Advertisement

ಸಾಮಾನ್ಯನ ಜೇಬಿಗೆ ಜಿಎಸ್‌ಟಿ ಎಷ್ಟು ಭಾರ? ನೋಡೋಣ ಬಾರ!

01:53 AM Jul 04, 2017 | |

ಬದುಕು ಹಿಂದಿನಂತೆ ರೋಟಿ ಕಪಡಾ ಔರ್‌ ಮಕಾನ್‌ಗೆ ಸೀಮಿತವಾಗಿಲ್ಲ. ಅವುಗಳ ಜೊತೆಗೆ ಮೊಬೈಲ…, ತಿಂಗಳಿಗೆ ಒಂದು ಅಥವಾ ಎರಡು ಬಾರಿ ಹೊರಗೆ ತಿನ್ನುವುದು, ಚಲನಚಿತ್ರ ವೀಕ್ಷಿಸುವುದು, ಬ್ಯಾಂಕ್‌ ವಹಿವಾಟು ಇವುಗಳು ಕೂಡ ನಿತ್ಯ ಜೀವನದೊಂದಿಗೆ ಹೊಂದಿಕೊಂಡುಬಿಟ್ಟಿವೆ. ಹಾಗಿದ್ದರೆ ಜಿಎಸ್‌ಟಿ ಇವುಗಳ ಮೇಲೆ ಯಾವ ಪ್ರಭಾವ ಬೀರಲಿದೆ? 

Advertisement

ಬಹು ನಿರೀಕ್ಷಿತ ಜಿಎಸ್‌ಟಿ ನಮ್ಮ ನಡುವೆ ಬಂದು ನಿಂತಾಗಿದೆ. ಜಿಎಸ್‌ಟಿ ಎಂದರೇನು ಎನ್ನುವುದಕ್ಕೆ ಉತ್ತರ ನಿಮ್ಮ ಮನೆಯ ಚಿಣ್ಣ ಕೂಡ ಕೊಡಬಲ್ಲ. ಸರಕಾರ ನೂರಾರು ಕೋಟಿ ವ್ಯಯಿಸಿ ಜಿಎಸ್‌ಟಿಗೆ ಪ್ರಚಾರ ಕೊಟ್ಟಿದೆ. ಮಾಧ್ಯಮ ಯಾವುದೆ ಇರಲಿ ಯಾರಿಗೂ ಹಿಂದೆ ಬೀಳಲು ಇಷ್ಟವಿಲ್ಲ. ಹೀಗಾಗಿ ಎಲ್ಲರೂ ಜಿಎಸ್‌ಟಿ ಜಪಿಸುವವರೇ! ಇರಲಿ. ಯಾವ ಯಾವ ವಸ್ತು ಮೇಲೆ ಎಷ್ಟು ಜಿಎಸ್‌ಟಿ ಎಂದು ಹೇಳುವ ಸರಕಾರ ಬಿಡುಗಡೆ ಮಾಡಿದ ಪಟ್ಟಿ ಇನ್ನೂರು ಪುಟಕ್ಕೂ ಹೆಚ್ಚಿದೆ. ಅದನ್ನು ಎಷ್ಟು ಜನ ಪೂರ್ಣ ಓದಿರಬಹುದು? ಜನ ಸಾಮಾನ್ಯನಿಗೆ ಬೇಕಿರುವುದು ಇದರಿಂದ ನನಗೆ ಲಾಭವೋ ನಷ್ಟವೋ ಅನ್ನುವುದಷ್ಟೇ. ಉಳಿದದ್ದು ಬದುಕಿನ ಬಂಡಿ ಎಳೆಯುವುದರಲ್ಲಿ ವ್ಯಸ್ತನಾಗಿರುವ ಅವನಿಗೆ ಗೌಣ. ಹಾಗೆ ನೋಡಲು ಹೋದರೆ ಜಿಎಸ್‌ಟಿ ಲಾಗೂ ಆಗುವುದು ಉದ್ಯಮಗಳಿಗೆ ಮತ್ತು ಪ್ರೊಫೆಷನಲ್‌ಗ‌ಳಿಗೆ ಜನಸಾಮಾನ್ಯನಿಗೆ ಅಲ್ಲ. ಆದರೆ ಜನ ಸಾಮಾನ್ಯ ಉದ್ಯಮದಿಂದ ಸರಕು ಹಾಗೂ ಪ್ರೊಫೆಷನಲ್‌ಗ‌ಳಿಂದ ಸೇವೆ ಪಡೆಯುತ್ತಾನೆ ಮತ್ತು ಅವುಗಳ ಮೇಲೆ ತೆರಿಗೆ ಕಟ್ಟುತ್ತಾನೆ. ಹೀಗಾಗಿ ಜನ ಸಾಮಾನ್ಯನ ಪಾಲಿಗೆ ಜಿಎಸ್‌ಟಿ ಅಪರೋಕ್ಷ ತೆರಿಗೆ.

ಜಿಎಸ್‌ಟಿ ಇಂದ ಮಧ್ಯಮ ವರ್ಗದ ಜನರ ಮೇಲೆ ಪರಿಣಾಮ ಬೀರಬಹುದಾದ ಅಂಶಗಳನ್ನು ಪಟ್ಟಿ ಮಾಡೋಣ ಬನ್ನಿ.

1    ಮನೆ ನಡೆಸಲು ಬೇಕಾಗುವ ದಿನಸಿ ಮೇಲಿನ ತೆರಿಗೆ ಇಲ್ಲ ಎಂದು ಹೇಳಲಾಗಿದೆ. ಆದರೆ ಭಾರತದಂಥ ದೇಶದಲ್ಲಿ ದಿನಸಿ ಪದಾರ್ಥಕ್ಕೆ ರಸೀತಿ ಪಡೆದುಕೊಳ್ಳುವವರ ಸಂಖ್ಯೆ ಯೆಷ್ಟು? ಹೀಗಾಗಿ ದಿನಸಿ ಪದಾರ್ಥಗಳ ಮೇಲಿನ ಬೆಲೆ ನಿಖರವಾಗಿ ಕಡಿಮೆಯಾಗುತ್ತದೆ ಎಂದು ಹೇಳುವುದು ಕಷ್ಟ. ಗ್ರಾಹಕನಿಗೆ ಇದರ ಲಾಭ ವರ್ಗಾವಣೆ ಆಯಿತೇ ಇಲ್ಲವೇ ಎಂದು ನೋಡುವವರು ಯಾರು? ಬಹುಪಾಲು ಇವುಗಳ ಬೆಲೆ ಹಿಂದಿನಂತೆ ಮುಂದುವರಿಯುವ ಸಾಧ್ಯತೆ ಹೆಚ್ಚು.

2    ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಲಾಭವೂ ಇಲ್ಲ ನಷ್ಟವೂ ಇಲ್ಲ. ಆದರೆ ಸ್ವಂತ ಮನೆ ಹೊಂದುವವರ ಕನಸಿನ ಮೇಲೆ ತೆರಿಗೆಯ ಹೊರೆ ಹೆಚ್ಚಾಗಲಿದೆ. ಸಾಧಾರಣವಾಗಿ ಭಾರತ ದೇಶದ ಪೂರ್ಣ ಆವರೇಜ್‌ ತೆಗೆದುಕೊಂಡರೆ 6 ಪ್ರತಿಶತ ಇದ್ದ ತೆರಿಗೆ ಜಿಎಸ್‌ಟಿ ಇಂದಾಗಿ 12 ಪ್ರತಿಶತಕ್ಕೆ ಏರಲಿದೆ. ಅಂದರೆ ಹೊಸ ಫ್ಲಾಟ್‌ ಕೊಳ್ಳುವ ಬಯಕೆ ಉಳ್ಳವರ ಕನಸಿನ ಭಾರ 6 ಪ್ರತಿಶತ ಹೆಚ್ಚಲಿದೆ.

Advertisement

3    ಬಟ್ಟೆ, ಉಡುಗೆ ತೊಡುಗೆಗಳ ಮೇಲೆ ಕೂಡ ಜಿಎಸ್‌ಟಿ ಇಂದ ಬೆಲೆ ಏರಿಕೆ ಆಗಲಿದೆ. ಸಾವಿರ ರೂಪಾಯಿ ಮೀರಿದ ಉಡುಗೆಗಳ ಮೇಲೆ 12 ಪ್ರತಿಶತ ತೆರಿಗೆ ಬೀಳಲಿದೆ. ಹಳೆಯ ತೆರಿಗೆ ಇವುಗಳ ಮೇಲೆ 6 ಪ್ರತಿಶತ ಇತ್ತು. ಅಂದರೆ ತೆರಿಗೆ ಹಣ ದುಪ್ಪಟ್ಟಾಯಿತು. ಸಾವಿರಕ್ಕಿಂತ ಕಡಿಮೆ ಬೆಲೆ ಬಾಳುವ ವಸ್ತುವಿನ ಮೇಲಿನ ತೆರಿಗೆ ಇಳಿಯಿತೆ? ಇಳಿಯಿತು, ಆದರೆ ಕೇವಲ 1 ಪ್ರತಿಶತ. ಜಿಎಸ್‌ಟಿ ಸಾವಿರಕ್ಕಿಂತ ಕಡಿಮೆ ಇರುವ ಉಡುಗೆಗಳ ಮೇಲೆ 5 ಪ್ರತಿಶತ ನಿಗದಿಯಾಗಿದೆ.
ಜನ ಸಾಮಾನ್ಯ ಎಂದರೆ ನಮ್ಮಲ್ಲಿ ಅವನಿಗೆ ಬದುಕಲು ಬೇಕಿರುವುದು “ಊಟ -ಬಟ್ಟೆ ಹಾಗೂ ವಸತಿ’ (ರೋಟಿ ಕಪಡಾ ಔರ್‌ ಮಕಾನ್‌) ಎನ್ನುವ ಬಹು ಪ್ರಚಲಿತ ಮಾತಿದೆ. ಅದರ ಪ್ರಕಾರ ಮೇಲಿನ ಮೂರು ಅಂಶಗಳು ಜನ ಸಾಮಾನ್ಯನಿಗೆ ಹೆಚ್ಚು ಪೂರಕವಾಗೇನು ಇಲ್ಲ. ಮನೆ ದಿನ ನಿತ್ಯ ಖರೀದಿ ಮಾಡುವ ವಸ್ತುವೇನಲ್ಲ. ಬಟ್ಟೆಯೂ ವರ್ಷಕ್ಕೊಮ್ಮೆ ಅಥವಾ ವರ್ಷದಲ್ಲಿ ಎರಡು ಬಾರಿ ಕೊಳ್ಳುವ ವಸ್ತುವೇ ಆಗಿದೆ. ಬಾಡಿಗೆ ಮೇಲಿನ ಬಾಬತ್ತು ಮೆಜಾರಿಟಿ ಜನರಿಗೆ ಹಿಂದಿನಂತೆಯೇ ಉಳಿಯಲಿದೆ. ಹೀಗಾಗಿ ಬದುಕಲು ಅತಿ ಅವಶ್ಯ ಎನ್ನಿಸುವ ವಸ್ತುಗಳ ಮೇಲಿನ ಖರ್ಚು ಹೆಚ್ಚಾ ಕಡಿಮೆ ಅಲ್ಲಿಯೇ ಗಿರಕಿ ಹೊಡೆಯಲಿದೆ.

ಬದುಕು ಹಿಂದಿನಂತೆ ರೋಟಿ ಕಪಡಾ ಔರ್‌ ಮಕಾನ್‌ಗೆ ಸೀಮಿತವಾಗಿಲ್ಲ. ಅವುಗಳ ಜೊತೆಗೆ ಮೊಬೈಲ…, ತಿಂಗಳಿಗೆ ಒಂದು ಅಥವಾ ಎರಡು ಬಾರಿ ಹೊರಗೆ ತಿನ್ನುವುದು, ಚಲನಚಿತ್ರ ವೀಕ್ಷಿಸುವುದು, ಬ್ಯಾಂಕ್‌ ವಹಿವಾಟು ಇವುಗಳು ಕೂಡ ನಿತ್ಯ ಜೀವನದೊಂದಿಗೆ ಹೊಂದಿಕೊಂಡುಬಿಟ್ಟಿವೆ. ಜಿಎಸ್‌ಟಿ ಇವುಗಳ ಮೇಲೆ ಯಾವ ಪ್ರಭಾವ ಬೀರಲಿದೆ ಎನ್ನುವುದು ತಿಳಿದುಕೊಳ್ಳುವುದು ಕೂಡ ಅವಶ್ಯಕ.

1    ಮೋದಿ ಸರಕಾರ ಹಣದ ವ್ಯವಹಾರ ನಿಲ್ಲಿಸಬೇಕು ಎನ್ನುವ ನಿಟ್ಟಿನಲ್ಲಿ ಡಿಜಿಟಲ್‌ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಿತು. ಇದು ಒಳ್ಳೆಯ ವಿಷಯವೇ. ಆದರೆ, ಅದು ಜನ ಸಾಮಾನ್ಯನ ಮೇಲೆ ಹೊರೆಯಾಗಲಿದೆ. ನೀವು ಪೆಟ್ರೋಲ್‌ ಡೆಬಿಟ್‌ಕಾರ್ಡ್‌ ಕೊಟ್ಟು ತುಂಬಿಸಿ ನಿಮ್ಮ ಬ್ಯಾಂಕ್‌ ಐವತ್ತು ರೂಪಾಯಿ ಹೆಚ್ಚುವರಿ ವಸೂಲಿ ಮಾಡುತ್ತೆ. ಸಾಲದ್ದಕ್ಕೆ ಮೊದಲ ಮೂರು ಅಥವಾ ನಾಲ್ಕು ವಹಿವಾಟು ಮಾತ್ರ ಪುಕ್ಕಟೆ ಉಳಿದವುಗಳ ಮೇಲೆ ಬ್ಯಾಂಕ್‌ಗಳು ಹಾಕುವ ಶುಲ್ಕ ನೋಡಿದರೆ ಬ್ಯಾಂಕ್‌ ಸಹವಾಸ ಬೇಡ ಅನ್ನಿಸಿದರೆ ಅಚ್ಚರಿಯಿಲ್ಲ . ಸೇವೆಯ ಮೇಲಿನ ತೆರಿಗೆ 15 ಪ್ರತಿಶತದಿಂದ 18ಕ್ಕೆ ಏರಿಕೆಯಾಗಿದೆ. ಮೊದಲ ನಾಲ್ಕು ವಹಿವಾಟಿನ ನಂತರ ಎಲ್ಲವೂ ಬ್ಯಾಂಕ್‌ ನಿಮಗೆ ನೀಡುವ ಸೇವೆ ಎಂದು ಪರಿಗಣಿಸಲಾಗುತ್ತದೆ ಮತ್ತು ಅವುಗಳ ಮೇಲೆ ತೆರಿಗೆ ವಸೂಲಿ ಮಾಡಲಾಗುತ್ತದೆ. ವೇತನ ನಿಮ್ಮ ಖಾತೆಗೆ ಜಮಾ ಆದರೆ ಅದನ್ನು ಒಂದು ವಹಿವಾಟು ಎಂದು ಪರಿಗಣಿಸಲಾಗುತ್ತದೆ. ನಂತರ ನೀವು ನಿಮ್ಮ ಡೆಬಿಟ್‌ ಕಾರ್ಡ್‌ ಬಳಸಿದಾಗೆಲ್ಲ ಅದನ್ನು ಒಂದು ವಹಿವಾಟು ಎಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ಬಳಕೆ ಹೆಚ್ಚಿನ ಹೊರೆ.

2    ಮೊಬೈಲ್‌ ಬಳಕೆಗೆ ಇನ್ನು ಮುಂದೆ 3 ಪ್ರತಿಶತ ಹೆಚ್ಚಿನ ಹಣ ತೆರಬೇಕು. ಜೊತೆಗೆ ಇದೆ ರೀತಿಯ ಯಾವುದೇ ಸೇವೆ, ಉದಾಹರಣೆಗೆ ಸಲೂನ್‌, ಬ್ಯೂಟಿ ಪಾರ್ಲರ್‌ ಇವುಗಳ ಮೇಲೂ 3 ಪ್ರತಿಶತ ಶುಲ್ಕ ಹೆಚ್ಚಾಗಲಿದೆ.

3    ರೆಸ್ಟುರಾಂಟ್‌ ಬಿಲ್‌ ಹೆಚ್ಚಾಗಲಿದೆ. ನೀವು ಕುಳಿತು ಏರ್‌ ಕಂಡಿಷನ್‌ನಲ್ಲಿ ತಿನ್ನುವರಾಗಿದ್ದರೆ ಇನ್ನು ಮುಂದೆ ನಿಮ್ಮ ಬಿಲ್‌ ಮೇಲೆ 18 ಪ್ರತಿಶತ ತೆರಿಗೆ ಕಟ್ಟಬೇಕು. ನಿಂತು ತಿನ್ನುವ ದರ್ಶಿನಿ ಹೋಟೆಲ್‌ಗ‌ಳಲ್ಲೂ ನಿಮ್ಮ ತಿಂಡಿಯ ಬೆಲೆಯ ಬಿಸಿ ಹೆಚ್ಚಾಗಲಿದೆ. ಇವುಗಳು 12 ಪ್ರತಿಶತ ಹಣವನ್ನು ತೆರಿಗೆ ರೂಪದಲ್ಲಿ ಸಂಗ್ರಹಿಸಬೇಕು. ಹಿಂದೆ ಇವುಗಳ ಮೇಲಿನ ತೆರಿಗೆ 4 ರಿಂದ 6ರ ವರೆಗಿತ್ತು.

4    ಶಿಕ್ಷಣ ದುಬಾರಿಯಾಗಲಿದೆ. ಟ್ಯೂಷನ್‌ ಫೀಸ್‌ 3 ಪ್ರತಿಶತ ಹೆಚ್ಚಾಗಲಿದೆ. ರೆಸಿಡೆನ್ಸಿಯಲ… ಶಾಲೆಗಳಲ್ಲಿ ಓದುವವರು, ಇಂಜಿನಿಯರಿಂಗ್‌ ಶಿಕ್ಷಣ, ಉನ್ನತ ವ್ಯಾಸಂಗ ಇವುಗಳ ಮೇಲಿನ ಒಟ್ಟು ಖರ್ಚು ಜನ ಸಾಮಾನ್ಯನ ಜೇಬನ್ನು ಕತ್ತರಿಸಲಿವೆ.

5    ಚಿನ್ನದ ಬೆಲೆ ಕೂಡ ಹೆಚ್ಚಾಗಲಿದ್ದು, ಮಕ್ಕಳ ಭವಿಷ್ಯಕ್ಕೆ ಎಂದು ಅಲ್ಪಸ್ವಲ್ಪ, ಪ್ರತಿ ತಿಂಗಳು ಅಥವಾ ವರ್ಷಕೊಮ್ಮೆ ಕೊಳ್ಳುವವರು ಹೆಚ್ಚಿನ ತೆರಿಗೆಯನ್ನು ಭರಿಸಬೇಕಾಗುತ್ತದೆ.

ಇದನ್ನು ಹೀಗೆ ಸಮೀಕರಿಸಬಹುದು. 
    25,000 ಮಾಸಿಕ ವೇತನ ಪಡೆಯುವ ನಾಲ್ಕು ಜನರ ಸಂಸಾರದ ಖರ್ಚು ವೆಚ್ಚದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ. ಮೊಬೈಲ… ಮತ್ತು ಬಟ್ಟೆಯ ಖರೀದಿ ಮೇಲಿನ ತೆರಿಗೆಯಿಂದ ಮಾಸಿಕ 500 ರೂಪಾಯಿ ಹೆಚ್ಚಾಗಬಹದು. 

    ಮಾಸಿಕ 50 ಸಾವಿರ ವೇತನ ಪಡೆಯುವ ನಾಲ್ಕು ಜನರ ಸಂಸಾರದ ಖರ್ಚಿನಲ್ಲಿ ಕೂಡ ಹೆಚ್ಚಿನ ಬದಲಾವಣೆ ಇರುವುದಿಲ್ಲ. ಎಂಟಟೈìನ್ಮೆಂಟ್‌ ತೆರಿಗೆ ಕುಸಿದಿರುವುದರಿಂದ ಮೊಬೈಲ… ಬಿಲ್ಲಿನ ಹೆಚ್ಚಿನ ಖರ್ಚು ಸರಿದೂಗಿಸಬಹದು. ಡೆಬಿಟ್‌ ಕಾರ್ಡ್‌ ಬಳಕೆ ನಿಲ್ಲಿಸಬೇಕು ಇಲ್ಲದಿದ್ದರೆ ತಿಂಗಳಿಗೆ ಸಾವಿರ ರೂಪಾಯಿಗೂ ಮೀರಿದ ಖರ್ಚು ಬ್ಯಾಂಕ್‌ನಿಂದಲೆ ಉಂಟಾಗಬಹುದು. 

    ನಿಮ್ಮ ಆದಾಯ ಮಾಸಿಕ ಲಕ್ಷಕ್ಕೂ ಮೀರಿದ್ದು ಬ್ರಾಂಡೆಡ್‌ ವಸ್ತುಗಳ ಪ್ರಿಯರಾಗಿದ್ದರೆ ನಿಮ್ಮ ಖರ್ಚು ವೆಚ್ಚ ಸ್ವಲ್ಪ ಏರುಪೇರಾಗಲಿವೆ.

ಜಿಎಸ್‌ಟಿ ಪರಿಣಾಮ ಇದಮಿತ್ಥಂ ಎಂದು ಇಂದೇ ಹೇಳಲು ಬಾರದು. ಪ್ರತಿಯೊಬ್ಬರ ಬೇಕು ಬೇಡ ವಿಭಿನ್ನವಾಗಿರುತ್ತದೆ. ಅವುಗಳ ಅನುಸಾರ ಜಿಎಸ್‌ಟಿ ಕೂಡ ಪರಿಣಾಮ ಬೀರಲಿದೆ. ಎಲ್ಲಕ್ಕೂ ಮುಖ್ಯ ಯಾವುದನ್ನೇ ಆಗಲಿ ಅಳೆದು ತೂಗಲು ಒಂದಷ್ಟು ಸಮಯಬೇಕು. ಜಿಎಸ್‌ಟಿ ಲಾಗೂ ಆಗಿದೆ. ನಮ್ಮ ಬಜೆಟ್‌ ಅದಕ್ಕೆ ತಕ್ಕಂತೆ ಹೊಂದಿಸಿಕೊಳ್ಳುವುದಷ್ಟೇ ಜಾಣತನ.

ರಂಗಸ್ವಾಮಿ ಮೂಕನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next