ಪಿಡಿಎಫ್ (portable document format) ಫೈಲ್ ಕುರಿತು ನೀವು ಕೇಳಿರಬಹುದು. ಯಾವುದೇ ಬರಹ, ಚಿತ್ರಗಳ ಪ್ರತಿ, ಲೈಸೆನ್ಸ್, ಆಧಾರ್ ಮುಂತಾದ ದಾಖಲೆಗಳನ್ನು ಪಿಡಿಎಫ್ ಮಾದರಿಯಲ್ಲಿ ಸಂರಕ್ಷಿಸಿ ಇಟ್ಟುಕೊಳ್ಳಬಹುದು. ಅಡೋಬ್ ರೀಡರ್ ಸಾಫ್ಟ್ವೇರನ್ನು ಅಳವಡಿಸಿಕೊಂಡರೆ ಪಿಡಿಎಫ್ ದಾಖಲೆಗಳನ್ನು ಕಂಪ್ಯೂಟರ್‌ನಲ್ಲೂ ಓದಬಹುದು, ಮೊಬೈಲ್‌ನಲ್ಲೂ ಓದಬಹುದು ಎನ್ನುವುದು ಅದರ ಹೆಗ್ಗಳಿಕೆ. ಜತೆಗೆ ಇದರ ದೊಡ್ಡ ಉಪಯೋಗ ಏನೆಂದರೆ, ಪಿಡಿಎಫ್ ದಾಖಲೆಯನ್ನು ಸುಲಭವಾಗಿ ತಿದ್ದಲು ಆಗದೇ ಇರುವುದು. ಹೀಗಾಗಿ, ಒಮ್ಮೆ ಸಂರಕ್ಷಿಸಿಕೊಂಡ ಡಾಟಾ ಬದಲಾವಣೆ ಆಗಿರಬಹುದು ಎನ್ನುವ ಆತಂಕವಿಲ್ಲ. ಆದರೆ ಅಗತ್ಯ ವಿಷಯಗಳನ್ನು ಎಡಿಟ್ ಮಾಡುವುದು ಕಷ್ಟಸಾಧ್ಯ. ಕೆಲವೊಮ್ಮೆ ಪಿಡಿಎಫ್ ಫೈಲನ್ನು ಎಡಿಟ್ ಮಾಡಬೇಕಾದ ಸಂದರ್ಭಗಳು ಒದಗಿ ಬರುವುದುಂಟು. ಅಂಥ ತುರ್ತಿನ ಸಂದರ್ಭದಲ್ಲಿ ಎಡಿಟ್ ಮಾಡುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.
-ಪಿಡಿಎಫ್ ಫೈಲನ್ನು ಅಡೋಬ್ ಆಕ್ರೋಬ್ಯಾಟ್ ರೀಡರ್ ಸಾಫ್ಟ್ವೇರ್‌ನಲ್ಲಿ ತೆರೆಯಿರಿ.
– ಬಲಗಡೆ “ಎಡಿಟ್ ಪಿಡಿಎಫ್’ ಎಂಬ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿ.
– ನೀವು ಬದಲಾಯಿಸಬೇಕೆಂದಿರುವ ಟೆಕ್ಸ್ಟ್ (ಪಠ್ಯ)ವನ್ನು ಸೆಲೆಕ್ಟ್ ಮಾಡಿ.
– ಸೆಲೆಕ್ಟ್ ಮಾಡಿದ ಪಠ್ಯವನ್ನು ನಿಗದಿತ ಜಾಗದಲ್ಲಿ ಟೈಪ್ ಮಾಡಿ ಇಲ್ಲವೇ ಕಾಪಿ ಪೇಸ್ಟ್ ಮಾಡಿ. ಆ ಪದಗಳ ಗಾತ್ರಕ್ಕೆ ತಕ್ಕಂತೆ ಮುಂದಿನ ಪಠ್ಯದ ಭಾಗ(ಆಲೈನ್‌ಮೆಂಟ್) ಹೊಂದಿಕೊಂಡು ಕುಳಿತುಕೊಳ್ಳಲಿದೆ.
ಬದಲಾವಣೆಯ ಪಠ್ಯ ದೀರ್ಘವಾಗಿದ್ದಂಥ ಸಂದರ್ಭ ಗಳಲ್ಲಿ ಈ ಮಾದರಿಯ ಎಡಿಟ್ ಸೂಕ್ತವೆನಿಸುವುದು. ಪಠ್ಯಗಳ ಸಾಲು ಒಂದರ ಮೇಲೊಂದು ಕುಳಿತುಕೊಳ್ಳುವುದೋ ಇಲ್ಲವೇ, ಯಾವ ಯಾವುದೋ ಜಾಗಗಳಲ್ಲಿ ಸೇರಿಕೊಳ್ಳಲೂ ಬಹುದು. ಆದರೆ ಸಣ್ಣಪುಟ್ಟ ಬದಲಾವಣೆಗಳನ್ನು ಯಾವುದೇ ತೊಂದರೆಯಿಲ್ಲದೆ ಮಾಡಿಕೊಳ್ಳಬಹುದು.