ವರ್ಷಗಳೇನೋ ಉರುಳುತ್ತಿರುತ್ತದೆ. ಇದೇ ಕಾಲಚಕ್ರ. ಈ ಹಾದಿಯಲ್ಲಿ ನಾವೂ ಸಾಗುತ್ತಿರುತ್ತೇವೆ. ಒಂದರ್ಥದಲ್ಲಿ ಮಾನವನ ಬದುಕು ಯಾಂತ್ರಿಕ. ಯಂತ್ರಗಳಂತೆ ನಮ್ಮ ಬದುಕು ಸವೆಯುತ್ತಿರುತ್ತದೆ. ನಾಳೆಯಿಂದ ಹಾಗೆ ಮಾಡೋಣ, ಆ ಕೆಲಸವೊಂದನ್ನು ಪೂರ್ಣಗೊಳಿಸೋಣ, ನಾಳೆಯಿಂದ ಎಲ್ಲವೂ ಬದಲಾಗಬೇಕು..ಇವೆಲ್ಲ ಪ್ರತಿದಿನದ ಸಂಕಲ್ಪ. ಆದರೆ ಈ ಸಂಕಲ್ಪ ಹಿಂದಿನ ದಿನಕ್ಕೆ ಮಾತ್ರ ಸೀಮಿತ ವಾಗಿರುತ್ತದೆಯೇ ವಿನಾ ಮರುದಿನವೂ ಆ ದಿನದ ಕೆಲಸಕಾರ್ಯ, ಜಂಜಾಟಗಳ ಲ್ಲಿಯೇ ಕಳೆದು ಹೋಗಿರುತ್ತದೆ. ಮತ್ತೆ ಆ ದಿನ ರಾತ್ರಿ ಮರುದಿನದ ಸಂಕಲ್ಪಕ್ಕೆ ಸಜ್ಜಾಗಿ ರುತ್ತೇವೆ. ಮರುದಿನದ್ದೂ ಅದೇ ಕಥೆ.
ಹಾಗಾದರೆ ನಾವು ಸಾಧಿಸುವುದಾದರೂ ಏನು?, ಸಾಧನೆ ಬಿಡಿ, ಕನಿಷ್ಠ ಜೀವನೋಲ್ಲಾಸವನ್ನು ತುಂಬಿಕೊಳ್ಳಲು ನಮ್ಮಿಂದ ಸಾಧ್ಯವಾಗಿದೆಯೇ? ಈ ಪ್ರಶ್ನೆ ಮೂಡುವುದು ಸಹಜ. ವರ್ಷಗಳೇನೂ ಉರುಳುತ್ತಿರುತ್ತದೆ. ನಮ್ಮ ವಯಸ್ಸು ಹೆಚ್ಚುತ್ತಿರುತ್ತದೆ. ಆದರೆ ಇಷ್ಟು ವರ್ಷಗಳಲ್ಲಿ ನಾವು ಸಾಧಿಸಿದ್ದಾದರೂ ಏನು? ಎಂಬ ಬಗ್ಗೆ ಒಂದಿಷ್ಟು ಆತ್ಮಾವಲೋಕನ ಮಾಡಿ ಕೊಂಡರೆ ನಮಗೇ ಅರಿವಾಗುತ್ತದೆ ನಾವೇನು ಎಂಬುದು?
ಒಬ್ಬ ಸನ್ಯಾಸಿಯು ಒಂದು ಮನೆಯ ಮುಂದೆ ಬಂದು ಭಿಕ್ಷೆ ಯಾಚಿಸಿದ. ಆ ಮನೆಯೊಡತಿ ಭಿಕ್ಷೆ ಹಾಕಲು ಮುಂದೆ ಬಂದಾಗ, ಆಶೀರ್ವಾದ ಮಾಡುತ್ತ ಆ ಸನ್ಯಾಸಿಯು, “ತಾಯೇ, ನಿನ್ನ ವಯಸ್ಸೆಷ್ಟು?’ ಎಂದು ಕೇಳಿದ.
ಗೃಹಿಣಿಯು ಸನ್ಯಾಸಿಗೆ ನಮಸ್ಕರಿಸಿ, ಮುಗುಳು ನಗುತ್ತಾ “ನನಗೆ ಕೇವಲ ಒಂದು ವರ್ಷ’ ಎಂದಳು. ಈ ನಡು ವಯಸ್ಸಿನ ಗೃಹಿಣಿ ಹಾಗೆ ಹೇಳಲು ಸನ್ಯಾಸಿ ಕುತೂಹಲದಿಂದ ಮತ್ತೆ ಕೇಳಿದ “ನಿಮ್ಮ ಯಜಮಾನರ ವಯಸ್ಸೇನು?’ ಅವ ರಿನ್ನೂ ಆರು ತಿಂಗಳಿನ ಮಗು. ಸನ್ಯಾಸಿ ಪುನಃ ಕೇಳಿದ, ಅತ್ತೆಮಾವಂದಿರಿದ್ದರೆ ಅವರ ವಯಸ್ಸೆಷ್ಟು? ಅವರಿನ್ನೂ ಮೂರು ತಿಂಗಳ ತೊಟ್ಟಿಲ ಕೂಸುಗಳು ಎಂದು ಆಕೆ ಉತ್ತರಿಸಿದಳು.
ಹೀಗೆ ಉತ್ತರವಿತ್ತ ಗೃಹಿಣಿಯನ್ನು ಸನ್ಯಾಸಿಯು ತಾಯೇ! ನನಗೆ ನಿನ್ನ ಮಾತು ಅರ್ಥವಾಗುತ್ತಿಲ್ಲ. ಸರಿಯಾಗಿ ಬಿಡಿಸಿ ಹೇಳು ಎನ್ನಲು, ಆ ಗೃಹಿಣಿ ಹೀಗೆ ಹೇಳಿದಳು: ಸ್ವಾಮೀ! ನನ್ನ ದೇಹಕ್ಕೆ ಮೂವತ್ತೈದು ವರ್ಷಗಳಾದವು. ಆದರೆ ಇಷ್ಟು ವರ್ಷವೂ ನಾನು ಕೇವಲ ತಿಂಡಿ-ತಿನಿಸು, ಉಡಿಗೆ- ತೊಡಿಗೆಗಳಲ್ಲೇ ಕಾಲ ಕಳೆಯುತ್ತಿದ್ದೆ. ಸುಮ್ಮನೇ ವ್ಯರ್ಥವಾಗಿ ಕಳೆದ ವರ್ಷಗಳನ್ನು ಲೆಕ್ಕಕ್ಕಿಟ್ಟು ಏನು ಪ್ರಯೋಜನ? ಆದ್ದರಿಂದ ನನಗೆ ಒಂದೇ ವರ್ಷ ಪ್ರಾಯ ಎಂದಳು.
ಇನ್ನು ನಮ್ಮ ಯಜಮಾನರು ದೊಡª ದೊಡª ವ್ಯಾಪಾರ ವ್ಯವಹಾರದಲ್ಲಿ ತೊಡಗಿದ್ದರು. ಆದರೆ ಇತ್ತೀಚೆಗೆ ಯಾರಿಂದಲೋ ಮೋಸ ಹೋಗಿ ಈಗ ಆರು ತಿಂಗಳುಗಳಿಂದೀಚೆಗೆ ನನ್ನ ಜತೆಯಲ್ಲಿ ಭಜನೆ, ಸತ್ಸಂಗದಲ್ಲಿ ಸಹಕರಿಸುವುದರಿಂದ ಅವರ ವಯಸ್ಸು ಆರು ತಿಂಗಳುಗಳೆನ್ನಲು ಅಡ್ಡಿ ಇಲ್ಲ. ನಮ್ಮ ಅತ್ತೆ ಮಾವಂದಿರು ಸತ್ಸಂಗ ಭಜನೆಯಲ್ಲಿ ತೊಡಗಿಸಿಕೊಂಡ ನಮ್ಮನ್ನು ಬೈಯುತ್ತಿದ್ದರು. ಮೂರು ತಿಂಗಳಿಂದೀಚೆಗೆ ಅತ್ತೆಗೆ ಲಕ್ವ (ಪಾರ್ಶ್ವವಾಯು) ಹೊಡೆದಿದೆ. ಮಾವನವರಿಗೆ ನಡೆಯಲಾಗುವುದಿಲ್ಲ. ಈಗ ಅವರು ನಮ್ಮನ್ನು ಸತ್ಸಂಗ-ಭಜನೆಗೆ ಕರೆದುಕೊಂಡು ಹೋಗಿ ಎನ್ನುತ್ತಿ¨ªಾರೆ. ಆದ್ದರಿಂದ ಅವರ ವಯಸ್ಸು ಮೂರೇ ತಿಂಗಳು ಎಂದಾಗ ಸನ್ಯಾಸಿಗೆ ಮೈ ಬೆವರಿತು.
ಆತನೆಂದ, ತಾಯೇ! ನಿನ್ನ ಲೆಕ್ಕದಲ್ಲಿ ನಾನಿನ್ನೂ ಹುಟ್ಟಲೇ ಇಲ್ಲ ಎಂದ.
ಆತ್ಮಾನ್ವೇಷಣೆಯ ಹಾದಿಯಲ್ಲಿ ನಮಗೆಷ್ಟು ವಯಸ್ಸಾಗಿದೆ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬಹುದು.
– ಅಂಕಿತ್ ಎಸ್. ಕುಮಾರ್, ಮಂಗಳೂರು