Advertisement

ಕೋವಿಡ್ ಮಧ್ಯೆ ಚುನಾವಣೆ ಹೇಗೆ?

09:38 AM Jul 14, 2020 | mahesh |

ಚುನಾವಣೆ ಎಂದರೆ ಸಹಸ್ರಾರು ಮಂದಿಯನ್ನು ಸೇರಿಸುವ ರಾಜಕೀಯ ರ್ಯಾಲಿಗಳು, ಗುಂಪು ಗುಂಪು ಪ್ರಚಾರ ಭರಾಟೆ, ಪ್ರಚಾರ ಸಾಮಗ್ರಿಗಳ ಪೂರೈಕೆ, ಪಾರ್ಟಿ, ಮತಗಟ್ಟೆಗಳಲ್ಲಿ ಜನಜಂಗುಳಿ, ಮನೆ ಮನೆ ಭೇಟಿ, ಸಣ್ಣ ಪುಟ್ಟ ಸಂಘರ್ಷಗಳು ಸಾಮಾನ್ಯವಾಗಿವೆ. ಆದರೆ, ಇದೀಗ ಎಲ್ಲೆಡೆ ಮಹಾಮಾರಿ ಕೋವಿಡ್ ಆವರಿಸಿರುವುದರಿಂದ ಅಬ್ಬರದ ಪ್ರಚಾರಕ್ಕೆ ಕೆಲ ನಿರ್ಬಂಧ ವಿಧಿಸಿ, ಮುನ್ನೆಚ್ಚರಿಕೆ, ಸೂಕ್ಷ್ಮತೆ, ಸುರಕ್ಷತಾ ಕ್ರಮಗಳೊಂದಿಗೆ ಚುನಾವಣೆ ನಡೆಸಬೇಕಿದೆ. ಮತಗಟ್ಟೆಗಳಲ್ಲಿ ಗರಿಷ್ಠ ಎಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಚುನಾವಣಾ ಆಯೋಗವು ಚುನಾವಣೆ ನಡೆಸಲು ಹೇಗೆ ಸಿದ್ಧತೆ ಕೈಗೊಂಡಿದೆ, ಯಾವ ರಾಜ್ಯಗಳಲ್ಲಿ ಚುನಾವಣೆ ಜರುಗಲಿದೆ, ಬೇರೆ ದೇಶಗಳಲ್ಲಿ ಹೇಗೆ ಮತದಾನ ನಡೆದಿತ್ತು ಎಂಬುದರ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Advertisement

ಭಾರತದಲ್ಲಿ ಶೀಘ್ರ ನಡೆಯಲಿರುವ ಚುನಾವಣೆಗಳು
ಬಿಹಾರ ವಿಧಾನಸಭಾ ಚುನಾವಣೆ ಅಕ್ಟೋಬರ್‌, ನವೆಂಬರ್‌ನಲ್ಲಿ ನಡೆಯುವ ಸಾಧ್ಯತೆ. ಮಧ್ಯ ಪ್ರದೇಶದಲ್ಲಿ 24 ವಿಧಾನಸಭಾ ಸ್ಥಾನಗಳಿಗೆ ಉಪ ಚುನಾವಣೆ, ಕರ್ನಾಟಕದಲ್ಲಿ ಗ್ರಾಮ ಪಂಚಾ ಯಿತಿ ಚುನಾವಣೆ ನಡೆಸಬೇಕಿದೆ. ಬೆಂಗಳೂರು ಬೃಹತ್‌ ಮಹಾನಗರ ಪಾಲಿಕೆ ಆಡಳಿತ ಸೆಪ್ಟೆಂಬರ್‌ಗೆ ಅಂತ್ಯವಾಗಲಿದ್ದು, ಈ ವರ್ಷಾಂತ್ಯಕ್ಕೆ ಚುನಾವಣೆ ನಡೆಸುವ ಸಂಭವ ಇದೆ.

ಚುನಾವಣಾ ಆಯೋಗದ ಸಿದ್ಧತೆಗಳು
ಇವಿಎಂ ಯಂತ್ರಗಳಲ್ಲಿ ಅಭ್ಯರ್ಥಿಗಳ ಚಿಹ್ನೆ ಇರುವ ಮತ ಗುಂಡಿಯನ್ನು ಕೈಯಿಂದ ಒತ್ತುವ ಬದಲು ಮರದ ಸಣ್ಣ ಕಡ್ಡಿಗಳಿಂದ ಒತ್ತುವ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆದಿದೆ. ಪ್ರತಿ ಮತಗಟ್ಟೆಯಲ್ಲಿ ಸಾವಿರ ಮಂದಿ ಮತದಾನಕ್ಕೆ ಮಿತಿ, ಸಾಮಾಜಿಕ ಅಂತರ, ಪ್ರತಿ ಮತದಾರರಿಗೆ ಖಾದಿ ಮಾಸ್ಕ್ ವಿತರಣೆ, ಮತಗಟ್ಟೆಯಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆ, ಚುನಾವಣಾ ಸಿಬ್ಬಂದಿಗೆ ಮಾಸ್ಕ್, ಗ್ಲೌಸ್‌, ಫೇಸ್‌ಶೀಲ್ಡ್‌ ಮತ್ತಿತರ ಸುರಕ್ಷತಾ ಉಪಕರಣ ಒದಗಿಸುವುದು. ಕೊರೊನಾ ಸೋಂಕಿತರು, ದಿವ್ಯಾಂಗರು, 65 ವರ್ಷ ಮೇಲ್ಪಟ್ಟವರಿಗೆ ಅಂಚೆ ಮತದಾನ, ಅಗತ್ಯ ಬಿದ್ದರೆ ಅವರ ಮನೆಗಳಿಗೆ ತೆರಳಿ ಮತದಾನಕ್ಕೆ ಅವಕಾಶ ಕಲ್ಪಿಸಲು ತಯಾರಿ ನಡೆಸಲಾಗುತ್ತಿದೆ.

ಯಾವ ಯಾವ ದೇಶಗಳಲ್ಲಿ ಚುನಾವಣೆ
ಇತ್ತೀಚೆಗೆ ಸಿಂಗಾಪುರ, ದಕ್ಷಿಣ ಕೊರಿಯಾ, ಪೋಲೆಂಡ್‌, ಸ್ಪೇನ್‌ನಲ್ಲಿ ಚುನಾವಣೆ ನಡೆಸಲಾಗಿದೆ. ನವೆಂಬರ್‌ಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುವ ಸಂಭವ ಇದೆ. ಶ್ರೀಲಂಕಾದಲ್ಲಿ ಆ.5ಕ್ಕೆ ಸಂಸತ್‌ ಚುನಾವಣೆಯನ್ನು ನಿಗದಿಪಡಿಸಲಾಗಿದೆ.

ವಿದೇಶದಲ್ಲಿ ಹೇಗಿತ್ತು ಮತದಾನ
ಸಿಂಗಾಪುರ: ಸಿಂಗಾಪುರದಲ್ಲಿ ಕಳೆದ ಶುಕ್ರವಾರ ಮತಗಟ್ಟೆಯಲ್ಲಿ ಪ್ರತಿಯೊಬ್ಬರೂ ಮಾಸ್ಕ್, ಗ್ಲೌಸ್‌ ಧರಿಸಿ ಸಾಮಾಜಿಕ ಅಂತರದೊಂದಿಗೆ ಮತದಾನ ಮಾಡಿದರು. ಬೆಳಗಿನ ಸಮಯಲ್ಲಿ 65 ವರ್ಷ ಮೀರಿ ದವರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

Advertisement

ಪೋಲೆಂಡ್‌: ಕೋವಿಡ್ ಬಳಿಕ ಐರೋಪ್ಯ ಒಕ್ಕೂಟದಲ್ಲಿ ಪ್ರಥಮ ಬಾರಿಗೆ ಪೊಲೆಂಡ್‌ನ‌ಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾರರೇ ಮನೆಯಿಂದ ಪೆನ್‌ ತೆಗೆದುಕೊಂಡು ಬಂದು ಮತದಾನ ಮಾಡಿದರು.

ದಕ್ಷಿಣ ಕೊರಿಯಾ: ಕಳೆದ ಎಪ್ರಿಲ್‌ನಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಚುನಾವಣೆಯಲ್ಲಿ ಜನರನ್ನು ಥರ್ಮಲ್‌ ಸ್ಕ್ರೀನಿಂಗ್‌ಗೊಳಪಡಿಸಿದ ಬಳಿಕ ಮತಗಟ್ಟೆಯೊಳಗೆ ಬಿಡಲಾಯಿತು. ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿತ್ತು. ಸ್ಯಾನಿಟೈಸರ್‌ನಲ್ಲಿ ಕೈತೊಳೆದ ಬಳಿಕ ಗ್ಲೌಸ್‌ ಧರಿಸಿ ಮತ ಹಾಕಿದರು. ಕ್ವಾರಂಟೈನ್‌ನಲ್ಲಿ ಇದ್ದವರಿಗೆ ಇ-ಮೇಲ್‌ ಮೂಲಕ ಮತದಾನಕ್ಕೆ ಅವಕಾಶ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next