Advertisement
ಅಮೆರಿಕದ ಮಿಚಿಗನ್‌ನ ಫರ್ನಡೇಲ್‌ನಲ್ಲಿ “ಸೈಗ್ನಸ್’ ಎಂಬ ಹೆಸರಿನ ಸಾಕು ಬೆಕ್ಕಿದೆ. ಅದರಲ್ಲೇನು ಮಹಾ ವಿಶೇಷ ಎಂದಿರಾ? ಅದು ನಮ್ಮ, ನಿಮ್ಮ ಮನೆಗಳಲ್ಲಿರುವ ಬೆಕ್ಕುಗಳಿಗಿಂತ ಭಿನ್ನವಾಗಿದ್ದು, ತನ್ನ ಬಾಲದ ಕಾರಣದಿಂದ ಭಾರೀ ಫೇಮಸ್ ಆಗಿದೆ. ವಿಶೇಷ ಏನಪ್ಪಾ ಅಂದ್ರೆ, ಅದರ ಬಾಲ ಸುಮಾರು 44.66 ಸೆಂ.ಮೀ. (17.58ಇಂಚು) ಉದ್ದವಿದೆ. ತುಪ್ಪಳವೂ ಸೇರಿದರೆ 18.4 ಇಂಚು ಉದ್ದ! ಜಗತ್ತಿನ ಅತ್ಯಂತ ಉದ್ದ ಬಾಲದ ಸಾಕುಬೆಕ್ಕು ಎಂದು ಸೊಕ್ಕಿನಿಂದ ಬೀಗುತ್ತಿರುವ “ಸೈಗ್ನಸ್’ ಹೆಸರು ಗಿನ್ನಿಸ್ ದಾಖಲೆಯ ಪುಸ್ತಕದಲ್ಲಿ ಸೇರ್ಪಡೆಯಾಗಿದೆ. “ಜಗತ್ತಿನ ಅತಿ ಉದ್ದ ಬಾಲವುಳ್ಳ ಸಾಕುಬೆಕ್ಕು’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಹೆಣ್ಣುಬೆಕ್ಕು, ಲಾರೆನ್ ಹಾಗೂ ವಿಲ್‌ಪೊವರ್ ದಂಪತಿಯ ನೆಚ್ಚಿನ ಸಾಕುಪ್ರಾಣಿ. ಉದ್ದನೆಯ ಕಸಬರಿಕೆಯಂತೆ ಕಾಣುವ ಇದರ ಬಾಲವೇ ಈ ಬೆಕ್ಕನ್ನು ಜಗದ್ವಿಖ್ಯಾತ ಪ್ರಾಣಿಯನ್ನಾಗಿಸಿದೆ. ದೇಹಕ್ಕಿಂತ ಬಾಲವೇ ಉದ್ದ
ಎರಡು ವರ್ಷ ಪ್ರಾಯದ ಸೈಗ್ನಸ್‌ನ ಬಾಲವು ಅದರ ದೇಹಕ್ಕಿಂತಲೂ ಉದ್ದವಿದೆ. ಪ್ರತಿ ತಿಂಗಳೂ ಈ ಬೆಕ್ಕಿನ ಬಾಲ ಅರ್ಧಇಂಚಿನಷ್ಟು ಉದ್ದ ಬೆಳೆಯುತ್ತಿರುವುದು ಕುತೂಹಲಕ್ಕೆ ಕಾರಣವಾಗಿದ್ದು, ಬಾಲ ಇನ್ನಷ್ಟು ಉದ್ದ ಬೆಳೆಯುವ ನಿರೀಕ್ಷೆಯಿದೆ. ಈ ಹಿಂದೆ ಸ್ಟಿವರ್ಟ್ ಗಿಲ್ಲಿಗನ್ ಎಂಬ, 16.3 ಇಂಚು ಉದ್ದ ಬಾಲದ ಸಾಕುಬೆಕ್ಕಿನ ಹೆಸರಿನಲ್ಲಿ ಈ ದಾಖಲೆಯಿತ್ತು.
Related Articles
ಈ ದಂಪತಿ, ಬೆಕ್ಕುಗಳಿಗೆ ಸಂಬಂಧಿಸಿದ ಚಾರಿಟಿ ನಡೆಸುತ್ತಿದ್ದು, ಅದಕ್ಕಾಗಿ ಹಣ ಸಂಗ್ರಹಿಸುವ ಉದ್ದೇಶದಿಂದ ವಿಶ್ವ ಗಿನ್ನಿಸ್ ದಾಖಲೆಗಾಗಿ ಅರ್ಜಿ ಸಲ್ಲಿಸಿದ್ದರು. ಎರಡೂ ಗಿನ್ನಿಸ್ ದಾಖಲೆಯಿಂದ ಪಡೆದ ಹಣವನ್ನು ಸಂಪೂರ್ಣವಾಗಿ ಫರ್ನಡೇಲ್ ಹಾಗೂ ಗ್ರೇಟರ್ ಮೆಟ್ರೋಡೆಟ್ರಾಯ್ ಪ್ರದೇಶದಲ್ಲಿನ ಅನಾಥ ಹಾಗೂ ಅಪಘಾತಗಳಲ್ಲಿ ಗಾಯಗೊಂಡ ಬೆಕ್ಕುಗಳ ಚಿಕಿತ್ಸೆ ಹಾಗೂ ಆರೈಕೆಗಾಗಿ ವಿನಿಯೋಗಿಸುತ್ತಿದ್ದಾರಂತೆ.
Advertisement
ಎರಡು ವಿಶ್ವ ದಾಖಲೆಗಳುಲಾರೆನ್ ಹಾಗೂ ವಿಲ್‌ಪೊವರ್ ದಂಪತಿ ಸಾಕಿರುವ ಆಕುರಸ್ ಎಂಬ ಸವನ್ನಾ ಬೆಕ್ಕು ಸುಮಾರು 48.4 ಸೆಂ.ಮೀ. (19 ಇಂಚು)ಗಳಷ್ಟು ಉದ್ದವಿದ್ದು, “ಜಗತ್ತಿನ ಅತಿ ಉದ್ದದ ಸಾಕುಬೆಕ್ಕು’ ಎಂಬ ಗಿನ್ನಿಸ್ ದಾಖಲೆ ಮಾಡಿದೆ. ಇದು ಅವರ ಖುಷಿಯನ್ನು ಇಮ್ಮಡಿಗೊಳಿಸಿದೆ. ದಂಪತಿಯೇ ಹೇಳುವಂತೆ, ಎರಡೂ ವಿಶ್ವದಾಖಲೆ ವೀರರು ಯಾವಾಗಲೂ ಜೊತೆಯಾಗಿ ಆಟವಾಡಿಕೊಂಡು ಸ್ನೇಹಿತರಂತೆ ಒಟ್ಟಿಗಿರುವುದಲ್ಲದೆ, ಪರಸ್ಪರ ತಬ್ಬಿಕೊಂಡು ಮಲಗಿಕೊಳ್ಳುತ್ತವಂತೆ. ಹರೀಶ್ ಕುಮಾರ್