ಉತ್ತರ ಕರ್ನಾಟಕದವರಲ್ಲಿ ತಮ್ಮ ಮನೆತನದ ಹೆಸರಿನ ಬಗ್ಗೆ ತುಂಬಾ ಅಭಿಮಾನ. ಹೊರಗಿನ ಕೆಲವರಿಗೆ ಅದು ಚೋದ್ಯವೆನಿಸಿದರೂ, ಅವರು ಅದಕ್ಕೆ ಸೊಪ್ಪು ಹಾಕುವುದಿಲ್ಲ. ‘ತೆಂಗಿನಕಾಯಿ’, ‘ಮೆಣಸಿನಕಾಯಿ’, ‘ಉಳ್ಳಾಗಡ್ಡಿ’ ಇಂಥ ಹೆಸರುಗಳು ಕೆಲವರಿಗೆ ಕಚಗುಳಿ ಇಡುತ್ತವೆ. ಅಪ್ರಬುದ್ಧರಿಗೆ ಹೆದರಿ ಅವರು ಮನೆತನದ ಹೆಸರನ್ನು ತಮ್ಮ ಹೆಸರಿನಿಂದ ತೊಡೆಯಲು ಯೋಚಿಸುವುದೂ ಇಲ್ಲ. ಮಂಗಳೂರಿನ ‘ಭಟ್’ ಒಬ್ಬರು ಉತ್ತರ ಕರ್ನಾಟಕದವರೊಬ್ಬರನ್ನು ‘ಎಂಥದು ಮಾರಾಯ್ರೇ, ನಿಮ್ಮ ಹೆಸರುಗಳೆಲ್ಲಾ ತರಕಾರಿಮಯ’ ಎಂದು ಕೇಳಿದರಂತೆ. ಅದಕ್ಕೆ ಅವರು ‘ಹೌದ್ರೀಪಾ, ಆದರೆ ಆ ತರಕಾರಿ ಹೆಚ್ಚಿ ಅಡುಗೆ ಮಾಡೋ ಮಂದೀನ ನಮ್ಮ ಕಡೀ ಭಟ್ಟರು ಅಂತ ಕರೀತಾರಪಾ’ ಎಂದರಂತೆ!
ಎಲ್ಲರಿಗೂ ಇಂಥ ನಿರ್ಲಿಪ್ತತೆ ಇರುವುದಿಲ್ಲ. ಇಂಥ ನಿರ್ಲಿಪ್ತತೆ ಇರುವುದಿಲ್ಲ. ಅಂಥ ಮಂದಿ ತಮ್ಮದೇ ಆದ ಕಾರಣಕ್ಕಾಗಿ ಅಪ್ಪ, ಅಮ್ಮ ಇಟ್ಟ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಹನುಮಂತಯ್ಯ ಎಂಬ ಹಳೆಯ ಹೆಸರು ಅನಿಲ್ಕುಮಾರ್ ಎಂಬ ನವೀನತೆಯನ್ನು ಪಡೆಯುತ್ತದೆ.
ಕೆಲವು ಪಂಗಡಗಳಲ್ಲಿ ಮನೆಗೆ ಬಂದ ಸೊಸೆಯ ಹೆಸರನ್ನು ಬದಲಾಯಿಸುತ್ತಾರೆ. ‘ಕೌಮುದಿ’, ‘ಇಂದು’ ಆಗುತ್ತಾಳೆ. ‘ಕಮಲ’, ‘ಜಲಜ’ ಆಗುತ್ತಾಳೆ. ‘ಹರಿಣಾಕ್ಷಿ’, ‘ಮೀನಾಕ್ಷಿ’ ಆಗುತ್ತಾಳೆ. ಕೆಲವೊಮ್ಮೆ ಮೊದಲನೆಯ ಹೆಸರು ಬದಲಾಯಿಸದಿದ್ದರೂ ಗಂಡನ ಮನೆತನದ ಹೆಸರನ್ನು ಕೊನೆಯಲ್ಲಿ ಸೇರಿಸಿಕೊಳ್ಳುತ್ತಾರೆ. ಪ್ರಭಾ ರಾವ್, ಪ್ರಭಾ ಮೆಹತಾ ಆಗಬಹುದು. ಸಂಖ್ಯಾಶಾಸ್ತ್ರದಲ್ಲಿ ನಂಬಿಕೆ ಇರುವ ಕೆಲವರು ತಮ್ಮ ಹೆಸರಿನ ಕಾಗುಣಿತವನ್ನೋ ಇಲ್ಲವೇ ಇಡೀ ಹೆಸರನ್ನೋ ಬದಲಾಯಿಸಿಕೊಳ್ಳಬಹುದು.
ಮತ ಪರಿವರ್ತನೆ ಹೊಂದಿದ ‘ರಾಮ’, ‘ರಹೀಮ’ನಾಗಿ, ‘ಜೇನ್’ ‘ಜಾನಕಿ’ ಆಗಿ ಬದಲಾಗುತ್ತಾರೆ. ಹೀಗೆ ಹತ್ತು ಹಲವಾರು ಕಾರಣಗಳಿಂದಾಗಿ ಬಹುಮಂದಿ ಹೆಸರು ಬದಲಾಯಿಸಿಕೊಳ್ಳುತ್ತಾರೆ. ಕಾರಣಗಳ ಪಟ್ಟಿ ಮಾಡಿದಷ್ಟೂ ಉದ್ದವಾಗುತ್ತದೆ. ಕಾರಣಗಳೇನೇ ಇರಲಿ, ಅವು ಗೌಣ. ಏಕೆಂದರೆ ನಮ್ಮ ದೇಶದಲ್ಲಿ ಹೆಸರು ಬದಲಾಯಿಸಿಕೊಳ್ಳಬೇಕೆಂದರೆ ಕಾನೂನಿನ ಯಾವುದೇ ನಿರ್ಬಂಧವೂ ಇಲ್ಲ, ಯಾರು ಬೇಕಾದರೂ, ಯಾವಾಗ ಬೇಕಾದರೂ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಬಹುದು.
ಒಬ್ಬ ವ್ಯಕ್ತಿ ತನ್ನ ಹೆಸರನ್ನು ಬದಲಾಯಿಸಿಕೊಂಡರೆ ಅದರ ಪರಿಣಾಮ ಅವನೊಬ್ಬನ ಮೇಲೆ ಮಾತ್ರ ಆಗುವುದಿಲ್ಲ! ಅವನೊಂದಿಗೆ ಯಾವುದೇ ತೆರನಾದ ಸಂಬಂಧ ಹೊಂದಿರುವ, ಅಂದರೆ ಸಾಮಾಜಿಕ, ವ್ಯಾವಹಾರಿಕ, ಆರ್ಥಿಕ, ಇತ್ಯಾದಿ ಸಂಬಂಧಗಳನ್ನು ಇಟ್ಟುಕೊಂಡಿರುವ ಎಲ್ಲರಿಗೂ ಆಗುತ್ತದೆ. ಹೆಸರನ್ನು ಬದಲಾಯಿಸಿಕೊಳ್ಳಬೇಕೆಂದಿರುವವರು ಇದನ್ನು ಚೆನ್ನಾಗಿ ಗಮನದಲ್ಲಿಟ್ಟುಕೊಳ್ಳಬೇಕು. ಈ ಕುರಿತು ಏನೇನು ತಿದ್ದುಪಡಿ ಮಾಡಬೇಕಾಗುತ್ತದೆ ಎನ್ನುವ ವಿವರ ಮುಂದಿನ ವಾರ…
-ಎಸ್.ಆರ್. ಗೌತಮ್(ಕೃಪೆ: ನವ ಕರ್ನಾಟಕ ಪ್ರಕಾಶನ)