲ್ಲವಾದರೂ, ಕಾಯಿಲೆ ಏನಿರಬಹುದು ಎಂಬುದನ್ನು ನಿರ್ಧರಿಸುವಲ್ಲಿ ತಪಾಸಣೆಗಳ (ಉದಾ: ರಕ್ತಪರೀಕ್ಷೆ ಅಲ್ಟ್ರಾಸೌಂಡ್ ಇತ್ಯಾದಿ) ಆವಶ್ಯಕತೆ ಇಲ್ಲಿ ಹೆಚ್ಚಿರುವುದರಿಂದ ಹೆಚ್ಚಿನ ವಿಳಂಬ ತರುವಲ್ಲಿ, ಚಿಕಿತ್ಸೆಯ ಹೊಣೆಯನ್ನು ತಜ್ಞರಿಗೆ ಬಿಡುವುದು ಶ್ರೇಯಸ್ಕರ. ಶಸ್ತ್ರ ಚಿಕಿತ್ಸೆ ಬೇಕಾಗುವ ಕಾಯಿಲೆಗಳಿದ್ದಾಗಲೂ ವೈದ್ಯರ ಬಳಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಷ್ಟು ವ್ಯವಧಾನ ಇದ್ದೇ ಇರುತ್ತದೆ. ಆದರೆ ಶಸ್ತ್ರಚಿಕಿತ್ಸೆಯ ವೆಚ್ಚ ಸಾಮಾನ್ಯವಾಗಿ ಹೆಚ್ಚಿರುವುದರಿಂದ ರೋಗಿಯ ಆರ್ಥಿಕ ಸ್ಥಿತಿ ಇಲ್ಲಿ ಪೆಡಂಭೂತದಂತೆ ಎದ್ದು ನಿಲ್ಲುತ್ತದೆ. ಇಲ್ಲಿ ವೈದ್ಯರು ಅಸಹಾಯಕರಾಗಿರುವುದುಂಟು. ಆದ್ದರಿಂದ ಇಂದು ವೈದ್ಯಕೀಯ ವಿಮೆ ಎಂಬುದು ಅನಿವಾರ್ಯ ಎಂದೇ ಹೇಳಬೇಕಾಗುತ್ತದೆ. ವ್ಯವಸ್ಥೆಯನ್ನು ತೆಗಳಿ ಪ್ರಯೋಜನವಾಗಲಾರದು.
ತುರ್ತು ಚಿಕಿತ್ಸೆ ಬೇಕಾಗುವ ಇನ್ನೊಂದು ಸಂದರ್ಭವೆಂದರೆ ಅಪಘಾತ. ಆದರೆ ಇಲ್ಲಿ ಸಂದರ್ಭದ “”ತುರ್ತು” ಸ್ವಯಂ ವೇದ್ಯವಾಗಿರುವುದರಿಂದ ಚರ್ಚಿಸುವ ಪ್ರಮೇಯವಿಲ್ಲ. ಅಪಘಾತ ಯಾವುದೇ ಇರಲಿ ಕೂಡಲೇ ಆಸ್ಪತ್ರೆಗೆ ರೋಗಿಯನ್ನು ಸಾಗಿಸುವುದೊಂದೇ ದಾರಿ. ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸೆ ಮತ್ತು ಆರ್ಥಿಕ ಕೋನವು ಅಷ್ಟೇ ಮುಖ್ಯ ಎಂದು ಸಮಾಜದ ಗಮನಕ್ಕೆ ತರುವುದೇ ಈ ಲೇಖನದ ಉದ್ದೇಶ.
ಡಾ| ಶಿವಾನಂದ ಪ್ರಭು
ಪ್ರೊಫೆಸರ್, ಸರ್ಜರಿ ವಿಭಾಗ,
ಕೆ.ಎಂ.ಸಿ. ಮಂಗಳೂರು