Advertisement
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಅಧಿಕಾರದ ಅವಧಿಯಲ್ಲಿ ಈ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕಕ್ಕೆ 10 ಲಕ್ಷ ರೂ. ಮಂಜೂರು ಮಾಡಿದ್ದರು. ಘಟಕದ ಕಾಮಗಾರಿ ವಹಿಸಿಕೊಂಡಿದ್ದ ಕೆಆರ್‌ಡಿಸಿಎಲ್ ಸಂಸ್ಥೆ 2018ರ ಡಿಸೆಂಬರ್‌ನಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಈ ಘಟಕವನ್ನು ಲೋಕಾರ್ಪಣೆ ಮಾಡಿತ್ತು. ಇನ್ನೇನು ನಮ್ಮ ಮನೆಗಳಿಗೆ ಶುದ್ಧ ನೀರು ಬಂತು ಎಂದು ನಿಟ್ಟುಸಿರು ಬಿಟ್ಟಿದ್ದ ಗ್ರಾಮದ ಜನತೆಗೆ ಎರಡೇ ತಿಂಗಳಲ್ಲಿ ಅವರ ನಿರೀಕ್ಷೆ ಹುಸಿಯಾಗಿದೆ.
Related Articles
Advertisement
ಶುದ್ಧ ನೀರು ಸಿಗುತ್ತದೆ ಎಂದು ಗ್ರಾಮಸ್ಥರು ಚಾತಕಪಕ್ಷಿಗಳಂತೆ ಒಂದು ವರ್ಷ ಕಾದರೂ ಯಾವುದೇ ಪ್ರಕ್ರಿಯೆ ಶುರು ಆಗಿಲ್ಲ. ಈ ಅವ್ಯವಸ್ಥೆಯಿಂದ ಜನರು ರೋಸಿ ಹೋಗಿದ್ದು, ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳು ಕ್ರಮ ಕೈಗೊಂಡು ಘಟಕ ದುರಸ್ತಿಪಡಿಸಿ, ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಘಟಕಕ್ಕೆ ಕಾಂಪೌಂಡ್ ನಿರ್ಮಾಣ: ಹೆಜ್ಜಿಗೆ ಗ್ರಾಮದಲ್ಲಿ ಕೆಟ್ಟಿರುವ ಶುದ್ಧ ನೀರಿನ ಘಟಕ ಶೀಘ್ರ ದುರಸ್ತಿ ಆಗುವ ಆಶಾ ಭಾವನೆ ಇಟ್ಟುಕೊಂಡಿದ್ದೇವೆ. ಹೀಗಾಗಿ ಘಟಕಕ್ಕೆ ಒಂದು ಲಕ್ಷ ರೂ.ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಲಾಗುವುದು. ಲೋಕಾರ್ಪಣೆಗೊಂಡು 2 ತಿಂಗಳಲ್ಲೇ ಕೆಟ್ಟು ಹೋದ ಈ ಶುದ್ಧ ನೀರಿನ ಘಟಕದ ದುರಸ್ತಿಗೆ ಹಣವನ್ನು ಕೆಆರ್‌ಡಿಸಿಎಲ್ ಭರಿಸಬೇಕಿದೆ ಎಂದು ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ಗೋವಿಂದರಾಜು ತಿಳಿಸಿದ್ದಾರೆ.
ಘಟಕ ದುರಸ್ತಿಗೆ 4 ಲಕ್ಷ ರೂ.ಬೇಕು: ಹೆಜ್ಜಿಗೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದ್ದು, ಈ ಘಟಕದ ದುರಸ್ತಿ ಕಾರ್ಯ ಪ್ರಾರಂಭಿಸಿದರೆ ಸುಮಾರು ನಾಲ್ಕು ಲಕ್ಷ ರೂ. ಬೇಕಾಗುತ್ತದೆ. ಸರ್ಕಾರದಿಂದ ಅನುದಾನ ಮಂಜೂರಾದ ಬಳಿಕ ದುರಸ್ತಿ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ತಾಲೂಕು ಅಧಿಕಾರಿ ಚರಿತಾ ತಿಳಿಸಿದ್ದಾರೆ.
ಶಾಸಕರೇ, ಈ ಘಟಕ ದುರಸ್ತಿ ಯಾವಾಗ?: ಹೆಜ್ಜಿಗೆ ಗ್ರಾಮದಲ್ಲಿ ಶುದ್ಧ ಕುಡಿಯವ ನೀರಿನ ಘಟಕ ಸ್ಥಗಿತಗೊಂಡು ಬರೋಬ್ಬರಿ ಒಂದು ವರ್ಷ ಕಳೆದಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 10 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಈ ಘಟಕವು ಕಾರ್ಯನಿರ್ವಹಿಸಿರುವುದು ಕೇವಲ ಎರಡು ತಿಂಗಳು ಮಾತ್ರ. ಲೋಕಾರ್ಪಣೆಗೊಂಡು ಎರಡು ತಿಂಗಳ ಅವಧಿಯಲ್ಲಿ ಕೆಟ್ಟು ಹೋಗಿದೆ.
ಗ್ರಾಮದ ಜನರು ಶುದ್ಧ ಕುಡಿಯುವ ನೀರಿಗಾಗಿ ಪರದಾಡಬೇಕಾಗಿದೆ. ಈ ಹೆಜ್ಜಿಗೆ ಗ್ರಾಮವು ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಒಳಪಡಲಿದೆ. ಡಾ| ಯತೀಂದ್ರ ಸಿದ್ದರಾಮಯ್ಯ ಈ ಕ್ಷೇತ್ರದ ಶಾಸಕರಾಗಿದ್ದು, ಗ್ರಾಮದಲ್ಲಿ ಅವ್ಯವಸ್ಥೆಯಿಂದ ಕೂಡಿರುವ ಶುದ್ಧ ನೀರಿನ ಘಟಕವನ್ನು ತ್ವರಿತವಾಗಿ ದುರಸ್ತಿಪಡಿಸಲು ಕ್ರಮ ಕೈಗೊಂಡು, ಶುದ್ಧ ನೀರು ಕಲ್ಪಿಸಬೇಕು ಎಂದು ಹೆಜ್ಜಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇಂತಹ ಅವ್ಯವಸ್ಥೆಗೆ ಘಟಕ ನಿರ್ಮಿಸಬೇಕಿತ್ತಾ?: ಹೆಜ್ಜಿಗೆ ಗ್ರಾಮದಲ್ಲಿ 10 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ್ದ ಶುದ್ಧ ನೀರಿನ ಘಟಕ ಕೇವಲ ಎರಡು ತಿಂಗಳು ಮಾತ್ರ ಕಾರ್ಯನಿರ್ವಹಿಸಿದೆ. ಘಟಕ ಪ್ರಾರಂಭಿಸುವಾಗ ಗ್ರಾಮಕ್ಕೆ ಶುದ್ಧ ನೀರು ಸಿಗುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ, ಈ ನಿರೀಕ್ಷೆ ಹುಸಿಯಾಗಿದೆ. ಘಟಕ ಕೆಟ್ಟು ವರ್ಷ ಕಳೆದರೂ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಇಂದು ಇಲ್ಲವೇ ನಾಳೆ ಘಟಕ ದುರಸ್ತಿ ಆಗುತ್ತದೆ, ಶುದ್ಧ ನೀರು ಸಿಗುತ್ತದೆ ಎಂದು ಒಂದು ವರ್ಷ ಕಳೆದಿದ್ದೇವೆ. ಇಂತಹ ಅವ್ಯವಸ್ಥೆಗೆ ಘಟಕವನ್ನಾದರೂ ಏಕೆ ನಿರ್ಮಿಸಬೇಕಿತ್ತು?, ಹೆಸರಿಗಷ್ಟೇ ಗ್ರಾಮದಲ್ಲಿ ಘಟಕ ಇದೆ. ಅದರೆ, ಶುದ್ಧ ಕುಡಿಯುವ ನೀರು ಮಾತ್ರ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
* ಶ್ರೀಧರ್ ಆರ್.ಭಟ್