Advertisement
ವರ್ಷಕ್ಕೆ ಇರುವುದೇ ನಾಲ್ಕು ರಜೆ. ಆಯುಧ ಪೂಜೆ ಅದರಲ್ಲಿ ಒಂದು. ಮಹಾನವಮಿಯ ದಿನ ಜೋಗ ಪ್ರವಾಸ ತೆರಳಿದರೆ ಹೇಗೆ ಎಂಬ ಗೆಳೆಯರ ಸಲಹೆಯೇ ರೋಮಾಂಚನ ಮೂಡಿಸಿತು. ರಾಜ್ಯಕ್ಕೆ ಬೆಳಕು ಕೊಡುವ ಲಿಂಗನಮಕ್ಕಿ ಜಲಾಶಯ, ನಾಲ್ಕು ಕವಲುಗಳಾಗಿ ಜಿಗಿದು ಭುವಿಯ ಮೇಲೆ ಸ್ವರ್ಗವನ್ನೇ ಸೃಷ್ಟಿಸುವ ರುದ್ರ ರಮಣೀಯ ಜಲಪಾತದ ದೃಶ್ಯ ಕಣ್ಣ ಮುಂದೆ ತೇಲಿ ಬಂತು. ಇನ್ನೂ ಮಳೆಗಾಲ ಕಳೆದಿಲ್ಲ. ಪೂರ್ತಿಯಾಗಿ ಅಲ್ಲದಿದ್ದರೂ ಸಾಕಷ್ಟು ಮೈದುಂಬಿಕೊಂಡೇ ಇರುವ ಜೋಗವನ್ನು ಕಣ್ತುಂಬಿಕೊಳ್ಳಲು ಸಹೋದ್ಯೋಗಿಗಳ ಕುಟುಂಬಗಳೂ ಜತೆಯಾಗಿ, ಒಟ್ಟು 26 ಜನ ಸಿದ್ಧರಾದೆವು.
Related Articles
ಇಳಿ ಬಿಸಿಲಿನಲ್ಲಿ ಜೋಗ ಜಲಪಾತ ಹೊಂಬಣ್ಣದಲ್ಲಿ ಮಿನುಗುತ್ತಿತ್ತು. ಜಲಪಾತದ ಹಿನ್ನೆಲೆ ಇಟ್ಟುಕೊಂಡು ನನ್ನ ಗೆಳೆಯರು, ಮಕ್ಕಳ ಫೋಟೋಗಳನ್ನು ಕೆಮರಾದಲ್ಲಿ ಸೆರೆಹಿಡಿದೆ. ಈ ಕಡೆಯಿಂದ ಜೋಗದಲ್ಲಿ ಧುಮುಕುವ ನೀರು ಗಾಳಿಯ ರಭಸಕ್ಕೆ ಹುಡಿ ಹಿಟ್ಟು ಉದುರಿಸಿದಂತೆ ಕಾಣಿಸಿತು. ಈ ಮಧ್ಯೆ ನಮ್ಮ ಪೈಕಿ ಐದಾರು ಜನ ನಮಗೆ ಹೇಳದೆಯೇ ಜೋಗದ ಗುಂಡಿ ನೋಡಲು ಇಳಿದಿದ್ದರು. ನಾವೂ ಹೋಗಬೇಕೆಂದು ಅನುವಾಗುವಷ್ಟರಲ್ಲಿ ನಾಲ್ಕು ಗಂಟೆ ಕಳೆದಿದ್ದರಿಂದ ಅಲ್ಲಿನ ಭದ್ರತಾ ಸಿಬಂದಿ ನಯವಾಗಿಯೇ ಅವಕಾಶ ನಿರಾಕರಿಸಿದರು. ನೂರಾರು ಅಡಿ ಎತ್ತರದಿಂದ ಸಂಜೆಯ ಬಿಸಿಲಿಗೆ ಅಭಿಮುಖವಾಗಿ ಬೀಳುತ್ತಿದ್ದ ನೀರು ಕಾಮನಬಿಲ್ಲನ್ನು ಸೃಷ್ಟಿಸಿತ್ತು. ಗುಂಡಿಯ ದಾರಿಯಲ್ಲಿ ಅರ್ಧದಷ್ಟು ಮೆಟ್ಟಿಲುಗಳನ್ನಿಳಿದು ರಾಜಾ, ರಾಣಿ, ರೋರರ್, ರಾಕೆಟ್ – ಈ ನಾಲ್ಕು ಕವಲುಗಳನ್ನು ನೋಡುತ್ತ ಮೈಮರೆತೆವು. ಕೆಲವು ದಿನಗಳ ಹಿಂದೆ ಭಾರೀ ಮಳೆಯಾದ ಸಂದರ್ಭದಲ್ಲಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಂತೆ. ಆಗ ಈ ನಾಲ್ವರ ಮಕ್ಕಳು, ಮರಿಮಕ್ಕಳು ಎಲ್ಲರೂ ಬಂದಿದ್ದರಂತೆ ಎಂದು ಅಲ್ಲಿದ್ದವರು ಯಾರೋ ವಾಟ್ಸ್‌ಆ್ಯಪ್ ಜೋಕ್ ಹೇಳಿ ನಗುತ್ತಿದ್ದರು!
Advertisement
ಜೋಗ ಕಾಣುವ ಯೋಗಜೋಗ ಜಲಪಾತವನ್ನು ಗೆಸ್ಟ್ ಹೌಸ್ ಭಾಗದಿಂದ ವೀಕ್ಷಿಸುವುದು ಇನ್ನೊಂದು ಅಪೂರ್ವ ಅನುಭವ. ಸೂರ್ಯ ಮೋಡಗಳ ಮರೆಯಲ್ಲೇ ಕಡಲಿನೆಡೆಗೆ ಸರಿಯುತ್ತ ಬಾನಂಗಳದಲ್ಲಿ ಬಣ್ಣಗಳ ಚಿತ್ತಾರ ಬಿಡಿಸುತ್ತಿದ್ದ. ನಾವು ಜಲಪಾತದತ್ತ ಹೆಜ್ಜೆ ಹಾಕುತ್ತಿರುವಾಗ ಎದುರಿನಿಂದ ಒಂದು ಕುಟುಂಬ ವಾಪಸಾಗುತ್ತಿತ್ತು. ಅವರೊಂದಿಗೆ ಮುದ್ದಾದ ನಾಯಿಯೂ ಇತ್ತು. ನಾನು, “ನಾಯಿಯ ಯೋಗ ನೋಡಿ. ಅದೂ ಜೋಗ ನೋಡಲು ಬಂದಿದೆ’ ಎಂದೆ. ನಮ್ಮ ಜತೆಗಿದ್ದ ವಿಶ್ವಾಸ್ ತಟ್ಟನೆ “ಎಂಚ ಉಂಡು ಜೋಗ?’ ಎಂದು ಜೋರಾಗಿಯೇ ಕೇಳಿದ. ಎಲ್ಲರೂ ಬಿದ್ದು ಬಿದ್ದು ನಕ್ಕೆವು. ನಾಯಿಯ ಮಾಲಕರಿಗೆ ತುಳು ಬರುತ್ತಿರಲಿಲ್ಲವಾದರೂ ವಿಶ್ವಾಸ್ ಕೇಳಿದ ರೀತಿಯೇ ಅವರಲ್ಲೂ ಮುಗುಳ್ನಗು ಅರಳಿಸಿತು. ನಾಯಿಗೇನು ಅರ್ಥವಾಯಿತೋ, ತುಂಬ ಚೆನ್ನಾಗಿದೆ ಎನ್ನುವ ರೀತಿಯಲ್ಲಿ ತಲೆ ಅಲ್ಲಾಡಿಸಿ ಠೀವಿಯಿಂದ ಮುಂದೆ ಸಾಗಿತು. ಜೋಗದ ಒಂದು ಕವಲು ಒಂದು ಬದಿಯಿಂದ ನೋಡಿದಾಗ ಗುಡ್ಡದ ಅರ್ಧ ಭಾಗದಿಂದ ಚಿಮ್ಮುವಂತೆ ಕಾಣುತ್ತದೆ. ಗೆಸ್ಟ್ ಹೌಸ್ ಭಾಗದಿಂದ ನೋಡಿದರೆ ಅದು ಕೊರಕಲಿನಲ್ಲಿ ಜಿಗಿಯುತ್ತ ಮುನ್ನೆಲೆಗೆ ಬರುವುದು ಗೋಚರಿಸುತ್ತದೆ. ಅಲ್ಲಿ ಸೂರ್ಯಾಸ್ತಮಾನದ ಚಿತ್ರಗಳನ್ನು ಸೆರೆಹಿಡಿಯುವ ಆಸೆ ಇತ್ತು. ಆದರೆ, ದಟ್ಟ ಮೋಡಗಳು ಅಡ್ಡಿಯಾದವು. ಏನು ಬೇಕು ಬೇಗ ಹೇಳಿ!
ಮರಳುವ ದಾರಿಯಲ್ಲಿ ಬಿಳಿಗಾರು ಎಂಬಲ್ಲಿ ಒಂದು ಕ್ಯಾಂಟೀನ್ ಮುಂದೆ ಬಸ್ ನಿಲ್ಲಿಸಿದೆವು. ಕ್ಯಾಂಟೀನ್ ಮಾಲಕ ಚಹಾ, ತಿಂಡಿಯ ಆರ್ಡರ್ ಪಡೆಯಲು ಅವಸರ ಮಾಡುತ್ತಿದ್ದ. “ಏನ್ ಬೇಕು ಬೇಗ ಹೇಳಿ’ ಎಂದು ಕನಿಷ್ಠ ಹತ್ತು ಬಾರಿಯಾದರೂ ಕೇಳಿದ್ದ.
ಒಂದು ಬೆಳಗ್ಗೆ ಹೊರಟವರು ಮಧ್ಯರಾತ್ರಿ ಮನೆ ಮುಟ್ಟಿದೆವು. ಮಿನಿ ಬಸ್ ಚಾಲಕ ಎಲ್ಲಿಯೂ ಅವಸರ ಮಾಡದೆ, ರೇಗದೆ ನಮ್ಮ ಪ್ರವಾಸವನ್ನು ಸ್ಮರಣೀಯವಾಗಿಸಲು ಸಹಕರಿಸಿದ್ದರು. ನಾಲ್ಕು ಕವಲುಗಳು ಸೊರಗುವ ಮೊದಲು ನೀವೂ ಒಮ್ಮೆ ಜೋಗದ ಗುಂಡಿ ನೋಡಿ ಬನ್ನಿ… ರೂಟ್ ಮ್ಯಾಪ್
· ಮಂಗಳೂರಿನಿಂದ 210, ಉಡುಪಿಯಿಂದ 163 ಕಿ.ಮೀ.
·ಹೆಬ್ರಿ, ಆಗುಂಬೆ, ತೀರ್ಥಹಳ್ಳಿ, ಸಾಗರ ಮಾರ್ಗವಾಗಿ ಜೋಗಕ್ಕೆ ಒಳ್ಳೆಯ ರಸ್ತೆಯಿದೆ.
· ಆಗುಂಬೆ ಘಾಟಿ ಸಿಗುವುದರಿಂದ ಮಿನಿ ಬಸ್, ಕಾರು ಸೂಕ್ತ.
· ಹತ್ತಿರದ ಪ್ರೇಕ್ಷಣೀಯ ಸ್ಥಳಗಳು: ಸಾಗರ, ಶಿರಸಿ, ಬನವಾಸಿ – ಅನಂತ ಹುದೆಂಗಜೆ