Advertisement

Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ

05:51 PM Nov 27, 2024 | ಕಾವ್ಯಶ್ರೀ |

ಭಾರತದಲ್ಲಿ ಬಂಗಾರಕ್ಕೆ ನೀಡುವಷ್ಟು ಮಹತ್ವ ಬೇರೆ ಯಾವ ಲೋಹಕ್ಕೂ ನೀಡುವುದಿಲ್ಲ. ಮಹಿಳೆಯರಿಗಂತೂ ಚಿನ್ನ ಎಂದರೆ ಅಚ್ಚುಮೆಚ್ಚಿನ ಲೋಹಗಳಲ್ಲಿ ಒಂದು. ಪ್ರತಿನಿತ್ಯ ಆಭರಣ ಧರಿಸುತ್ತಿದ್ದರೆ ದಿನ ಕಳೆದಂತೆ ಕ್ರಮೇಣ ಅದರ ಹೊಳಪು ಕಡಿಮೆಯಾಗುತ್ತಾ ಹೋಗುತ್ತದೆ. ಮಹಿಳೆಯರ ಅಂದ ಹೆಚ್ಚಿಸುವ ಆಭರಣವನ್ನು ಅವರೇ ನಿರ್ವಹಣೆ ಮಾಡುವುದನ್ನು ಕಲಿಯುವುದು ಅಗತ್ಯವಾಗಿದೆ.

Advertisement

ಇತ್ತೀಚಿಗೆ ಚಿನ್ನಾಭರಣದ ನಿರ್ವಹಣೆ ಬಗ್ಗೆ ಗಮನಹರಿಸುವುದು ತುಂಬಾ ಕಡಿಮೆಯಾಗಿದೆ. ಅಂಗಡಿಗಳಿಗೆ ಕೊಂಡು ಹೋದರೆ ಅವರೇ ಸ್ವಚ್ಛ ಮಾಡಿ ಕೊಡುತ್ತಾರೆ. ಮನೆಯಲ್ಲಿ ಚಿನ್ನಾಭರಣವನ್ನು ಸ್ಚಚ್ಛ ಮಾಡುವಷ್ಟು ಸಮಯ ಇಂದಿನವರಿಗಿಲ್ಲ. ಆದರೆ ನಾವು ಧರಿಸುವಂತಹ ಚಿನ್ನ, ಬೆಳ್ಳಿಯ ಆಭರಣಗಳನ್ನು ನಿರ್ವಹಣೆ ಮಾಡುವುದು ಅಗತ್ಯವಾಗಿದೆ. ತುಂಬಾ ದೀರ್ಘ ಕಾಲದವರೆಗೆ, ಅಂದರೆ ದಿನನಿತ್ಯ ಧರಿಸುತ್ತಿರುವ ಆಭರಣದಲ್ಲಿ ಧೂಳಾದರೆ ಅದು ಹೊಳಪು ಕಳೆದುಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಅದನ್ನು ಮನೆಯಲ್ಲೇ ಸ್ವಚ್ಛಗೊಳಿಸುವುದು ಉತ್ತಮ.

ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಮನೆಯಲ್ಲೇ ಆಭರಣಗಳನ್ನು ಸ್ವಚ್ಛಗೊಳಿಸಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ:

ಅಡಿಗೆ ಸೋಡಾ

Advertisement

ಆಭರಣಗಳನ್ನು ಸ್ವಚ್ಛಗೊಳಿಸಲು, ಕಲೆಗಳನ್ನು ನಿವಾರಿಸಲು ಅಡುಗೆ ಸೋಡಾ ಪರಿಣಾಮಕಾರಿಯಾಗಿದೆ. ಅಡುಗೆ ಸೋಡಾವನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ. ಅದು ಮಾತ್ರವಲ್ಲದೇ ಅಡುಗೆ ಸೋಡಾವನ್ನು ಬಳಸಿಕೊಂಡು ಪಾತ್ರೆಗಳ ಕಲೆ ತೆಗೆಯಲು, ಹಾಗೂ ಇನ್ನಿತರ ವಸ್ತುಗಳನ್ನು ಸ್ವಚ್ಛಗೊಳಿಸಲು ಬಳಸಲಾಗುತ್ತದೆ. ಚಿನ್ನಾಭರಣವನ್ನು ಸ್ವಚ್ಛಗೊಳಿಸಲು ಕೂಡಾ ಅಡುಗೆ ಸೋಡಾ ಬಳಸಬಹುದಾಗಿದೆ.

ವಿಧಾನ: 2 ಚಮಚ ಅಡುಗೆ ಸೋಡಾವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಕರಗಿಸಿ ದಪ್ಪ ಪೇಸ್ಟ್ ತಯಾರಿಸಿ, ಆಭರಣವನ್ನು ಅರ್ಧ ಗಂಟೆಯವರೆಗೆ ಅದರಲ್ಲಿ ಮುಳುಗಿಸಿಡಿ. ನಂತರ ಅದನ್ನು ಸ್ಪಾಂಜ್‌ನಿಂದ/ ಮೃದು ಬಟ್ಟೆಯಿಂದ ನಿಧಾನವಾಗಿ ಉಜ್ಜಿ ಸ್ವಚ್ಛಗೊಳಿಸಬೇಕು. ಆಭರಣದ ಕಪ್ಪಾದ ಭಾಗಗಳಲ್ಲಿ ಉಜ್ಜಿ ಸ್ವಚ್ಛಗೊಳಿಸಿ. ಗಮನಿಸಿ, ಆಭರಣಕ್ಕೆ ಸ್ಕ್ರ್ಯಾಚ್ ಆಗದಂತೆ ಮುತುವರ್ಜಿ ವಹಿಸಿಕೊಳ್ಳಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಉಪ್ಪು ನೀರು

ಬೆಳ್ಳಿಯ ಆಭರಣಗಳನ್ನು ತೊಳೆಯಲು ಉಪ್ಪು ನೀರು ಸಹಕಾರಿಯಾಗಲಿದೆ. ಸ್ವಲ್ಪ ಬಿಸಿ ನೀರಿಗೆ ಉಪ್ಪನ್ನು ಹಾಕಿಕೊಳ್ಳಿ. ಬೆಳ್ಳಿಯ ಆಭರಣಗಳನ್ನು ಇದರಲ್ಲಿ ನೆನೆಸಿ ಸ್ವಲ್ಪ ಸಮಯ ಹಾಗೆ ಬಿಡಿ. ಬಳಿಕ ಬ್ರಶ್ ಸಹಾಯದಿಂದ ಬೆಳ್ಳಿ ಆಭರಣಗಳನ್ನು ತೊಳೆಯಿರಿ. ಬಳಿಕ ಸ್ವಚ್ಛ ನೀರಿಗೆ ಹಾಕಿ ತೆಗೆದು ಬಟ್ಟೆಯಿಂದ ಒರೆಸಿಕೊಳ್ಳಬೇಕು.

ಟೂತ್‌ಪೇಸ್ಟ್​

ಟೂತ್‌ಪೇಸ್ಟ್  ಬ್ರಷ್‌ಗೆ ಹಾಕಿಕೊಂಡು ಚಿನ್ನವನ್ನು ಸ್ವಚ್ಛಗೊಳಿಸಬಹುದು. ಟೂತ್ ಬ್ರಷ್‌ ಸಹಾಯದಿಂದ ಆಭರಣವನ್ನು ಉಜ್ಜಿ ತೊಳೆಯಿರಿ. ಇದು ಕೊಳಕು, ಧೂಳನ್ನು ತೆಗೆದು ಹಾಕಲು ಸಹಕಾರಿಯಾಗಿದೆ. ಟೂತ್ ಬ್ರಷ್ ಬದಲು ಮೃದುವಾದ ಬಟ್ಟೆ ಕೂಡಾ ಬಳಸಬಹುದು. ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಐದು ನಿಮಿಷ ಕಾಲ ಆಭರಣಗಳನ್ನು ಹಾಕಿಡಿ. ಬಳಿಕ ಬಟ್ಟೆಯಿಂದ ಒರೆಸಿಕೊಳ್ಳಿ. ಹೆಚ್ಚು ರಾಸಾಯನಿಕವಿಲ್ಲದಂತಹ ಪೇಸ್ಟ್ ಬಳಸಿದರೆ ಬಂಗಾರಕ್ಕೆ ಯಾವುದೇ ಹಾನಿಯಾಗದು.

ನಿಂಬೆ ಹಣ್ಣು​

ನಿಂಬೆ ಹಣ್ಣು ನೈಸರ್ಗಿಕವಾಗಿ ಶುಚಿಗೊಳಿಸುವ ಸಾಮಾಗ್ರಿ. ಚಿನ್ನಾಭರಣಗಳನ್ನು ಸ್ವಚ್ಛಗೊಳಿಸಲು  ಬಳಸಬಹುದು.

ವಿಧಾನ: ಬಿಸಿನೀರಿಗೆ ಅರ್ಧ ನಿಂಬೆ ಹಿಂಡಿ. ನಂತರ ಅದರಲ್ಲಿ ಆಭರಣ ಹಾಕಿಡಬೇಕು. 20 ರಿಂದ 30 ನಿಮಿಷಗಳ ಕಾಲ ಬಿಟ್ಟು ಬಳಿಕ ಬ್ರಷ್‌ನಿಂದ ಮೃದುವಾಗಿ ಸ್ವಚ್ಛಗೊಳಿಸಿ. ಶುದ್ಧ ನೀರಿನಿಂದ ತೊಳೆಯಿರಿ.

ಡಿಶ್ ವಾಶ್‌ ಲಿಕ್ವಿಡ್

ಡಿಶ್ ವಾಶ್‌ ಲಿಕ್ವಿಡ್ ಬಳಸಿಯೂ ಮನೆಯಲ್ಲಿ ಬೆಳ್ಳಿ ಆಭರಣಗಳನ್ನು ಸ್ವಚ್ಛಗೊಳಿಸಬಹುದು. ಒಂದು ಬೌಲ್‌ನಲ್ಲಿ ಬಿಸಿನೀರು ತೆಗೆದುಕೊಂಡು ಇದರಲ್ಲಿ ಒಂದೆರಡು ಹನಿ ಡಿಶ್ ವಾಶರ್ ಹಾಕಬೇಕು. ನಂತರ ಇದನ್ನು ಮಿಶ್ರಣ ಮಾಡಿ ಆ ನೀರಿನಲ್ಲಿ ಆಭರಣ ಹಾಕಿ, ಕೆಲವು ನಿಮಿಷ ನೆನೆಯಲು ಬಿಡಿ. ನಂತರ ಆಭರಣಗಳನ್ನು ಬ್ರಷ್‌ನಿಂದ ಉಜ್ಜಿ. ಬಳಿಕ ಶುದ್ಧ ನೀರಿನಿಂದ ತೊಳೆಯಿರಿ. ಬೆಳ್ಳಿ ವಸ್ತುಗಳನ್ನು ಹೊಳೆಯುವಂತೆ ಮಾಡಲು ಇದು ಸಹಾಯ ಮಾಡುತ್ತದೆ.

ಗಮನಿಸಿ:

ರತ್ನದ ಕಲ್ಲುಗಳನ್ನು ಹೊಂದಿರುವ ಆಭರಣಗಳನ್ನು ಅವುಗಳ ಕಲ್ಲುಗಳಿಗೆ ಅನುಗುಣವಾಗಿ ಅಂಟಿಸಲಾಗಿದೆ. ಇದನ್ನು ನೀರಿನಲ್ಲಿ ಮುಳುಗಿಸಬಾರದು. ಬೆಚ್ಚಗಿನ ನೀರಿನಲ್ಲಿ ಅಂಟು ಸಡಿಲಗೊಳಿಸಬಹುದು. ಇದು ರತ್ನದ ಕಲ್ಲುಗಳು ಉದುರಲು ಕಾರಣವಾಗಬಹುದು.

ಚಿನ್ನ ಮೃದುವಾದ ಲೋಹವಾಗಿರುವುದರಿಂದ ಹಲ್ಲುಜ್ಜುವ ಬ್ರಶ್‌ ಬಳಸುವಾಗ, ಅಥವಾ ಇತರ ಸಾಮಾಗ್ರಿಯಿಂದ ಸ್ವಚ್ಛಗೊಳಿಸುವಾಗ ಮತ್ತು ಒಣಗಿಸುವ ಪ್ರಕ್ರಿಯೆಯಲ್ಲಿ ಜಾಗರೂಕವಾಗಿ ಬಳಸಿ.

ನಿಮಗೆ ತಿಳಿದಿಲ್ಲದ ಯಾವುದೇ ಅಂಶಗಳಿಂದ ಮತ್ತು ತಿಳಿದಿಲ್ಲದ ಸೋಪ್ ಬಳಸಬೇಡಿ. ಬಾಡಿ ವಾಶ್‌ಗಳನ್ನು ಬಳಸದಿರುವುದು ಉತ್ತಮ.

ವಿನೆಗರ್ ಆಮ್ಲ ಆಗಿರುವುದರಿಂದ ಇದು ಆಭರಣದ ರತ್ನದ ಕಲ್ಲುಗಳನ್ನು ಹಾನಿಗೊಳಿಸುತ್ತದೆ. ಆಭರಣಗಳನ್ನು ಸ್ವಚ್ಛಗೊಳಿಸುವಾಗ, ವಿಶೇಷವಾಗಿ ಬೆಳ್ಳಿ, ಚಿನ್ನ ಮತ್ತು ಮೃದುವಾದ ಕಲ್ಲುಗಳ ಮೇಲೆ ವಿನೆಗರ್ ಬಳಸುವುದನ್ನು ತಪ್ಪಿಸಬೇಕು.

ಕಾವ್ಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next