ನೀರಿಗಾಗಿ ರಾಜ್ಯ ರಾಜ್ಯಗಳ ನಡುವೆ, ಮನುಷ್ಯರ ನಡುವೆ ಮನಸ್ತಾಪ, ಬೀದಿಜಗಳ ಏರ್ಪಡುತ್ತಲೇ ಇರುತ್ತದೆ. ತಂತ್ರಜ್ಞಾನಗಳು ಆವಿಷ್ಕಾರವಾಗುತ್ತಿರುವ ಈ ದಿನಗಳಲ್ಲಿ ನೀರನ್ನು ಸೃಷ್ಟಿ ಮಾಡುವ ಹಾಗಿರುತ್ತಿದ್ದರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತು. ಸದ್ಯಕ್ಕಂತೂ ಅದು ಕನಸಿನ ಮಾತೇ ಆಗಿದೆ. ಆದರೆ ಮ್ಯಾಜಿಕ್ ಮೂಲಕ ನೀರನ್ನು ಸೃಷ್ಟಿಸಿ ಸಮಾಧಾನ ಹೊಂದಬಹುದು.
ಬೇಕಾಗುವ ವಸ್ತು: ಗಾಜಿನ ಪಾತ್ರೆ, ಬಣ್ಣದ ಪ್ಲಾಸ್ಟಿಕ್ ಪಾತ್ರೆ, ಬಲೂನು, ಸೂಜಿ/ ಪಿನ್ನು
ಪ್ರದರ್ಶನ: ಜಾದೂಗಾರನ ಟೇಬಲ್ ಮೇಲೆ ಒಂದು ಗಾಜಿನ ಪಾತ್ರೆ ಹಾಗೂ ಒಂದು ಪ್ಲಾಸ್ಟಿಕ್ ಪಾತ್ರೆ ಇರುತ್ತದೆ. (ಚಿತ್ರದಲ್ಲಿ ತೋರಿಸಿರುವಂಥದ್ದು). ಜಾದೂಗಾರ ಪ್ಲಾಸ್ಟಿಕ್ ಪಾತ್ರೆಯನ್ನು ಎತ್ತಿ ಉಲ್ಟಾ ಮಾಡಿ ಖಾಲಿಯಾಗಿರುವುದನ್ನು ತೋರಿಸುತ್ತಾನೆ. ನಂತರ ಪಾತ್ರೆಯೊಳಗೆ ಕೈ ಹಾಕಿ ಮಂತ್ರ ಜಪಿಸುತ್ತಾ, ಕೈ ಎತ್ತುತ್ತಾನೆ. ಕೈ ಪೂರ್ತಿ ಒದ್ದೆಯಾಗಿರುತ್ತದೆ. ಪ್ಲಾಸ್ಟಿಕ್ ಪಾತ್ರೆಯಲ್ಲಿ ನೀರು ತುಂಬಿರುತ್ತದೆ. ಆಮೇಲೆ ಅದನ್ನೆತ್ತಿ ಗಾಜಿನ ಪಾತ್ರೆಗೆ ನೀರು ಸುರಿಯುತ್ತಾನೆ. ಖಾಲಿಯಾಗಿರುವುದನ್ನು ಪ್ರೇಕ್ಷಕರು ನೋಡಿರುತ್ತಾರೆ. ಹಾಗಾದ್ರೆ, ಖಾಲಿ ಪಾತ್ರೆಯೊಳಗೆ ನೀರು ಹೇಗೆ ಬಂತು?
ತಯಾರಿ: ಪ್ಲಾಸ್ಟಿಕ್ ಪಾತ್ರೆಯಲ್ಲಿ ಅಡಗಿದೆ ಈ ಜಾದೂವಿನ ರಹಸ್ಯ. ಅಂದರೆ, ನೋಡುಗರಿಗೆ ಖಾಲಿ ಇರುವಂತೆ ಕಾಣುವ ಪ್ಲಾಸ್ಟಿಕ್ ಪಾತ್ರೆಯಲ್ಲಿ ಒಂದು ನೀರು ತುಂಬಿದ ಬಲೂನ್ ಇರುತ್ತದೆ. ಅದನ್ನು ಎರಡೂ ಕೈಯಲ್ಲಿ ಎತ್ತಿ ಬೋರಲು (ಉಲ್ಟಾ) ಹಾಕುವಾಗ, ಅದರೊಳಗೆ ಇರುವ ಬಲೂನ್ ಕಾಣಿಸದಂತೆ ಜಾಗ್ರತೆ ವಹಿಸಬೇಕು. ಅದಕ್ಕಾಗಿಯೇ ಬಣ್ಣದ ಪ್ಲಾಸ್ಟಿಕ್ ಪಾತ್ರೆಯನ್ನು ಬಳಸಬೇಕು. ನಂತರ ಬೆರಳ ತುದಿಯಲ್ಲಿ ಒಂದು ಸೂಜಿ/ ಪಿನ್ ಹಿಡಿದು (ಚೂಪಾದ ಉಗುರು ಇದ್ದರೆ ಇನ್ನೂ ಉತ್ತಮ? ಬಲೂನ್‌ಗೆ ಚುಚ್ಚಿ. ನೀರು, ಪಾತ್ರೆಯೊಳಗೆ ತುಂಬಿಕೊಳ್ಳುತ್ತದೆ. ಒಡೆದ ಬಲೂನ್‌ಅನ್ನು ಬೆರಳಿನಿಂದ ಮುಚ್ಚಿ ಹಿಡಿದು, ಪಾತ್ರೆಯನ್ನು ಎತ್ತಿ ನೀರನ್ನು ಗಾಜಿನ ಪಾತ್ರೆಯೊಳಗೆ ಸುರಿಯಿರಿ.
ವಿನ್ಸೆಂಟ್ ಲೋಬೋ