Advertisement

ಕೋವಿಡ್ ಸುತ್ತಮುತ್ತ: ವೈರಸ್ ಭೀತಿಯ ನಡುವೆಯೇ ಬದಲಾಗಲಿದೆ ಬದುಕಿನ ರೀತಿ

08:07 AM May 06, 2020 | Hari Prasad |

ಕೋವಿಡ್ 19 ವೈರಸ್‌ ಸಾಂಕ್ರಾಮಿಕದ ಹಾವಳಿಯು ನಮಗೆ ಅನೇಕ ಅಮೂಲ್ಯ ಪಾಠಗಳನ್ನು ಕಲಿಸಿದೆ. ಮುಂಬರುವ ದಿನಗಳಲ್ಲಿ ಅದು ಮತ್ತಷ್ಟು ಪಾಠಗಳನ್ನು ಕಲಿಸಲಿದೆ ಎನ್ನುವುದರಲ್ಲಿ ಸಂಶಯವಂತೂ ಇಲ್ಲ.

Advertisement

ನಾವು ಅರ್ಥಮಾಡಿಕೊಳ್ಳಬೇಕಿರುವುದೆಂದರೆ, ಡೇಂಗ್ಯೂ ಮತ್ತು ಎಬೋಲಾದಂತೆಯೇ ಕೋವಿಡ್ ವೈರಸ್‌ ಕೂಡ ಇರಲಿದೆ. ಮುಂದಿನ ದಿನಗಳಲ್ಲಿ ಅದರ ಇರುವಿಕೆಯ ನಡುವೆಯೇ ಜೀವನವನ್ನು ನಿರ್ವಹಿಸುವ, ಬದುಕು ಕಟ್ಟಿಕೊಳ್ಳುವ ವಿಧಾನವನ್ನು ನಾವು ಕಂಡುಕೊಳ್ಳಬೇಕಿದೆಯಷ್ಟೆ.

ಲಾಕ್‌ ಡೌನ್‌ನ ಬಹುಶಃ ಇನ್ನೊಂದು ನೂರು ದಿನಗಳವರೆಗಾದರೂ ಮುಂದುವರಿಯಬಹುದು ಎನಿಸುತ್ತದೆ. ಆದರೆ ಲಾಕ್‌ ಡೌನ್‌ ಎನ್ನುವುದು ಖಂಡಿತ ಸಮಸ್ಯೆಗೆ ಶಾಶ್ವತ ಪರಿಹಾರವಂತೂ ಆಗಲಾರದು.

ಹೀಗಾಗಿ ಕೋವಿಡ್ ವೈರಸ್ ಗೆ ಲಸಿಕೆ ಸಿದ್ಧವಾಗುವುದರೊಳಗೆ, ಕೋವಿಡ್‌ ನಿಯಂತ್ರಣಕ್ಕೆ ಸ್ಪಷ್ಟ ನೀತಿಯನ್ನಂತೂ ರೂಪಿಸುವುದು ಈ ಕ್ಷಣದ ಅಗತ್ಯವಾಗಿದೆ. ಮುಂದಿನ 2-3 ತಿಂಗಳಲ್ಲಿ ಜನರು ಸಾಮಾಜಿಕ ಅಂತರವನ್ನು ನಿತ್ಯ ಜೀವನದ ಭಾಗವೆಂಬಂತೆ ಮೈಗೂಡಿಸಿಕೊಳ್ಳಬೇಕಾದ ಅಗತ್ಯವಿದೆ.

ಇನ್ನು ಶಾಲೆ – ಕಾಲೇಜುಗಳು ಹಾಗೂ ಕಚೇರಿಗಳನ್ನು ಹೇಗೆ ಸುರಕ್ಷಿತವಾಗಿ ತೆರೆಯಬೇಕು, ಹೇಗೆ ಅಲ್ಲಿ ಸುರಕ್ಷತಾ ಕ್ರಮಗಳ ಪಾಲನೆಯಾಗಬೇಕು ಎನ್ನುವ ಮಾರ್ಗವನ್ನು ಸರ್ಕಾರಗಳು ಹುಡುಕಿಕೊಳ್ಳಬೇಕಿದೆ. ಒಟ್ಟಲ್ಲಿ, ಸದ್ಯಕ್ಕಂತೂ ಜನಜೀವನ ಯಥಾಸ್ಥಿತಿಗೆ ಬರುವ ಸಾಧ್ಯತೆ  ಗೋಚರಿಸುತ್ತಿಲ್ಲ.

Advertisement

ಇಲ್ಲಿಯವರೆಗೆ ನಮ್ಮ ಆರೋಗ್ಯ ವಲಯದ ಕಾರ್ಯವೈಖರಿಯು ಭರವಸೆಯ ಕಿರಣವಾಗಿ ಮೂಡಿಬಂದಿದೆ. ವಿಶ್ವಾದ್ಯಂತ ಆಡಳಿತಗಳು ಮತ್ತು ಆರೋಗ್ಯ ವಲಯದ ಸಿಬ್ಬಂದಿ ಈ ಕಷ್ಟಕರ ಸಮಯದಲ್ಲಿ ಉತ್ತಮ ಹೆಜ್ಜೆ ಇಡುತ್ತಿವೆ.

ಮುಂದಿನ ದಿನಗಳಲ್ಲಿ ಆರೋಗ್ಯ ವಲಯಕ್ಕೆ ಹಾಗೂ ಆಸ್ಪತ್ರೆಗಳಿಗೆ ಹೆಚ್ಚಿನ ಸವಲತ್ತನ್ನು ಒದಗಿಸಿ, ಅವುಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಮಿಳಿತಗೊಳಿಸಬೇಕು. ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾಡಳಿತಗಳನ್ನು ಸಮಾಜದ ಎಲ್ಲಾ ಸ್ತರಗಳಿಗೂ ತಲುಪುವಂತೆ ಸದೃಢಗೊಳಿಸಬೇಕಾದ ಹಾಗೂ ಸಜ್ಜುಗೊಳಿಸಬೇಕಾದ ಅಗತ್ಯವಿದೆ.

ಜನರ ಹಿತದೃಷ್ಟಿಯಿಂದ, ಇನ್ಮುಂದೆ ನಾವು ಸಂಚಾರ ನಿಯಮಗಳಲ್ಲೂ ಕಟ್ಟುನಿಟ್ಟಾದ ನಿಯಮಗಳನ್ನು ತರುವ ಅಗತ್ಯವಿದೆ. ದೇಶದೊಳಗಿನ ಮತ್ತು ಹೊರಗಿನ ಸಂಚಾರವನ್ನು ನಿಯಂತ್ರಿಸಬೇಕಿದೆ. ಈ ಸಮಯದಲ್ಲಿ ಮಾಧ್ಯಮಗಳ ಜವಾಬ್ದಾರಿಯೂ ಅಧಿಕವಾಗಿದೆ.

ದೇಶದ ಮೂಲೆಮೂಲೆಗೂ ಮಾಹಿತಿಯು ಸಿಗುವಂತೆ ಮಾಡಲು ಬಲಿಷ್ಠವಾದ ಸಮೂಹ ಮಾಧ್ಯಮದ ಅಗತ್ಯವಿದೆ. ಇನ್ನು ರೆಡ್‌ ಕ್ರಾಸ್‌, ಎನ್‌ಎಸ್‌ಎಸ್‌, ಎನ್‌ಸಿಪಿ, ಸ್ಕೌಟ್ಸ್‌ ಮತ್ತು ಗೈಡ್ಸ್‌ನಂಥ ಸರ್ಕಾರೇತರ ಸಂಸ್ಥೆಗಳಿಗೂ ಕೂಡ ಅಗತ್ಯ ಎದುರಾದಾಗಲೆಲ್ಲ ಕಾರ್ಯೋನ್ಮುಖವಾಗಲು ಸರ್ಕಾರಗಳು ಅನುವು ಮಾಡಿಕೊಡಬೇಕು.

ಆಗಲೇ ಹೇಳಿದಂತೆ, ಕೋವಿಡ್ ಇನ್ಮುಂದೆಯೂ ಇರಲಿದ್ದು, ಇದನ್ನು ಕಡೆಗಣಿಸಿ, ಅಜ್ಞಾನದಿಂದ ವರ್ತಿಸುವುದು ದುಬಾರಿಯಾಗಿ ಪರಿಣಮಿಸಬಲ್ಲದು. ನನಗೆ ದಶಕಗಳಿಂದ ಹಲವು ಕ್ಷೇತ್ರಗಳಲ್ಲಿ ಮತ್ತು ಉದ್ಯಮಗಳಲ್ಲಿ ಕೆಲಸ ಮಾಡಿದ ಅನುಭವವಿದೆ.

ಅದರ ಆಧಾರದಲ್ಲಿ ಹೇಳುವುದಾದರೆ, ಈ ಪ್ರಮಾಣದ ಅನಿಶ್ಚಿತತೆಯನ್ನು ನಾವು ಹಿಂದೆಂದೂ ಕಂಡು ಕೇಳಿರಲಿಲ್ಲ. ಈಗ ನಾವು ಧೈರ್ಯವಂತರಾಗಿ, ಹಾನಿಯನ್ನು ನಿಯಂತ್ರಿಸಲು ಮುಂದಾಗದೇ ಇದ್ದರೆ, ಪರಿಸ್ಥಿತಿ ಕೈಮೀರುತ್ತದೆ.

ಗುಣಾತ್ಮಕ ಪರಿಣಾಮಗಳು ಅನೇಕ

ಮುಂದಿನ ದಿನಗಳಲ್ಲಿ ಕೆಲವು ವಲಯಗಳಲ್ಲಿ ಗುಣಾತ್ಮಕ ಬೆಳವಣಿಗೆಯಂತೂ ಗೋಚರಿಸಲಿದೆ. 

1. ಕೃಷಿ ಕ್ಷೇತ್ರ: ಕೃಷಿ ಉತ್ಪನ್ನಗಳ ಬೇಡಿಕೆ ಹೆಚ್ಚಾಗಲಿದೆ. ಅಲ್ಲದೇ, ಕೃಷಿಯಲ್ಲಿ ನವ ಮಾರ್ಗಗಳ ಅನ್ವೇಷಣೆ, ಸಕ್ಷಮ ಜಲ ನಿರ್ವಹಣೆ, ಪೂರೈಕೆ ಸರಪಳಿಯ ನಿಭಾವಣೆ ಇತ್ಯಾದಿಗಳ ಮೇಲೆ ಗಮನಹರಿಸುವ ಮೂಲಕ ಇಳುವರಿ ಮತ್ತು ಉತ್ಪಾದನೆಯನ್ನು ಉತ್ತಮಗೋಳಿಸಬಹುದು.

2. ಆರೋಗ್ಯ ಮತ್ತು ಆಯುಷ್ಯ: ಈಗ ಆರೋಗ್ಯ, ಸ್ವಚ್ಛತೆಯ ಬಗ್ಗೆ ನವ ಜಾಗೃತಿಯ ಅಲೆಯೆದ್ದಿದೆ. ಆರೋಗ್ಯಯುತ ಹವ್ಯಾಸಗಳೆಡೆಗಿನ ಈ ಸಾಮಾಜಿಕ ಪಲ್ಲಟವು, ಮುಂದಿನ ದಿನಗಳಲ್ಲಿ ಹೆಚ್ಚಿನ ಜನರು ಪ್ರಾಕೃತಿಕ ಚಿಕಿತ್ಸೆಗಳತ್ತ ಮುಖ ಮಾಡುವುದಕ್ಕೂ ಕಾರಣವಾಗಬಹುದು. ಹೆಲ್ತ್‌ ಕೇರ್‌, ನರ್ಸಿಂಗ್‌ ಮತ್ತು ಹೆಲ್ತ್ ಕೇರ್‌ ಕಿಟ್‌ಗಳಿಗೆ ಬೇಡಿಕೆ ಹೆಚ್ಚಲಿದೆ. ವೈದ್ಯಕೀಯ ಸಿಬ್ಬಂದಿ ನಮ್ಮ ಪಾಲಿನ ಹೀರೋಗಳಾಗಿ ಉಳಿಯಲಿದ್ದಾರೆ. ಸ್ವಾಸ್ಥ್ಯನಿರ್ವಹಣೆಯಲ್ಲಿ ಸರ್ಕಾರೇತರ ಸಂಸ್ಥೆಗಳ ಪಾಲುದಾರಿಕೆಯು ಸದ್ಯದ ಅಗತ್ಯವಾಗಿದೆ.

3. ಸ್ಟಾಕ್‌ ಮಾರುಕಟ್ಟೆ: ಈಗಿನ ಹಠಾತ್‌ ಬದಲಾವಣೆಯು ಈಗಾಗಲೇ ಚಿನ್ನ ಮತ್ತು ಬಾಂಡ್‌ಗಳ ಮೇಲಿನ ಹೂಡಿಕೆಯ ಮೇಲೆ ಬಹಳ ಪ್ರಭಾವ ಬೀರಿದೆ. ಇದೆಲ್ಲದರ ಒಟ್ಟಾರೆ ಪರಿಣಾಮವನ್ನು ನಾವು ಮುಂದಿನ ದಿನಗಳಲ್ಲಿ ವ್ಯಾಪಾರದಲ್ಲೂ ನೋಡಲಿದ್ದೇವೆ.

4. ಮುಂದಿನ ದಿನಗಳಲ್ಲಿ ಆನ್‌ಲೈನ್‌ ಶಿಕ್ಷಣ ಮತ್ತು ತರಬೇತಿ ಬಹುಮಾನ್ಯತೆ ಗಳಿಸಲಿದೆ.

5. ವಿಮಾ ಕ್ಷೇತ್ರವು ಹೆಚ್ಚು ಸುವ್ಯವಸ್ಥಿತವಾಗಲಿದೆ.

6. ಜನಜೀವನದಲ್ಲಿ ಆಧ್ಯಾತ್ಮಿಕತೆಯ ಪಾತ್ರ ಹೆಚ್ಚಲಿದೆ. ಧ್ಯಾನ, ವೇದ, ಜ್ಯೋತಿಷ್ಯ ಮತ್ತು ಕರ್ಮದ ಮೌಲ್ಯಗಳು ಮುಂಚೂಣಿಗೆ ಬರಲಿವೆ

7. ಕೃತಕ ಬುದ್ಧಿಮತ್ತೆ, ರೊಬಾಟಿಕ್ಸ್ ಮತ್ತು ಆಟೊಮೇಷನ್‌ ಉದ್ಯಮಗಳಲ್ಲಿ ಬಹುದೊಡ್ಡ ಬೆಳವಣಿಗೆಯನ್ನು ನೋಡಲಿದ್ದೇವೆ.

8. ನಮ್ಮ ಮನರಂಜನಾ ಮಾಧ್ಯಮದಲ್ಲಿ ದೊಡ್ಡ ಪಲ್ಲಟವಾಗಲಿದ್ದು, ಆನ್‌ಲೈನ್‌ ಕಂಟೆಂಟ್‌ಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ.

ಕೋವಿಡ್‌-19 ನಂತರದ ಪರಿಣಾಮ

ಕೆಲವು ವಲಯಗಳ ಕಾರ್ಯವೈಖರಿಯಲ್ಲಿ ತೀವ್ರತರ ಬದಲಾವಣೆಯು ಕಾಣಿಸಿಕೊಳ್ಳಲಿದೆ ಹಾಗೂ ಒಟ್ಟಾರೆ ಬೇಡಿಕೆಯಲ್ಲೂ ಹೆಚ್ಚಳವಾಗಲಿದೆ. ಆದರೆ, ಇದೇ ವೇಳೆಯಲ್ಲೇ ಕೆಲವು ವಲಯಗಳಿಗೆ ಹೆಚ್ಚು ಪೆಟ್ಟು ಬೀಳಲಿದೆ. ಹಾನಿ ಅನುಭವಿಸಲಿರುವ ವಲಯಗಳು ಯಾವುವೆಂದರೆ..

1. ಪ್ರಯಾಣ ಮತ್ತು ಪ್ರವಾಸ: ಈ ಕ್ಷೇತ್ರಕ್ಕೆ ಹೋಟೆಲ್ – ರೆಸ್ಟಾರೆಂಟುಗಳು, ವಿಮಾನಯಾನಗಳು, ಹಾಲಿಡೇ ಪ್ಲ್ಯಾನರ್‌ಗಳು ಸೇರಿದಂತೆ ಅನೇಕ ಉದ್ಯೋಗಗಳು ಬೆಸೆದುಕೊಂಡಿವೆ. ಒಂದು ವೇಳೆ ಟ್ರಾವೆಲ್‌ ಇಂಡಸ್ಟ್ರಿಗೇನಾದರೂ ಹಾನಿಯಾಯಿತು ಅಂದರೆ, ಪ್ರವಾಸಿಗರ ಮೇಲೆಯೇ ಅವಲಂಬಿತವಾಗಿರುವ ಪ್ರದೇಶಗಳು, ರಾಜ್ಯಗಳು ಹಾಗೂ ರಾಷ್ಟ್ರಗಳಿಗೆ ತೊಂದರೆಯಾಗಲಿದೆ.

2. ರಿಯಲ್‌ ಎಸ್ಟೇಟ್‌: ಈಗಾಗಲೇ ರಿಯಲ್‌ ಎಸ್ಟೇಟ್‌ ಬೇಡಿಕೆ ಕುಸಿದಿದ್ದು, ಮುಂದೆಯೂ ಬೇಡಿಕೆ ಕಡಿಮೆ ಇರಲಿದೆ. ಮತ್ತೆ ಬೇಡಿಕೆ ಚಿಗುರೊಡೆಯಲು ದಶಕವೇ ಹಿಡಿಯಬಹುದು.

3. ಆಟೊಮೊಬೈಲ್: ಆಗಲೇ ಈ ಕ್ಷೇತ್ರಗಳಲ್ಲಿ ಬದಲಾವಣೆಯಾಗಿದೆ, ಅಲ್ಲದೇ ಕಾರ್‌, ಐಷಾರಾಮಿ ಕಾರ್‌ಗಳು, ಬಿಡಿ ಭಾಗಗಳ ವಲಯಕ್ಕೂ ಪೆಟ್ಟು ಬೀಳಲಿದೆ

4. ಸರಕು ಸಾಗಣೆ: ಉತ್ಪಾದನೆ, ಬೇಡಿಕೆ ಹಾಗೂ ಪೂರೈಕೆ ಸರಪಳಿಯು ಹಳಿಯೇರುವುದಕ್ಕೆ ಸಮಯ ಹಿಡಿಯಬಹುದು. ಒಟ್ಟಲ್ಲಿ ಸರಕು ಸಾಗಣೆ ವಲಯಕ್ಕೆ ದೊಡ್ಡ ಪೆಟ್ಟು ಬೀಳಲಿದೆ (ಕಾರ್‌ ರೆಂಟಲ್ಸ್ ಮತ್ತು ಅಗ್ರಿಗೇಟರ್ಸ್‌ ಒಳಗೊಂಡು)

5. ಕಾರ್ಯಕ್ರಮಗಳು: ಸದ್ಯಕ್ಕಂತೂ ಕ್ರೀಡೆ, ಮದುವೆ, ಕಾನ್ಫರೆನ್ಸ್ ಗಳು ಎಂದಿನಂತೆ ನಡೆಯುವ ಲಕ್ಷಣಗಳು ಇಲ್ಲ.

ಸಾರ್ವಜನಿಕ ಆಡಳಿತ, ಒಟ್ಟಾರೆ ಬದಲಾವಣೆ
ಈ ಸಾಂಕ್ರಾಮಿಕದ ಪರಿಣಾಮಗಳನ್ನು ಎದುರಿಸುವುದು ಅನಿವಾರ್ಯವೇ ಆದರೂ, ಇದೇ ವೇಳೆಯಲ್ಲೇ ಹಿಂದಿನ ಕೆಲವು ಮೌಲ್ಯಗಳು, ನಂಬಿಕೆಗಳು ಮರುಚಾಲನೆಗೆ ಬಂದರೂ ಅಚ್ಚರಿಪಡಬೇಕಿಲ್ಲ. ಉದಾಹರಣೆಗೆ….

1. ಗ್ರಾಮ, ತಾಲೂಕಾ ಹಾಗೂ ಜಿಲ್ಲೆಯಲ್ಲಿನ ಆಡಳಿತಗಳು (ಪಂಚಾಯಿತಿಗಳು) ಬಲಿಷ್ಠವಾಗಬಹುದು ಮತ್ತು ಅವುಗಳಲ್ಲಿ ಹೆಚ್ಚಿನ ಜನಸಹಭಾಗಿತ್ವ ಕಾಣಬಹುದು.

2. ಎಲ್ಲಾ ನೀತಿ ನಿರೂಪಣೆಗಳೂ ಸ್ಥಳೀಯ ಅಗತ್ಯಗಳನ್ನು ಪರಿಗಣಿಸಿ ರಚನೆಯಾಗಲಿದೆ ಮತ್ತು ಅಭಿವೃದ್ಧಿಯೇ ಅಜೆಂಡಾ ಆಗಲಿದೆ. ಇದಷ್ಟೇ ಅಲ್ಲದೇ, ರಾಜಕೀಯದಲ್ಲಿ ಹೊಸ ತಲೆಮಾರಿನ ಪ್ರವೇಶಕ್ಕೆ ನಾವು ಸಾಕ್ಷಿಯಾಗಬಹುದು.

3. ಭಾರತೀಯತೆಯಪರಿಕಲ್ಪನೆಗೆ ಹೊಸ ವ್ಯಾಖ್ಯಾನ ಸಿಗಬಹುದು ಮತ್ತು ಇತಿಹಾಸದ ಮೌಲ್ಯಗಳು, ಪರಂಪರೆ ಮತ್ತು ವೇದದ ಗುಣಾತ್ಮಕ ಅಂಶಗಳು ಮುನ್ನೆಲೆಗೆ ಬರಬಹುದು.

4. ಸರ್ಕಾರಿ ಸಂಸ್ಥೆಗಳಾದ ದೂರದರ್ಶನ, ಅಂಚೆ ಇಲಾಖೆ, ವಿದ್ಯುತ್‌ ಮತ್ತು ಇತರೆ ಸಂಸ್ಥೆಗಳ ಕೆಲಸ ಹೆಚ್ಚಲಿದ್ದು, ಅವು ಬೆಳೆಯಲಿವೆ.

5. ಜನರು ಹೆಚ್ಚಾಗಿ ಸ್ಥಳೀಯ ಶಾಲೆ, ಕಾಲೇಜುಗಳು ಮತ್ತು ಆಸ್ಪತ್ರೆಗಳ ಮೇಲೆಯೇ ಅವಲಂಬಿತರಾಗಲಿದ್ದಾರೆ. ಇನ್ನು ಹಳ್ಳಿಗಳಲ್ಲಿ ಹೊರಗಿನ ವ್ಯಕ್ತಿಯನ್ನು ಸ್ವೀಕರಿಸುವ ಪ್ರವೃತ್ತಿ ಕಡಿಮೆಯಾಗಬಹುದು.

6. ಸಮುದಾಯ ಹಾಗೂ ಜಾತಿ ಸಂಬಂಧಿ ಘರ್ಷಣೆಗಳಲ್ಲಿ ಹೆಚ್ಚಳವಾಗಲೂಬಹುದು. ಇದಕ್ಕೆ ಆರ್ಥಿಕ ಅಸಮಾನತೆಯೂ ಮುಖ್ಯ ಕಾರಣವಾಗಬಹುದು. ಇನ್ನು ದರೋಡೆ, ಕಳ್ಳತನ ಮತ್ತು ಅಪರಾಧ ಪ್ರಕರಣಗಳಲ್ಲಿ ಹೆಚ್ಚಳವಾಗಿ, ಈ ಕೃತ್ಯಗಳು ಬಹುಕಾಲ ಮುಂದುವರಿಯಬಹುದು.

7. ಸಹಕಾರಿ ಮಾದರಿ ಮತ್ತು ಸಾಮಾಜಿಕ ಉದ್ಯಮಶೀಲತೆಯಂತೂ ಅಧಿಕವಾಗಲಿದೆ. ಸೇವಾ ಕ್ಷೇತ್ರ ಹಾಗೂ ವೃತ್ತಿ ಆಧಾರಿತ ಕೋರ್ಸುಗಳು ಮುನ್ನೆಲೆಗೆ ಬರಲಿವೆ. ಉದ್ಯೋಗಿಗಳು ಹೊಸ ರೀತಿಯ ವೃತ್ತಿ ಸಂಸ್ಕೃತಿಗೆ ಒಗ್ಗಿಕೊಳ್ಳಬೇಕಾಗುತ್ತದೆ. ಪ್ರಾಜೆಕ್ಟ್ ನಿರ್ವಹಣೆ ಕೇಂದ್ರಿತ ಹಾಗೂ ಟಾಸ್ಕ್ ಆಧರಿತ ಕೆಲಸಗಳು ಉದ್ಯೋಗ ವಲಯದಲ್ಲಿ ಹೆಚ್ಚಳವಾಗಲಿವೆ.

8. ಉದ್ಯೋಗಾವಕಾಶಗಳ ವಿಷಯಕ್ಕೆ ಬಂದರೆ, ಇಂಟರ್ನೆಟ್‌ ಸ್ನೇಹಿ ಮನಸ್ಥಿತಿಯಿದ್ದವರಿಗೆ ಆದ್ಯತೆ ದೊರೆಯುತ್ತದೆ ಹಾಗೂ ಅವರಿಗೆ ಮೇಲುಗೈ ಇರುತ್ತದೆ.

– ವೇಣು ಶರ್ಮಾ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next