Advertisement

ಕಾಂಗ್ರೆಸ್‌- ಚೀನ ಒಪ್ಪಂದ ಹೇಗೆ ಸಾಧ್ಯ? ಆರ್‌ಜಿಎಫ್ ಮೇಲಿನ ಆರೋಪಕ್ಕೆ ಸುಪ್ರೀಂ ಪ್ರಶ್ನೆ

09:58 AM Aug 08, 2020 | mahesh |

ಹೊಸದಿಲ್ಲಿ: ಕಾಂಗ್ರೆಸ್‌ ಮತ್ತು ಚೀನ ನಡುವೆ 2008ರಲ್ಲಿ ನಡೆದಿತ್ತು ಎನ್ನಲಾದ ಒಪ್ಪಂದ ಕುರಿತ ವಿವಾದ ಈಗ ಸುಪ್ರೀಂನಲ್ಲೂ ಸದ್ದು ಮಾಡಿದೆ. ಒಂದು ರಾಜಕೀಯ ಪಕ್ಷವು ಇನ್ನೊಂದು ರಾಷ್ಟ್ರದೊಂದಿಗೆ ಹೇಗೆ ಒಪ್ಪಂದ ಮಾಡಿಕೊಳ್ಳಲು ಸಾಧ್ಯ? ಇದೊಂದು ಗಂಭೀರ ವಿಚಾರ ಎಂದು ಸರ್ವೋಚ್ಚ ನ್ಯಾಯಾಲಯ ತೀವ್ರ ಆತಂಕ ವ್ಯಕ್ತಪಡಿಸಿದೆ.

Advertisement

ಕಾಂಗ್ರೆಸ್‌ ಪಕ್ಷವು ಚೀನದ ಕಮ್ಯುನಿಸ್ಟ್‌ ಪಾರ್ಟಿಯೊಂದಿಗೆ ರಹಸ್ಯ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದದ ಪ್ರಕರಣವನ್ನು ಎನ್‌ಐಎ ಅಥವಾ ಸಿಬಿಐಗೆ ವಹಿಸಬೇಕೆಂದು ಕೋರಿ ಗೋವಾ ಕ್ರಾನಿಕಲ್‌ ಪ್ರಧಾನ ಸಂಪಾದಕ ಸ್ಯಾವಿಯೊ ರೋಡ್ರಿಗಸ್‌ ಮತ್ತು ಹೊಸದಿಲ್ಲಿ ಮೂಲದ ವಕೀಲ ಶಶಾಂಕ್‌ ಶೇಖರ್‌ ಝಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಬಗ್ಗೆ ಮೊದಲು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದು ಅನಂತರ ತನ್ನೆದುರು ಬರಲು ಸುಪ್ರೀಂ ಕೋರ್ಟ್‌ ಸೂಚಿಸಿದೆ. ಅರ್ಜಿಯನ್ನೂ ವಜಾಗೊಳಿಸಿದೆ.

ಸುಪ್ರೀಂ ಕಳವಳ: ಅರ್ಜಿ ವಾಪಸ್‌ ಕಳುಹಿಸಿದರೂ ಸುಪ್ರೀಂ ಕೋರ್ಟ್‌ ಈ ಒಪ್ಪಂದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ. ರಾಜಕೀಯ ಪಕ್ಷವೊಂದು ಚೀನದಂಥ ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿಕೊಂಡದ್ದನ್ನು ನ್ಯಾಯಾಲಯವು ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇಳುತ್ತಿದೆ. ಈ ಬಗ್ಗೆ ನೀವೇಕೆ ಹೈಕೋರ್ಟ್‌ನಲ್ಲಿ ದೂರು ಸಲ್ಲಿಸಲಿಲ್ಲ? ಒಂದು ವೇಳೆ ನಿಮ್ಮ ಆರೋಪ ಸುಳ್ಳಾದರೆ ನಿಮ್ಮನ್ನೇ ವಿಚಾರಣೆಗೆ ಗುರಿಪಡಿಸಲಾಗುತ್ತದೆ ಎಂದು ಅರ್ಜಿದಾರರಿಗೆ ಎಚ್ಚರಿಸಿದೆ.

ಸತ್ಯ ಹೇಳಲಿ: ಇದು ರಾಷ್ಟ್ರೀಯ ಭದ್ರತಾ ವಿಷಯ. ಕಾಂಗ್ರೆಸ್‌ ಒಪ್ಪಂದದ ವಿವರಗಳನ್ನು ಜನತೆಯ ಮುಂದಿಡಬೇಕು. ವಾಸ್ತವ ಹೇಳಬೇಕು. ಈ ಬಗ್ಗೆ ನಾನು ಸಂಪಾದಕೀಯದಲ್ಲಿ ಬರೆದರೂ ಅದಕ್ಕೆ ರಾಹುಲ್‌ ಗಾಂಧಿ ಉತ್ತರಿಸಲಿಲ್ಲ. ಹಾಗಾಗಿ ನಾವು ಸುಪ್ರಿಂ ಮೊರೆ ಹೊಕ್ಕೆವು ಎಂದು ಅರ್ಜಿದಾರ ರೋಡ್ರಿಗಸ್‌ ಹೇಳಿದ್ದಾರೆ.

ಕಾಂಗ್ರೆಸ್‌ ರಹಸ್ಯ ಒಪ್ಪಂದ ಸುಪ್ರೀಂಗೂ ಅಚ್ಚರಿ: ನಡ್ಡಾ ಬಾಣ
ಕಾಂಗ್ರೆಸ್‌ ಪಕ್ಷವು ಚೀನದೊಂದಿಗೆ ರಹಸ್ಯ ಒಡಂಬಡಿಕೆಗೆ ಸಹಿ ಹಾಕಿರುವ ಸಂಗತಿ ಸ್ವತಃ ಸುಪ್ರೀಂ ಕೋರ್ಟ್‌ಗೂ ಅಚ್ಚರಿ ಮೂಡಿಸಿದೆ. ಸಹಿ ವೇಳೆ ಮುಂದಾಳತ್ವ ವಹಿಸಿದ್ದ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳು ಈ ಬಗ್ಗೆ ವಿವರಣೆ ನೀಡಬೇಕು ಎಂದು ಬಿಜಿಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಟ್ವೀಟ್‌ನಲ್ಲಿ ಪಟ್ಟು ಹಿಡಿದಿದ್ದಾರೆ.

Advertisement

ರಾಜೀವ್‌ ಗಾಂಧಿ ಪ್ರತಿಷ್ಠಾನ (ಆರ್‌ಜಿಎಫ್)ಗೆ ದೊರೆತಿರುವ ದೇಣಿಗೆ ಎಷ್ಟು? ಇದು ಭಾರತಕ್ಕೆ ಮಾರುಕಟ್ಟೆಗೆ ಹೊಡೆತ ನೀಡಿ, ಚೀನೀಯರಿಗೆ ಭಾರತದ ಮಾರುಕಟ್ಟೆ ತೆರೆಯುವ ಒಪ್ಪಂದವಾಗಿದೆಯೇ? ಈ ಬಗ್ಗೆ ಕಾಂಗ್ರೆಸ್‌ ನೇತಾರರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಏನಿದು ಆರ್‌ಜಿಎಫ್ ದೇಣಿಗೆ?
ರಾಜೀವ್‌ ಗಾಂಧಿ ಫೌಂಡೇಶನ್‌ (ಆರ್‌ಜಿಎಫ್) ಒಂದು ಚಾರಿಟೆಬಲ್‌ ಸಂಸ್ಥೆ. ಈ ಟ್ರಸ್ಟ್‌ ಚೀನ ಸರಕಾರದಿಂದ ಅಪಾರ ದೇಣಿಗೆ ಪಡೆದು ದೇಶದಲ್ಲಿ ಚೀನೀ ಮಾರುಕಟ್ಟೆಗೆ ವೇದಿಕೆ ಕಲ್ಪಿಸಿದೆ ಎಂಬುದು ಬಿಜೆಪಿಯ ಆರೋಪ. ಗಾಲ್ವಾನ್‌ ಘರ್ಷಣೆ ಹಿನ್ನೆಲೆಯಲ್ಲಿ ಈ ಆರೋಪ ಭಾರೀ ಸಂಚಲನ ಸೃಷ್ಟಿಸಿದೆ. ಆರ್‌ಜಿಎಫ್ಗೆ ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದಾರೆ. ಮಾಜಿ ಪ್ರಧಾನಿ ಮನಮೋಹನ ಸಿಂಗ್‌, ಪಕ್ಷದ ಮುಖಂಡರಾದ ರಾಹುಲ್‌ ಗಾಂಧಿ, ಪಿ. ಚಿದಂಬರಂ ಮತ್ತು ಪ್ರಿಯಾಂಕಾ ಗಾಂಧಿ ಸದಸ್ಯರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next