Advertisement

ವಿಕ್ರಂ ಲ್ಯಾಂಡರ್‌ ಸಂಪರ್ಕಕ್ಕೆ ಇಸ್ರೋ ಯತ್ನಿಸುತ್ತಿರೋದು ಹೇಗೆ?

09:34 AM Sep 12, 2019 | Team Udayavani |

ಬೆಂಗಳೂರು: ಚಂದ್ರಯಾನ 2ರ ವಿಕ್ರಂ ಲ್ಯಾಂಡರ್‌ ಚಂದ್ರನ ಮೇಲೆ ಇಳಿವಾಗ ಸಂಪರ್ಕ ತಪ್ಪಿದ್ದು ಗೊತ್ತೇ ಇದೆ. ವಿಕ್ರಂ ಲ್ಯಾಂಡರ್‌ ಇಳಿಯಲು 2.1 ಕಿ.ಮೀ. ದೂರವಿದ್ದಾಗ ಸಂಪರ್ಕ ಕಳೆದುಕೊಂಡು ಪತನವಾಗಿತ್ತು. ಆದರೆ ಅದು ಚೂರು, ಚೂರು ಆಗದಿದ್ದರಿಂದ ಇಸ್ರೋ ವಿಜ್ಞಾನಿಗಳಿಗೆ ಅದರೊಂದಿಗೆ ಮತ್ತೆ ಸಂಪರ್ಕ ಸಾಧಿಸುವ ಛಲ ಹುಟ್ಟಿತ್ತು. ವಿಕ್ರಂ ಲ್ಯಾಂಡರ್‌ನ ಆಯುಷ್ಯ ಕೇವಲ 14 ದಿನ ಆಗಿರುವುದರಿಂದ ವಿಜ್ಞಾನಿಗಳು ಸಂಪರ್ಕಕ್ಕೆ ಅವಿರತ ಯತ್ನಿಸುತ್ತಿದ್ದಾರೆ. ಈ ಯತ್ನಗಳು ಹೇಗೆ ಸಾಗಿವೆ? ಮಾಹಿತಿ ಇಲ್ಲಿದೆ.

Advertisement

ಸಂಪರ್ಕ ಸಾಧ್ಯವಿದೆಯೇ?
ಸೆ.21ರ ಮೊದಲು ವಿಕ್ರಂ ಲ್ಯಾಂಡರ್‌ನೊಂದಿಗೆ ಸಂಪರ್ಕ ಸಾಧಿಸಿದರೆ ಮಾತ್ರ ಫ‌ಲ. ಈಗ ವಿಕ್ರಂ ಲ್ಯಾಂಡರ್‌ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದರಿಂದ ಸಂಪರ್ಕ ಸಾಧಿಸುವ ಕೆಲಸ ಸವಾಲಿನದ್ದು. ಅದರ ಸಂಪರ್ಕ ವ್ಯವಸ್ಥೆಗೆ ಏನಾಗಿದೆ ಎಂದು ತಿಳಿಯುವುದರೊಂದಿಗೆ ಇದು ನಿರ್ದಿಷ್ಟ ದಿನದೊಳಗೆ ಆಗಲೇಬೇಕು.

ಯಾಕೆ ಈ ಸಮಯದ ಮಿತಿ?
ಚಂದ್ರನ ಒಂದು ಹಗಲು ಅಥವಾ ರಾತ್ರಿ ಎಂದರೆ 14 ದಿನಗಳಿಗೆ ಸಮ. ವಿಕ್ರಂ ವಿಚಾರದಲ್ಲಿ ಸೆ.21ರ ಬಳಿಕ ಚಂದ್ರನಲ್ಲಿ ಕತ್ತಲಾವರಿಸುವುದರಿಂದ ವಿಕ್ರಂ ಇಳಿದಿರುವ ಸ್ಥಳದಲ್ಲಿ -200 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ಉಷ್ಣತೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವಂತೆ ಲ್ಯಾಂಡರ್‌ ಅನ್ನು ನಿರ್ಮಾಣ ಮಾಡಿಲ್ಲ. ಅಲ್ಲದೆ ಅದರಲ್ಲಿರುವ ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ಹಾನಿಯಾಗುತ್ತದೆ. ಒಂದು ವೇಳೆ ಇನ್ನು ಮೂರ್‍ನಾಲ್ಕು ದಿನಗಳಲ್ಲಿ ಸಂಪರ್ಕ ಸಾಧ್ಯವಾಗದಿದ್ದರೆ, ಇಸ್ರೋ ಲ್ಯಾಂಡರ್‌ನ ಆಸೆಯನ್ನೇ ಕಳೆದುಕೊಳ್ಳಬೇಕಾಗುತ್ತದೆ.

ವಿಕ್ರಂನೊಂದಿಗೆ ಸಂಪರ್ಕ ಪ್ರಯತ್ನ ಹೇಗೆ?
ಎಲ್ಲೋ ಬಿದ್ದಿರುವ ವಸ್ತುಗೊಳೊಂದಿಗೆ ಎಲೆಕ್ಟ್ರೋ ಮ್ಯಾಗ್ನೆಟಿಕ್‌ ತರಂಗಗಳ ಮೂಲಕ ಸಂಪರ್ಕ ಸಾಧ್ಯವಿದೆ. ಬಾಹ್ಯಾಕಾಶ ಸಂವಹನದಲ್ಲಿ ಎಲೆಕ್ಟ್ರೋ ಮ್ಯಾಗ್ನೆಟಿಕ್‌ ತರಂಗಾಂತರಗಳಲ್ಲಿ ಎಸ್‌ ಬ್ಯಾಂಡ್‌ (ಮೈಕ್ರೋವೇವ್‌) ಮತ್ತು ಎಲ್‌ ಬ್ಯಾಂಡ್‌ (ರೇಡಿಯೋ ತರಂಗಗಳನ್ನು) ಬಳಸಲಾಗುತ್ತದೆ. ಇವುಗಳ ಮೂಲಕ ಮರು ಸಂಪರ್ಕಕ್ಕೆ ಯತ್ನಿಸಲಾಗಿದೆ. ಸದ್ಯ ಸಂಪರ್ಕವೇ ಕಡಿದುಕೊಂಡಿದೆ. ಲ್ಯಾಂಡರ್‌ನ ಸಂವಹನ ವ್ಯವಸ್ಥೆಯಲ್ಲಿ ದೋಷವುಂಟಾಗಿ ಈ ಸಂಪರ್ಕ ಕಡಿದಿರುವ ಸಾಧ್ಯತೆಯಿದೆ. ಜತೆಗೆ ಸಂಪರ್ಕ ಕಡಿತದ ಪರಿಣಾಮ ನಿಗದಿಗಿಂತಲೂ ವೇಗದಲ್ಲಿ ಚಂದ್ರನ ಮೇಲೆ ಲ್ಯಾಂಡರ್‌ ಇಳಿದಿರುವ ಸಾಧ್ಯತೆ ಇದೆ. ಆಗ ಸಾಧನಗಳಿಗೆ ಹಾನಿಯಾಗಿದ್ದಿರಬಹುದು ಎಂದು ಹೇಳಲಾಗಿದೆ.

ವಿಕ್ರಂ ಲ್ಯಾಂಡರ್‌ ಉಪಗ್ರಹ ಮತ್ತು ಭೂಮಿಗೆ ಸಂಪರ್ಕ ಕಲ್ಪಿಸಲು ಅನುಕೂಲವಾಗುವಂತೆ ರೂಪಿಸಲಾಗಿದೆ. ಈ ಎರಡೂ ಸಂಪರ್ಕಕ್ಕೆ ಈಗ ಯತ್ನಿಸಲಾಗುತ್ತಿದೆ. ಲ್ಯಾಂಡರ್‌ ಸ್ವೀಕರಿಸುವ ಸಾಮರ್ಥ್ಯವಿರುವ ನಿರ್ದಿಷ್ಟ ಫ್ರೀಕ್ವೆನ್ಸಿಯ ಸಂದೇಶಗಳನ್ನು ಕಳಿಸಲಾಗುತ್ತಿದೆ. ಇದರಿಂದ ಸಂಪರ್ಕ ಸಾಧ್ಯವಾಗಬಹುದು ಎಂಬ ಆಶಾವಾದವಿದೆ.

Advertisement

ಸಂಪರ್ಕಕ್ಕೆ ಯಾವುದು ಮುಖ್ಯ?
ಲ್ಯಾಂಡರ್‌ನಲ್ಲಿ ಸಂದೇಶಗಳನ್ನು ಸ್ವೀಕರಿಸುವ ಒಂದು ಆ್ಯಂಟೆನಾ ಇದೆ. ಈ ಆ್ಯಂಟೆನಾ ಸರಿಯಾಗಿರಬೇಕಾಗುತ್ತದೆ. ಇದಕ್ಕೆ ಒಂದು ವೇಳೆ ಹಾನಿಯಾಗಿದ್ದರೆ, ಮಣ್ಣಿನಲ್ಲಿ ಹೂತಿದ್ದರೆ ಸಂಪರ್ಕ ಕಷ್ಟ. ಆ್ಯಂಟೆನಾ ನೇರವಾಗಿ ಇರಬೇಕಾಗಿದ್ದರೆ ಸಂಪರ್ಕ ಸಾಧ್ಯವಾಗಬಹುದು. ಲ್ಯಾಂಡರ್‌ ಮಗುಚಿ ಬಿದ್ದಿರುವುದರಿಂದ, ಚೂರಾಗಿ ಹೋಗದಿರುವುದರಿಂದ ಅದಕ್ಕೆ ಏನೂ ಆಗಿಲ್ಲ ಎಂದು ಊಹಿಸಲಾಗಿದೆ. ಆದ್ದರಿಂದ ಉಪಗ್ರಹದ ಮೂಲಕ ಸಂಪರ್ಕಕ್ಕೆ ಗರಿಷ್ಠ ಪ್ರಯತ್ನ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next