ಇದುವರೆಗೂ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ಯಾವುದೇ ಚಿತ್ರದಲ್ಲೂ ದುಡ್ಡು ಕಳೆದುಕೊಂಡಿರಲಿಲ್ಲ. ಮೊದಲ ಚಿತ್ರ “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ಒಂದಿಷ್ಟು ಕೋಟಿ ಲಾಭ ಮಾಡಿದ್ದರು. ನಂತರ, “ಕಿರಿಕ್ ಪಾರ್ಟಿ’ ಚಿತ್ರದಲ್ಲೂ ಅವರು ಒಳ್ಳೆಯ ಲಾಭವನ್ನೇ ನೋಡಿದರು. ಈಗ ಮೊದಲ ಬಾರಿಗೆ ಅವರು “ಹುಲಿರಾಯ’ ಚಿತ್ರದ ಮೂಲಕ ನಷ್ಟವನ್ನು ನೋಡಿದ್ದಾರೆ.
ಹೌದು, “ಹುಲಿರಾಯ’ ಚಿತ್ರದ ವಿತರಣೆಯನ್ನು ಪುಷ್ಕರ್ ಮಲ್ಲಿಕಾರ್ಜುನ್ ಮತ್ತು ರಕ್ಷಿತ್ ಶೆಟ್ಟಿ ಜೊತೆಯಾಗಿ ಮಾಡಿದ್ದರು. ಇದರಿಂದ ಅವರು ಕಳೆದುಕೊಂಡಿದ್ದೆಷ್ಟು ಗೊತ್ತಾ? 37 ಲಕ್ಷ ರೂಪಾಯಿಗಳು. ಹೇಗೆಂದು ಸ್ವತಃ ಪುಷ್ಕರ್ ಅವರೇ ಲೆಕ್ಕ ಕೊಡುತ್ತಾರೆ ಕೇಳಿ. “ಆ ಚಿತ್ರವನ್ನು ನಾನು ಮತ್ತು ಪುಷ್ಕರ್ 50 ಲಕ್ಷ ಕೊಟ್ಟು ವಿತರಣೆಗೆ ಖರೀದಿಸಿದ್ದೆವು. ಅದರಿಂದ ನಿರ್ಮಾಪಕರು ಸೇಫ್ ಆದರು. ಇನ್ನು 42 ಲಕ್ಷದಷ್ಟು ಪ್ರಚಾರಕ್ಕೆ ಖರ್ಚಾಗಿತ್ತು.
ಅದರಿಂದ ನಮಗೆ ಬಂದ ಹಣ ಕೇವಲ ದಯ ಲಕ್ಷ ಮಾತ್ರ. ಇನ್ನು ಟಿವಿ ರೈಟ್ಸ್ ಮತ್ತು ಹಿಂದಿ ರೀಮೇಕ್ ಹಕ್ಕುಗಳಿಂದ ಒಂದಿಷ್ಟು ಬಂತು. ಒಟ್ಟಾರೆ 37 ಲಕ್ಷ ಲಾಸ್ ಆಯ್ತು. ನನ್ನ ಪ್ರಕಾರ ಆ ಚಿತ್ರ ಒಂದು ಲೆವೆಲ್‌ಗೆ ಹೋಗಬೇಕಿತ್ತು. ಆದರೆ, ಪಾತ್ರ ಮತ್ತು ಹೆಸರು ನೋಡಿ, ಮಲ್ಟಿಪ್ಲೆಕ್ಸ್ ಪ್ರೇಕ್ಷಕರು ಇದು ನಮ್ಮ ಸಿನಿಮಾವಲ್ಲ ಎಂದು ದೂರವಾದರೇನೋ? ಹಾಗಾಗಿ ಒಳ್ಳೆಯ ಓಪನಿಂಗ್ ಸಿಗಲೇ ಇಲ್ಲ’ ಎನ್ನುತ್ತಾರೆ ಪುಷ್ಕರ್.
ಈ ತರಹದ ಅನುಭವಗಳಾದಾಗ, ಯಾಕೆ ಬೇಕು ರಿಸ್ಕಾ ಅಂತನಿಸುವುದುಂಟು ಎನ್ನುತ್ತಾರೆ ಪುಷ್ಕರ್. “ಹೊಸಬರು ಮತ್ತು ವಿಭಿನ್ನ ಚಿತ್ರಗಳನ್ನು ಸಪೋರ್ಟ್ ಮಾಡೋಣ ಅಂತ ನಾವು ಈ ಚಿತ್ರದ ವಿತರಣೆ ಮಾಡಿದೆವು. ಆದರೆ, ಇದಕ್ಕೆ ಒಳ್ಳೆಯ ಪ್ರೋತ್ಸಾಹ ಸಿಗದಿದ್ದಾಗ, ಸಹಜವಾಗಿ ಯಾತಕ್ಕೆ ಇವೆಲ್ಲಾ ಬೇಕು ಅಂತನಿಸುತ್ತದೆ. ಇಷ್ಟಕ್ಕೂ ನಾವು ಸಿನಿಮಾ ನೋಡದೆ, ತಗೊಂಡಿಲ್ಲ.
ಸಿನಿಮಾ ನೋಡಿ ಇಷ್ಟಪಟ್ಟೇ ವಿತರಣೆ ಮಾಡಿದ್ದು. ಹಾಗಂತ ಈ ಚಿತ್ರದ ಬಗ್ಗೆ ಬೇಸರವಿಲ್ಲ. ಸರಿಯಾಗಿ ಪ್ರೊಜೆಕ್ಟ್ ಆಗಲಿಲ್ಲ ಎಂಬ ಬೇಸರ ಆಯ್ತು ಅಷ್ಟೇ. ಅದು ಬಿಟ್ಟು ನಿರ್ಮಾಣ, ವಿತರಣೆ ಎಲ್ಲವೂ ಸಹಜವಾಗಿಯೇ ಮುಂದುವರೆಯುತ್ತದೆ’ ಎನ್ನುತ್ತಾರೆ ಪುಷ್ಕರ್.