ಮೈಸೂರು: ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ವೆಚ್ಚ ಮಾಡಿರುವ ಹಣದ ಲೆಕ್ಕ ಕೊಡಬೇಕು. ಅಧಿಕಾರಿಗಳಿಂದ ನನ್ನ ಬಳಿಗೆ ದಾಖಲೆ ಕಳಿಸಿದರೆ ನಾನೇ ಲೆಕ್ಕ ಪರಿಶೀಲಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಪಾರದರ್ಶಕವಾಗಿದ್ದರೆ ಲೆಕ್ಕ ಕೊಡಬೇಕು. ಇದನ್ನು ಇಲ್ಲಿಗೆ ಬಿಡುವುದಿಲ್ಲ. ಲಾಜಿಕ್ ಎಂಡ್ (ತಾರ್ಕಿಕ ಅಂತ್ಯ) ವರೆಗೆ ತೆಗೆದು ಕೊಂಡು ಹೋಗುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸ್ವಾರ್ಥಕ್ಕಾಗಿ ಬೇರೆ ಪಕ್ಷಗಳ ಜೊತೆ ಸಖ್ಯ ಬೇಡ ಎಂಬ ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಬೇಡ ಎಂದು ನಾನು ಕೂಡ ತಿಳಿಸಿದ್ದೆ. ಅಂದು ಯಾರೂ ನನ್ನ ಮಾತು ಕೇಳಲಿಲ್ಲ. ನನ್ನದು ಅವತ್ತು ಸಿಂಗಲ್ ವಾಯ್ಸ್ ಆಗಿಬಿಡ್ತು. ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ದರೇ ಖಚಿತವಾಗಿ 7 ರಿಂದ 8 ಸ್ಥಾನ ಗೆಲ್ಲುತ್ತಿದ್ದೇವು ಎಂದರು.
ಬೆಂಗಳೂರಿನಲ್ಲಿ ಕೋವಿಡ್ ದೊಡ್ಡಮಟ್ಟದಲ್ಲಿ ಸ್ಫೋಟವಾಗಿದೆ. ಲಾಕ್ ಡೌನ್ ಈಗ ಅವಶ್ಯಕತೆಯಿದ್ದರೂ ಕಾಲ ಮಿಂಚಿದೆ. ಜನ ಭಯಗೊಂಡು ಬೆಂಗಳೂರು ಬಿಡುತ್ತಿದ್ದಾರೆ. ಸರ್ಕಾರ ಅವರಿಗೆ ವಿಶ್ವಾಸ ತುಂಬುವ ಕೆಲಸ ಮಾಡಬೇಕಿತ್ತು. ಜೊತೆಗೆ ಊಟ, ಕೆಲಸ ಮತ್ತು ಹಣ ನೀಡಬೇಕಿತ್ತು. ಆದರೇ ಸರ್ಕಾರ ಆ ಕೆಲಸ ಮಾಡಲಿಲ್ಲ. ಜನ ಇದರಿಂದಲೇ ಬೆಂಗಳೂರು ಬಿಡುತ್ತಿದ್ದಾರೆ ಎಂದು ಗುಡುಗಿದರು.
ಎಲ್ ಕೆಜಿಯಿಂದಲೇ ಆಲ್‌ಲೈನ್ ಶಿಕ್ಷಣ ವಿಚಾರದ ಕುರಿತಂತೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಹಳ ಜನ ತಜ್ಞರು ಆನ್ ಲೈನ್ ಶಿಕ್ಷಣಕ್ಕೆ ವಿರೋಧಿಸಿಲ್ಲ. ಇದರಿಂದ ವಿದ್ಯಾರ್ಥಿಗಳ ಮನೋವಿಕಾಸ ಆಗಲ್ಲ ಎಂದರು.