Advertisement

ಸಸ್ಪೆನ್ಷನ್ ಬುಶ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

12:04 AM Nov 08, 2019 | Team Udayavani |

ಮಳೆಗಾಲದಲ್ಲಂತೂ ನಮ್ಮ ರಸ್ತೆಗಳ ಪರಿಸ್ಥಿತಿ ಹೇಳುವುದೇ ಬೇಡ. ಇಂತಹ ಸಂದರ್ಭಗಳಲ್ಲಿ ಕಾರುಗಳ ಟಯರ್‌, ಸಸ್ಪೆನ್ಸ್ ನ್‌ ವ್ಯವಸ್ಥೆ, ಅದರ ಬುಶ್‌ಗಳು, ಬ್ರೇಕ್‌ ಮೇಲೆ ಹೆಚ್ಚಿನ ಪರಿಣಾಮವಾಗುತ್ತದೆ. ಹೊಂಡ-ಗುಂಡಿಯ ರಸ್ತೆಯಿಂದಾಗಿ ಮೊದಲು ಸಮಸ್ಯೆ ಎದುರಿಸುವುದು ಸಸ್ಪೆನ್ಷನ್ ಬುಶ್‌ಗಳು. ಈ ಬುಶ್‌ಗಳು ರಬ್ಬರ್‌ನದ್ದಾಗಿದ್ದು, ಇದು ಒಡೆದು ಹೋದರೆ ಅಥವಾ ಹಾಳಾದರೆ, ಅದರ ಪರಿಣಾಮ ಚಾಲನೆಯ ಮೇಲಾಗುತ್ತದೆ. ಇಂತಹ ಬುಶ್‌ಗಳು ಹಾಳಾದರೆ ಏನಾಗುತ್ತದೆ? ಗೊತ್ತಾಗುವುದು ಹೇಗೆ? ವಿವರ ಇಲ್ಲಿದೆ.

Advertisement

ಏನಿದು ಸಸ್ಪೆನ್ಷನ್ ಬುಶ್‌?
ಕಾರುಗಳ ಸಸ್ಪೆನ್ಷನ್ ಮಧ್ಯೆ ಇವುಗಳನ್ನು ಅಳವಡಿಸಲಾಗಿರುತ್ತದೆ. ಸಸ್ಪೆನ್ಷನ್ ವ್ಯವಸ್ಥೆಯ ಕಬ್ಬಿಣದ ಉಪಕರಣಗಳ ಮಧ್ಯೆ ಘರ್ಷಣೆಯನ್ನು ತಪ್ಪಿಸಲು ಈ ಬುಶ್‌ಗಳು ಇರುತ್ತವೆ. ಇವುಗಳು ಉತ್ತಮ ಗುಣಮಟ್ಟದ ಬುಶ್‌ಗಳು. ಸುಗಮ ಸಂಚಾರಕ್ಕೆ, ವಾಹನದ ತತ್‌ಕ್ಷಣ ನಿಯಂತ್ರಣಕ್ಕೆ, ಸ್ಟೀರಿಂಗ್‌ ವ್ಯವಸ್ಥೆ ಚೆನ್ನಾಗಿರಲು ಇವುಗಳು ನೆರವು ನೀಡುತ್ತವೆ. ಈ ಬುಶ್‌ಗಳಿಗೆ ವಿಸೊನ್‌ ಬುಶ್‌ ಎಂದೂ ಹೆಸರಿದೆ. ರಸ್ತೆ ಕೆಟ್ಟದಿರುವಾಗ ಅದುರುವಿಕೆ ಕಡಿಮೆಗೊಳಿಸುವುದು, ನಿಯಂತ್ರಣ ಸಲಾಕೆಗಳು ಚೆನ್ನಾಗಿರುವಂತೆ ಇವುಗಳು ನೋಡಿಕೊಳ್ಳುತ್ತವೆ.

ಸಸ್ಪೆನ್ಷನ್ ಬುಶ್‌ಗಳ ಬದಲಾವಣೆ ಯಾಕೆ?
ಹಲವು ಸಾವಿರ ಕಿ.ಮೀ.ಗಳ ಬಳಿಕ ಈ ಸಸ್ಪೆನ್ಷನ್ ಬುಶ್‌ಗಳು ತುಂಡಾಗುತ್ತವೆ ಅಥವಾ ಬಿರುಕು ಬಿಡುತ್ತವೆ. ಇವುಗಳು ಕಾರಿನ ತಳ ಭಾಗದಲ್ಲಿರುವುದರಿಂದ ಕೆಸರು, ನೀರು, ಬಿಸಿಯನ್ನು ಸಹಿಸಿಕೊಳ್ಳುತ್ತವೆ. ಜತೆಗೆ ರಸ್ತೆಯ ಹೊಂಡ-ಗುಂಡಿಗಳ ಪೆಟ್ಟು ನೇರವಾಗಿ ಇವುಗಳ ಮೇಲಾಗುತ್ತವೆ. ಆದ್ದರಿಂದಲೂ ಇವುಗಳು ಹಾಳಾಗುತ್ತವೆ. ಇಂತಹ ಸಂದರ್ಭದಲ್ಲಿ ಕೂಡಲೇ ಬುಶ್‌ಗಳನ್ನು ಬದಲಾವಣೆ ಮಾಡಬೇಕು. ಕೆಲವೊಮ್ಮೆ ನಿರ್ದಿಷ್ಟ ಕಾರಿನ ಕಂಪೆನಿಗಳು ಇಂತಿಷ್ಟು ಕಿ.ಮೀ.ಗೆ ಎಂದು ಬುಶ್‌ಗಳನ್ನು ಬದಲಾಯಿಸಲು ತಿಳಿಸುತ್ತವೆ.

ಬುಶ್‌ಗಳು ಹಾಳಾದ್ದು ತಿಳಿಯುವುದು ಹೇಗೆ?
ಬುಶ್‌ಗಳು ಹಾಳಾಗಿದ್ದನ್ನು ತಿಳಿಯುವುದು ಸುಲಭವಿದೆ. ನಿಮ್ಮ ಕಾರಿನ ಚಾಲನೆ ಸುಗಮವಾಗಿಲ್ಲದಿರಬಹುದು. ಉತ್ತಮ ಪಿಕಪ್‌, ಕೂಡಲೇ ಬ್ರೇಕಿಂಗ್‌, ಹೊಂಡ ಗುಂಡಿಯ ವೇಳೆ ಟಕ್‌ ಟಕ್‌ ಶಬ್ದಗಳು, ಸ್ಟೀರಿಂಗ್‌ ತಿರುಗಿಸುವ ವೇಳೆ ಶಬ್ದ ಇತ್ಯಾದಿ ಬರಬಹುದು. ಪ್ರಮುಖವಾಗಿ ಕಾರಿನ ಹ್ಯಾಂಡ್ಲಿಂಗ್‌ ಉತ್ತಮವಾಗಿಲ್ಲದಿರುವುದು ನಿಮಗೆ ಚಾಲನೆ ವೇಳೆ ಅನುಭವಕ್ಕೆ ಬರುತ್ತದೆ. ಒಂದು ವೇಳೆ ಸಸ್ಪೆನ್ಷನ್ ಹಾಳಾಗಿದ್ದರೂ ಬದಲಾವಣೆ ಮಾಡಿಲ್ಲ ಎಂದಾದರೆ ಅದರ ಪರಿಣಾಮ ಕಬ್ಬಿಣದ ಉಪಕರಣ-ಸಲಾಕೆಗಳ ಮೇಲಾಗುತ್ತವೆ. ಇದರಿಂದ ಅವುಗಳು ಬೇಗನೆ ಬಾಗಬಹುದು ಮತ್ತು ಇನ್ನಷ್ಟು ಸಮಸ್ಯೆಗಳು ಸೃಷ್ಟಿಯಾಗುವ ಅಪಾಯವಿದೆ. ಸಸ್ಪೆನ್ಷನ್ ಹಾಳಾಗಿರುವುದು ಕಚ್ಚಾ ರಸ್ತೆಯಲ್ಲಿ ಸಂಚರಿಸುವ ವೇಳೆ ಸ್ಪಷ್ಟ ಅನುಭವಕ್ಕೆ ಬರುತ್ತದೆ. ಟಯರ್‌ ಒಂದು ಭಾಗ ಹೆಚ್ಚು ಸವೆಯಬಹುದು. ಕಾರು ಚಾಲನೆ ವೇಳೆ ಎಂದಿಗಿಂತ ಹೆಚ್ಚು ಹಾರಿದಂತೆಯೂ ಭಾಸವಾಗಬಹುದು.

ಬದಲಾವಣೆ ಹೇಗೆ?
ಬುಶ್‌ ಬದಲಾವಣೆಗೆ ಸೂಕ್ತ ಮೆಕ್ಯಾನಿಕ್‌ಗಳ ನೆರವು ಅಗತ್ಯವಿದೆ. ಕೆಲವು ಬುಶ್‌ಗಳು ಸಸ್ಪೆನ್ಷನ್ ವ್ಯವಸ್ಥೆಯ ಜತೆಗೆ ಬರುತ್ತವೆ. ನಿಮ್ಮ ಕಾರಿನ ಬುಶ್‌ ಹೋಗಿದೆಯೇ? ಇಲ್ಲವೇ ಎಂಬುದರ ಬಗ್ಗೆ ಇನ್ನೂ ಸಂಶಯಗಳಿದ್ದರೆ ಮೆಕ್ಯಾನಿಕ್‌ ಜತೆಗೆ ಒಂದು ಟೆಸ್ಟ್‌ ಡ್ರೈವ್‌ ಹೋಗಿ. ಮೆಕ್ಯಾನಿಕ್‌ ಬುಶ್‌ಗಳು ಹೇಗಿವೆ ಎಂದು ಚೆನ್ನಾಗಿ ತಿಳಿಸಬಲ್ಲರು.

Advertisement

-  ಈಶ

Advertisement

Udayavani is now on Telegram. Click here to join our channel and stay updated with the latest news.

Next