Advertisement

ಬಸವಣ್ಣನವರನ್ನು ವಿರೋಧಿಸುತ್ತ ಬಂದವರ ಒಪ್ಪಿಕೊಳ್ಳುವುದು ಹೇಗೆ?

11:55 AM Nov 05, 2017 | Team Udayavani |

ಹುಬ್ಬಳ್ಳಿ: ಲಿಂಗಾಯತ ಸಮುದಾಯದ ಬದುಕಿಗೆ ಒಳ್ಳೆಯದಾಗುತ್ತದೆ ಎಂಬ ಉದ್ದೇಶದಿಂದ ಆರಂಭಗೊಂಡ ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆಯಿಂದ ಸಮಾಜ ಒಡೆಯುತ್ತದೆ ಎಂದು ಹೇಳುತ್ತಿದ್ದೀರಿ. ಆದರೆ, ಈ ಹಿಂದೆ ಲಿಂಗಾಯತ ಎಂಬುದಕ್ಕೆ ವೀರಶೈವ- ಲಿಂಗಾಯತ ಎಂದು ಸೇರಿಸಿದಾಗ ಯಾಕೆ ಮೌನವಾಗಿದ್ದೀರಿ ಎಂದು ಶಿವಯೋಗ ಮಂದಿರದ ಅಧ್ಯಕ್ಷ ಡಾ| ಸಂಗನಬಸವ ಸ್ವಾಮೀಜಿಯವರನ್ನು ಬಸವರಾಜ ಹೊರಟ್ಟಿ ಪಶ್ನಿಸಿದ್ದಾರೆ. 

Advertisement

ಈ ಕುರಿತು ಕೊಟ್ಟೂರುಮಠದ ಮಠಾಧೀಶರು ಆಗಿರುವ ಡಾ| ಸಂಗನಬಸವ ಸ್ವಾಮೀಜಿ ಅವರಿಗೆ ಸುದೀರ್ಘ‌ ಪತ್ರ ಬರೆದಿರುವ ಹೊರಟ್ಟಿಯವರು, ಮಹಾರಾಷ್ಟ್ರದಲ್ಲಿ ಲಿಂಗಾಯತದಲ್ಲಿ ಬರುವ  ಉಪ ಜಾತಿಗಳಿಗೆ ಮೀಸಲಾತಿ ನೀಡಬೇಕೆಂಬ ಬೇಡಿಕೆ ಮಾಡಿದಾಗ, ಅದನ್ನು ವಿರೋಧಿಸಿ ವೀರಶೈವ ಹೆಸರಲ್ಲಿ ಮೀಸಲಾತಿ ನೀಡಬೇಕೆಂಬ ಮನವಿ ಸಲ್ಲಿಸಲಾಗಿತ್ತು.

ಅಲ್ಲಿನ ಸರಕಾರ ವೀರಶೈವ ತಿರಸ್ಕರಿಸಿ ಲಿಂಗಾಯತ ಹೆಸರಲ್ಲಿ ಮೀಸಲಾತಿ ನೀಡಿತು. ತಾವು ಹೇಳಿದಂತೆ ಅಲ್ಲಿ ಸಮಾಜ ಒಡೆಯಬೇಕಾಗಿತ್ತು. ಬದಲಾಗಿ ಲಿಂಗಾಯತರೊಟ್ಟಿಗೆ ಅಲ್ಲಿನ ವೀರಶೈವರು ಸಹ ಮೀಸಲಾತಿ ಲಾಭ ಪಡೆಯುತ್ತಿದ್ದಾರೆ. 

ಅಲ್ಪಸಂಖ್ಯಾತ ಧರ್ಮ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ವೀರಶೈವ ಮಹಾಸಭಾದವರು ವೀರಶೈವ ಲಿಂಗಾಯತ ಹೆಸರಲ್ಲಿ ಮನವಿ ಸಲ್ಲಿಸಿದ್ದು, ಪಂಚಪೀಠಾಧೀಶ್ವರು ಮಾತ್ರ ವೀರಶೈವ ಹಿಂದೂ ಧರ್ಮದ ಭಾಗ ಎಂದು ಹೇಳುತ್ತಿದ್ದಾರೆ. ಈ ಎರಡು ನಿಲುವುಗಳಿಂದ ಸಮಾಜ ಒಡೆಯುತ್ತದೆ ಎಂದೇಕೆ ನಿಮಗೆ ಅನ್ನಿಸಲಿಲ್ಲ. 

ವೀರಶೈವ ಧರ್ಮ ಅನಾದಿಕಾಲದಿಂದಲೂ ಇತ್ತು ಎನ್ನುವುದಾದರೆ 12ನೇ ಶತಮಾನಕ್ಕಿಂತ ಮೊದಲು ಅದು ಯಾವ ಸ್ವರೂಪದಲ್ಲಿತ್ತು. ಅದು  ಧರ್ಮ ಸ್ವರೂಪ ಪಡೆದಿತ್ತೆ. ಇತರೆ ಧರ್ಮಗಳಿಗಿಂತಅದು ಹೇಗೆ ಭಿನ್ನವಾಗಿತ್ತು ಎಂಬುದನ್ನು ತಾವು ಸಮಾಜಕ್ಕೆ ಸ್ಪಷ್ಟಪಡಿಸಬೇಕು. ಪಂಚಪೀಠಾಧೀಶ್ವರರು ವೀರಶೈವ ಧರ್ಮ ಹಿಂದೂ ಧರ್ಮದ ಅಂಗ ಎಂದು ಪದೇ ಪದೇ ಪ್ರತಿಪಾದಿಸುತ್ತಿದ್ದಾರೆ.

Advertisement

ಹಾಗಾದರೆ ವೀರಶೈವ ಮತವಾಗುತ್ತದೆಯೇ ವಿನಃ ಧರ್ಮ ಹೇಗಾಗುತ್ತದೆ ಎಂಬುದನ್ನು ತಾವು ಹೇಳಬೇಕು. ಬೆಂಗಳೂರಿನಲ್ಲಿ ನಡೆದ ಸಭೆಯೊಂದರಲ್ಲಿ ಕೆಲ ಮಠಾಧೀಶರು ನನ್ನ ಮತ್ತು ಸಚಿವ ಎಂ.ಬಿ. ಪಾಟೀಲ ಬಗ್ಗೆ ಸರ್ಕಸ್‌ ಕಂಪೆನಿಯವರೆಂದು, ನಾವು ಸರ್ವನಾಶ ಆಗಬೇಕೆಂದು ಹೇಳಿದ್ದಾರೆಂಬುದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಮಠಾಧೀಶರಾದವರಿಂದ ಇಂತಹ ಹೇಳಿಕೆ ಸರಿಯೇ? ವಿಧಾನಸೌಧಕ್ಕಿಂತ ಹೆಚ್ಚಿನ ರಾಜಕಾರಣ ಸ್ವಾಮಿಗಳಲ್ಲಿ ಹೆಚ್ಚಾಗಿದ್ದರಿಂದಲೇ ಸಮಾಜ ಇಂತಹ ಸ್ಥಿತಿ ಎದುರಿಸಬೇಕಾಗಿದೆ. ಬೆಳಗಾವಿಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ಸಭೆ ನಡೆಯುತ್ತಿದ್ದಂತೆ ಶಿವಯೋಗ ಮಂದಿರದಲ್ಲಿ ತಾವು ಸಭೆ ನಡೆಸಿದ್ದೀರಿ. ಹಾನಗಲ್ಲ ಮಹಾಸ್ವಾಮಿಗಳು ಸ್ಥಾಪಿಸಿದ ಸಂಸ್ಥೆಯ ಅಧ್ಯಕ್ಷ ಸ್ಥಾನದಲ್ಲಿರುವ ನೀವು ಸಮಾಜ ದಾರಿ ತಪ್ಪುತ್ತಿದೆ ಎಂದು ತಿಳಿದಾಗ ಎಲ್ಲಾ ಮುಖಂಡರನ್ನು ಕರೆದು ಚರ್ಚಿಸಬಹುದಿತ್ತು.

ಆದರೆ ಕೆಲವೇ ಸ್ವಾಮಿಗಳನ್ನು ಕರೆದು ನೀವು ಶಕ್ತಿ ಪ್ರದರ್ಶನ ಮಾಡಿದ್ದು ಎಷ್ಟು ಸರಿ. ಬಸವಣ್ಣವರನ್ನು ಇಲ್ಲಿವರೆಗೆ ವಿರೋಧಿಸುತ್ತ ಬಂದವರವನ್ನು ನಾವು ಹೇಗೆ ಒಪ್ಪಬೇಕು ಎಂಬುದು ನಮ್ಮೆಲ್ಲರಿಗೆ ಯಕ್ಷ ಪ್ರಶ್ನೆಯಾಗಿದೆ. ಸಮಾಜಕ್ಕೆ ಮಾರ್ಗದರ್ಶನ ಸ್ಥಾನದಲ್ಲಿರುವ ತಾವು ಇದಕ್ಕೆ ಸ್ಪಷ್ಟನೆ ನೀಡಬೇಕಾಗಿದೆ ಎಂದು ಪತ್ರದಲ್ಲಿ ಹೊರಟ್ಟಿ ಒತ್ತಾಯಿಸಿದ್ದಾರೆ.   

Advertisement

Udayavani is now on Telegram. Click here to join our channel and stay updated with the latest news.

Next