Advertisement

ಉತ್ತರದ ಉರಿಯಲ್ಲಿ ಯಾರ ಬೇಳೆ ಎಷ್ಟು ಬೇಯುತ್ತದೆ?

06:00 AM Aug 02, 2018 | |

ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಕೂಗು ಈಗ ರಾಜ್ಯ ರಾಜಕೀಯ ಕಣದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.ಪ್ರತ್ಯೇಕ ರಾಜ್ಯದ ಹೋರಾಟಕ್ಕೂ ವೇದಿಕೆ ಕಲ್ಪಿಸಿಕೊಟ್ಟಿದೆ. ಇದೆಲ್ಲ ದರ ಹಿಂದೆ ಪ್ರತಿಯೊಂದು ಪಕ್ಷಕ್ಕೂ ತನ್ನದೇ ಆದ ರಾಜಕೀಯ ಲೆಕ್ಕಾಚಾರ ಅಡಗಿದೆ.

Advertisement

ಬಿಜೆಪಿ
ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯಿತ ಸಮುದಾಯ ಹೆಚ್ಚಾಗಿ ಇರುವುದರಿಂದ ಒಂದು ರೀತಿಯಲ್ಲಿ ಅದು ಬಿಜೆಪಿ ಭದ್ರಕೋಟೆ.ಆ ಕೋಟೆ ಕಾಯ್ದುಕೊಳ್ಳುವುದು ಬಿಜೆಪಿಗೆ ಅನಿವಾರ್ಯ.ಹೀಗಾಗಿ, ಆ ಭಾಗದ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಆರೋಪ ಕೇಳಿಬಂದಾಕ್ಷಣ ಅಲ್ಲಿನ ನಾಯಕರ ಜತೆ ಬಿಜೆಪಿ ನಿಲ್ಲುತ್ತದೆ. ಮುಂದಿನ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಉತ್ತರ ಕರ್ನಾಟಕ ಭಾಗದ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಪ್ರವಾಸವನ್ನೂ ಆ ಭಾಗದಲ್ಲೇ ಆಯೋಜಿಸಲಾಗಿದೆ.  ಪ್ರತ್ಯೇಕ ರಾಜ್ಯಕ್ಕೆ ಬಿಜೆಪಿ ಬೆಂಬಲ ಇಲ್ಲವಾದರೂ ಆ ಭಾಗದ ನ್ಯಾಯಯುತ ಬೇಡಿಕೆಗಳು ಹಾಗೂ ಅಭಿವೃದ್ಧಿಗೆ ಒತ್ತಾಯದ ವಿಚಾರದಲ್ಲಿ ಅಲ್ಲಿನ ಜನರಿಗೆ ಬೆಂಬಲ ವ್ಯಕ್ತಪಡಿಸುತ್ತಿದೆ.

ಕಾಂಗ್ರೆಸ್‌
ಲಿಂಗಾಯಿತ ಪ್ರತ್ಯೇ ಧರ್ಮ ವಿಚಾರದಲ್ಲಿ ಸ್ವಲ್ಪ ಮಟ್ಟಿನ ಹಿನ್ನೆಡೆಯುಂಟಾಗಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಆ ಭಾಗದಲ್ಲಿ  ಕಡಿಮೆ ಸ್ಥಾನ ಗಳಿಸಿತು. ಹೀಗಾಗಿ, ಕಾಂಗ್ರೆಸ್‌ಗೆ  ಸ್ವಂತ ಶಕ್ತಿಯಲ್ಲಿ ಸರ್ಕಾರ ರಚನೆ ಮಾಡಲು ಸಾಧ್ಯವಾಗಿಲ್ಲ.  ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದಾಗಲೆಲ್ಲಾ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಹೀಗಾಗಿ, ಕಾಂಗ್ರೆಸ್‌ಗೆ ಆ ಭಾಗದ ಮಹತ್ವ ಗೊತ್ತಿದೆ. ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆ ವಿವಾದದ ಸ್ವರೂಪ ಪಡೆದಿರುವುದರಿಂದ ಅತಿ ಹೆಚ್ಚು ಆತಂಕಗೊಂಡಿರುವುದು ಕಾಂಗ್ರೆಸ್‌. ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರ ಪಕ್ಷವಾದ್ದರಿಂದ ಮುಖ್ಯಮಂತ್ರಿಯವರ ತೀರ್ಮಾನ, ಹೇಳಿಕೆ, ಇಡೀ ಸರ್ಕಾರದ್ದು ಎಂಬ ಭಾವನೆ ವ್ಯಕ್ತವಾದರೆ ಕಷ್ಟ. ಪ್ರತಿಪಕ್ಷ ಬಿಜೆಪಿ ಇದೇ ಅಸ್ತ್ರವಾಗಿಸಿಕೊಳ್ಳಬಹುದು ಎಂಬ ಭಯ ಕಾಂಗ್ರೆಸ್‌ಗೆ ಇದೆ. ಹೀಗಾಗಿಯೇ ಡ್ಯಾಮೇಜ್‌ ಕಂಟ್ರೋಲ್‌ಗೆ ಸಾಕಷ್ಟು ಹರಸಾಹಸ ಮಾಡುತ್ತಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಹುಲ್‌ಗಾಂಧಿ ನೀಡಿರುವ ಟಾರ್ಗೆಟ್‌ ತಲುಪಲು ಆ ಭಾಗದಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನ ಪಡಯಲೇಬೇಕಾದ ಅನಿವಾರ್ಯತೆಯಲ್ಲಿದೆ.

ಜೆಡಿಎಸ್‌
ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್‌ಗೆ ಹೇಳಿಕೊಳ್ಳುವಂತ ನೆಲೆ ಇಲ್ಲ. ಆರು ವಿಧಾನಸಭೆ ಕ್ಷೇತ್ರಗಳನ್ನು ಇತ್ತೀಚಿನ ಚುನಾವಣೆಯಲ್ಲಿ ಗೆದ್ದಿದೆ. ಲೋಕಸಭೆ ಕ್ಷೇತ್ರಗಳಲ್ಲಿ ಯಾವೊಬ್ಬ ಜೆಡಿಎಸ್‌ ಸಂಸದ ಇಲ್ಲ. ಹೀಗಾಗಿ,ಈ ವಿವಾದದಿಂದ ಜೆಡಿಎಸ್‌ಗೆ ಆಗುವ ನಷ್ಟ ತೀರಾ ಕಡಿಮೆ. ಮುಂದೆ ಭವಿಷ್ಯದಲ್ಲಿ ಹೊಡೆತ ಬೀಳಬಹುದಾದರೂ ತಕ್ಷಣಕ್ಕೆ ಅಂತಹ ನಷ್ಟವಾಗದು. ಆದರೂ ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಖುದ್ದು ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡುವ ಜತೆಗೆ, ಆ ಭಾಗದ ಹೋರಾಟಗಾರರ ಜತೆ ಸಭೆ ನಡೆಸಿ ಬೆಳಗಾವಿ ಎರಡನೇ ರಾಜಧಾನಿ ಮಾಡುವ ಭರವಸೆ ನೀಡಿದ್ದಾರೆ. ಆ ಭಾಗದ ಅಭಿವೃದ್ಧಿಗೆ ಸ್ಪಂದಿಸುವ ನಿರಂತರ ಪ್ರವಾಸ ಮಾಡಿ ಸಮಸ್ಯೆ ಅರಿತು ಕೆಲಸ ಮಾಡುವ ವಾಗಾœನ ಸಹ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next