Advertisement

ಭೂಮಿ ಮೇಲೆ ಚಿಟ್ಟೆ ಹುಟ್ಟಿದ್ದು ಹೇಗೆ?

11:44 AM May 11, 2017 | |

ಸಾವಿರಾರು ವರ್ಷಗಳ ಹಿಂದಿನ ಮಾತು. ಜಗತ್ತು ಸೃಷ್ಟಿಯಾಗಿ ಕೆಲ ಸಮಯ ಕಳೆದಿತ್ತು. ಕಾಡು, ಗುಡ್ಡ, ನದಿಗಳಿಂದ ಕೂಡಿದ ಸುಂದರ ಭೂಮಿಯಲ್ಲಿ ಅನೇಕ ಪ್ರಾಣಿಪಕ್ಷಿಗಳು ಜನರು ವಾಸವಾಗಿದ್ದರು. ಅವರೆಲ್ಲರ ನಾಯಕ ದೇವದಾಸ. ಕರುಣಾಳು ಮತ್ತು ಶಕ್ತಿವಂತನಾಗಿದ್ದ ಆತ ಮಾಂತ್ರಿಕ ವಿದ್ಯೆಯನ್ನು ಅಭ್ಯಾಸ ಮಾಡಿದ್ದ. ಕಠಿಣ ಸಾಧನೆಯ ಫ‌ಲವಾಗಿ ಅನೇಕ ವಿಶೇಷ ಶಕ್ತಿಗಳನ್ನು ಹೊಂದಿದ್ದ. ಆದರೆ, ಅವುಗಳನ್ನು ಆತನೆಂದೂ ಅನಗತ್ಯವಾಗಿ ಪ್ರಯೋಗಿಸುತ್ತಿರಲಿಲ್ಲ. ಜನರಿಗೆ ಒಳಿತಾಗುವ ಕಾರ್ಯಕ್ಕೆ ಮಾತ್ರ ಬಳಸುತ್ತಿದ್ದ. ಹಾಗಾಗಿಯೇ ಜನರಿಗೆ ಆತನ ಮೇಲೆ ಅಪಾರ ನಂಬಿಕೆ ಮತ್ತು ವಿಶ್ವಾಸ.

Advertisement

ಆಗಾಗ್ಗೆ ಕುದುರೆ ಏರಿ ಎಲ್ಲಾ ಕಡೆ ಸಂಚರಿಸುವುದು, ಸುತ್ತಲಿನ ಆಗುಹೋಗುಗಳನ್ನು ಗಮನಿಸುವುದು ಆತನ ರೂಢಿಯಾಗಿತ್ತು. ಹಾಗೊಮ್ಮೆ ತಿರುಗುವಾಗ ಆತನ ಕಿವಿಗೆ ಜೋರಾಗಿ ನಗು, ಕೇಕೆ ಗಲಾಟೆಯ ಸದ್ದು ಕಿವಿಗೆ ಬಿತ್ತು. ಕುತೂಹಲದಿಂದ ದನಿಯನ್ನು ಹಿಂಬಾಲಿಸಿದರೆ ಕಂಡದ್ದು ವಿಶಾಲವಾದ ಹುಲ್ಲುಗಾವಲು. ಅಲ್ಲಿ ಹಸಿರು ಹುಲ್ಲಿನ ನಡುವೆ ನೂರಾರು ಚೆಂದದ ಹೂವುಗಳು ಅರಳಿದ್ದವು. ಸೂರ್ಯನ ಎಳೆಬಿಸಿಲು ಬಂಗಾರದಂತೆ ಹೊಳೆಯುತ್ತಿತ್ತು. ಹತ್ತಿರದಲ್ಲಿದ್ದ ಕೊಳದ ಸ್ವತ್ಛ ನೀರು ಥಳಥಳಿಸುತ್ತಿತ್ತು. ಸುತ್ತಲಿದ್ದ ಕಾಡಿನ ಮರಗಳ ಪಚ್ಚಹಸಿರು ಎಲೆಗಳು ಕಣ್ಣಿಗೆ ತಂಪೆರೆಯುತ್ತಿದ್ದವು. ಇವೆಲ್ಲದರ ನಡುವೆ ನೂರಾರು ಮಕ್ಕಳು ಖುಷಿಯಿಂದ ಕುಣಿಯುತ್ತಾ ಓಡುತ್ತಾ ಆಟವಾಡುತ್ತಿದ್ದರು. ದೇವದಾಸನಿಗೆ ಕೇಳಿದ್ದು ಅವರ ಹಾರಾಟಧಿ ಸಂತೋಷದ ಕೂಗಾಟವೇ. ಮುದ್ದುಮಕ್ಕಳ ಆನಂದ ಕಂಡು ದೇವದಾಸನಿಗೆ ಮನಸ್ಸು ತುಂಬಿ ಬಂತು. ಹಾಗೇ ನೋಡುತ್ತಾ ನಿಂತ.

ಆಗ ಎಲ್ಲಿಂದಲೋ ಚೆಂಡೊಂದು ಆತನ ಬಳಿಗೆ ಬಂದು ಬಿತ್ತು. ಅದನ್ನು ತೆಗೆದುಕೊಳ್ಳಲು ಮಕ್ಕಳೆಲ್ಲಾ  ಒಟ್ಟಾಗಿ ಹತ್ತಿರ ಬಂದರು. ಚೆಂಡನ್ನು ಮಕ್ಕಳಿಗೆ ಕೊಟ್ಟು, “ಆಟ ನಿಮಗೆಲ್ಲಾ ಪ್ರೀತಿಯೇ? ದಿನವೂ ಆಡುತ್ತೀರಾ?’ ಎಂದು ಪ್ರಶ್ನಿಸಿದ ದೇವದಾಸ. ಅದಕ್ಕೆ ಮಕ್ಕಳೆಲ್ಲಾ  “ಹೌದು’ ಎಂದು ಉತ್ತರಿಸಿದರು. ಅಷ್ಟರಲ್ಲಿ ಅಲ್ಲಿದ್ದ ಪುಟ್ಟ ಹುಡುಗಿಯೊಬ್ಬಳು, “ಆಟ ಇಷ್ಟವೇನೋ ಹೌದು. ಆದರೆ, ದಿನವೂ ಆಡಲಾಗುವುದಿಲ್ಲ. ಈ ಎಲ್ಲಾ  ಮರದ ಎಲೆಗಳು ಉದುರುತ್ತವೆ, ಹೂವುಗಳು ಬಾಡುತ್ತವೆ, ಕೆಲವೊಮ್ಮೆ ಸೂರ್ಯ ಮೋಡಗಳ ನಡುವೆ ಅಡಗುತ್ತಾನೆ. ನೀರೂ ಚಳಿಗೆ ಹೆಪ್ಪುಗಟ್ಟುತ್ತದೆ. ಬಣ್ಣಗಳೇ ಇಲ್ಲದೆ ಈ ಹುಲ್ಲುಗಾವಲು ಬೋಳುಬೋಳಾಗಿರುತ್ತದೆ. ಆ ಬೇಸರದ ವಾತಾವರಣದಲ್ಲಿ ಆಟ ರುಚಿಸದು. ಆಗ ನಮಗೆ ಹೀಗೆ ಆಡಲು ಸಾಧ್ಯವಿಲ್ಲ’ ಎಂದಳು. ಕೂಡಲೇ ಎಲ್ಲಾ  ಮಕ್ಕಳು “ನಿಜ’ ಎಂದು ಒಪ್ಪಿಗೆ ಸೂಚಿಸಿದರು. ತಮ್ಮತಮ್ಮಲ್ಲೇ ಯಾರಾದರೂ ನಮಗೆ ದಿನವೂ ಆಡುವಂತೆ ಏನಾದರೂ ಮಾಡಿದ್ದರೆ ಒಳ್ಳೆಯದಿತ್ತು ಎಂದು ಮಾತನಾಡಿಕೊಂಡು ನಂತರ ಚೆಂಡನ್ನು ಮರಳಿ ಪಡೆದು ಆಟ ಮುಂದುವರಿಸಿದರು. ಮಕ್ಕಳ ಮಾತಿಗೆ ನಕ್ಕು ದೇವದಾಸನೂ ತನ್ನ ಪಯಣ ಮುಂದುವರರಿಸಿದ.

ಅದಾಗಿ ತಿಂಗಳು ಕಳೆದ ಬಳಿಕ ಮತ್ತೆ ಅದೇ ದಾರಿಯಲ್ಲಿ ಬರುವಾಗ ಆ ಚೆಂದದ ಹುಲ್ಲುಗಾವಲು, ಮುದ್ದುಮಕ್ಕಳ ನೆನಪಾಯಿತು. ಕಾಣುವ ಆಸೆಯಾಗಿ ಅಲ್ಲಿಗೆ ಬಂದರೆ ಕಂಡದ್ದೇನು?ಎಲೆ ಉದುರಿದ ಬೋಳು ಮರಗಳು, ಮೋಡ ಕವಿದ ಸೂರ್ಯ, ಮುದುಡಿದ ಹೂಗಳು, ರಾಡಿಯಾದ ಕೊಳದ ನೀರು. ಎಲ್ಲೆಲ್ಲೂ ಮಬ್ಬು ಮಸುಕು ವಾತಾವರಣ. ಮಕ್ಕಳೆಲ್ಲಾ  ಸುಮ್ಮನೇ ಸಪ್ಪೆಮುಖ ಹೊತ್ತು ಕುಳಿತಿದ್ದರು. ಒಬ್ಬರಲ್ಲೂ ಆಡುವ ಉತ್ಸಾಹವಿಲ್ಲ. ಅಜಗಜಾಂತರ ವ್ಯತ್ಯಾಸವಿದ್ದ ಆ ದಿನ ಮತ್ತು ಈ ದಿನವನ್ನು ಕಂಡು ದೇವದಾಸನಿಗೆ ದುಃಖವಾಯಿತು. ಇದಕ್ಕೆ ಏನಾದರೂ ಪರಿಹಾರ ಕಂಡುಹಿಡಿಯಲೇಬೇಕೆಂದು ನಿಶ್ಚಯಿಸಿದ.

ಕೆಲ ನಿಮಿಷ ಯೋಚಿಸಿ ತನ್ನ ಮಾಯಾಚೀಲವನ್ನು ಹೊರತೆಗೆದ.ಅಲ್ಲೇ ಗಿಡಧಿ ಮರಗಳ ನಡುವೆ ನಿದ್ರಿಸುತ್ತಿದ್ದ ಕೆಲವು ಕಪ್ಪು ಬಣ್ಣದ ಕೀಟಗಳನ್ನು ಚೀಲದೊಳಗೆ ಹಾಕಿದ.ನಂತರ ಉದುರಿದ ಮರದ ಕೆಲವು ಎಲೆಗಳನ್ನು ಜೋಡಿಸಿದ. ಅವುಗಳ ಮೇಲೆ ತನ್ನ ವಿಶೇಷ ಕುಂಚದಿಂದ ನಾನಾ ರೀತಿಯ ವಿನ್ಯಾಸಗಳನ್ನು ಬರೆದ. ಚಿತ್ರಗಳಿಗೆ ಗುಲಾಬಿಯ ಕೆಂಪು, ಹುಲ್ಲಿನ ಹಸಿರು, ಬಿಸಿಲಿನ ಹಳದಿ, ನೀರಿನ ನೀಲಿ, ಹಿಮದ ಬಿಳಿ, ಹಣ್ಣಿನ ಕಿತ್ತಳೆ ಹೀಗೆ ತನ್ನ ಕಣ್ಣಿಗೆ ಚೆಂದ ಕಂಡ ಎಲ್ಲಾ ಬಣ್ಣಗಳನ್ನು ತೆಗೆದು ಚಿತ್ರಿಸಿದ. ಬಣ್ಣ ತುಂಬಿದ ಎಲ್ಲಾ ಎಲೆಗಳನ್ನು ಮಾಯಾ ಚೀಲದೊಳಕ್ಕೆ ಹಾಕಿದ. ತನ್ನೆಲ್ಲಾ  ಶಕ್ತಿ ಉಪಯೋಗಿಸಿ ಚೀಲ ಚೆನ್ನಾಗಿ ಕುಲುಕಿದ.

Advertisement

ನಂತರ ಚೀಲವನ್ನು ಸುಮ್ಮನೇ ಕುಳಿತಿದ್ದ ಮಕ್ಕಳ ಹತ್ತಿರ ಒಯ್ದ. ಕುತೂಹಲದಿಂದ ಮಕ್ಕಳೆಲ್ಲಾ  ಚೀಲವನ್ನು ನೋಡಿದರು. ಅವರೆದುರಿನಲ್ಲಿ ಚೀಲವನ್ನು ನಿಧಾನವಾಗಿ ಬಿಚ್ಚಿದಾಗ ಒಳಗಿನಿಂದ ಪಟಪಟಗುಡುತ್ತಾ ನೂರಾರು ಬಣ್ಣಬಣ್ಣದ ಚಿಟ್ಟೆಗಳು ಆಕಾಶದ ತುಂಬೆಲ್ಲಾ  ಹಾರಾಡಿದೆವು. ಮಾಯಾಶಕ್ತಿ ಫ‌ಲವಾಗಿ ಬಣ್ಣ ಬಳಿದ ಎಲೆಗಳು ಕೀಟಗಳಿಗೆ ರೆಕ್ಕೆಗಳಾಗಿ ಅಂಟಿಕೊಂಡಿದ್ದವು. ಇದರಿಂದ ಕಪ್ಪುಕೀಟಗಳು ಅತ್ಯಾಕರ್ಷಕ ಚಿಟ್ಟೆಗಳಾಗಿದ್ದವು. ಮಕ್ಕಳಂತೂ ಮನ ಸೆಳೆಯುವ ಇವುಗಳನ್ನು ಕಂಡು ಕುಣಿದು ಕುಪ್ಪಳಿಸಿದರು, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ತಮಗಾಗಿ ಯೋಚಿಸಿ, ಕೀಟಕ್ಕೊಂದು ಹೊಸ ರೂಪ ಕೊಟ್ಟ ದೇವದಾಸನಿಗೆ ಮನಃಪೂರ್ವಕ ವಂದನೆ ಸಲ್ಲಿಸಿದರು. ಅಂದಿನಿಂದ ಯಾವುದೇ ಕಾಲದಲ್ಲೂ, ನಿಸರ್ಗದ ಬಣ್ಣಗಳನ್ನು ಶಾಶ್ವತವಾಗಿ ತಮ್ಮಲ್ಲಿ ಇಟ್ಟುಕೊಂಡ ಚಿಟ್ಟೆಗಳು ಸೌಂದರ್ಯ ಸಂಭ್ರಮಕ್ಕೆ ಸಂಕೇತವಾದವು.

– ಡಾ. ಕೆ.ಎಸ್‌. ಚೈತ್ರಾ

Advertisement

Udayavani is now on Telegram. Click here to join our channel and stay updated with the latest news.

Next