ಬಾದ್‌ಷಾ ಅಕ್ಬರನ ಆಸ್ಥಾನದಲ್ಲಿ ಬೀರಬಲ್ಲನಿದ್ದನು. ಆತ ಯಾವಾಗಲೂ ಎಂತಹ ಸಮಸ್ಯೆ ಬಂದರೂ ಅದನ್ನು ಯಾವುದೇ ಆಯಾಸವಿಲ್ಲದೇ ಪರಿಹರಿಸುತ್ತಿದ್ದನು. ಒಂದು ಸಲ ಅಕ್ಬರನ ಪ್ರೀತಿ ಪಾತ್ರ ರಾಣಿಯು ತನ್ನ ಪರಮಾಪ್ತ ಸಖೀಯೊಡನೆ ಮಾತಾಡುತ್ತ ನಿಂತಿದ್ದಳು; ಅವಳು ಬಲು ಬುದ್ದಿವಂತೆಯೂ ಆಗಿದ್ದಳು. ಅವರು ಮಾತಾಡುವಾಗ ಅಕ್ಬರನು ಅಲ್ಲಿ ಹೋದನು. ಬಾದ್‌ಷಾನನ್ನು ಕಂಡು ರಾಣಿ “ಬನ್ನಿ ಮೂರ್ಖ ರಾಜರೇ…’ ಎಂದುಬಿಟ್ಟಳು.
ಬಾದ್‌ಷಾ ಅಕ್ಬರನಿಗೆ ಅಪಮಾನವಾದಂತಾಗಿ ಮಾತಾಡದೇ ತನ್ನ ಅಂತಃಪುರಕ್ಕೆ ಮರಳಿದ. ಅಲ್ಲಿ ಕುಳಿತು ಯೋಚಿಸತೊಡಗಿದ. “ಬೇಗಂ ತುಂಬಾ ಬುದ್ದಿಮತಿಯಾಗಿದ್ದಾಳೆ. ತನ್ನನ್ನು ಯಾವಾಗಲೂ ಆ ರೀತಿ ಕರೆದವಳಲ್ಲ, ಇಂದೇಕೆ ಹಾಗೆಂದಳು?’ ಎಂದು ಚಿಂತಿಸಿದ. ಆ ವಿಚಾರವಾಗಿ ಅವಳನ್ನು ಕೇಳುವ ಮನಸಾಗಲಿಲ್ಲ. ಅಷ್ಟರಲ್ಲಿಯೇ ಬೀರಬಲ್ಲ ಬಂದಾಗ ಅವನನ್ನು ಕುರಿತು “ಬನ್ನಿ ಮೂರ್ಖ ರಾಜರೇ…’ ಎಂದ. ಬೀರಬಲ್ಲ ನಗುತ್ತ “ಆಯಿತು ಮೂರ್ಖ ರಾಜರೇ’ ಎಂದು ಒಳಬಂದ. ಬಾದ್‌ಷಾ ಅಕ್ಬರನಿಗೆ ಸಿಟ್ಟು ಬಂದು “ನನ್ನನ್ನು ಮೂರ್ಖ ಎಂದೇಕೆ ಕರೆದೆ’ ಎಂದು ಪ್ರಶ್ನಿಸಿದ.
“ಬಾದ್‌ಷಾರವರೇ… ಮನುಷ್ಯನು ಐದು ರೀತಿಯಾಗಿ ಮೂರ್ಖನಾಗುತ್ತಾನೆ. ಇಬ್ಬರು ವ್ಯಕ್ತಿಗಳು ಪರಸ್ಪರ ಮಾತಾಡುತ್ತಿದ್ದಾಗ ಯಾವುದೇ ಪೂರ್ವಸೂಚನೆಯಿಲ್ಲದೇ ಮೂರನೇ ವ್ಯಕ್ತಿ ಬಂದರೆ ಆತ ಮೂರ್ಖನಾಗುತ್ತಾನೆ. ಇಬ್ಬರು ವ್ಯಕ್ತಿಗಳು ಮಾತು ಮುಗಿಸುವ ಮೊದಲೇ ಬಾಯಿ ಹಾಕಿದರೆ ಆತ ಮೂರ್ಖನಾಗುತ್ತಾನೆ. ಇನ್ನೊಬ್ಬರು ಮಾತಾಡುವ ಮಾತನ್ನು ಪೂರ್ತಿ ಕೇಳದೇ ಇರುವವ ಮಧ್ಯೆ ಮಾತಾಡಿ ಮೂರ್ಖನಾಗುತ್ತಾನೆ. ಅಪರಾಧ ಮತ್ತು ತಪ್ಪನ್ನು ಮಾಡದೇ ಇರುವವರನ್ನು ಯಾರು ನಿಂದಿಸುತ್ತಾರೋ ಅವರು ಮೂರ್ಖರಾಗುತ್ತಾರೆ. ಮೂರ್ಖರ ಹತ್ತಿರ ಸ್ನೇಹ ಮಾಡಿ ಮೂರ್ಖರಾಗುತ್ತಾರೆ’ ಎಂದನು.
ಬೀರಬಲ್ಲನ ಉತ್ತರದಿಂದ ಅಕ್ಬರನಿಗೆ ಸಂತಸವಾಯಿತು.
ಹನುಮಂತ ಮ. ದೇಶಕುಲಕರ್ಣಿ, ಧಾರವಾಡ