Advertisement

ರಂಗಸ್ಥಳದಲ್ಲಿ ರಾಗ ವಿಸ್ತಾರ ಎಷ್ಟು ಸರಿ? 

03:14 PM Jan 05, 2018 | |

ಗಾಯನ , ವಾದನ , ನರ್ತನಗಳೊಂದಿಗೆ ಬಣ್ಣದ ಗಾಡಿಕೆ, ಆಶು ಸಾಹಿತ್ಯದ ಆಡಂಬರ ಸಂಲಗ್ನದಿಂದ ಬಯಲಿನ ವಿಸ್ತಾರದಲ್ಲಿ , ಕಪ್ಪು ಕತ್ತಲಲ್ಲಿ , ನಾಲ್ಕು ಕಂಬಗಳ ನಡುವೆ ಅನಾವರಣಗೊಳ್ಳುವ ಕಲೆ ಯಕ್ಷಗಾನ . ಇಲ್ಲಿ ಗಾಯನ – ವಾದನ – ನರ್ತನಗಳು ಸಮಪ್ರಮಾಣದಲ್ಲಿ ಸಂಯೋಜಿಸಲ್ಪಟ್ಟು ಗಾಯಕನಿಂದ ನಿರ್ದೇಶಿಸಲ್ಪಡುತ್ತದೆ . ಗಾಯಕ ಭಾಗವತನಾಗಿ ರಂಗದ ಸಾರ್ವಭೌಮನಾಗಿರುವುದು ಕಲೆಯಲ್ಲಿ ನಿಚ್ಚಳ , ಇದು ಪರಂಪರೆ. 

Advertisement

 ಆದರೆ ಈ ಗಾಯನವು “ಸಭಾ ಗಾಯನ’ , “ಕಛೇರಿ’ಯಾಗದೆ ರಂಗ ಸಂಗೀತವಾಗುವುದು ಯಕ್ಷಗಾನದ “ರಂಗ ಶಿಸ್ತಿನ’ ಸಾಮರ್ಥ್ಯ. ಎಲ್ಲಿಯವರೆಗೆ “ರಂಗ ಶಿಸ್ತು’ ಪಾಲಿಸಲ್ಪಡುತ್ತದೋ ಅಲ್ಲಿಯವರೆಗೆ ರಂಗ ಸಾಂಪ್ರದಾಯಿಕವಾಗಿರುತ್ತದೆ , ಸಹಜ ಸುಂದರವಾಗಿರುತ್ತದೆ . ಪ್ರಧಾನವಾದ ನಿರ್ದೇಶಕ ಭಾಗವತ ತನ್ನ ನಿರ್ವಹಣೆಯಲ್ಲಿ ಹದ ತಪ್ಪಿದರೆ ಎಲ್ಲವೂ ಮಿತಿಮೀರಿ ರಂಗಸ್ಥಳ ವಿರೂಪಗೊಳ್ಳುವುದು . ಪ್ರೇಕ್ಷಕನು ಲೌಕಿಕದಿಂದ ಕಳಚಿಕೊಂಡು ಪುರಾಣ ಲೋಕದಲ್ಲಿ ವಿಹರಿಸುವಂತೆ ಮಾಡಬಲ್ಲ ಪ್ರಬಲ ಶಕ್ತಿ ಇರುವ ಯಕ್ಷಗಾನದ ವೈಭವ ಮರೆಯಾಗುವುದು.

 ಯಕ್ಷಗಾನದ ಒಂದು ಪದ್ಯ ತಾಳಕ್ಕೆ ನಿಶ್ಚಯವಾಗಿರುತ್ತದೆ.ಅಂದರೆ ತಾಳವನ್ನು ಅನುಸರಿಸುತ್ತಾ ಹಾಡುವಂತಿರುತ್ತದೆ, ತಾಳಕ್ಕೆ ಸ್ಥಾಪಿತವಾಗಿರುತ್ತದೆ. ಹಾಡನ್ನು ವಿಸ್ತರಿಸುವುದಕ್ಕೆ ಸ್ವಾತಂತ್ರ್ಯವಿಲ್ಲ . ಇಲ್ಲಿ ಬದ್ಧತೆ ಸ್ಥಾಪನೆಯಾಗಿರುತ್ತದೆ .ರಾಜಿ ಮಾಡಿಕೊಳ್ಳುವಂತಿಲ್ಲ . ಯಾಕೆಂದರೆ ಭಾಗವತಿಕೆ “ರಂಗ ಸಂಗೀತ’.ರಂಗದ ಚಟುವಟಿಕೆಗಳಿಗಾಗಿಯೇ ಹಾಡಲ್ಪಡುವಂತಹದ್ದು .ಕಥಾನಕದ ಪೂರ್ಣ ಪಠ್ಯವಾಗಿರುವುದು.

 ಭಾಗವತಿಕೆ( ಹಾಡು) – ವಾದನ – ನರ್ತನ ಇದು ಮೂವರ ಒಪ್ಪಂದದಂತೆ ನಡೆಯುವಂತಹದ್ದು . ಇವರನ್ನು ರಂಗಶಾಸ್ತ್ರ ನಿಯಂತ್ರಿಸುತ್ತದೆ ಅಥವಾ ಮೂವರೂ ರಂಗಶಾಸ್ತ್ರಕ್ಕೆ ಬದ್ಧರಾಗಿರುತ್ತಾರೆ . ಇವರು ಮೂವರೂ ಪ್ರತ್ಯೇಕವಾಗಿರುತ್ತಾರೆ ,ಆದರೆ ಪರಸ್ಪರ ಹೊಂದಾಣಿಕೆಯೊಂದಿಗೆ ಮುಂದುವರಿಯುತ್ತಾರೆ .ತಾಳದ ಒಂದು ಪೆಟ್ಟು ಹೆಚ್ಚು ಮಾಡುವಂತಿಲ್ಲ – ಕಡಿಮೆ ಮಾಡುವಂತಿಲ್ಲ . ಛಂದಸ್ಸಿನ ಬಂಧದೊಳಗೆ ಪ್ರಸಂಗ ಸಾಹಿತ್ಯ ನಿರೂಪಿಸಲ್ಪಟ್ಟಿದೆ ತಾನೆ?

 ರಾಗ ವಿಸ್ತಾರದಿಂದ ತಾಳ ವಿಸ್ತಾರವಾಗುತ್ತದೆ , ಸಹಜವಾಗಿ ನರ್ತನ( ನಾಟ್ಯ) ವಿಸ್ತಾರಗೊಳ್ಳುತ್ತದೆ . ಆಗ ರಂಗದ ಅಂದ ಕೆಡುತ್ತದೆ . ಯಕ್ಷಗಾನದ ನೈಜ ಶಿಸ್ತು , ಹಿತಮಿತವಾದ ಸ್ವರೂಪ ಮರೆಯಾಗುತ್ತದೆ . ಏನೂ ಆಗುವುದಿಲ್ಲ , ಇಂತಹ ವಿಸ್ತರಣೆಯೇ ಇಂದಿನ ಅಗತ್ಯ ಎಂಬ ವಾದಕ್ಕೆ ಆಕ್ಷೇಪವಿಲ್ಲ. ಆದರೆ ಭಾಗವತಿಕೆ – ಗಾಯನ ವಿಧಾನವನ್ನು ರಂಗ ಸಂಗೀತವಾಗಿ “ಇರುವಂತೆಯೇ ‘ ಮುಂದಿನ ತಲೆಮಾರಿಗೆ ತಲುಪಿಸ ಬೇಡವೇ?

Advertisement

 ಭಾಗವತರು ಹಾಡುವಾಗ ರಾಗ ವಿಸ್ತಾರದಿಂದ ಪ್ರಸಂಗ ಸಾಹಿತ್ಯಕ್ಕೆ ದೋಷವಾಗಬಹುದು. ಯಕ್ಷಗಾನಕ್ಕೆ ಪ್ರಸಂಗ ಪಠ್ಯವೇ ಸಾಹಿತ್ಯ. ರಂಗವು ಸಾಹಿತ್ಯ ಶುದ್ಧಿಯನ್ನು ಬಯಸುತ್ತದೆ .ಇದು ಯಕ್ಷಗಾನದ ವಿಶೇಷತೆ . ಶುದ್ಧ ಸಾಹಿತ್ಯವೇ ಆಶು ಪ್ರಸ್ತುತಿಗೆ ಆಧಾರ.

 ಪ್ರಸಂಗ ಸಾಹಿತ್ಯದ ಎಲ್ಲಾ ಅಕ್ಷರಗಳಿಗೂ ಆಲಾಪನೆ ಇದೆ . ಏಕೆಂದರೆ ಅದು ಪದ್ಯ ,ಗದ್ಯವಲ್ಲ .ಹಾಡಾಗಿ ಹಾಡುವುದರಿಂದ ಸಹಜವಾದ ಆಲಾಪನೆ ಇರುತ್ತದೆ, ಅದರಂತೆಯೇ ಹಾಡನ್ನು ಎಳೆಯಬೇಕಲ್ಲವೇ? ಹ್ರಸ್ವಾಕ್ಷರವನ್ನು ಎಳೆದರೆ ಸಾಹಿತ್ಯ ದೋಷವಾಗುವುದಿಲ್ಲವೇ?

 ಹಾಡಿನ ಚೌಕಟ್ಟು ಸಾಹಿತ್ಯಭಾವ ,ರಾಗಭಾವಗಳನ್ನು ತುಂಬಲು ಮಾತ್ರ.ಇಂತಹ ಹಾಡನ್ನು ಹಾಡುವ ಕ್ರಮವನ್ನು ಮೀರಿದರೆ ಗಾಯನ – ವಾದನ – ನರ್ತನದ ಹೊಂದಾಣಿಕೆ ತಪ್ಪುವುದಿಲ್ಲವೇ?

 ಕಲೆ ಎಂದರೆ ಕಾಂತಿ . ಅದು ಮಿಂಚಿ ಮಾಯವಾಗುವಂತಹದ್ದು . ಈ ಕಲಾತಣ್ತೀದ ಗ್ರಹಿಕೆಯಿಂದ ಬೆಳಕಿನ ಪ್ರಮಾಣ ವಿಸ್ತರಿಸಿದರೆ ಆಕರ್ಷಣೆ ಕಳೆದುಕೊಳ್ಳುತ್ತದೆ , ನೀರಸವಾಗುತ್ತದೆ .ಅಂತೆಯೇ ರಂಗದಲ್ಲಿ ಸೃಷ್ಟಿಯಾದ ರಸದ ಭಾವ , ನಾಟ್ಯದ ಎಷ್ಟು ಅವಧಿ ಸ್ಥಾಯಿಯಾಗಿರಬಲ್ಲುದು?

 ರಾಗ ವಿಸ್ತಾರದಿಂದ ತಾಳ ವಿಸ್ತಾರ. ಇದರಿಂದ ನಾಟ್ಯ ವಿಸ್ತಾರವಾಗುತ್ತದೆ . ರಂಗದ ಸೌಂದರ್ಯಕೆಡುತ್ತದೆ .
 ಮಟ್ಟು , ಗಾಂಭೀರ್ಯ, ವೈಭವಕ್ಕೆ ಹಾಡು – ವಾದನ -ನರ್ತನಗಳ ಹೊಂದಾಣಿಕೆ ಮುಖ್ಯ. ಯಕ್ಷಗಾನ ಬಯಲಾಟದಲ್ಲಿ ರಾಗ ವಿಸ್ತಾರವು ರಂಗದ ಪಾರಂಪರಿಕ ಚೆಲುವನ್ನು ಖಂಡಿತಾ ಕೆಡಿಸುವುದು .ಬಾಕಿಮಾರು ಗ¨ªೆಗಳಲ್ಲಿ ಹಾಡುವ ಭಾಗವತಿಕೆಯು(ರಾಗ ವಿಸ್ತಾರದೊಂದಿಗೆ) ಗ¨ªೆಯ ‘ಮಣ್ಣಗಟ್ಟಿ’ಗಳಲ್ಲಿ ಇಂಗಿ ಹೋಗಲಿಕ್ಕಿಲ್ಲವೇ?

 ರಾಗ , ವಾದನ , ನರ್ತನ ವಿಸ್ತಾರಕ್ಕೆ ಗಾನ – ನಾಟ್ಯ ವೈಭವಗಳಂತಹ ವೇದಿಕೆಗಳನ್ನು ಬಳಸಿಕೊಂಡು , ಬಯಲಾಟ ರಂಗವನ್ನು ಸಾಂಪ್ರದಾಯಿಕವಾಗಿ ಉಳಿಸಬಹುದಲ್ಲ . ಭಾಗವತಿಕೆ ರಂಗ ಸಂಗೀತವಾಗಿಯೇ ಇರಬೇಡವೇ ?

ಕೆ.ಎಲ್‌.ಕುಂಡಂತಾಯ

Advertisement

Udayavani is now on Telegram. Click here to join our channel and stay updated with the latest news.

Next