ಸ್ಯಾಲರಿ ಜಾಸ್ತಿ ಇದೆ ಅಲ್ವಾ? ಹಾಗಾಗಿ ತುಂಬಾ ಟ್ಯಾಕ್ಸ್ ಬೀಳುತ್ತೆ. ಒಟ್ಟು ಸಂಪಾದನೆಯಲ್ಲಿ ಅರ್ಧಕ್ಕರ್ಧ ಟ್ಯಾಕ್ಸ್‌ಗೆ ಹೋಗಿಬಿಡುತ್ತೆ… ಹೀಗೆ ಹೇಳುತ್ತಾ ಪೋಚಾಡುವ ಹಲವರು ನಮ್ಮ ನಡುವೆ ಇದ್ದಾರೆ. ಇದು ನಿಜಾನಾ? ಟ್ಯಾಕ್ಸ್‌ನ ನೆಪದಲ್ಲಿ ಕಟ್ ಆಗುವ ಅಥವಾ ಉದ್ಯೋಗಿಗಳು ಕಟ್ಟಬೇಕಾಗಿರುವ ಹಣ ಎಷ್ಟು? ಮುಂತಾದ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…
ದೇಶದ ಆರ್ಥಿಕ ವ್ಯವಸ್ಥೆಯ ಬಹುಮುಖ್ಯ ಭಾಗಗಳಲ್ಲೊಂದು ಇನ್‌ಕಂ ಟ್ಯಾಕ್ಸ್. ದೇಶದ ಬಹುಪಾಲು ಆದಾಯದ ಮೂಲವೇ ಆದಾಯ ತೆರಿಗೆ. ದುಡಿಯುವ ವರ್ಗ, ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ತಮ್ಮ ಆದಾಯದ ಪಾಲೊಂದನ್ನು ಸರಕಾರಕ್ಕೆ ನೀಡುವ ಹಣ ಎಂದರೆ ಆದಾಯ ತೆರಿಗೆಯ ವ್ಯಾಖ್ಯಾನವಾದೀತು. ಆದರೆ ಅದೇಕೋ ಏನೋ, ಕೆಲವರಿಗೆ ಆದಾಯ ತೆರಿಗೆ ಎಂದಾಕ್ಷಣ ಒಂದು ಅವ್ಯಕ್ತ ಭಯ. ತೆರಿಗೆ ಎಂದಾಕ್ಷಣ ಐಟಿ ಅಧಿಕಾರಿಗಳ ದಾಳಿ ಎಂಬ ಭಾವವೇ ಮೊದಲು ಮೂಡುವುದರಿಂದ ಅಂಥ¨ªೊಂದು ಭಯ ಹುಟ್ಟಿರಲಿಕ್ಕೂ ಸಾಕು. ಅನೇಕರಿಗೆ ತೆರಿಗೆಯ ಬಗ್ಗೆ ಭಯವಿಲ್ಲವಾದರೂ ಅದರೆಡೆಗೆ ಯಾವತ್ತಿಗೂ ಒಂದು ಅನುಮಾನ, ಮುಗಿಯದ ಗೊಂದಲ ಇದ್ದೇ ಇದೆ. ಲೆಕ್ಕಾಚಾರ ಸರಿಯಾಗಿಯೇ ಇದ್ದರೂ ಹೆಚ್ಚಿನ ಟ್ಯಾಕ್ಸ್ ಕಟ್ಟುತ್ತಿದ್ದೇವೆ ಎನ್ನುವ ಅನುಮಾನ. ಆದಾಯ ತೆರಿಗೆಯ ಲೆಕ್ಕಾಚಾರ ಹೇಗೆ? ತೆರಿಗೆಗೆ ಪರಿಗಣಿಸಲಾಗುವ ಒಟ್ಟು ಆದಾಯ ಎಷ್ಟು? ಆದಾಯ ತೆರಿಗೆಯ ಹಂತಗಳು ಮತ್ತು ಮಿತಿಗಳು ಏನೇನು? ಎಂಬಿತ್ಯಾದಿ ಲೆಕ್ಕಾಚಾರಗಳೆಡೆಗಿನ ಗೊಂದಲದ ಪರಿಹಾರಕ್ಕೆ ಸಣ್ಣದೊಂದು ಪ್ರಯತ್ನ ಈ ಬರಹ.
ಹೀಗೆ ಲೆಕ್ಕಾಚಾರಕ್ಕೆ ಇಳಿಯುವ ಮುನ್ನ, ಪ್ರಸಕ್ತ ಸಾಲಿನ ಆದಾಯ ತೆರಿಗೆಯ ಸ್ತರಗಳ ಬಗ್ಗೆ ತಿಳಿದುಕೊಳ್ಳುವುದೊಳಿತು. 2019- 20ರ ಸಾಲಿನ ಬಜೆಟ್ಟಿನ ಪ್ರಕಾರ, ಆದಾಯ ತೆರಿಗೆಯ ಸ್ತರಗಳು ಒಟ್ಟು ನಾಲ್ಕು. ಮೊದಲ ಸ್ತರದಲ್ಲಿ ಅಂದರೆ ಎರಡೂವರೆ ಲಕ್ಷಗಳಷ್ಟು ವಾರ್ಷಿಕ ವರಮಾನವಿರುವ ಉದ್ಯೋಗಸ್ಥರಿಗೆ ಆದಾಯ ತೆರಿಗೆ ಶೂನ್ಯ. ಅಂದರೆ ಈ ಸ್ತರದ ಆದಾಯದಾರರಿಗೆ ಆದಾಯ ತೆರಿಗೆ ಅನ್ವಯವಾಗದು. ಎರಡೂವರೆ ಲಕ್ಷದಿಂದ ಐದು ಲಕ್ಷದವರೆಗಿನ ಆದಾಯವುಳ್ಳವರಿಗೆ ಪ್ರತಿಶತ ಐದರಷ್ಟು ಆದಾಯ ತೆರಿಗೆ ಅನ್ವಯವಾದರೆ, ಐದರಿಂದ ಹತ್ತು ಲಕ್ಷದ ಆದಾಯದವರಿಗೆ ಪ್ರತಿಶತ ಇಪ್ಪತ್ತರಷ್ಟು ತೆರಿಗೆ ಅನ್ವಯವಾಗುತ್ತದೆ. ಅಂತಿಮ ಸ್ತರದ ತೆರಿಗೆದಾರರಾದ ಹತ್ತು ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯವುಳ್ಳವರು ಪ್ರತಿಶತ ಮೂವತ್ತರಷ್ಟು ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಇದರ ಹೊರತಾಗಿ, ವಾರ್ಷಿಕ ಐವತ್ತು ಲಕ್ಷಕ್ಕಿಂತ ಹೆಚ್ಚಿನ ಆದಾಯದಿಂದ, ಒಂದು ಕೋಟಿಯವರೆಗಿನ ಆದಾಯದಾರರಿಗೆ ಪ್ರತಿಶತ: ಹತ್ತರಷ್ಟು ಮತ್ತು ಒಂದು ಕೋಟಿಗೂ ಮಿಕ್ಕಿ ಅದಾಯವುಳ್ಳವರಿಗೆ ಪ್ರತಿಶತ: ಹದಿನೈದರಷ್ಟನ್ನು ಸರ್ಚಾರ್ಜ್ ವಿಧಿಸಲಾಗುತ್ತದೆ. ತೆರಿಗೆ ಕಟ್ಟುವ ಪ್ರತಿಯೊಬ್ಬನಿಗೂ ಶಿಕ್ಷಣ ಮತ್ತು ಆರೋಗ್ಯ ಸಂಬಂಧಿ ಸೆಸ್ ಎಂಬ ಸಾಮಾನ್ಯ ತೆರಿಗೆ ಅನ್ವಯ. ಇಲ್ಲಿ ಸರ್ಚಾರ್ಜ್ ಮತ್ತು ಸೆಸ್ ಎನ್ನುವುದನ್ನು ತೆರಿಗೆಯ ಮೇಲಿನ ತೆರಿಗೆಯಾಗಿ ಲೆಕ್ಕ ಹಾಕಲಾಗುತ್ತದೆ. ಉಳಿದಂತೆ ಹಿರಿಯ (ಆರವತ್ತು ವರ್ಷದಿಂದ ಎಂಬತ್ತು ವರ್ಷದೊಳಗಿನ ವಯೋಮಿತಿಯವರು) ನಾಗರಿಕರಿಗೆ ಮೂರು ಲಕ್ಷದವರೆಗಿನ ತೆರಿಗೆ ವಿನಾಯಿತಿಯಿದ್ದರೆ, ಎಂಬತ್ತು ವಯಸ್ಸು ಮೀರಿದ ಅತಿ ಹಿರಿಯ ನಾಗರೀಕರಿಗೆ ಐದು ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿಯಿದೆ.
ತುಂಬ ಜನ ಅಂದುಕೊಂಡಿರುವಂತೆ ತೆರಿಗೆಯ ನಿಯಮಗಳು ಒಟ್ಟು ಆದಾಯದ ಮೇಲೆ ನೇರವಾಗಿ ಅನ್ವಯವಾಗುವುದಿಲ್ಲ. ನೀವು ಉದ್ಯೋಗಸ್ಥರಾಗಿದ್ದರೆ ಮೊದಲು ನಿಮ್ಮ ಒಟ್ಟು ಆದಾಯ (Gross Income) ದಿಂದ ಸರಕಾರದಿಂದ ಉದ್ಯೋಗಸ್ಥರಿಗೆ ಸಿಗಬಹುದಾದ ಮಾನಕ ಕಡಿತ(Standard deduction)ದ ಮೊತ್ತವಾದ ನಲ್ವತ್ತು ಸಾವಿರ ರೂಪಾಯಿಗಳನ್ನು ಕಳೆಯಲಾಗುತ್ತದೆ. ನಂತರ ತೆರಿಗೆ ವಿನಾಯಿತಿಯುಳ್ಳ ಯೋಜನೆಗಳಡಿ ನೀವು ಹೂಡಿರಬಹುದಾದ ಹೂಡಿಕೆಯ ಮೊತ್ತವನ್ನು ಕಳೆಯಲಾಗುತ್ತದೆ. ತೆರಿಗೆ ವಿನಾಯಿತಿಗಳುಳ್ಳ ಯೋಜನೆಗಳಲ್ಲಿ ಹೂಡಿಕೆಗಳಿಗೆ ಮಿತಿಯಿರುವುದರಿಂದ ಮಿತಿ ದಾಟಿದ ಹೂಡಿಕೆ ರಿಯಾಯಿತಿಗೆ ಪರಿಗಣಿತವಾಗದು. ಎಲ್ಲ ಕಳೆಯುವಿಕೆಯ ಲೆಕ್ಕಾಚಾರದ ನಂತರ ಉಳಿಯುವ ಆದಾಯದ ಮೊತ್ತವನ್ನು ತೆರಿಗೆಗೆ ಅರ್ಹ ಆದಾಯವೆಂದು ಪರಿಗಣಿಸಲಾಗುತ್ತದೆ.ನಂತರ ಆಯಾ ಸ್ತರಕ್ಕನುಗುಣವಾಗಿ ತೆರಿಗೆಯನ್ನು ಅನ್ವಯಿಸಿ, ಕೊನೆಯಲ್ಲಿ ಸೆಸ್ ಮತ್ತು ಸರ್ಚಾಜಿನ ಲೆಕ್ಕ ಹಾಕಲಾಗುತ್ತದೆ.
ಉದಾಹರಣೆಗೆ, ಆದಾಯವನ್ನು 10 ಲಕ್ಷ ರು. ಎಂದುಕೊಳ್ಳೋಣ. ಮೊದಲು ಮಾನಕ ಕಡಿತದ 40,000 ರು. ಕಳೆಯಬೇಕು. ನಿಮ್ಮ ತೆರಿಗೆ ವಿನಾಯಿತಿಯ ಹೂಡಿಕೆ 1,50,000 ರು. ಎಂದುಕೊಂಡರೆ, ಮಾನಕ ರಿಯಾಯಿತಿಯ ಕಳೆಯುವಿಕೆಯ ನಂತರ ಉಳಿದ 9,60,000 ರು. ನಿಂದ 1,50,000 ರು. ಯಷ್ಟು ಮೊತ್ತವನ್ನು ಕಳೆದುಬಿಡಬೇಕು.ಈಗ ಉಳಿದ 8,10,000 ರು. ನಿಮ್ಮ ತೆರಿಗೆಗೆ ಅರ್ಹ ಆದಾಯ. ಈ ಆದಾಯದ ಮೊದಲ 2,50,000 ರು. ಯಾವುದೇ ತೆರಿಗೆ ಅನ್ವಯವಾಗದು. 2,50,000 ರು.ನಿಂದ 5,00,000ರು. ಆದಾಯಕ್ಕೆ ಶೇ. 5ರಂತೆ 12,500 ರು.ಯಷ್ಟು ತೆರಿಗೆ ಅನ್ವಯವಾಗುತ್ತದೆ. ಉಳಿದ 3,10,000 ರು.ಯಷ್ಟು ಆದಾಯಕ್ಕೆ ಶೇ.20ರಂತೆ 62,000 ರು.ಯಷ್ಟು ತೆರಿಗೆ ಕಡಿತವಾಗುತ್ತದೆ. ಒಟ್ಟಾರೆಯಾಗಿ ಎರಡೂ ಸ್ತರಗಳ ತೆರಿಗೆಯನ್ನು ಕೂಡಿಸಲಾಗಿ ಒಟ್ಟು ತೆರಿಗೆಯ ಮೊತ್ತ 74,500 ರು. ಈ ತೆರಿಗೆಯ ಮೊತ್ತಕ್ಕೆ ಪ್ರಸಕ್ತ ಸಾಲಿನ ತೆರಿಗೆ ನಿಯಮದಂತೆ ಶೇ. 4 ಸೆಸ್ ಹಾಕಲಾಗುತ್ತದೆ. ಆಗಲೇ ತಿಳಿಸಿದಂತೆ ಸೆಸ್ ಎನ್ನುವುದು ತೆರಿಗೆಯ ಮೇಲಿನ ತೆರಿಗೆಯಾಗಿರುವುದರಿಂದ 74,500 ರು.ಗಳಿಗೆ ಮಾತ್ರ ಅದು ಅನ್ವಯ. ಹಾಗಾಗಿ ಮೇಲ್ಪಟ್ಟ ಲೆಕ್ಕಾಚಾರದ ಒಟ್ಟು ಆದಾಯ ತೆರಿಗೆ 77,480 ರು.ಯಷ್ಟಾಗುತ್ತದೆ.
ತೆರಿಗೆ ಕಾಯ್ದೆಯಡಿ ಬರುವ ವಿನಾಯಿತಿಯ ಯೋಜನೆಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಪಡೆದುಕೊಂಡು ಆದಾಯ ತೆರಿಗೆಯಿಂದ ಸಾಕಷ್ಟು ರಿಯಾಯಿತಿಯನ್ನು ಪಡೆದುಕೊಳ್ಳುವುದು ಸಾಧ್ಯವಿರುವುದರಿಂದ ವಿವಿಧ ತೆರಿಗೆ ವಿನಾಯಿತಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಒಳ್ಳೆಯದು. ಇಷ್ಟಲ್ಲದೇ ತೆರಿಗೆ ನಿಯಮಗಳ ಮತ್ತೂಂದು ಬಹುಮುಖ್ಯ ಕಾಯಿದೆಯೆಂದರೆ 87ಅ. ಈ ಕಾಯಿದೆಯ ಅನ್ವಯ ಎಲ್ಲ ಕೂಡು ಕಳೆಯುವಿಕೆಯ ನಂತರ ನಿಮ್ಮ ತೆರಿಗೆಗೆ ಅರ್ಹ ಆದಾಯ ಐದು ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇದ್ದಲ್ಲಿ ತೆರಿಗೆಯಿಂದ ನಿಮಗೆ ಸಂಪೂರ್ಣ ವಿನಾಯಿತಿ ದೊರಕುತ್ತದೆ. ಆದರೆ ಐದು ಲಕ್ಷದ ಮೇಲೆ ಒಂದು ರುಪಾಯಿಯಷ್ಟು ಆದಾಯ ಹೆಚ್ಚಾದರೂ ಈ ವಿನಾಯಿತಿ ದೊರೆಯದು ಎನ್ನುವುದನ್ನು ಸಹ ಗಮನದಲ್ಲಿರಿಸಿಕೊಳ್ಳುವುದು ಒಳಿತು. ಉದ್ಯೋಗಸ್ಥರ ಆದಾಯದ ಮೇಲಿನ ತೆರಿಗೆ ಲೆಕ್ಕಾಚಾರದ ಸಂಕ್ಷಿಪ್ತ ವಿವರಣೆಯಿದು. ಬರಹ ಅರ್ಥವಾಗಿದೆಯೆಂದು ನಿಮಗನ್ನಿಸಿದರೆ ಒಂದು ಕೆಲಸ ಮಾಡಿ. ಮೇಲಿನ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ನಿಮ್ಮ ವೈಯಕ್ತಿಕ ಆದಾಯದ ಮೇಲಿನ ತೆರಿಗೆಯನ್ನು ಕಂಡುಕೊಳ್ಳಿ. ಆದಾಯ ತೆರಿಗೆಯ ಲೆಕ್ಕಾಚಾರ ಇಷ್ಟು ಸುಲಭವಾ ಎಂಬ ನಿರಾಳದ ನಿಟ್ಟುಸಿರು ನಿಮ್ಮದಾಗಲಿ.
– ಗುರುರಾಜ ಕೊಡ್ಕಣಿ, ಯಲ್ಲಾಪುರ