Advertisement
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೆದೂರು ಗ್ರಾಮದ ಶಾನಾಡಿಯಲ್ಲಿ ಸ್ಥಳೀಯರಾದ ಉಮಾನಾಥ ಶೆಟ್ಟಿ (ಉಮೇಶ ಶೆಟ್ಟಿ) ಮತ್ತು ರಾಮಚಂದ್ರ ಭಟ್ ಅವರು ಸ್ಥಾಪಿಸಿದ ಬೆಲ್ಲದ ಗಾಣವು ಗಾಂಧೀಜಿ ಮತ್ತು ಪಂ| ದೀನದಯಾಳ್ ಉಪಾಧ್ಯಾಯ ಪ್ರತಿಪಾದಿಸಿದ ಹಾಗು ಈಗ ಹಿರಿಯ ರಂಗಕರ್ಮಿ, ಎಡಪಂಥೀಯ ಚಿಂತಕ ಪ್ರಸನ್ನ, ಭಾರತದ ಆತ್ಮದಂತಿರುವ ಗ್ರಾಮೀಣ ಭಾರತಕ್ಕೆ ಕಾಲ್ನಡಿಗೆಯಲ್ಲಿ ಪ್ರದಕ್ಷಿಣೆ ಬಂದ ಆರೆಸ್ಸೆಸ್ ಹಿರಿಯ ಪ್ರಚಾರಕ ಸೀತಾರಾಮ ಕೆದಿಲಾಯ ಪ್ರದಿಪಾದಿಸುತ್ತಿರುವ ಗ್ರಾಮೀಣ, ಸ್ವಾಭಿಮಾನಿ ಆರ್ಥಿಕತೆಗೆ ಒಂದು ಉದಾಹರಣೆಯಾಗಿ ಕಂಡುಬರುತ್ತಿದೆ.
ಉಮೇಶ ಶೆಟ್ಟಿಯವರು ಹುಬ್ಬಳ್ಳಿ ಧಾರವಾಡದಲ್ಲಿ ಹೊಟೇಲ್ ಉದ್ಯಮಿಗಳು. ಇವರಿಗೆ ಕೃಷಿ ಎನ್ನುವುದು ಹವ್ಯಾಸ. ರಾಮಚಂದ್ರ ಭಟ್ ಇರುವೆಯನ್ನು ಕೊಲ್ಲಲೂ ಡಿಡಿಟಿಯನ್ನು ತಾರದಂತಹ ಅಪ್ಪಟ ಸಾವಯವ ಕೃಷಿಕ. ಇವರು ಕಾರ್ಮಿಕರಿಂದಲೇ ಕೆಲಸ ಮಾಡಿಸುವ ಭೂಮಾಲಕ ಕೃಷಿಕರಲ್ಲ, ಸ್ವತಃ ಕೆಲಸ ಮಾಡಿ ಅದರ ಸ್ವಾದವನ್ನು ಅನುಭವಿಸುವ ಸ್ವಾನುಭವಿ ಕೃಷಿಕ. ರಾಮಚಂದ್ರ ಭಟ್ಟರು ಸುಮಾರು ಐದು ಎಕ್ರೆ ಕಬ್ಬು ಬೆಳೆದರೆ, ಉಮಾನಾಥ ಶೆಟ್ಟರು ಸುಮಾರು 20 ಎಕ್ರೆ ಕಬ್ಬು ಬೆಳೆಸಿದ್ದಾರೆ. ಶೆಟ್ಟರು ಆ ಊರಿನಲ್ಲಿ ಗದ್ದೆಯನ್ನು ಹಡಿಲು ಬೀಳಲು ಬಿಡುವುದಿಲ್ಲ. ಗದ್ದೆಯಲ್ಲಿ ಬೆಳೆ ಬೆಳೆಸದೆ ಇರುವುದು ಇವರ ಗಮನಕ್ಕೆ ಬಂದರೆ ಇವರೇ ನೆಟ್ಟು ಕೊಡುತ್ತಾರೆ. ಅದನ್ನು ಕೊಯ್ದುಕೊಂಡು ಮನೆಗೆ ಹೋಗುವ ಕೆಲಸ ಮಾತ್ರ ಗದ್ದೆಯ ಮಾಲಕನಿಗೆ. ಕೊನೆಯ ಹಂತದ ಕೊಯ್ಲು ಮಾಡಲು ಆಗದವನಿಗೆ ಕೊಯ್ಲು ಮಾಡಿಯೂ ಕೊಡುತ್ತಾರೆ. ಇದೆಂತಹ ಕೃಷಿ ಹವ್ಯಾಸ ಎಂದು ಅಚ್ಚರಿಯಾಗಬಹುದು. ಅವರು ವ್ಯಾಪಾರ ಉದ್ದಿಮೆಯಲ್ಲಿ ಬಂದ ಲಾಭವನ್ನು ಹೀಗೆ ಕೃಷಿ ಮೂಲಕ ವಿಕೇಂದ್ರೀಕರಣ ಮಾಡುತ್ತಿದ್ದಾರೆ.
Related Articles
ಹೋದ ವರ್ಷ ಸಕ್ಕರೆ ಕಾರ್ಖಾನೆಯವರು ಕಬ್ಬು ಬೆಳೆಸಲು ಕರೆ ಕೊಟ್ಟ ಕಾರಣ ಇವರು ಕಬ್ಬು ನೆಟ್ಟವರು. ಕಾರ್ಖಾನೆ ಪುನರಾರಂಭಗೊಳ್ಳದ ಕಾರಣ ನೆಟ್ಟ ಬೆಳೆಗಾಗಿ ಬೆಲ್ಲದ ಗಾಣ ಆರಂಭಿಸಿದರು. ಇವರಿಗೆ ಇದರ ಅನುಭವ ಇದ್ದಿರಲಿಲ್ಲ. ಸುಮಾರು 10 ಲ.ರೂ. ಹೂಡಿಕೆಯಲ್ಲಿ ಬಹು ಪಾಲು ಶೆಟ್ಟರದೇ. ಈಗ ಗಳಿಸಿದ ಅನುಭವದಿಂದ ಮುಂದಿನ ವರ್ಷ ಆರ್ಥಿಕವಾಗಿ ಸಮರ್ಥರಾಗಬಹುದು ಎಂಬ ವಿಶ್ವಾಸವೂ ಇದೆ.
Advertisement
ಕೃಷಿಕ ಸ್ವಾಭಿಮಾನಿಯಾಗುವುದು ಹೀಗೆಉಡುಪಿ- ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆಕ್ಕಟ್ಟೆಯಿಂದ ಸುಮಾರು ಆರು ಕಿ.ಮೀ. ಗ್ರಾಮೀಣ ಭಾಗಕ್ಕೆ ಹೋದರೆ ಶಾನಾಡಿ ಸಿಗುತ್ತದೆ. ಅಲ್ಲೀಗ ದೂರದೂರುಗಳಿಂದ ಇನ್ನೋವಾ, ಕ್ರೆಟಾ, ಚವರ್‌ಲೆಟ್‌ನಂತಹ ಹವಾನಿಯಂತ್ರಿತ ಕಾರುಗಳಲ್ಲಿ ಬಂದಿಳಿದು ತಾಜಾ ಬೆಲ್ಲ, ಜೋನಿಬೆಲ್ಲ, ಕಬ್ಬಿನ ಹಾಲನ್ನು ಕೇಳುತ್ತಾರೆ. ಬೆಲ್ಲ ಸ್ಟಾಕ್ ಇಲ್ಲ, ಜೋನಿಬೆಲ್ಲಕ್ಕೆ ಒಂದು ಗಂಟೆ ಕಾಯಬೇಕು ಎಂಬ ಸ್ಥಿತಿ ಇದೆ. “ನಿನ್ನೆ ಮಾಡಿದ್ದು ಇಲ್ಲವೆ?’ ಎಂದು ಕೇಳಿದರೆ ಅವೆಲ್ಲವನ್ನು ನಿನ್ನೆಯೇ ಕಾದು ನಿಂತು ತೆಗೆದುಕೊಂಡು ಹೋಗಿದ್ದಾರೆ ಎಂಬ ಉತ್ತರ ದೊರಕುತ್ತದೆ. ಕೃಷಿಕರೇ ನಿಗದಿಪಡಿಸಿದ ಕೆ.ಜಿ.ಗೆ 60, 80 ರೂ. ದರ ಕೊಟ್ಟು ಕೊಂಡೊಯ್ಯುವವರಿಗೂ ಈ ಸ್ಥಿತಿ ಇದೆ. ಭಾರತದ ಕೃಷಿಕ ಸ್ವಾಭಿಮಾನಿಯಾಗಿ ಯಾವಾಗ ನಿಲ್ಲಬಲ್ಲನೆಂದರೆ ಈ ಸ್ಥಿತಿ ಬಂದಾಗ. ಆಗ ಹೇಗಿತ್ತು?
ಕರಾವಳಿ ಜಿಲ್ಲೆಗಳಲ್ಲಾಗಲಿ, ಕರ್ನಾಟಕದಲ್ಲಿಯಾಗಲಿ, ದೇಶದಲ್ಲೆ ಆಗಲಿ 40-50 ವರ್ಷಗಳ ಹಿಂದೆ ಎಲ್ಲ ಗ್ರಾಮೀಣ ಭಾಗದ ಆರ್ಥಿಕತೆಯೂ ಹೀಗೆಯೇ ಇತ್ತು. ಅದೇ ಊರಿನಲ್ಲಿ ಬೆಳೆದ ಕಬ್ಬು, ಅದೇ ಊರಿನ ಗ್ರಾಮೀಣ ತಂತ್ರಜ್ಞಾನದ ಗಾಣ, ಕಬ್ಬನ್ನು ಅರೆಯಲು ಅದೇ ಮನೆಯ ಕೋಣ, ಆ ಕೋಣಗಳಿಗೆ ಕಬ್ಬಿನ ಓಲಿ, ಬೆಲ್ಲ ತಯಾರಿಸುವಾಗ ಮೇಲ್ಭಾಗದಲ್ಲಿ ಬರುವ ಮೊಲ್ಯಾಸಸ್ ಆಹಾರ, ಅದೇ ಕೋಣಗಳು ಹಾಕಿದ ಸೆಗಣಿ ಬೆಳೆಗೆ ಗೊಬ್ಬರ, ಅಲ್ಲೇ ಕಬ್ಬಿನ ರಸ ಹಿಂಡಿದ ಅನಂತರ ದೊರಕುವ ಸಿಪ್ಪೆ ಇಂಧನ (ಬೆಂಕಿ), ಅದೇ ಅಥವಾ ಪಕ್ಕದ ಊರಿನ ಗ್ರಾಹಕರು ದುಡ್ಡು ತೆತ್ತು ಕೊಂಡೊಯ್ಯುವ ಪೌಷ್ಟಿಕವಾದ ಬೆಲ್ಲ, ಕಾರ್ಮಿಕರಿಗೆ ಅದೇ ದಿನ ಸಂಬಳ ಬಟವಾಡೆ ಇದೆಲ್ಲ ಚಿತ್ರಣಗಳಾಗಿತ್ತು. ಇಂತಹ ವ್ಯವಸ್ಥೆಯಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೂ ಅದು ಹೆಚ್ಚೆಂದರೆ ಅದೇ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಗೆಹರಿಯುವ ಮಟ್ಟದ ಪ್ರಕರಣಗಳಾಗಿರುತ್ತಿದ್ದವು. ಇದು ಬೆಲ್ಲದ ಗಾಣಕ್ಕೆ ಮಾತ್ರ ಸೀಮಿತವಲ್ಲ. ಹೂಡಿಕೆ ಹಿಂದಿನ ಕಾರಣವೇನು?
ಶಾನಾಡಿ ಬೆಲ್ಲದ ಗಾಣಕ್ಕೆ 10 ಲ.ರೂ. ಬಂಡವಾಳ ಹೂಡಿಕೆ ಮಾಡ ಬೇಕಾಗಿ ಬಂದುದು ಕೋಣಗಳ ಸಂತತಿ ನಾಶದಿಂದ ಎಂಬುದನ್ನು ಗಮನ ದಲ್ಲಿರಿಸಿಕೊಳ್ಳಬೇಕು. ಈಗ ವಿದ್ಯುತ್ ಜನರೇಟರ್ ಯಂತ್ರ ಸ್ಥಾಪನೆಯಾಗ ಬೇಕಾದ ಕಾರಣ ಈ ಬಂಡವಾಳ ಬೇಕಾಯಿತು. ಇಷ್ಟು ಬಂಡವಾಳಕ್ಕೂ ಸರಕಾರದ ತಪ್ಪು ನೀತಿಯಿಂದ ಆದ ಜಾನುವಾರು ನಾಶ ಕಾರಣ. ಬಳಿಕ ಏನಾಯಿತು?
ಬೃಹತ್ ಎಂದು ಬೋರ್ಡ್ ಹೊತ್ತ ಕೈಗಾರಿಕೀಕರಣವನ್ನು ಸರಕಾರ ಜಾರಿಗೆ ತಂದ ಬಳಿಕ ದೊಡ್ಡ ಸಂಖ್ಯೆಯ ಕಾರ್ಮಿಕರು, ಸಣ್ಣ ಸಣ್ಣ ಮಾಲಕರು ಎಲ್ಲರೂ ಕೆಲವೇ ಬೆರಳೆಣಿಕೆ ಸೋಕಾಲ್ಡ್ ಪ್ರತಿಷ್ಠಿತ ಆಡಳಿತದಾರರ ಕೃಪಾಕಟಾಕ್ಷಕ್ಕೆ ಜೋತುಬೀಳುವ ಸಂಸ್ಕೃತಿ ಬಂತು. ಕೃಷಿಕರು ತಮ್ಮ ಬೆಳೆಗೆ ಬೆಲೆ ಕೊಡಬೇಕು/ ಬಾಕಿ ಕೊಡಬೇಕು ಎಂದು, ಕಾರ್ಮಿಕರು ತಮಗೆ ವೇತನ ಹೆಚ್ಚಿಸಬೇಕು/ ಬಾಕಿ ಕೊಡಬೇಕೆಂದು ಮನವಿ ಕೊಡುವುದು, ಪ್ರತಿಭಟನೆ ನಡೆಸುವುದು, ಜನಪ್ರತಿನಿಧಿಗಳು ಸಂಬಂಧಿಸಿದ ಸಚಿವರಿಗೆ ಗೋಗರೆಯುವುದು, ಸಚಿವರು ಮೀಟಿಂಗ್, ಸರ್ವೆ, ಸಮಿತಿ-ಆಯೋಗ ರಚನೆ ಇತ್ಯಾದಿಗಳಲ್ಲಿ ತೊಡಗಿ ಸಾಕಷ್ಟು ಬಿಲ್ಲುಗಳನ್ನು ಬರೆದು ಅವರೂ ಸಿಎಂಗೆ ಮನವಿ ಕೊಡುವುದು, ಕೊನೆಗೆ ಸಿಎಂ ಒಂದಿಷ್ಟು ಅನುದಾನಗಳ ಅನುಗ್ರಹ ಮಾಡುವುದು, ಅದು ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆಯಂತಾಗಿ ಒಂದಿಷ್ಟು ಜನರ ಪಾಲಾಗುವುದು, ತಾಲೂಕಿನ ನ್ಯಾಯಾಲಯಗಳಿಂದ ಹಿಡಿದು ಉಚ್ಚ, ಸರ್ವೋಚ್ಚ ನ್ಯಾಯಾಲಯಗಳ ಮೆಟ್ಟಿಲು ಹತ್ತುವುದು ಇತ್ಯಾದಿಗಳ ಹಾವಳಿ, ಇವುಗಳೇ ಮಾಧ್ಯಮಗಳಿಗೆ ಬಿಸಿಬಿಸಿ ಸುದ್ದಿಯಾಗುವುದು ಶುರುವಾಯಿತು. ಕೃಷಿಕರು ಗದ್ದೆಗಳಿಗೆ ಕಟ್ಟ ಹಾಕಿ ನೀರಿನ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು, ಇನ್ನೂ ಹೆಚ್ಚೆಂದರೆ ಮರಳು ತೆಗೆದು ಆಳದಲ್ಲಿ ಸಿಕ್ಕಿದ ನೀರು ಬಳಸುತ್ತಿದ್ದರು. ಈಗಿನಂತೆ ಕೋಟಿಗಟ್ಟಲೆ ಹಣ ಕೃಷಿ/ ಕುಡಿಯುವ ನೀರಿಗಾಗಿ ಹೂಡಿಕೆಯಾಗುತ್ತಿರಲಿಲ್ಲ. ಈಗ ನೀರಿನ ಮೇಲೆ “ನೀರಿನಂತೆ’ ಹೂಡಿಕೆಯಾಗುತ್ತಿದೆಯಷ್ಟೆ! ಕೃಷಿ, ಕೃಷಿಕರ ಹೆಸರಿನಲ್ಲಿ ಸರಕಾರದಿಂದ ಪ್ರಾಯೋಜನೆಗೊಂಡು ನೆಲಕಚ್ಚಿದ ಉದ್ಯಮಗಳಲ್ಲಿ ಹೂಡಿಕೆಯಾದ ಹಣವನ್ನು ಕೃಷಿಕರಿಗೆ ನೇರವಾಗಿ ವಿಕೇಂದ್ರೀಕರಿಸಿ ವಿತರಿಸಿದ್ದರೆ ಕೃಷಿಕರು ಅದೆಷ್ಟೋ ಅಭಿವೃದ್ಧಿಯಾಗುತ್ತಿದ್ದರಲ್ಲವೆ? ಎಣ್ಣೆ ಗಾಣ, ನೇಕಾರಿಕೆ, ಕುಂಬಾರಿಕೆ, ದಲಿತರು, ಕೊರಗ ಸಮುದಾಯದವರ ಬುಟ್ಟಿಯಂತಹ ಸಾಂಪ್ರದಾಯಿಕ ಗುಡಿ ಕೈಗಾರಿಕೆಗಳು ನೆಲಕಚ್ಚಿ ಹೋದದ್ದು ಅಭಿವೃದ್ಧಿ ಎಂಬ ಹೆಸರು ಹೊತ್ತ ಕೈಗಾರಿಕೆಗಳ ನಾಗಾಲೋಟದಿಂದ ಎನ್ನುವುದು ಈಗಲೂ ಸರಕಾರಕ್ಕೆ ಮನವರಿಕೆಯಾಗುತ್ತಿಲ್ಲ. “ಲೈಕ್’ನಲ್ಲಿ ಬೇಡಿಕೆಯೆ?
ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಅಪರೂಪದ ಸುದ್ದಿಗಳು ಹರಿದಾಡಿದಾಗ ಬೇಡಿಕೆ ಏರುತ್ತದೆ ನಿಜ. ಇದು ಕೇವಲ “ಲೈಕ್’ಗೆ ಸೀಮಿತವಾಗುತ್ತದೋ ಎಂಬ ಸಂದೇಹ ಮೂಡುತ್ತದೆ. ಒಂದು ವೇಳೆ ಬೇಡಿಕೆಯಾಗಿ ಪರಿವರ್ತನೆಗೊಂಡರೂ ಅಷ್ಟು ಬೇಡಿಕೆಗಳನ್ನು ಪೂರೈಸಲು ಆಗದಂತೆ ನಮ್ಮ ವ್ಯವಸ್ಥೆ ಮಾಡಿಟ್ಟಿದೆ. ನೆಲದ ಸಂಸ್ಕೃತಿಗೆ ಸೂಕ್ತ ಪ್ರಯೋಗ
ಕೆದೂರು ಗ್ರಾಮದ ಶಾನಾಡಿಯಲ್ಲಿ ಕಬ್ಬಿನ ಆಲೆಮನೆಯ ಬೆಲ್ಲದ ಗಾಣದ ಪ್ರಯೋಗ ಪ್ರಾಯೋಗಿಕವಾದರೂ ಈ ನೆಲದ ಸಂಸ್ಕೃತಿಗೆ ಸೂಕ್ತವಾದ ಆರ್ಥಿಕ ಅಭಿವೃದ್ಧಿಗೆ ಅಧ್ಯಯನಶೀಲ ವಿಷಯ. ಇದನ್ನು ಮಾಡೆಲ್ ಆಗಿಟ್ಟುಕೊಂಡು ಆಯಾ ಪ್ರದೇಶದ ಸ್ವಾವಲಂಬಿ ಆರ್ಥಿಕತೆಯನ್ನು ಬೆಳೆಸಿದರೆ ದೇಶದ ಸುಸ್ಥಿರ ಜಿಡಿಪಿ ಬೆಳೆಯಬಹುದು. ನೆಹರೂಗೂ ಬೇಡ, ಮೋದಿಗೂ ಬೇಡ
ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಗಾಂಧೀಜಿಯವರ ಇದೇ ಚಿಂತನೆಯನ್ನು ಕೈಬಿಟ್ಟಂತೆ, ಲೇಟೆಸ್ಟ್ ಪ್ರಧಾನಿ ನರೇಂದ್ರ ಮೋದಿಯವರು ಪಂಡಿತ್ ದೀನದಯಾಳ ಉಪಾಧ್ಯಾಯರ ಚಿಂತನೆಯನ್ನು ಕೈಬಿಟ್ಟಂತೆ ಭಾಸವಾಗುತ್ತದೆ. ಪ್ರತಿ ವ್ಯಕ್ತಿ, ಪ್ರತಿ ಮನೆ, ಪ್ರತಿ ಊರು ಬೆಳೆದರೆ ಮಾತ್ರ ಹೋಬಳಿ, ತಾಲೂಕು, ಜಿಲ್ಲೆ, ರಾಜ್ಯ ಅಂತಿಮವಾಗಿ ದೇಶ ಸುಸ್ಥಿರ ಅಭಿವೃದ್ಧಿಯಾಗಬಹುದು, ಇದೇ ನೀತಿ ವಿಸ್ತರಣೆಯಾದರೆ ಜಗತ್ತೂ ಸುಸ್ಥಿರವಾಗಬಹುದು. ಇಲ್ಲವಾದರೆ ಈಗಿನ ಜಿಡಿಪಿ ಲೆಕ್ಕದಲ್ಲಿ ಕೆಲವು ಜನರು ಕೋಟ್ಯಧಿಪತಿಗಳು, ಬಹುಜನರು ಭಿಕ್ಷಾಧಿಪತಿಗಳು ಆಗಬಹುದು. ಭಿಕ್ಷಾಧಿಪತಿ ಎಂದರೆ ನಾವೆಂದು ಕೊಂಡಂತೆ ಬಸ್ ನಿಲ್ದಾಣದಲ್ಲಿ ಕಂಡುಬರುವವರು ಮಾತ್ರ ಆಗಬೇಕಾ ಗಿಲ್ಲ, ಗೋಗೆರೆಯುವವರೆಲ್ಲ ಒಂದರ್ಥದಲ್ಲಿ ಭಿಕ್ಷಾಧಿಪತಿಗಳೇ. ಅವನತಿಯ ಹಂತಗಳು ಯಾವುದೂ ಸ್ಪಷ್ಟವಾಗಿ ಗೋಚರವಾಗುವುದಿಲ್ಲ, ಕಾರಣವೆಂದರೆ ಎಲ್ಲವೂ ಪ್ರಕ್ರಿಯೆ (ಪ್ರೊಸೆಸ್)ಯಲ್ಲಿರುತ್ತವೆ, ಪೂರ್ಣ ವಿರಾಮ/ ಕೊನೆ ಎಂದಿರುವುದಿಲ್ಲವಲ್ಲ? ಒಂದು ಹಂತದ ಫಲಿತಾಂಶ ಗೋಚರಿಸುವಾಗ ಎಷ್ಟೋ ಪಿಎಂ, ಸಿಎಂಗಳು ಆಗಿ ಹೋಗಿರುತ್ತಾರೆ… – ಮಟಪಾಡಿ ಕುಮಾರಸ್ವಾಮಿ