ಸ್ತ್ರೀಯರು ಹತ್ತಾರು ಮಕ್ಕಳನ್ನು ಹೆತ್ತರೂ, ಮುಪ್ಪಿನ ಸಮಯದಲ್ಲಿ ಅವರಿಗೆ ಸೊಂಟದ ನೋವು ಆವರಿಸುತ್ತಿರಲಿಲ್ಲ. ಆದರೆ, ಈಗಿನ ಸ್ತ್ರೀಯರಿಗೆ ಮೊದಲನೇ ಮಗು ಹುಟ್ಟಿದ ನಂತರವೇ ಸೊಂಟ ನೋವು, ಇತರೆ ಸಮಸ್ಯೆಗಳು ಮುತ್ತಿಕ್ಕುತ್ತವೆ. “ಏಕೆ ಹೀಗೆ?’ ಎಂಬ ಪ್ರಶ್ನೆಗೆ ಇಲ್ಲೊಂದಿಷ್ಟು ಉತ್ತರ…
1. ಅಂದು ಪ್ರಸವದ ನಂತರ 45 ದಿನಗಳವರೆಗೆ ಸ್ತ್ರೀಯನ್ನು “ಸೂತಿಕಾಸ್ತ್ರೀ’ ಎಂದು ಪರಿಗಣಿಸಲಾಗುತ್ತಿತ್ತು. ಪ್ರಸವಕ್ಕಾಗಿಯೇ, ಸಕಲ ಸಲಕರಣೆಯುಕ್ತ ಸೂತಿಕೆಗಾರ ನಿರ್ಮಿಸಿ, ಡೆಲಿವರಿ ವೇಳೆ ಪ್ರಸವ ಕೌಶಲವುಳ್ಳ ನುರಿತ ನಾಲ್ವರು ಹೆಂಗಸರು ಸೂತಿಕೆಗಾರದಲ್ಲಿರುತ್ತಿದ್ದರು. ಹೆರಿಗೆ ನೋವು ಪ್ರಾರಂಭವಾದ ಕೂಡಲೇ ನಾಲ್ಕು ಚಮಚ ತುಪ್ಪವನ್ನು ನೆಕ್ಕಿಸುತ್ತಿದ್ದರು. ಸಾಂತ್ವನ, ಧೈರ್ಯ ಹೇಳುತ್ತಾ ಹೆರಿಗೆಗೆ ಸಹಾಯಕವಾಗುವಂತೆ ಗರ್ಭಿಣಿಗೆ ತಿಳಿಹೇಳಿ ಹೆರಿಗೆ ಮಾಡಿಸುತ್ತಿದ್ದರು.
2. ಹೆರಿಗೆಯಾದ ಎರಡನೇ ದಿನದಿಂದಲೇ ಬಾಣಂತಿಯರಿಗೆ ಬಿಸಿನೀರಿನ ಸ್ನಾನ ಮಾಡಿಸುತ್ತಿದ್ದರು. ಸ್ನಾನಕ್ಕೂ ಮೊದಲು ಮೈಗೆ ಕಾಳುಜೀರಿಗೆ, ಅರಿಶಿನ ಹಾಕಿ ತೆಂಗಿನೆಣ್ಣೆಯನ್ನು ಬಿಸಿ ಮಾಡಿ, ಕೈ ಮತ್ತು ಕಾಲುಗಳಿಗೆ ಚೆನ್ನಾಗಿ ಸವರಿ, ಬಿಸಿಯಾದ ನೀರಿನಿಂದ ಸ್ನಾನ ಮಾಡಿಸುತ್ತಿದ್ದರು. ಹೊಟ್ಟೆಯ ಭಾಗಕ್ಕೆ ಹೆಚ್ಚು ಬಿಸಿ ಇರುವ ನೀರನ್ನು ಸುರಿಯುತ್ತಿದ್ದರು. ಹೀಗೆ ಮಾಡುವುದರಿಂದ ಹೊಟ್ಟೆನೋವು, ಬೆನ್ನು ನೋವು ಹಾಗೂ ವಾತದೋಷಗಳು ದೂರವಾಗಿ ಬಾಣಂತಿಯರು ಮೊದಲಿನ ಆರೋಗ್ಯ ಪಡೆಯುತ್ತಿದ್ದರು.
3. ಸ್ನಾನವಾದ ತಕ್ಷಣ ಶುಭ್ರವಾದ ಬಟ್ಟೆಯಿಂದ ಮೈಕೈಯನ್ನು ಚೆನ್ನಾಗಿ ಒರೆಸಿ, ಹೊಟ್ಟೆಗೆ ನಡುಕಟ್ಟು (ಸೀರೆಯನ್ನು ಹೊಟ್ಟೆಗೆ ಸರಿಯಾಗಿ ಸುತ್ತುವುದು) ಬಿಗಿಯುತ್ತಿದ್ದರು. ಹೀಗೆ ಮಾಡುವುದರಿಂದ ಬೊಜ್ಜು ಹೊಟ್ಟೆ ಬರುತ್ತಿರಲಿಲ್ಲ. ಬೆನ್ನು ನೋವಿಗೆ ಇದು ಆಧಾರವಾಗಿರುತ್ತಿತ್ತು.
4. ಹೆರಿಗೆ ಆದ ತಕ್ಷಣ ಬಾಣಂತಿಯರಿಗೆ ಹಸಿವು ಕಡಿಮೆ ಇರುವುದರಿಂದ ಕೆಂಪು ಅಕ್ಕಿಯ ಗಂಜಿಯನ್ನು ಸೀಗೆ ಸೊಪ್ಪಿನ ಸಾರಿನ ಜೊತೆಗೆ ಸ್ವಲ್ಪ ತುಪ್ಪ ಹಾಕಿ ಕೊಡುತ್ತಿದ್ದರು. ಪ್ರಸವ ಆದಾಗಿನಿಂದ 11ನೇ ದಿನದವರೆಗೆ ಜೀರಿಗೆ ಬಿಸಿ ಕೊಡುವುದು, ಕರಿಮೆಣಸಿನ ಕಾಳಿನ ಸಾರನ್ನು ಕುಡಿಯಲು ಕೊಡುತ್ತಿದ್ದರು. ಇದರಿಂದ ಹಸಿ ಕರುಳಿನ ನೋವು ನಿವಾರಣೆಯಾಗುತ್ತಿತ್ತು. ನಿತ್ಯ ಊಟಕ್ಕೆ ಮೆತ್ತಗಿನ ಅನ್ನಕ್ಕೆ ಸ್ವಲ್ಪ ಜೀರಿಗೆ ಪುಡಿಯ ಜೊತೆಗೆ ತುಪ್ಪ ಸೇರಿಸಿ ಕೊಡುತ್ತಿದ್ದರು.