Advertisement

ಯಾವ ಕೆಲಸ ಎಷ್ಟು ಸುರಕ್ಷಿತ?

03:12 PM Jun 01, 2020 | mahesh |

ಲಂಡನ್‌ : ಲಾಕ್‌ಡೌನ್‌ ತೆರವಾಗುತ್ತಿರುವಂತೆ ಜನರು ಮೆಲ್ಲನೆ ಕಚೇರಿಯತ್ತ ಹೋಗಲು ತೊಡಗಿದ್ದಾರೆ. ಲಾಕ್‌ಡೌನ್‌ ದಿನಗಳಲ್ಲಿ ಮನೆಯಲ್ಲಿದ್ದುಕೊಂಡೇ ಕಚೇರಿಯ ಕೆಲಸ ಮಾಡಿದವರಿಗೆ ಮರಳಿ ಕಚೇರಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಕೆಲವು ದಿನ ಬೇಕಾಗಬಹುದು. ಇದೇ ವೇಳೆ ಕಚೇರಿಯಲ್ಲಿ ಅವರು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಯೂ ಇದೆ. ಹಲವು ಮಂದಿ ತಾವು ಮುಂದೆಯೂ ಮನೆಯಿಂದಲೇ ಕೆಲಸ ಮಾಡುತ್ತೇವೆ ಎಂದು ಹೇಳ ತೊಡಗಿದ್ದಾರೆ.ಇದಕ್ಕೆ ಕೋವಿಡ್‌ ವೈರಸ್‌ನ ಭಯ ಒಂದೆಡೆಯಾಗಿದ್ದರೆ, ಮನೆಯಿಂದ ಕೆಲಸ ಮಾಡುವ ಅನುಕೂಲತೆಗಳಿಗೆ ಅವರು ಒಗ್ಗಿಕೊಂಡಿರುವುದು ಇನ್ನೊಂದು ಕಾರಣ. ಈ ಹಿನ್ನೆಲೆಯಲ್ಲಿ ಯಾವ ಕೆಲಸ ಮಾಡುವವರಿಗೆ ವೈರಸ್‌ ಭಯ ಹೆಚ್ಚು ಇದೆ ಎನ್ನುವ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಲಾಯಿತು.

Advertisement

ಕಚೇರಿಯೊಳಗಿನ ಕೆಲಸಗಳಲ್ಲಿ ಬಹುತೇಕ ನೌಕರರು ಕೈಯಳತೆಯ ದೂರದಲ್ಲಷ್ಟೇ ಇರುತ್ತಾರೆ. ಇಂಥ ಪರಿಸರದಲ್ಲಿ ಸುರಕ್ಷಾ ಕ್ರಮಗಳನ್ನು ಸಮರ್ಪಕವಾಗಿ ಪಾಲಿಸದಿದ್ದರೆ ವೈರಸ್‌ಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ.  ಆರೋಗ್ಯ ಸೇವೆ ನೌಕರರು ವೈರಸ್‌ಗಳಿಗೆ ತುತ್ತಾಗುವ ಸಾಧ್ಯತೆಗಳ ಅತಿ ಹೆಚ್ಚು. ಏಕೆಂದರೆ ಇವರು ರೋಗಿಗಳ ಅತಿ ನಿಕಟ ಪರಿಸರದ ಲ್ಲಿರುತ್ತಾರೆ. ಇದೇ ವೇಳೆ ಕಲಾವಿದರು, ವಕೀಲರಂಥ ವೃತ್ತಿಯಲ್ಲಿರುವವರು, ಅಂತೆಯೇ ಮಾರ್ಕೆಟಿಂಗ್‌, ಎಚ್‌ಆರ್‌ ಮತ್ತು ಹಣಕಾಸು ಸಲಹೆಯಂಥ ಕ್ಷೇತ್ರದಲ್ಲಿರುವವರಿಗೆ ವೈರಸ್‌ ಅಪಾಯ ಅಷ್ಟಾಗಿ ಇರುವುದಿಲ್ಲ.

ಕ್ಲೀನರ್‌ಗಳು, ಬಂಧೀಖಾನೆ ಅಧಿಕಾರಿಗಳು, ಶವ ಸಂಸ್ಕಾರ ನಡೆಸುವವರು ವೈರಸ್‌ ಸೋಂಕಿಗೆ ತುತ್ತಾಗುವ ಹೈರಿಸ್ಕ್ ರೇಂಜ್‌ ನಲ್ಲಿದ್ದಾರೆ. ಬಾರ್‌ ಗಳ ಸಿಬಂದಿ, ಕ್ಷೌರಿಕರು, ನಟರು, ಟ್ಯಾಕ್ಸಿ ಚಾಲಕರು, ಇಟ್ಟಿಗೆ ತಯಾರಕರನ್ನು ಹೈರಿಸ್ಕ್ ರೇಂಜ್‌ಗೆ ಸೇರಿಸಲಾಗಿದೆ. ಬ್ರಿಟನ್‌ನ ಕೋವಿಡ್‌ ಮರಣದ ದಾಖಲೆಗಳನ್ನು ಅವಲೋಕಿಸಿದಾಗ ವೈದ್ಯಕೀಯ ಸಮುದಾಯದಲ್ಲಿ ದೊಡ್ಡ ಪ್ರಮಾಣದ ಸಾವುಗಳು ಸಂಭವಿಸಿಲ್ಲ. ಆದರೆ ಆರೋಗ್ಯ ಸೇವೆಯಲ್ಲಿರುವ ಇತರ ಸಿಬಂದಿಗಳ ಸಾವಿನ ಪ್ರಮಾಣ ಅಧಿಕವಿದೆ. ಇದಕ್ಕೆ ಕಾರಣ ಇವರು ಸೋಂಕಿತರ ನೇರ ಸಂಪರ್ಕಕ್ಕೆ ಬಂದಿ ರುವುದು. ವೈದ್ಯಕೀಯ ಸಿಬಂದಿಗಳು ಸೋಂಕಿತರ ನೇರ ಸಂಪರ್ಕದಲ್ಲಿ ಇರುತ್ತಾರಾದರೂ ಅವರು ಪಿಪಿಇ, ಮಾಸ್ಕ್, ಕೈಗವಸು ಇತ್ಯಾದಿ ಸುರಕ್ಷಾ ಉಡುಗೆಗಳನ್ನು ಧರಿಸುತ್ತಾರೆ ಹಾಗೂ ನೈರ್ಮಲ್ಯಕೆ ಗರಿಷ್ಠ ಆದ್ಯತೆ ನೀಡುತ್ತಾರೆ.

ಹೀಗಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸಾವಿನ ಪ್ರಮಾಣ ಕಡಿಮೆಯಿದೆ. ಅತಿ ಹೆಚ್ಚು ಸಾವು ಸಂಭವಿಸಿದ ವಿಭಾಗದಲ್ಲಿ ಟ್ಯಾಕ್ಸಿ ಚಾಲಕರೂ ಇದ್ದಾರೆ. ಇದಕ್ಕೆ ಇವರು ಜನರ ಅತಿ ನಿಕಟದಲ್ಲಿರುವುದು ಮತ್ತು ಆರೋಗ್ಯ ರಕ್ಷಣೆಯ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಪಾಲಿಸದಿರುವುದು ಕಾರಣ. ಬಾರ್‌, ಸಲೂನ್‌, ಜಿಮ್‌ ಇತ್ಯಾದಿಗಳು ಮುಚ್ಚಿದ ಕಾರಣ ಈ ಕ್ಷೇತ್ರ ಗಳಲ್ಲಿ ಹೆಚ್ಚು ಸಾವು ಸಂಭವಿಸಿಲ್ಲ ಎಂಬ ಅಂಶ ಸಮೀಕ್ಷೆಯಿಂದ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next