ಯಾದಗಿರಿ: ಗಡಿ ಜಿಲ್ಲೆಯಲ್ಲಿ ರಣ ಬಿಸಿಲು ತಾಂಡವಾಡಲು ಶುರುವಾಗಿದೆ. ಇದರ ಜತೆಗೆ ರಾಸಾಯನಿಕಗಳಿಂದ ತಯಾರಿಸಿದ ತಂಪು ಪಾನೀಯ ವ್ಯಾಪಾರ ಜೋರಾಗಿ ಸಾಗಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಪಾನೀಯಗಳನ್ನು ನಿಯಂತ್ರಿಸಲು ಅಧಿಕಾರಿಗಳು ನಿಷ್ಕಾಳಜಿ ತೋರುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಪ್ರತಿ ವರ್ಷ ಬೇಸಿಗೆಯಲ್ಲಿ ಆಂಧ್ರಪ್ರದೇಶದಿಂದ ಬರುವ ವ್ಯಾಪಾರಿಗಳು ಜಿಲ್ಲಾದ್ಯಂತ ನಗರ ಮತ್ತು ಪಟ್ಟಣದ ಪ್ರದೇಶಗಳ ಪ್ರಮುಖ ಬೀದಿ, ವೃತ್ತ, ಸಾರ್ವಜನಿಕ ಸ್ಥಳಗಳಲ್ಲಿ ಅಂಗಡಿ ತೆರೆದು ನಿತ್ಯ ಅಮಾಯಕ ಜನರಿಗೆ ಸಿಹಿಯಾದ ರಾಸಾಯನಿಕ ಮಿಶ್ರಿತ ನೀರು ಕುಡಿಸುತ್ತಿದ್ದಾರೆ.
ಯಾವುದರಿಂದ ತಯಾರಿಸಲಾಗಿದೆ? ಅದರಲ್ಲಿ ಯಾವ ಅಂಶಗಳಿವೆ ಎನ್ನುವುದನ್ನು ಅರಿಯದೇ ಜನರು ಬಿಸಿಲ ತಾಪ ತಾಳಲಾಗದೆ ತಣ್ಣನೆ ಪಾನೀಯ ಸೇವಿಸುತ್ತಿದ್ದಾರೆ. ನಿಂಬೆ ಹಣ್ಣಿನ ರಸ ಎಂದು ಹೇಳುವ ಶರಬತ್, ಲಸ್ಸಿ, ಮಜ್ಜಿಗೆ, ಮಿಕ್ಸ್ ಪ್ರೂಟ್ ಜ್ಯೂಸ್ ಹೀಗೆ ವಿವಿಧ ಪಾನೀಯಗಳು 5 ರೂಪಾಯಿಯಿಂದ 20 ರೂಪಾಯಿ ದರದಲ್ಲಿ ದೊರೆಯುತ್ತಿದೆ. ರಾಸಾಯನಿಕಗಳಿಂದ ತಯಾರಿಸಿದ ಪಾನೀಯಗಳನ್ನು ಕುಡಿದು ಹಣ ಕೊಟ್ಟು ಆರೋಗ್ಯ ಹಾಳು ಮಾಡಿಕೊಳ್ಳುವಂತಾಗಿದೆ. ನಾಮಫಲಕ ಹಾಕಿ ಜನರನ್ನು ಆಕರ್ಷಿಸುವ ಇಂತಹ ಜ್ಯೂಸ್ ಮಾರಾಟ ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದಲೂ ನಡೆಯುತ್ತಿದೆ. ಅಧಿಕಾರಿಗಳು ಒತ್ತಡ ಬಂದಾಗ ದಾಳಿ ನಡೆಸಿ ಮಾದರಿ ಸಂಗ್ರಹಿಸಿ ಪರಿಶೀಲಿಸಿ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಾರೆ.
ಕಳೆದ ವರ್ಷ ಯಾದಗಿರಿ, ಗುರುಮಠಕಲ್, ಸೈದಾಪುರ ಸೇರಿದಂತೆ ಹಲವೆಡೆ ಅಧಿಕಾರಿಗಳು ದಾಳಿ ನಡೆಸಿದ್ದರು. ಬಳಿಕ ಒಂದೆರಡು ದಿನ ಬಂದ್ ಆಗಿದ್ದ ವ್ಯಾಪಾರ ಮತ್ತೆ ಶುರುವಾಗಿತ್ತು. ಈ ಹಿಂದೆಯೇ ಕಟ್ಟುನಿಟ್ಟಾಗಿ ರಾಸಾಯನಿಕ ಮಿಶ್ರಿತ ತಂಪು ಪಾನೀಯಗಳ ಮಾರಾಟ ಸ್ಥಗಿತಗೊಳಿಸಿ ಕ್ರಮಕೈ ಗೊಳ್ಳಬೇಕಿತ್ತು. ಸೂಕ್ತ ಕ್ರಮಕೈಗೊಳ್ಳುವ ಮೂಲಕ ಅಮಾಯಕ ಜನರ ಆರೋಗ್ಯ ರಕ್ಷಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ.
ಅನೀಲ ಬಸೂದೆ