Advertisement
ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಮಳೆ ಅನಾಹುತ ತಡೆಯುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಿಯಾ ಯೋಜನೆ, ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಪ್ರವಾಹ ಪರಿಸ್ಥಿತಿ ತಪ್ಪಿಸಲು ಪ್ರಾಯೋಗಿಕವಾಗಿ ನಗರದ ಪ್ರಮುಖ ಜಂಕ್ಷನ್, ಅಂಡರ್ ಪಾಸ್‌ಗಳಲ್ಲಿ ನೀರು ನಿಲ್ಲುವುದನ್ನು ತಡೆಯಲು ಇಂಗುಗುಂಡಿ ನಿರ್ಮಾಣ ಯೋಜನೆ ರೂಪಿಸಿಕೊಳ್ಳಲಾಗಿತ್ತು. ಲಾಕ್ ಡೌನ್ ಹಿನ್ನೆಲೆಯಲ್ಲಿ ಇದಕ್ಕೆ ಹಿನ್ನಡೆ ಉಂಟಾಗಿದೆ. ಈ ವಾರ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯೂ ಮುನ್ಸೂಚನೆ ನೀಡಿದೆ.
Related Articles
Advertisement
ಚುರುಕಾಗದ ಕ್ರಿಯಾ ಯೋಜನೆ: ನಗರದಲ್ಲಿ ಮಳೆ ಅನಾಹುತ ತಪ್ಪಿಸಲು ತೆಗೆದುಕೊಳ್ಳಬೇಕಾಗಿರುವ ಮುಂಜಾಗ್ರತೆ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಏ.30ರಂದು ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ಮೇಯರ್ ಎಂ.ಗೌತಮ್‌ಕುಮಾರ್ ಒಳಗೊಂಡಂತೆ ಪಾಲಿಕೆ ಅಧಿಕಾರಿಗಳ ಸಭೆ ನಡೆಸಿ ಕೆಲವು ನಿರ್ದಿಷ್ಟ ಸೂಚನೆ ನೀಡಿದ್ದರು. ಈ ನಿಟ್ಟಿನಲ್ಲಿ ಕೆಲವು ಕಾರ್ಯಗಳು ಮಾತ್ರ ಚುರುಕು ಪಡೆದುಕೊಂಡಿವೆ. ಮಳೆ ಅನಾಹುತ ತಪ್ಪಿಸುವುದಕ್ಕೆ ಟಾಸ್ಕ್ಫೋರ್ಸ್, 9 ಕಡೆ ಶಾಶ್ವತ ನಿಯಂತ್ರಣ ಕೊಠಡಿ, ವಲಯದ ಪ್ರತಿ ಉಪವಿಭಾಗ ಕಚೇರಿಗಳಲ್ಲಿ 63 ಕಡೆ ತಾತ್ಕಾಲಿಕ ನಿಯಂತ್ರಣ ಕೊಠಡಿ ಸೇರಿ ಹಲವು ನಿರ್ದೇಶನಗಳನ್ನು ನೀಡಲಾಗಿತ್ತು. ಇದರಲ್ಲಿ ಕೆಲವು ಮಾತ್ರ ಕಾರ್ಯರೂಪಕ್ಕೆ ಬರುವ ಹಂತದಲ್ಲಿದೆ. ಆದರೆ, ಬಹುತೇಕ ನಿರ್ದೇಶನ ಪಾಲನೆಯಾಗಿಲ್ಲ.
ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ: ಆಯುಕ್ತ ಅನಿಲ್‌ಕುಮಾರ್: ನಗರದಲ್ಲಿ ಮಳೆ ಅನಾಹುತಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲಾ ವಲಯಗಳಲ್ಲಿ 63 ತಾತ್ಕಾಲಿಕ ಸಹಾಯವಾಣಿ ಪ್ರಾರಂಭಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ತಿಳಿಸಿದರು. “ಉದಯವಾಣಿ’ ಯೊಂದಿಗೆ ಮಾತನಾಡಿ, 8 ವಲಯಗಳಲ್ಲಿ ಪ್ರಹಾರಿ ತಂಡಗಳನ್ನು ರಚನೆ ಮಾಡಿಕೊಳ್ಳಲಾಗಿದೆ. ಮರದ ರೆಂಬೆ, ಕೊಂಬೆಗೆ ತಂಡಗಳ ರಚನೆ ಮಾಡಿಕೊಳ್ಳಲಾಗಿದೆ. ಮಳೆಗೆ ಸಂಬಂಧಿಸಿದಂತೆ ಟಾಸ್ಕ್ಫೋರ್ಸ್ ಸಹ ರಚನೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ನಗರದಲ್ಲಿ ಮಳೆ ನೀರು ಸೇರುವ ತಗ್ಗು ಪ್ರದೇಶಗಳಲ್ಲಿ ಮುಂಜಾಗ್ರತೆ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಪಾಲಿಕೆ ಮಾಡಿಕೊಂಡಿರುವ ಸಿದ್ಧತೆಗಳೇನು?: ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ ಶಾಶ್ವತ ನಿಯಂತ್ರಣ ಕೊಠಡಿ ಸ್ಥಾಪನೆ. ಇದಕ್ಕೆ 5 ಕೋಟಿ ರೂ. ನಿಗದಿ ಮಾಡಲಾಗಿದೆ. ಅಲ್ಲದೆ, ಈ ಕಚೇರಿಗಳು ಸಂಜೆ 6.00 ರಿಂದ ಬೆಳಗ್ಗೆ 6.00 ಗಂಟೆವರೆಗೆ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಲಿವೆ. ಮಳೆ ಅನಾಹುತ ತಪ್ಪಿಸಲು ಟಾಸ್ಕ್ಫೋರ್ಸ್ ರಚನೆ ಮಾಡುವ ನಿಟ್ಟಿನಲ್ಲಿ ಸಿದ್ಧತೆ. ನೀರುಗಾಲುವೆಗಳಿಂದ ಕೆರೆಗಳಿಗೆ ನೀರು ಹರಿಯುವ ಇನ್ಲಟ್‌ಗಳಲ್ಲಿನ ಹೂಳೆತ್ತುವುದು ನಡೆದಿದೆ. ಈ ಎಲ್ಲಾ ಸಿದ್ಧತೆಗಳ ಅಸಲಿಯತ್ತು ನಗರದಲ್ಲಿ ಮಳೆ ಬಂದ ಮೇಲೆ ತಿಳಿಯಲಿದೆ.
* ಹಿತೇಶ್ ವೈ