ಮೊನ್ನೆ ಮೊನ್ನೆ ತಾನೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಯಿತು. ಅದರಲ್ಲಿ ಕೆಲವರಿಗೆ ಸಿಹಿ ಸಿಕ್ಕರೆ ಕೆಲವರಿಗೆ ಕಹಿ. ಫಲಿತಾಂಶ ಎನ್ನುವುದು ಕೇವಲ ನಮ್ಮ ಜ್ಞಾನಶಕ್ತಿಯನ್ನು ಅಳೆಯುವ ಮಾಪನ ಅಷ್ಟೇ. ಅದು ನಮ್ಮ ಪೂರ್ತಿ ಜೀವನವನ್ನು ನಿರ್ಧರಿಸುತ್ತದೆ ಎನ್ನುವುದು ತಪ್ಪು. ಪರೀಕ್ಷೆಯಲ್ಲಿ ಪಾಸಾದವರು ಉದ್ಧಾರವಾಗುತ್ತಾರೆ, ಫೇಲಾದವರು ಹಾಳಾಗುತ್ತಾರೆ ಎನ್ನುವುದು ತಪ್ಪು ಕಲ್ಪನೆ.
ಸಾಮಾನ್ಯವಾಗಿ ಮನೆಯಲ್ಲಿ ಸೈನ್ಸ್ ಓದಿದ ಮಕ್ಕಳನ್ನು ಡಾಕ್ಟರ್ ಓದಲು ಒತ್ತಾಯಿಸುತ್ತಾರೆ. ಆದರೆ, ಮಕ್ಕಳ ಮನಸ್ಸಿನಲ್ಲಿ ಏನಿದೆ ಅನ್ನೋದನ್ನು ಯಾರು ಕೇಳುವುದಿಲ್ಲ. ಅದರ ಬದಲಿಗೆ ತಮ್ಮ ಕನಸನ್ನು ಮಕ್ಕಳ ಮೇಲೆ ಹೇರುತ್ತಾರೆ. ಇದರಿಂದ ಮಕ್ಕಳ ಮನಸ್ಸು ಚಂಚಲವಾಗುತ್ತಾದೆ. ರಿಸಲ್ಟ… ಬಂದಾಗ ಎಲ್ಲರದ್ದು ಒಂದೇ ಪ್ರಶ್ನೆ, “ಎಷ್ಟು ಪರ್ಸೆಂಟ್ ಬಂತು?’ ಈ ಒಂದು ಪ್ರಶ್ನೆ ಎಷ್ಟೋ ಮಕ್ಕಳ ನೆಮ್ಮದಿಯನ್ನು ಹಾಳು ಮಾಡುತ್ತಿದೆ. ಕಡಿಮೆ ಅಂಕ ಪಡೆದ ಮಕ್ಕಳು ತಮ್ಮ ಪರ್ಸಂಟೇಜ್ ಹೇಳಲು ನಾಚಿಕೆ ಪಡುತ್ತಾರೆ, ಮನದೊಳಗೇ ದುಃಖೀಸುತ್ತಾರೆ.
ಎಷ್ಟೋ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ಇದು ಒಂದು ರೀತಿಯ ಕಾರಣವಾಗಿದೆ. ಹೌದು ಕೆಲವು ಮಕ್ಕಳು ತಮಗೆ ಕಡಿಮೆ ಅಂಕ ಬಂತು ಅನ್ನೋ ದುಃಖಕ್ಕಿಂತ ಎಲ್ಲರೂ ಮಾರ್ಕ್ ಕೇಳುತ್ತಾರೆ ಅನ್ನುವ ಭಯಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಸಮಾಜದಲ್ಲಿ ಯಾವಾಗಲೂ ಒಳ್ಳೆಯ ಮಾರ್ಕ್ ತೆಗೆದವರಿಗೆ ಮಾತ್ರ ಬೆಲೆ, ಕಡಿಮೆ ಮಾರ್ಕ್ಸ್ ತೆಗೆದವರನ್ನು ಯಾರು ಮಾತನಾಡಿಸುವುದಿಲ್ಲ. ಅವರು ಈ ಸಮಾಜಕ್ಕೆ ಬೇಡವಾದ ವಸ್ತುವಾಗಿಬಿಡುತ್ತಾರೆ.
ಆದರೆ, ಅಂತಹ ಮಕ್ಕಳಲ್ಲಿಯೂ ಒಳ್ಳೆಯ ಟ್ಯಾಲೆಂಟ್ ಇರುತ್ತದೆ.ಓದುವುದರಲ್ಲಿ ಮಕ್ಕಳು ಹಿಂದೆ ಉಳಿದರೂ ಅವರಲ್ಲಿ ಒಬ್ಬ ಒಳ್ಳೆಯ ನಟ/ನಟಿ ಇರಬಹುದು, ಉತ್ತಮ ಸಾಹಿತಿ ಇರಬಹುದು, ಕಥೆಗಾರ, ಕಲೆಗಾರ ಅಥವಾ ಇನ್ನಾವುದೇ ಜ್ಞಾನ ಇರಬಹುದು ಅದನ್ನು ಹೆತ್ತವರು ಗುರುತಿಸಬೇಕು. ಆಯಾ ಕ್ಷೇತ್ರದಲ್ಲಿ ಅವರನ್ನು ಬೆಳೆಯಲು ಅವಕಾಶ ಮಾಡಿಕೊಡಬೇಕು. ಕೇವಲ ಓದಿ ಒಳ್ಳೆಯ ಮಾರ್ಕ್ಸ್ ತೆಗೆದವರು ಮಾತ್ರ ಜ್ಞಾನಿಗಳಲ್ಲ. ಓದದೆ ತಮ್ಮ ಟ್ಯಾಲೆಂಟ್ ಅನ್ನು ಇಟ್ಟುಕೊಂಡು ಸಾಧನೆ ಮಾಡುವವರೂ ಕೂಡ ಒಳ್ಳೆಯ ಜ್ಞಾನಿಗಳೇ.
ಹಾಗಾಗಿ, ಪೋಷಕರು ಮಕ್ಕಳನ್ನು ಇನ್ನೊಬ್ಬರೊಂದಿಗೆ ಹೋಲಿಸುವುದರ ಬದಲು ಮಕ್ಕಳ ಇಷ್ಟಕ್ಕೆ ಸ್ಪಂದಿಸಿ ಅವರನ್ನು ಒಬ್ಬ ಒಳ್ಳೆಯ ವ್ಯಕ್ತಿಯಾಗಿ ರೂಪಿಸಲು ಪ್ರಯತ್ನಿಸಿಬೇಕು. ಇದರಿಂದ ಮುಂದೆ ಮಕ್ಕಳ ಜೀವನ ಚೆನ್ನಾಗಿರುತ್ತದೆ. ಕೇವಲ ಮಾರ್ಕ್ಸ್ ಮೂಲಕ ಅವರನ್ನು ಅಳೆಯಬೇಡಿ, ಅವರ ಟ್ಯಾಲೆಂಟ್ ಅನ್ನು ಜಗತ್ತಿಗೆ ಪರಿಚಯಿಸಿ, ಇದೇ ನೀವು ನಿಮ್ಮ ಮಕ್ಕಳಿಗೆ ಕೂಡುವ ಒಂದು ಅಮೂಲ್ಯವಾದ ಉಡುಗೊರೆ.
ರಮ್ಯಾ ಬಿ.,
ದ್ವಿತೀಯ ಬಿ.ಎ., ಪತ್ರಿಕೋದ್ಯಮ ವಿಭಾಗ,
ಎಂಜಿಎಂ ಕಾಲೇಜು, ಉಡುಪಿ.