Advertisement

ಇಂದಿರಾ ಕ್ಯಾಂಟೀನ್‌ ಆಹಾರ ಎಷ್ಟು ಸುರಕ್ಷಿತ?

12:20 AM Nov 13, 2019 | Lakshmi GovindaRaju |

ಬೆಂಗಳೂರು: ಇಂದಿರಾ ಕ್ಯಾಂಟೀನ್‌ ಆಹಾರದಲ್ಲಿ ಹುಳು ಪತ್ತೆಯಾಗುವುದು, ಆಹಾರದ ಮಾದರಿಯನ್ನು ಪಾಲಿಕೆಯ ಅಧಿಕಾರಿಗಳು ಪ್ರಯೋಗಾಲಯಕ್ಕೆ ಕಳುಹಿಸುವುದು ಶಾಸ್ತ್ರಕ್ಕೆ ಎಂಬಂತೆ ನಡೆಯುತ್ತಿದೆ. ಆದರೆ, ಇಲ್ಲಿಯವರೆಗೆ ತಪ್ಪಿತಸ್ಥರ ಮೇಲೆ ಕ್ರಮಕೈಗೊಂಡಿರುವುದು ವರದಿಯಾಗಿಲ್ಲ. ಜೂನ್‌. 29ಕ್ಕೆ ಬೊಮ್ಮನಹಳ್ಳಿಯ ಇಂದಿರಾ ಕ್ಯಾಂಟೀನ್‌ನ ಅಡುಗೆ ಕೋಣೆಯಲ್ಲಿ ಹುಳು ತುಂಬಿರುವ ಅಕ್ಕಿ ಮೂಟೆಗಳು, ಕೊಳೆತ ಈರುಳ್ಳಿ, ಟೊಮೇಟೋ, ಆಲೂಗಡ್ಡೆ ಹಾಗೂ ತೆಂಗಿನಕಾಯಿ ಇರುವುದು ಪತ್ತೆಯಾಗಿತ್ತು.

Advertisement

ಈ ಸಂಬಂಧ ಬೊಮ್ಮನಹಳ್ಳಿ ಇಂದಿರಾ ಕ್ಯಾಂಟೀನ್‌ನ ಆಹಾರವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರಿಶೀಲನೆ ಬಳಿಕ ಆರೋಗ್ಯಾಧಿಕಾರಿಗಳು ವರದಿ ನೀಡಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸೂಚಿಸಿರುವ ಮಾನದಂಡಕ್ಕಿಂತ ಕಡಿಮೆ ಗುಣಮಟ್ಟದಲ್ಲಿ ಕಡಲೆಬೀಜ, ಅಕ್ಕಿ (ಬುಲೆಟ್‌), ದನಿಯಾ ಪೌಡರ್‌, ತೊಗರಿಬೇಳೆ, ಉಪ್ಪು ಹಾಗೂ ಕಡಲೆಬೇಳೆ ಆಹಾರ ಪದಾರ್ಥಗಳಿವೆ. ಇದನ್ನು ಸೇವಿಸುವುದು “ಅಸುರಕ್ಷಿತ’ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.

ಕ್ಯಾಂಟೀನ್‌ ಆಹಾರ ಎಷ್ಟು ಸುರಕ್ಷಿತ: ಗುಣಮಟ್ಟಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದು ಈಗ ಇಂದಿರಾ ಕ್ಯಾಂಟೀನ್‌ ಆಹಾರ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಮೂಡುವುದಕ್ಕೆ ಕಾರಣವಾಗಿದೆ. ಬಿಬಿಎಂಪಿಯು ಸಾರ್ವಜನಿಕರಲ್ಲಿ ಇಂದಿರಾ ಕ್ಯಾಂಟೀನ್‌ ಆಹಾರದ ಬಗ್ಗೆ ಭರವಸೆ ಮೂಡುವಂತಹ ಯಾವುದೇ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ.

ಇಂದಿರಾ ಕ್ಯಾಂಟೀನ್‌ ನಿರ್ವಹಣೆ ಗುತ್ತಿಗೆಯನ್ನು ಚೆಫ್ಟಾಕ್‌ ಅಂಡ್‌ ರಿವಾರ್ಡ್ಸ್‌ ಸಂಸ್ಥೆಗೆ ನೀಡಿದ್ದ ಗುತ್ತಿಗೆ ಅವಧಿಯು ಆ.16ಕ್ಕೆ ಮುಕ್ತಾಯವಾಗಿದೆ. ಈಗಾಗಲೇ ಗುತ್ತಿಗೆ ಅವಧಿ ಮುಗಿದು ಮೂರು ತಿಂಗಳಾದರೂ, ಹೊಸ ಟೆಂಡರ್‌ ಕರೆಯುವುದಕ್ಕೆ ಪಾಲಿಕೆ ಮುಂದಾಗಿಲ್ಲ. ಚೆಫ್ಟಾಕ್‌ ಅಂಡ್‌ ರಿವಾರ್ಡ್ಸ್‌ ಕಂಪನಿಯ ಸರ್ಮಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಹೀಗಾಗಿ, ಗುತ್ತಿಗೆದಾರರನ್ನು ಬದಲಾಯಿಸಬೇಕು ಎಂದು ಒತ್ತಾಯಗಳು ಕೇಳಿಬಂದಿತ್ತು. ಆದರೆ, ಪಾಲಿಕೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ.

ಕಲ್ಕೆರೆ ಇಂದಿರಾ ಕ್ಯಾಂಟೀನ್‌ ವರದಿ ಬಂದಿಲ್ಲ: ಅ.28ರಂದು ರಾಮಮೂರ್ತಿ ನಗರ ವಾರ್ಡ್‌ ವ್ಯಾಪ್ತಿಯ ಕಲ್ಕೆರೆ ಇಂದಿರಾ ಕ್ಯಾಂಟೀನ್‌ನಲ್ಲಿ ಬಿಬಿಎಂಪಿಯ ಪೌರಕಾರ್ಮಿಕರಿಗೆ ನೀಡಿದ್ದ ಪಲಾವ್‌ನಲ್ಲಿ ಹುಳು ಇರುವುದು ಪತ್ತೆಯಾಗಿತ್ತು. ಇದನ್ನು ಸೇವಿಸಿದ ಪೌರ ಕಾರ್ಮಿಕರು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದರು.ಆದರೆ, ಹುಳು ಇರುವುದು ಪತ್ತೆಯಾಗಿ 15ದಿನವಾದರೂ, ಇನ್ನೂ ವರದಿ ಬಂದಿಲ್ಲ!

Advertisement

ಹೀಗಾಗಿ, ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳುವ ಪ್ರಶ್ನೆಯೇ ಮೂಡುತ್ತಿಲ್ಲ. ಬೊಮ್ಮನಹಳ್ಳಿ ಇಂದಿರಾ ಕ್ಯಾಂಟೀನ್‌ ಆಹಾರ ಅಸುರಕ್ಷಿತವಾಗಿದೆ ಎಂದು ವರದಿ ಬಂದರೂ ಬಿಬಿಎಂಪಿ ಎಚ್ಚೆತ್ತುಕೊಂಡು ಸುಧಾರಣಾ ಕ್ರಮಗಳನ್ನು ಅಳವಡಿಸದೇ ಇರುವುದು ಮತ್ತು ಹುಳು ಪತ್ತೆಯಾದ ಆಹಾರವನ್ನು ಪ್ರಯೋಗಾಲಕ್ಕೆ ಕಳುಹಿಸಿ ಅದರ ವರದಿಯನ್ನು ತರಿಸಿಕೊಳ್ಳದೆ ಇರುವುದು ಹಲವು ಅನುಮಾನಗಳಿಗೂ ಕಾರಣವಾಗಿದೆ.

ಸ್ವಚ್ಛತೆಗೆ ಇಲ್ಲ ಮಾನದಂಡ: ಪದೇ ಪದೆ ಇಂದಿರಾ ಕ್ಯಾಂಟೀನ್‌ನಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ವರದಿಯಾಗುತ್ತಿದ್ದರೂ, ಇಂದಿರಾ ಕ್ಯಾಂಟೀನ್‌ಗಳ ಅಡುಗೆ ಮನೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದಕ್ಕೆ ಪಾಲಿಕೆ ನಿರ್ದಿಷ್ಟ ಮಾನದಂಡ ಅಳವಡಿಸಿಲ್ಲ. ಅದೇ ರೀತಿ ಇಂದಿರಾ ಕ್ಯಾಂಟೀನ್‌ನ ಅಡುಗೆ ಕೋಣೆಗಳಿಗೆ ಅಧಿಕಾರಿಗಳು ದಿಢೀರ್‌ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಪರಿಶೀಲನೆ ನಡೆಸಿ, ಸ್ವಚ್ಛತೆ ಕಾಪಾಡಿಕೊಳ್ಳಲು ಕ್ರಮ ಜರುಗಿಸಿದ್ದಿದ್ದರೆ, ಆಹಾರದಲ್ಲಿ ಹುಳು ಪತ್ತೆಯಾಗುವಂತಹ ಪ್ರಕರಣಗಳು ಕಡಿಮೆಯಾಗುತ್ತಿದ್ದವು. ಆದರೆ, ಈ ರೀತಿ ಯಾವುದೇ ಸುಧಾರಣಾ ಕ್ರಮಗಳನ್ನು ಬಿಬಿಎಂಪಿ ಅಳವಡಿಸಿಕೊಂಡಿಲ್ಲ.

ತಪ್ಪಿತಸ್ಥರ ಮೇಲೆ ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು. ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ಹೊಸ ಟೆಂಡರ್‌ ಕರೆಯಲಾಗಿದ್ದು, ಶೀಘ್ರ ಈ ಪ್ರಕ್ರಿಯೆ ಮುಗಿಯಲಿದೆ. ಇಂದಿರಾ ಕ್ಯಾಂಟೀನ್‌ಗಳ ಅಡುಗೆ ಕೋಣೆಗಳಲ್ಲಿ ಶುಚಿತ್ವ ಕಾಪಾಡುವ ಬಗ್ಗೆಯೂ ನಿರ್ದಿಷ್ಟ ಸೂಚನೆಗಳನ್ನು ನೀಡಲಾಗಿದೆ.
-ಎಂ.ಗೌತಮ್‌ ಕುಮಾರ್‌, ಮೇಯರ್‌

ಬೊಮ್ಮನಹಳ್ಳಿಯ ಇಂದಿರಾ ಕ್ಯಾಂಟೀನ್‌ನ ಅಡುಗೆ ಕೋಣೆಯ ಆಹಾರ ಪದಾರ್ಥಗಳಲ್ಲಿ ಹುಳು ಪತ್ತೆಯಾದ ಸಂಬಂಧ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದ್ದೆ. ಹಣ ಮಂಜೂರು ಮಾಡಬೇಡಿ ಎಂದೂ ಹೇಳಿದ್ದೆ ಯಾವುದು ಆಗಲಿಲ್ಲ.
-ರಾಮ ಮೋಹನ್‌ ರಾಜ್‌, ಉಪ ಮೇಯರ್‌

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next