ಕ್ರಿಕೆಟ್ ಲೋಕದಲ್ಲಿ ಮತ್ತೆ ಐಪಿಎಲ್ ನ ಮಾತುಗಳು ಆರಂಭವಾಗಿದೆ. ವಿದೇಶಿ ಆಟಗಾರರು ಕೂಡಾ ಐಪಿಎಲ್ ನಲ್ಲಿ ಭಾಗಿಯಾಗಲು ತುದಿಗಾಲಲ್ಲಿ ನಿಲ್ಲುತ್ತಾರೆ. ಟಿ20 ಕ್ರಿಕೆಟ್ ಗೆ ಹೊಸ ಮೆರುಗು ನೀಡಿದ ಇಂಡಿಯನ್ ಪ್ರೀಮಿಯರ್ ಲೀಗ್ ಸದ್ಯ ಕೋವಿಡ್ ನಂತರದ ದಿನಗಳಲ್ಲಿ ಕ್ರಿಕೆಟ್ ಕ್ರೇಜ್ ಹೆಚ್ಚಿಸಲು ಬಹುಮುಖ್ಯ ಎನ್ನುವುದು ಸುಳ್ಳಲ್ಲ. ಹಾಗಾದರೆ ವಿಶ್ವದ ದುಬಾರಿ ಕ್ರಿಕೆಟ್ ಲೀಗ್ ನ ಹುಟ್ಟು ಹೇಗಾಯಿತು? ಲಲಿತ್ ಮೋದಿ ಯಾರು? ಮೊದಲ ಆವೃತ್ತಿ ಹೇಗಿತ್ತು ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಇಂಗ್ಲೆಂಡ್ ನಲ್ಲಿ ಟಿ20 ಕ್ರಿಕೆಟ್ ಎಂಬ ಚುಟುಕು ಮಾದರಿ ಆರಂಭವಾದಾಗ ಭಾರತ ಅದನ್ನು ಒಪ್ಪಿರಲಿಲ್ಲ. 2007ರ ಟಿ20 ವಿಶ್ವ ಕಪ್ ಗೆ ಮೊದಲು ಆಡಿದ್ದು ಕೇವಲ ಒಂದು ಟಿ20 ಪಂದ್ಯ. ಆದರೆ ಯಾವಾಗ ಭಾರತ ಚೊಚ್ಚಲ ಕಪ್ ಜಯಿಸಿತೋ ಆಗ ಭಾರತದಲ್ಲಿ ಚುಟುಕು ಮಾದರಿಯ ಕ್ರೇಜ್ ಆರಂಭವಾಗಿತ್ತು.
ಐಸಿಎಲ್ ಎಂಬ ಬಂಡಾಯ ಲೀಗ್
2007ರಲ್ಲಿ ಜೀ ಎಂಟರ್ಟೈನ್ಮೆಂಟ್ ಇಂಡಿಯನ್ ಕ್ರಿಕೆಟ್ ಲೀಗ್ (ಐಸಿಎಲ್) ನ್ನು ಆರಂಭಿಸಿತ್ತು. ಭಾರತ, ಪಾಕಿಸ್ತಾನ. ಬಾಂಗ್ಲಾದೇಶದ ತಂಡಗಳನ್ನು ಒಳಗೊಂಡ ಕೂಟ. ಮುಂಬೈ ಚಾಂಪ್ಸ್, ಚೆನ್ನೈ ಸೂಪರ್ ಸ್ಟಾರ್ಸ್, ಲಾಹೋರ್ ಬಾದ್ ಶಾಸ್ ಮುಂತಾದ ತಂಡಗಳಿದ್ದವು. ಹೊಸ ಮಾದರಿಯ ಆಟಕ್ಕೆ ಬಿಸಿಸಿಐ ಬೆಂಬಲ ನೀಡಲಿಲ್ಲ. ಬಿಸಿಸಿಐ ಅಡಿಬರುವ ಯಾವುದೇ ಆಟಗಾರರು ಆಡುವಂತಿಲ್ಲ ಎಂದು ಫರ್ಮಾನು ಹೊರಡಿಸಿತು. ಇದೇ ಕಾರಣಕ್ಕೆ ಬಿಸಿಸಿಐ ತನ್ನದೇ ಸ್ವಂತ ಒಂದು ಲೀಗ್ ನಡೆಸುವ ಯೋಜನೆ ರೂಪಿಸಿದ್ದು. ಅದರ ಹೊಣೆ ಹೊತ್ತಿದ್ದು ಲಲಿತ್ ಮೋದಿ!
ಯಾರು ಈ ಲಲಿತ್ ಮೋದಿ?
ಲಲಿತ್ ಕುಮಾರ್ ಮೋದಿ ದಿಲ್ಲಿ ಮೂಲದ ಉದ್ಯಮಿ. ಕ್ರಿಕೆಟ್ ಆಡಳಿತ ಮತ್ತು ರಾಜಕೀಯದ ಒಳಪಟ್ಟುಗಳನ್ನು ಅರಿತಿದ್ದ ನಿಷ್ಣಾತ. ರಾಜಸ್ಥಾನದಲ್ಲಿ ವಸುಂಧರಾ ರಾಜೇ ಮೊದಲ ಬಾರಿ ಸಿಎಂ ಆದಾಗ ಲಲಿತ್ ಮೋದಿ ಸೂಪರ್ ಸಿಎಂ ಎಂದು ಕರೆಯಲ್ಪಡುತ್ತಿದ್ದ. 2005ರ ನಂತರ ಬಿಸಿಸಿಐ ಉಪಾಧ್ಯಕ್ಷನಾಗಿದ್ದ ಮೋದಿಯ ಹೆಗಲಿಗೆ ಹೊಸ ಟಿ20 ಕೂಟವೊಂದನ್ನು ಆರಂಭಿಸುವ ಹೊಣೆಯನ್ನು ಹಾಕಾಲಾಯಿತು.
ಐಪಿಎಲ್ ಉಗಮ
ಇಂಗ್ಲೆಂಡ್ ನ ಪ್ರೀಮಿಯರ್ ಲೀಗ್ ಮತ್ತು ಅಮೇರಿಕಾದ ನ್ಯಾಷನಲ್ ಬಾಸ್ಕೆಟ್ ಬಾಲ್ ಲೀಗ್ (ಎನ್ ಬಿಎ) ನ ಸ್ಪೂರ್ತಿ ಪಡೆದು ಕ್ರಿಕೆಟ್ ನ ಹೆೊಸ ಕೂಟವೊಂದನ್ನು ಹುಟ್ಟು ಹಾಕಿದ್ದರು ಲಲಿತ್ ಮೋದಿ. 2007ರ ಸಪ್ಟೆಂಬರ್ 13ರಂದು ತನ್ನ ಹೊಸ ಕೂಟದ ಬಗ್ಗೆ ಅಧಿಕೃತವಾಗಿ ಘೋಷಿಸಿತು. 2008ರ ಎಪ್ರಿಲ್ ತಿಂಗಳಲ್ಲಿ ಕೂಟ ಆರಂಭವಾಗುವುದು, ಹೊಸ ದಿಲ್ಲಿಯಲ್ಲಿ ಅದ್ದೂರಿ ಉದ್ಘಾಟನಾ ಸಮಾರಂಭ ನಡೆಯುವುದು ಎಂದು ನಿಶ್ಚಯವಾಗಿತ್ತು.
ಎಂಟು ತಂಡಗಳ ಕೂಟದಲ್ಲಿ ಅಮೇರಿಕಾ ರೀತಿಯ ಹರಾಜು ಪ್ರಕ್ರಿಯೆ ನಡೆದಿತ್ತು. ಅದಕ್ಕೂ ಮೊದಲು ತಂಡಗಳ ಆಯ್ಕೆಯ ಪ್ರಕ್ರಿಯೆ ನಡೆದಿತ್ತು. ತಂಡಗಳ ಖರೀದಿಯ ಹರಾಜು 2008ರ ಜನವರಿಯಲ್ಲಿ ನಡೆಯಿತು. 400 ಮಿಲಿಯನ್ ಅಮೇರಿಕನ್ ಡಾಲರ್ ಬೇಸ್ ಪ್ರೈಸ್ ನಲ್ಲಿ ಆರಂಭವಾದ ಹರಾಜು 723.59 ಮಿಲಿಯನ್ ಡಾಲರ್ ಗೆ ತಲುಪಿತ್ತು.
ರಿಲಯನ್ಸ್ ಇಂಡಸ್ಟ್ರೀಸ್ ನ ಮುಖೇಶ್ ಅಂಬಾನಿ ದುಬಾರಿ ತಂಡವನ್ನು ಖರೀದಿಸಿದರು. 111.9 ಮಿಲಿಯನ್ ಡಾಲರ್ ಬೆಲೆಗೆ ಅಂಬಾನಿ ಮುಂಬೈ ತಂಡವನ್ನು ಖರೀದಿಸಿದರು. ಕನ್ನಡಿಗ ವಿಜಯ್ ಮಲ್ಯ 111.6 ಮಿಲಿಯನ್ ಡಾಲರ್ ಬೆಲೆಗೆ ಬೆಂಗಳೂರು ತಂಡವನ್ನು ಖರೀದಿ ಮಾಡಿದರು. ಮಾಧ್ಯಮ ಸಂಸ್ಥೆ ಡೆಕ್ಕನ್ ಕ್ರೋನಿಕಲ್ ಹೈದರಾಬಾದ್ ತಂಡ ಖರೀದಿಸಿದರೆ, ಚೆನ್ನೈ ತಂಡ ಇಂಡಿಯಾ ಸಿಮೆಂಟ್ಸ್ ಪಾಲಾಯಿತು.
ಹರಾಜು ಪ್ರಕ್ರಿಯೆಯಲ್ಲಿ ಬಾಲಿವುಡ್ ಕೂಡಾ ಭಾಗವಹಿಸಿತ್ತು. ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ ಸಹಭಾಗಿತ್ವದಲ್ಲಿ ಕೋಲ್ಕತ್ತಾ ತಂಡ ಖರೀದಿಸಿದರೆ, ಪ್ರೀತಿ ಜಿಂಟಾ ಪಂಜಾಬ್ ತಂಡವನ್ನು ಖರೀದಿಸಿದ್ದರು. ಜಿಎಂಆರ್ ಗ್ರೂಪ್ ದಿಲ್ಲಿ ತಂಡವನ್ನು ಖರೀದಿಸಿದರೆ, ಎಮರ್ಜಿಂಗ್ ಜೈಪುರ ತಂಡದ ಒಡೆತನ ಪಡೆಯಿತು.
ಈ ಹೊಸ ಮಾದರಿ ಕ್ರಿಕೆಟ್ ನ ಬಗ್ಗೆ ಇನ್ನೂ ಸರಿಯಾದ ಐಡಿಯಾ ಹೊಂದಿಲ್ಲದ ಜನರಿಗೆ ಐಪಿಎಲ್ ನ ಸರಿಯಾದ ಪರಿಚಯ ಮಾಡಿಸಿದವರು ಕೆಕೆಆರ್ ತಂಡದ ಬ್ರೆಂಡನ್ ಮೆಕಲಮ್. ಐಪಿಎಲ್ ಇತಿಹಾಸದ ಮೊದಲ ಪಂದ್ಯದಲ್ಲೇ ಬೆಂಗಳೂರು ತಂಡದ ವಿರುದ್ಧ 158 ರನ್ ಚಚ್ಚಿ ಬಿಸಾಕಿದ್ದರು. ಅಂದು ಆರಂಭವಾದ ಐಪಿಎಲ್ ಕ್ರೇಜ್ ಇಂದಿಗೂ ಮುಂದುವರಿದಿದೆ.
ಕೀರ್ತನ್ ಶೆಟ್ಟಿ ಬೋಳ