Advertisement
ಹುಟ್ಟನ್ನು ನಾವು ಸಂಭ್ರಮಿಸುವುದಿಲ್ಲ. ಹುಟ್ಟಿದ ತಕ್ಷಣ ಅಳಬೇಕಂತೆ.ಇದು ಆರೋಗ್ಯದ ಲಕ್ಷಣ. ಹಾಗಾಗಿ, ಈ ಹುಟ್ಟು ಎಂಬುದು ಸಂತಸದೊಳಗಿನ ಭಯ. ಸಾವು ನಮ್ಮದಲ್ಲವೇ ಅಲ್ಲ. ಬದುಕು ಮಾತ್ರ ನಮ್ಮದು ಎಂದು ಕೊಂಡಿದ್ದೇವೆ. ಆಳಕ್ಕಿಳಿದು ನೋಡಿದರೆ ಅದೂ ಕೂಡ ಒಂದಿಷ್ಟು ಸಂದಿಗ್ಧಗಳಲ್ಲಿ ಸಿಲುಕಿ, ಪರಾವಲಂಬನೆಯ ದಾರಿಯಲ್ಲಿ ನಡೆದುಕೊಂಡು ಏನನ್ನೋ ಹುಡುಕುತ್ತ, ಪಡೆಯುತ್ತ, ಕಳೆದುಕೊಳ್ಳುತ್ತ ಸಾಗುವ, ಸಂಪೂರ್ಣವಾಗಿ ನಮ್ಮದಾಗದ ಬದುಕು ನಮ್ಮದು. ನಾವು ಪೂರ್ಣವಲ್ಲದಿದ್ದರೂ ಆದಷ್ಟು ನಮ್ಮದೇ ಆದ ಗುರಿ, ಆ ಗುರಿಗೊಂದು ಸತ್ಪತವನ್ನು ಹುಡುಕಿಕೊಂಡು, ಆ ಮೂಲಕ ಬದುಕಿನ ಪಯಣವನ್ನು ಸುಂದರವಾಗಿಸಿಕೊಳ್ಳುವ ಯತ್ನ ಮಾಡಲೇಬೇಕು. ಈ ಯತ್ನ ಸಾರ್ಥಕತೆಯ ಆಕಾಂಕ್ಷೆಯನ್ನು ಹೊತ್ತುಕೊಂಡು, ಹಿತವಾದ ಮಾರ್ಗವನ್ನು ಅನುಸರಿಸಿಕೊಂಡು ಹೋಗಬೇಕಾದದ್ದೂ ಅಗತ್ಯ. ಕೇವಲ ಗುರಿ ಮುಟ್ಟುವುದಷ್ಟೇ ಬದುಕಿನ ಉದ್ದೇಶವಲ್ಲ. ಗುರಿ ಮುಟ್ಟುವ ಹಾದಿಯೂ ಮುಖ್ಯವೇ. ಹಿತವಾದದ್ದನ್ನು ಪಡೆಯಲು ಪರರ ಅಹಿತಕ್ಕೆ ಕಾರಣವಾಗುವ ನಡೆ ಗುರಿ ತಪ್ಪಿಸುತ್ತದೆ. ನಿಜವಾದ ಸಂತೋಷ ದಕ್ಕುವುದಿಲ್ಲ. ಆನಂದದ ಭ್ರಮೆಯನ್ನೇ ಅಪ್ಪಿಕೊಂಡು ಸಂಭ್ರಮಿಸುತ್ತೇವೆ ಅಷ್ಟೆ.
ಸ್ವರ್ಥಂ ಪರಿತ್ಯಜ್ಯಯೇ
ಸಾಮಾನ್ಯಾಸ್ತು ಪರಾರ್ಥಮುದ್ಯಮಭ್ಯತಃ
ಸ್ವಾರ್ಥಾವಿರೋಧೇನ ಯೇ |
ತೇಮೀ ಮಾನುಷರಾಕ್ಷಸಾಃ ಪರಹಿತಂ
ಸ್ವಾರ್ಥಾಯ ನಿಘ್ನಂತಿಯೇ
ಯೇ ನಿಘ್ನಂತಿ ನಿರರ್ಥಕಂ ಪರಹಿತಂತೇ ಕೇನ
ಜಾನೀಮಹೇ ||
Related Articles
Advertisement
ಅರ್ಥವಿಷ್ಟೆ, ಸ್ವಾರ್ಥವನ್ನು ಮೊದಲು ಬಿಡಬೇಕು ಮತ್ತು ಪರಹಿತವೇ ತಮ್ಮ ಹಿತವೆಂದು ತಮ್ಮನ್ನು ತೊಡಗಿಸಿಕೊಳ್ಳಬೇಕು. ಆಗ ಸತ್ಪುರುಷನಾಗಲು ಸಾಧ್ಯ. ಇದು ಕಷ್ಟಸಾಧ್ಯ. ಒಬ್ಬ ವ್ಯಕ್ತಿ ಸ್ವಾರ್ಥವನ್ನು ಬಿಡುತ್ತಾನೆ ಎಂದರೆ ಆತ ಯೋಗಿಯಾಗಬೇಕು. ತ್ಯಾಗವನ್ನು ಪ್ರೀತಿಸಬೇಕು. ಈ ತ್ಯಾಗವೇ ಪರರ ಹಿತದ ಮೊದಲ ಹೆಜ್ಜೆ. ಪರರ ಹಿತವೇ ಆತನ ಪರಮ ಸುಖವಾಗಬೇಕು. ಸ್ವಾರ್ಥದ ಬೇರು ಮನದೊಳಗೆ ಹರಡಿ, ಹೆಮ್ಮರವಾಗಿ, ಇಡೀ ಬದುಕನ್ನು ಆವರಿಸಿಕೊಂಡರೆ ಆತ ಮನುಷ್ಯ ರೂಪದ ರಕ್ಕಸನಾಗುತ್ತಾನೆ. ಮನೋ ನಿಯಂತ್ರಣ ಇದಕ್ಕೆ ಸುಲಭದಾರಿ. ಒಂದು ಸತ್ಯವಾದ, ಸಂಸ್ಕಾರಯುತವಾದ, ಪರಹಿತವಾದ ಬದುಕನ್ನು ನಡೆಸುವ ರೀತಿಯೇ ನಮ್ಮನ್ನು ಸತ್ಪುರುಷರನ್ನಾಗಿಸುತ್ತದೆ.
– ವಿಷ್ಣು ಭಟ್ ಹೊಸ್ಮನೆ