ನಿವೃತ್ತ ಜೀವನ ವಿಶ್ರಾಂತಿ, ನೆಮ್ಮದಿ, ನಿಶ್ಚಿಂತೆಯ ಜೀವನವಾಗಬೇಕು ಎಂದು ಎಲ್ಲರೂ ಭಾವಿಸುವುದು, ಆಶಿಸುವುದು ಸಹಜವೇ.
ಆದರೆ ನಿವೃತ್ತ ಜೀವನ ನಿಜಕ್ಕೂ ಎಲ್ಲರ ಪಾಲಿಗೆ ಹಾಗೆಯೇ ಇರಬೇಕೇಂದೇನೂ ಇಲ್ಲ. ಇದಕ್ಕೆ ಕಾರಣಗಳು ಹಲವಾರು ಇರುತ್ತವೆ. ಮೊದಲನೇಯದಾಗಿ ಆರೋಗ್ಯ, ಎರಡನೇಯದಾಗಿ ಆದಾಯವಿಲ್ಲದ ನಿವೃತ್ತರನ್ನು ಅವರ ಮನೆಯವರು ಕಾಣುವ ರೀತಿ, ಮೂರನೇಯದಾಗಿ ದೈಹಿಕವಾಗಿ, ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ಹೆಚ್ಚುವ ಅವಲಂಬನೆ, ಹೀಗೆ ಈ ನೆಗೆಟೀವ್ ಅಂಶಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಈ ಎಲ್ಲ ಕಾರಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ನಿವೃತ್ತ ಜೀವನ ವಿಶ್ರಾಂತಿ, ನೆಮ್ಮದಿ, ನಿಶ್ಚಿಂತೆಯ ಜೀವನವಾಗುವುದು ಅವರವರ ಭಾಗ್ಯವೇ ಸರಿ. ಹಾಗಿದ್ದರೂ ನಿವೃತ್ತ ಜೀವನದ ಸಕಲ ಸವಾಲುಗಳನ್ನು ಎದುರಿಸುವುದಕ್ಕಾಗಿ ನಾವು ನಮ್ಮನ್ನು ತಯಾರುಗೊಳಿಸುವ ಪ್ರಯತ್ನವನ್ನು ತಾರಣ್ಯದಲ್ಲೇ ಮಾಡಬೇಕಾಗುತ್ತದೆ ಎನ್ನುವುದು ನಿರ್ವಿವಾದ. ನಾವು 25ನೇ ವಯಸ್ಸಿನಲ್ಲಿರುವಾಗ ಜೀವನದ ಬಹು ದೂರದ ಸನ್ನಿವೇಶದ ಪರಿಕಲ್ಪನೆ, ಆಲೋಚನೆಯನ್ನು ಬೆಳೆಸಬೇಕಾಗುತ್ತದೆ ಎಂದು ಹಣಕಾಸು ತಜ್ಞರು ಹೇಳುತ್ತಾರೆ. ನಿವೃತ್ತಿಯ ಬದುಕಿಗಾಗಿ “ನಿವೃತ್ತ ಜೀವನ ನಿಧಿ’ಯನ್ನು ರೂಪಿಸುವ ಕೆಲಸವನ್ನು ನಾವು ತಾರುಣ್ಯದಿಂದಲೇ ಮಾಡಬೇಕಾಗುತ್ತದೆ !
25ನೇ ವಯಸ್ಸಿನಲ್ಲಿ ನೀವು ಉದ್ಯೋಗಸ್ಥರಾಗಿ ತಿಂಗಳಿಗೆ 25,000 ರೂ. ಸಂಬಳ ಪಡೆಯುತ್ತಿದ್ದೀರಿ ಎಂದಿಟ್ಟು ಕೊಳ್ಳೋಣ. ಹೀಗೆ ನಿಮ್ಮ ಔದ್ಯೋಗಿಕ ಬದುಕಿನ ಮೊದಲ ತಿಂಗಳದ ಆದಾಯ ಕೈಗೆ ಬರುತ್ತಲೇ ನೀವು ಪ್ರತೀ ತಿಂಗಳು, ನಿವೃತ್ತಿಯ ಬದುಕಿಗೆಂದು, ಶೇ.10ರಷ್ಟು ಉಳಿತಾಯ ನಿಧಿಯನ್ನು ರೂಪಿಸಿಕೊಳ್ಳಲು ಮುಂದಾದರೆ ಮತ್ತು ಈ ಉಳಿತಾಯ ಪ್ರವೃತ್ತಿಯನ್ನು ಒಂದು ತಪಸ್ಸಿನ ರೀತಿಯಲ್ಲಿ ಎಡೆಬಿಡದೆ ಮುಂದುವರಿಸಿಕೊಂಡು ಹೋದರೆ, ನೀವು ನಿವೃತ್ತರಾಗುವ ನಿಮ್ಮ “ನಿವೃತ್ತ ಜೀವನ ನಿಧಿ’ಯು 86 ಲಕ್ಷ ರೂ. ಗಳಿಗೆ ಬೆಳೆದಿರುತ್ತದೆ. ನೆನಪಿಡಿ, ಈ ಮೊತ್ತವನ್ನು ನೀವು ಬಡ್ಡಿ ಆದಾಯದ ಠೇವಣಿಯಲ್ಲಿ ತೊಡಗಿಸಿದರೆ ನಿಮಗೆ ಪ್ರತೀ ತಿಂಗಳೂ 11,610 ರೂ.ಗಳ ನಿಮ್ಮದೇ ಆದ “ಪೆನ್ಶನ್ ಆದಾಯ’ ನಿಮಗೆ ಸಿಗುತ್ತಿರುತ್ತದೆ. ಎಂದರೆ ಈ ಮೊತ್ತವು ನಿಮ್ಮ ಮಾಸಿಕ ವೇತನದ ಶೇ.46.4 ಆಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಒಂದೊಮ್ಮೆ ನೀವು ಶೇ.10ರ ನಿಮ್ಮ ಮಾಸಿಕ ಉಳಿತಾಯ ಪ್ರಮಾಣವನ್ನು ವರ್ಷಂಪ್ರತಿ ಶೇ.5ರಷ್ಟು ಏರಿಸುತ್ತಾ ಹೋದಿರೆಂದರೆ ನಿಮ್ಮ “ನಿವೃತ್ತ ನಿಧಿ’ಯು ಅಂತಿಮವಾಗಿ 1.36 ಕೋಟಿ ರೂ. ಮೊತ್ತಕ್ಕೆ ಬೆಳೆದಿರುತ್ತದೆ. ಎಂದರೇ ಈ ಮೊತ್ತದ ಠೇವಣೀಕರಣದಿಂದ ನಿಮಗೆ ತಿಂಗಳಿಗೆ 18,347 ರೂ. (ಇಂದಿನ ಮೌಲ್ಯದ ಪ್ರಕಾರ) ಕೈಗೆ ಬರುತ್ತದೆ. ಎಂದರೆ ಇದು ನಿಮ್ಮ ಮಾಸಿಕ ವೇತನದ ಶೇ.71.5 ಆಗಿರುತ್ತದೆ. ಇದರ ಅರ್ಥ ನೀವು ನಿಮ್ಮ ಹೂಡಿಕೆ ಆದಾಯವನ್ನು ನಿಮ್ಮ ಈಗಿನ ಮಾಸಿಕ ವೇತನದ ಶೇ.87ರಷ್ಟು ಬದಲಿಸಿಕೊಂಡಂತೆ ಆಗುತ್ತದೆ.
ನೀವೀಗ 30ರ ಹರೆಯದವರಾದರೆ
ಈಗ ನೀವು 30ರ ಹರೆಯದವರಾದಲ್ಲಿ ನಿಮ್ಮ ಮಾಸಿಕ ವೇತನದ ಶೇ.20ರಷ್ಟನ್ನು ನೀವು ನಿಮ್ಮ ನಿವೃತ್ತ ನಿಧಿಗಾಗಿ ಉಳಿತಾಯ ಮಾಡಬೇಕು; ಹಾಗೆ ಮಾಡಿದಲ್ಲಿ ನೀವು ನಿವೃತ್ತರಾಗುವಾಗ ನೀವೇ ರೂಪಿಸಿಕೊಂಡಿರುವ ನಿಮ್ಮ ನಿವೃತ್ತಿ ನಿಧಿಯು 56.3 ಲಕ್ಷ ರೂ. ಮೊತ್ತಕ್ಕೆ ಬೆಳೆದಿರುತ್ತದೆ. ಇಂದಿನ ಮೌಲ್ಯದ ಪ್ರಕಾರ ಇದು 32,843 ರೂ.ಗಳ ತೆರಿಗೆ ಪೂರ್ವ ಆದಾಯವನ್ನು ಸೃಷ್ಟಿಸುತ್ತದೆ ಮತ್ತು ಇದು ನಿಮ್ಮ ಈಗಿನ ಮಾಸಿಕ ವೇತನದ ಶೇ.65.7ರಷ್ಟಾಗುತ್ತದೆ.
ಆದರೆ ನೀವು ಒಂದೊಮ್ಮೆ ನಿಮ್ಮ ಮಾಸಿಕ ಉಳಿತಾಯದ ಪ್ರಮಾಣವನ್ನು ಶೇ.5ರಷ್ಟು ವರ್ಷಂಪ್ರತಿ ಏರಿಸಿದರೆ ನಿಮ್ಮ ನಿವೃತ್ತಿ ನಿಧಿಯು 2.8 ಕೋಟಿ ರೂ.ಗಳಿಗೆ ಬೆಳೆದಿರುತ್ತದೆ. ಇದನ್ನು ಠೇವಣೀಕರಿಸಿದರೆ ನಿಮಗೆ ಮಾಸಿಕ 48,268 ರೂ. ಮಾಸಿಕ ಆದಾಯ ಪ್ರಾಪ್ತವಾಗುತ್ತಿರುತ್ತದೆ ಇದು ನಿಮ್ಮ ಈಗಿನ ಪೂರ್ಣ ವೇತನಕ್ಕೆ ಸರಿಸಮನಾಗಿರುತ್ತದೆ ಎನ್ನುವುದು ಗಮನಾರ್ಹ.
ನೀವೀಗ 35ರ ಹರೆಯದವರಾದರೆ
ಈಗ ನೀವು 35ರ ಹರೆಯದವರಾದರೆ ಮತ್ತು ನಿಮ್ಮ ಮಾಸಿಕ ವೇತನ ಈಗ 80,000 ರೂ. ಇದೆ ಎಂದಾದರೆ ನೀವು ನಿಮ್ಮ ನಿವೃತ್ತ ಜೀವನ ನಿಧಿಗೆಂದು ನಿಮ್ಮ ಮಾಸಿಕ ವೇತನದ ಶೇ.20ರಷ್ಟನ್ನು ಉಳಿತಾಯ ಮಾಡಬೇಕು. ಹಾಗೆ ಮಾಡಿದಲ್ಲಿ ನಿಮ್ಮ ನಿವೃತ್ತ ಜೀವನ ನಿಧಿಯು 1.65 ಕೋಟಿ ರೂ. ಮೊತ್ತಕ್ಕೆ ಬೆಳೆದಿರುತ್ತದೆ. ಈಗಿನ ದರಗಳಿಗೆ ಹೊಂದಿಸಿದರೆ ನಿಮಗೆ ಇದರ ಠೇವಣೀಕರಣದಿಂದ 36,448 ರೂ.ಗಳ ತೆರಿಗೆಪೂರ್ವ ಮಾಸಿಕ ಆದಾಯ ಸಿಗುತ್ತದೆ. ಆದರೆ ಗಮನಿಸಿ, ಇದು ನಿಮ್ಮ ನೈಜ ಆವಶ್ಯಕತೆಯ ಶೇ.45 ಆಗಿರುತ್ತದೆ.
ಆದುದರಿಂದ ನೀವು ನಿಮ್ಮ ನಿವೃತ್ತ ಜೀವನ ನಿಧಿಗೆ ವರ್ಷಂಪ್ರತಿ ಶೇ.7ರಷ್ಟು ಹೆಚ್ಚು ಮೊತ್ತವನ್ನು ಉಳಿತಾಯ ಮಾಡಿ ಕಲೆ ಹಾಕಬೇಕಾಗುತ್ತದೆ. ಆ ಮೂಲಕ ನೀವು ನಿಮ್ಮ ಈಗಿನ ಮಾಸಿಕ ವೇತನದ ಶೇ.75ರಷ್ಟು ಆದಾಯವನ್ನು ನಿಮ್ಮ ನಿವೃತ್ತ ಜೀವನ ನಿಧಿಯ ಠೇವಣೀಕರಣದಿಂದ ಪಡೆಯಬಹುದಾಗಿರುತ್ತದೆ.
ನೀವೀಗ 40 ವರ್ಷ ವಯಸ್ಸಿನವರಾದರೆ
ನೀವೀಗ 40 ವರ್ಷ ವಯಸ್ಸಿನವರಾದರೆ ಮತ್ತು ನೀವು ಮಾಸಿಕ 1.20 ಲಕ್ಷ ರೂ. ಆದಾಯ ಪಡೆಯುವವರಾದರೆ ನೀವು ನಿಮ್ಮ ನಿವೃತ್ತ ಜೀವನ ನಿಧಿಗೆ ಶೇ.30ರ ಪ್ರಮಾಣದಲ್ಲಿ ಉಳಿತಾಯ ಮಾಡಬೇಕಾಗುತ್ತದೆ. ಹಾಗಿದ್ದರೂ ಕೂಡ ನೀವು ನಿಮ್ಮ ಈಗಿನ ವೇತನ ಮೊತ್ತಕ್ಕೆ ಸಮನಾದ ಠೇವಣಿ ಆದಾಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ವರ್ಷಂಪ್ರತಿ ನೀವು ನಿಮ್ಮ ಉಳಿತಾಯವನ್ನು ಶೇ.7ರಷ್ಟು ಹೆಚ್ಚಿಸುತ್ತಾ ಹೋಗಬೇಕಾಗುತ್ತದೆ. ಆಗ ಮಾತ್ರವೇ ನಿಮ್ಮ ಈಗಿನ ವೇತನಕ್ಕೆ ಸಮಾನವಾದ ಆದಾಯವನ್ನು ನಿಮ್ಮ ನಿವೃತ್ತಿ ಜೀವನ ನಿಧಿಯ ಠೇವಣೀಕರಣದಿಂದ ಪಡೆಯಲು ಸಾಧ್ಯವಾಗುವುದು.
ಈ ಮೇಲಿನ ಲೆಕ್ಕಾಚಾರದಲ್ಲಿ ಕೆಲವು ಊಹೆಗಳನ್ನು ಮಾಡಲಾಗಿದೆ. ಅವು ಹೀಗಿವೆ :
1. ನಿವೃತ್ತಿ ವಯಸ್ಸು 55 ಎಂದು ತಿಳಿಯಲಾಗಿದೆ.
2. ಹಣದುಬ್ಬರ ಶೇ.5ರಲ್ಲೇ ಇರುವುದೆಂದು ಊಹಿಸಲಾಗಿದೆ.
3. ಶೇ.12 ಪ್ರಮಾಣದಲ್ಲಿ ನಿಮ್ಮ ಹೂಡಿಕೆಯ ಮೇಲೆ ಇಳುವರಿ ಸಿಗುವುದೆಂದು ನಿರೀಕ್ಷಿಸಲಾಗಿದೆ.
4. ನಿಮ್ಮ ನಿವೃತ್ತ ಜೀವನ ನಿಧಿಯನ್ನು ನೀವು ಶೇ.7ರ ಬಡ್ಡಿ ಸಿಗುವ ಬ್ಯಾಂಕ್ ಠೇವಣಿಯಲ್ಲಿ ಮರುಹೂಡಿಕೆ ಮಾಡುವಿರೆಂದು ತಿಳಿಯಲಾಗಿದೆ.
ಒಟ್ಟಿನಲ್ಲಿ ಮುಖ್ಯವಾದ ಪ್ರಶ್ನೆ ಏನೆಂದರೆ ನಾವು ನಿವೃತ್ತರಾಗುವಾಗ ನಮ್ಮ ತಿಂಗಳ ಸಂಬಳದ ಎಷ್ಟು ಪ್ರಮಾಣದ ಹಣವನ್ನು ನಾವು ಪ್ರತೀ ತಿಂಗಳೂ ಪಡೆಯಲು ಬಯಸುತ್ತೇವೆ ಎನ್ನುವುದು. ನಮ್ಮ ಕೊನೇ ಸಂಬಳದ ಶೇ.70ರಿಂದ 80ರಷ್ಟು ಹಣ ಬಡ್ಡಿಯ ಮೂಲಕ ನಮಗೆ ಪ್ರತೀ ತಿಂಗಳು ಸಿಗುವಂತಿದ್ದರೆ ಒಳಿತೆಂಬ ಅಭಿಪ್ರಾಯ ಪರಿಣತರದ್ದು. ನಿವೃತ್ತರಾದ ಬಳಿಕ ನಮಗೆ ಸಾಲ ಮರುಪಾವತಿ, ಮಕ್ಕಳ ಶಿಕ್ಷಣ, ಟ್ಯೂಶನ್, ಕೆಲಸದ ನಿಮಿತ್ತ ದಿನನಿತ್ಯ ವಾಹನ ಸಂಚಾರ ಇತ್ಯಾದಿ ಖರ್ಚುಗಳು ಇರುವುದಿಲ್ಲ.
ಆದುದರಿಂದ ನಿವೃತ್ತ ಜೀವನಕ್ಕಾಗಿ ನಾವು ನಮ್ಮದೇ ಆದ ನಿಧಿಯನ್ನು ರೂಪಿಸಿಕೊಳ್ಳಲು ಪ್ರತೀ ತಿಂಗಳೂ ಕನಿಷ್ಠ 1,000 ರೂ. ಹಣವನ್ನು ಸಿಪ್ ಮೂಲಕ ತೊಡಗಿಸುವುದು ಉತ್ತಮ. ಈಕ್ವಿಟಿ ಮ್ಯೂಚುವಲ್ ಫಂಡ್ಗಳು ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಆದಾಯ ಪಡೆಯುವುದಕ್ಕೆ ಅತ್ಯಂತ ಸೂಕ್ತ.