ಉತ್ತರಕಾಶಿ: ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯ ಸತತ 17ನೇ ದಿನವೂ ಮುಂದುವರಿದಿದೆ. ಅತ್ಯಾಧುನಿಕ ತಂತ್ರಜ್ಞಾನದ ಯಂತ್ರ ತುಂಡಾದ ಪರಿಣಾಮ ಇದೀಗ ಕಾರ್ಮಿಕರ ರಕ್ಷಣೆಗೆ Rat ಹೋಲ್ ಮೈನರ್ ಗಳ ಮೊರೆ ಹೋಗಲಾಗಿದೆ. ಸೋಮವಾರದಿಂದ (ನವೆಂಬರ್ 27) Rat Hole Mining ಕಾರ್ಮಿಕರ ರಕ್ಷಣೆಯಲ್ಲಿ ತೊಡಗಿದ್ದು, ಕಾರ್ಮಿಕರನ್ನು ತಲುಪಲು ಇನ್ನು ಕೆಲವೇ ಮೀಟರ್ ಗಳಷ್ಟು ಬಾಕಿ ಇದೆ ಎಂದು ವರದಿ ತಿಳಿಸಿದೆ.
ಏನಿದು Rat Hole Mining?
ರಾಟ್ ಹೋಲ್ ಅಂದರೆ ಇಲಿಯ ಬಿಲದಂತೆ ಕಲ್ಲಿದ್ದಲು ಗಣಿಯನ್ನು ಸಣ್ಣ ಗುದ್ದಲಿ ಮತ್ತು ಸಲಾಕೆಯಿಂದ ಅಗೆಯುವುದಾಗಿದೆ. ಇದು ನಾಲ್ಕು ಅಡಿಗಿಂತ ಹೆಚ್ಚು ಎತ್ತರವಿರುವುದಿಲ್ಲ. ಸಣ್ಣ ಮಾರ್ಗದ ಮೂಲಕ ರಾಟ್ ಹೋಲ್ ಕಾರ್ಮಿಕರು ಗಣಿಯನ್ನು ಪ್ರವೇಶಿಸಿ, ಕೈಹಾರೆ ಮತ್ತು ಸಲಾಕೆ ಬಳಸಿ ಗಣಿಯನ್ನು ಅಗೆಯುತ್ತಾರೆ. ಮೇಘಾಲಯದ ಗಣಿಯಲ್ಲಿ ಇದು ಅತ್ಯಂತ ಸಾಮಾನ್ಯವಾದ ವಿಧಾನವಾಗಿದೆ. ಕಲ್ಲಿದ್ದಲು ಪದರು ತುಂಬಾ ತೆಳುವಾಗಿದ್ದರಿಂದ ಬೇರೆ ವಿಧಾನ ಅನುಸರಿಸುವುದು ತುಂಬಾ ಅಪಾಯಕಾರಿ ಎಂದು ವರದಿ ತಿಳಿಸಿದೆ. ಹೀಗೆ ಮೇಘಾಲಯದಲ್ಲಿ ಕಲ್ಲಿದ್ದಲು ಗಣಿಯಲ್ಲಿ ಚಿಕ್ಕ ಸುರಂಗ ಮಾರ್ಗವನ್ನು ಕೊರೆದು ಅದರೊಳಗೆ ಮಕ್ಕಳನ್ನು ಕಳುಹಿಸಿ ಕಲ್ಲಿದ್ದಲು ಹೊರ ತೆಗೆಯುವ ಕಾರ್ಯ ಮಾಡಿಸಲಾಗುತ್ತಿತ್ತು. ಮೇಘಾಲಯದಲ್ಲಿ ಜೀವನೋಪಾಯಕ್ಕೆ ಇದೊಂದು ಅವಕಾಶವಾಗಿತ್ತು. ಆದರೆ ಇದರಲ್ಲಿ ಅಪಾಯ ಹೆಚ್ಚು. ಇದೀಗ ರಾಟ್ ಹೋಲ್ ಮೈನರ್ಸ್ ಸುರಂಗದ ಅವಶೇಷಗಳ ಒಳಗೆ ತೂರಿಸಲಾಗಿರುವ 800 ಎಂಎಂ ವ್ಯಾಸದ ಪೈಪ್ ನೊಳಗೆ ಹೋಗಿ, ಚಿಕ್ಕ ಗುದ್ದಲಿ, ಸಲಿಕೆ ಮೂಲಕ ಕೈಯಿಂದಲೇ ಸುರಂಗವನ್ನು ಅಗೆಯುತ್ತಿದ್ದಾರೆ. ಇದೊಂದು ಅತ್ಯಂತ ನಿಧಾನ ಮತ್ತು ಕಷ್ಟಕರ ಕೆಲವಾಗಿದ್ದರೂ, ಇದುವೇ ಸದ್ಯಕ್ಕಿರುವ ಉತ್ತಮ ಆಯ್ಕೆ ಎಂದು ತಜ್ಞರು ತಿಳಿಸಿದ್ದರು.
Rat Hole ಮೈನಿಂಗ್ ನಿಷೇಧವಾಗಿದ್ದೇಕೆ?
2014ರಲ್ಲಿ ಹಸಿರು ನ್ಯಾಯಾಧೀಕರಣ ಪೀಠ ರಾಟ್ ಹೋಲ್ ಮೈನಿಂಗ್ ಅವೈಜ್ಞಾನಿಕ ಮತ್ತು ಅಸುರಕ್ಷಿತ ಎಂದು ನಿಷೇಧ ಹೇರಿ ಆದೇಶ ನೀಡಿತ್ತು. ಆದರೆ ರಾಟ್ ಹೋಲ್ ಮೈನಿಂಗ್ ಎಗ್ಗಿಲ್ಲದೇ ನಡೆಯುತ್ತಿದೆ. ಈಶಾನ್ಯ ರಾಜ್ಯದಲ್ಲಿ ರಾಟ್ ಹೋಲ್ ಮೈನಿಂಗ್ ಮುಂದುವರಿದಿದ್ದು, ಇದರ ಪರಿಣಾಮ ಹಲವಾರು ಸಾವುಗಳು ಸಂಭವಿಸುತ್ತಿದೆ. ಮತ್ತೊಂದೆಡೆ ಗಣಿಗಾರಿಕೆ ರಾಜ್ಯ ಸರ್ಕಾರಗಳಿಗೆ ಆದಾಯದ ಮೂಲವಾಗಿದೆ. ಮಣಿಪುರ ಸರ್ಕಾರ ಹಸಿರು ನ್ಯಾಯಾಧೀಕರಣ ಪೀಠದ ನಿಷೇಧ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದೆ.
ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಎರಡು ತಂಡಗಳಲ್ಲಿ ಒಟ್ಟು 12 ಮಂದಿ ರಾಟ್ ಹೋಲ್ ಮೈನರ್ಸ್ ಆಗಮಿಸಿದ್ದಾರೆ. ಆದರೆ ಉತ್ತರಾಖಂಡ್ ಸರ್ಕಾರದ ನೋಡಲ್ ಅಧಿಕಾರಿ ನೀರಜ್ ಖೈರ್ವಾಲ್ ಮಾತ್ರ ಇವರು ರಾಟ್ ಹೋಲ್ ಮೈನರ್ಸ್ ಅಲ್ಲ ಎಂಬುದಾಗಿ ತಿಳಿಸಿದ್ದಾರೆ. ಈಗಾಗಲೇ 57ಮೀಟರ್ ಗಳಲ್ಲಿ 52 ಮೀಟರ್ ನಷ್ಟು ದೂರ ಕ್ರಮಿಸಿದ್ದು, ಇನ್ನುಳಿದ ಐದು ಮೀಟರ್ ನಷ್ಟು ದೂರ ಸುರಂಗ ಕೊರೆಯಬೇಕಾಗಿದೆ ಎಂದು ವರದಿ ವಿವರಿಸಿದೆ.