ಧನ್‌ಧುಕಾ, ಗುಜರಾತ್ : ಅಯೋಧ್ಯೆ ವಿವಾದಕ್ಕೂ 2019ರ ಲೋಕಸಭಾ ಚುನಾವಣೆಗೂ ಏನು ಸಂಬಂಧ ? ಈ ವಾದದ ಹಿಂದಿರುವ ತರ್ಕವಾದರೂ ಏನು ? ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಕ್‌ಫ್ ಮಂಡಳಿಯನ್ನು ಪ್ರತಿನಿಧಿಸಿದ ವಕೀಲ, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರನ್ನು ಪ್ರಶ್ನಿಸಿದ್ದಾರೆ.
ಸಿಬಲ್ ಅವರು ಸುಪ್ರೀಂ ಕೋರ್ಟಿನಲ್ಲಿ ನಿನ್ನೆ ಮಂಗಳವಾರ ವಾದ ಮಂಡಿಸುತ್ತಾ ಅಯೋಧ್ಯೆ ವಿವಾದವು 2019 ಲೋಕಸಭಾ ಚುನಾವಣೆಗಳ ಮೇಲೆ ಪ್ರಭಾವ ಬೀರುವುದರಿಂದ ಅಲ್ಲಿಯ ವರೆಗೂ ತೀರ್ಪನ್ನು ವಿಳಂಬಿಸಬೇಕು ಎಂದು ಆಗ್ರಹಿಸಿದ್ದರು.
ಅಯೋಧ್ಯೆ ವಿಷಯದಲ್ಲಿ ಕಪಿಲ್ ಸಿಬಲ್ ಅವರು ನ್ಯಾಯಾಲಯದಲ್ಲಿ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುತ್ತಿರುವುದಕ್ಕೆ ನಮ್ಮ ಆಕ್ಷೇಪವೇನೂ ಇಲ್ಲ; ಆದರೆ ಅವರು ಅನಗತ್ಯವಾಗಿ ರಾಮ ಮಂದಿರ ವಿಷಯವನ್ನು 2019ರ ಲೋಕಸಭಾ ಚುನಾವಣೆಯೊಂದಿಗೆ ಜೋಡಿಸುತ್ತಿದ್ದಾರೆ; ಕಾಂಗ್ರೆಸ್ ಪಕ್ಷಕ್ಕೆ ದೇಶದ ಬಗ್ಗೆ ಚಿಂತೆಯೇ ಇಲ್ಲದಿರುವುದು ಇದರಿಂದ ಸ್ಪಷ್ಟವಾಗುತ್ತಿದೆ’ ಎಂದು ಮೋದಿ ಹೇಳಿದರು.
ಅಯೋಧ್ಯೆ ವಿವಾದ ಕುರಿತ ವಿಚಾರಣೆಯನ್ನು 2019ರ ಲೋಕಸಭಾ ಚುನವಾಣೆಯ ತನಕವೂ ವಿಳಂಬಿಸಬೇಕೆಂಬ ಸಿಬಲ್ ಅವರ ನಿವೇದನೆಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ಈಗಿನ್ನು ಈ ಕೇಸಿನ ಅಂತಿಮ ವಿಚಾರಣೆಯನ್ನು 2018ರ ಫೆಬ್ರವರಿ 8ಕ್ಕೆ ನಿಗದಿಸಿದೆ.
ಆದರೆ ಈ ನಡುವೆ ಕಾಂಗ್ರೆಸ್ ಪಕ್ಷ, ಅಯೋಧ್ಯೆ ವಿವಾದ ಇತ್ಯರ್ಥವನ್ನು 2019 ಮಹಾ ಚುನಾವಣೆಯ ತನಕ ವಿಳಂಬಿಸಬೇಕೆಂಬ ಕಪಿಲ್ ಸಿಬಲ್ ಅಭಿಪ್ರಾಯದಿಂದ ದೂರಸರಿದು “ಇದು ಪಕ್ಷದ ನಿಲುವನ್ನು ಪ್ರತಿನಿಧಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.