ಅಧಿಕ ರಕ್ತದೊತ್ತಡ ಅಥವಾ “ಬಿಪಿ’ ಭಾರತದ ನಗರ ಪ್ರದೇಶಗಳಲ್ಲಿ ಪ್ರತೀ ಮೂವರಲ್ಲಿ ಒಬ್ಬರನ್ನು ಮತ್ತು ಹಳ್ಳಿ ಪ್ರದೇಶಗಳಲ್ಲಿ ಪ್ರತೀ ನಾಲ್ವರಲ್ಲಿ ಒಬ್ಬರನ್ನು ಬಾಧಿಸುತ್ತಿದೆ. 140/90 ಎಂಎಂ/ಎಚ್‌ಜಿಗಿಂತ ಹೆಚ್ಚಿನದಾದ ಯಾವುದೇ ರಕ್ತದೊತ್ತಡ ಮೌಲ್ಯವು ಅಧಿಕ ರಕ್ತದೊತ್ತಡ ಎಂಬುದಾಗಿ ಪರಿಗಣಿಸಲ್ಪಡುತ್ತದೆ ಮತ್ತು ಇದಕ್ಕೆ ಯಾವುದಾದರೊಂದು ರೂಪದ ಚಿಕಿತ್ಸೆ ನೀಡುವುದು ಅಗತ್ಯ. ಆದರೆ ದುರದೃಷ್ಟವಶಾತ್ ಅಧಿಕ ರಕ್ತದೊತ್ತಡ ಹೊಂದಿರುವ ಪ್ರತೀ ಮೂವರಲ್ಲಿ ಇಬ್ಬರು ಮಾತ್ರ ತಮಗಿರುವ ಅನಾರೋಗ್ಯದ ಬಗ್ಗೆ ಅರಿವು ಹೊಂದಿರುತ್ತಾರೆ; ಪ್ರತೀ ಮೂವರಲ್ಲಿ ಒಬ್ಬರು ಮಾತ್ರ ಇದಕ್ಕೆ ಚಿಕಿತ್ಸೆಯನ್ನು ಪಡೆಯುತ್ತಾರೆ. ಒಟ್ಟಾರೆಯಾಗಿ ಶೇ.15ರಷ್ಟು ಮಂದಿಗೆ ಮಾತ್ರ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಿ ಕೊಳ್ಳುವುದು ಸಾಧ್ಯವಾಗುತ್ತದೆ. ಇದಕ್ಕೆ ಒಂದು ಕಾರಣ ಎಂದರೆ, ಅಧಿಕ ರಕ್ತದೊತ್ತಡವು ಆರಂಭಿಕ ಕಾಲದಲ್ಲಿ ಯಾವುದೇ ಲಕ್ಷಣ ಮತ್ತು ಚಿಹ್ನೆಗಳನ್ನು ತೋರ್ಪಡಿಸುವುದಿಲ್ಲ; ಸಂಕೀರ್ಣ ಸಮಸ್ಯೆಗಳು ಬಲಿತಾಗಲಷ್ಟೇ ಬೆಳಕಿಗೆ ಬರುತ್ತದೆ. ಚಿಕಿತ್ಸೆಗೆ ಒಳಗಾಗದ ಅಧಿಕ ರಕ್ತದೊತ್ತಡವು ಲಕ್ವಾ, ಹೃದ್ರೋಗ, ಮೂತ್ರಪಿಂಡ ಕಾಯಿಲೆಗಳು ಮತ್ತು ಡಿಮೆನ್ಶಿಯಾಗಳಿಗೆ ಪ್ರಧಾನ ಕಾರಣವಾಗಿರುತ್ತದೆ.
ಅಧಿಕ ರಕ್ತದೊತ್ತಡವು ದೀರ್ಘಕಾಲ ಯಾವುದೇ ಲಕ್ಷಣಗಳು ಅಥವಾ ಚಿಹ್ನೆಗಳು ಇಲ್ಲದೆಯೇ ಇರಬಹುದಾಗಿದ್ದು, ಚಿಕಿತ್ಸೆ ಸಿಗದೆ ಇದ್ದರೆ ಖಾಯಂ ಹಾನಿ ಅಥವಾ ವೈಕಲ್ಯಗಳಿಗೆ ದಾರಿ ಮಾಡಿಕೊಡುತ್ತದೆ ಎಂಬುದನ್ನು ಸದಾ ನೆನಪಿಡಬೇಕು. ಯಾವುದೇ ವ್ಯಕ್ತಿಯಲ್ಲಿ ಅಧಿಕ ರಕ್ತದೊತ್ತಡ ಇರುವುದು ಪತ್ತೆಯಾದ ಬಳಿಕ ಹೃದಯ, ನರವ್ಯೂಹ, ಕಣ್ಣು ಮತ್ತು ಮೂತ್ರಪಿಂಡಗಳಂತಹ, ಅಧಿಕ ರಕ್ತದೊತ್ತಡದ ದುಷ್ಪರಿಣಾಮವನ್ನು ಅನುಭವಿಸಬಲ್ಲ ಅಂಗಾಂಗಗಳನ್ನು ಗುರುತಿಸುವುದು ಅಗತ್ಯವಾಗಿರುತ್ತದೆ. ಇದಕ್ಕೆ ಜೀವಿತಾವಧಿಯುದ್ದಕ್ಕೂ ಚಿಕಿತ್ಸೆ ಅಗತ್ಯವಾಗಿದ್ದು, ಅದು ಜೀವನ ಶೈಲಿ ಬದಲಾವಣೆ, ಔಷಧಗಳು ಮತ್ತು ಸತತ ನಿಗಾವನ್ನು ಒಳಗೊಂಡಿರುತ್ತದೆ. ಅಧಿಕ ರಕ್ತದೊತ್ತಡ ಕಂಡುಬಂದ ಬಳಿಕ ಅದರ ಮೇಲೆ ಚೆನ್ನಾಗಿ ನಿಯಂತ್ರಣ ಇರಿಸಿಕೊಳ್ಳದೇ ಇದ್ದಲ್ಲಿ ದೀರ್ಘಕಾಲದ ಬಳಿಕ ಮೂತ್ರಪಿಂಡ ಕಾಯಿಲೆಗಳು ಉಂಟಾಗುತ್ತವೆ. ಅಧಿಕ ರಕ್ತದೊತ್ತಡ ಹೊಂದಿರುವವರಲ್ಲಿ ಶೇ.1.5ರಿಂದ ಶೇ.2ರಷ್ಟು ಮಂದಿ ಮೂತ್ರಪಿಂಡ ಕಾಯಿಲೆಗಳಿಗೆ ತುತ್ತಾಗುತ್ತಾರಾದರೂ ಮೂತ್ರಪಿಂಡ ಕಾಯಿಲೆಗಳ ನಿರ್ವಹಣೆ ಮತ್ತು ಅದಕ್ಕೆ ಅಗತ್ಯವಾಗುವ ನಿರಂತರ ಡಯಾಲಿಸಿಸ್ ಕಷ್ಟ ಮತ್ತು ವೆಚ್ಚದಾಯಕವಾದದು.
ಅಧಿಕ ರಕ್ತದೊತ್ತಡವನ್ನು ಶೀಘ್ರ ಪತ್ತೆ ಹಚ್ಚುವುದು ಮತ್ತು ಚಿಕಿತ್ಸೆಗೆ ಒಳಪಡಿಸುವುದರಿಂದ ದೇಹದ ಪ್ರಮುಖ ಅಂಗಾಂಗಗಳಿಗೆ ಉಂಟಾಗಬಲ್ಲ ಹಾನಿ ಮತ್ತು ಅವಧಿಪೂರ್ವ ಮರಣವನ್ನು ಸಾಕಷ್ಟು ಪ್ರಮಾಣದಲ್ಲಿ ತಡೆಗಟ್ಟಬಹುದು. ಜತೆಗೆ ಅಂಗವೈಫಲ್ಯ ಮತ್ತು ಡಯಾಲಿಸಿಸ್‌ನಂತಹ ವೆಚ್ಚದಾಯಕವಾದ ಚಿಕಿತ್ಸೆಯ ಆವಶ್ಯಕತೆಯನ್ನೂ ನಿವಾರಿಸಬಹುದು. ಅಧಿಕ ರಕ್ತದೊತ್ತಡವನ್ನು ಬೇಗನೆ ಪತ್ತೆಹಚ್ಚಿ ಸಮರ್ಪಕವಾದ ನಿಯಂತ್ರಣ ಕ್ರಮಗಳು ಹಾಗೂ ಚಿಕಿತ್ಸೆಗೆ ಒಳಪಡಿಸುವುದರಿಂದ ಡಯಾಲಿಸಿಸ್ ಚಿಕಿತ್ಸೆಯ ಅಗತ್ಯವನ್ನು ಮುಂದೂಡಬಹುದು ಅಥವಾ ಅದರ ಅಗತ್ಯ ಉಂಟಾಗುವುದನ್ನು ತಡೆಯಬಹುದು.
ಅಧಿಕ ರಕ್ತದೊತ್ತಡ ಉಂಟಾಗಲು ಕಾರಣವಾಗಬಲ್ಲ ಅಪಾಯಾಂಶಗಳೆಂದರೆ :
- ಹೆಚ್ಚು ವಯಸ್ಸು ಧೂಮಪಾನ
- ತಂಬಾಕು ಸೇವನೆ
- ಹೆಚ್ಚು ಉಪ್ಪು ಸೇವನೆ
- ದೈಹಿಕ ಚಟುವಟಿಕೆ ಇಲ್ಲದ, ಜಡ ಜೀವನ ಶೈಲಿ
- ಬೊಜ್ಜು
- ಮದ್ಯಪಾನ
Related Articles
ಅಧಿಕ ರಕ್ತದೊತ್ತಡವನ್ನು ತಡೆಗಟ್ಟಲು ಕೆಲವು ಮಾರ್ಗೋಪಾಯಗಳೆಂದರೆ:
- ಉಪ್ಪಿನ ಸೇವನೆಯನ್ನು ಕಡಿಮೆ ಮಾಡುವುದು
- ದೇಹತೂಕವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು
- ನಿಯಮಿತವಾಗಿ ವ್ಯಾಯಾಮ ಮಾಡುವುದು
- ಧೂಮಪಾನ ತ್ಯಜಿಸುವುದು
- ಮದ್ಯಪಾನವನ್ನು ವರ್ಜಿಸುವುದು
ಅಧಿಕ ರಕ್ತದೊತ್ತಡದಿಂದ ಉಂಟಾದ ಮೂತ್ರಪಿಂಡ ಕಾಯಿಲೆಯ ಪ್ರಾರಂಭಿಕ ಲಕ್ಷಣಗಳೆಂದರೆ:
- ಮೂತ್ರಪರೀಕ್ಷೆ ನಡೆಸಿದಾಗ ಮೂತ್ರದಲ್ಲಿ ಪ್ರೊಟೀನ್ ಅಂಶ ಕಂಡುಬಂದಿರುವುದು. ಮೂತ್ರವು ನೊರೆಸಹಿತವಾಗಿರಬಹುದು.
- ಪಾದಗಳು ಊದಿಕೊಳ್ಳುವುದು.
- ರಕ್ತ ಪರೀಕ್ಷೆ ನಡೆಸಿದಾಗ ಕ್ರಿಯಾಟಿನಿನ್ ಅಂಶದಲ್ಲಿ ಹೆಚ್ಚಳ ಕಂಡುಬರುವುದು. ಈ ಕ್ರಿಯಾಟಿನಿನ್ ಮಟ್ಟವನ್ನು ಉಪಯೋಗಿಸಿ ಅಂದಾಜು ಜಿಎಫ್ಆರ್ ಲೆಕ್ಕಹಾಕಿದರೆ ಮೂತ್ರಪಿಂಡದ ಕಾರ್ಯಸಾಮರ್ಥ್ಯವನ್ನು ಕಂಡುಕೊಳ್ಳುವುದು ಸಾಧ್ಯ
ಅಧಿಕ ರಕ್ತದೊತ್ತಡವುಳ್ಳ ರೋಗಿಗಳಲ್ಲಿ ಮೂತ್ರಪಿಂಡ ಕಾಯಿಲೆಗಳಿಗೆ ಚಿಕಿತ್ಸೆ :
- ರಕ್ತದೊತ್ತಡದ ಮೇಲೆ ಪರಿಣಾಮಕಾರಿಯಾದ ನಿಯಂತ್ರಣವನ್ನು ಇರಿಸಿಕೊಳ್ಳುವುದು. ರಕ್ತದೊತ್ತಡವು ಸದಾ 140/90 ಎಂಎಂ/ಎಚ್‌ಜಿಗಿಂತ ಕೆಳಗಿರಬೇಕು. ಇದರ ಜತೆಗೆ ಮೂತ್ರಪಿಂಡ ರಕ್ಷಕ ಔಷಧಗಳಾದ ಎಸಿಇ ಇನ್‌ಹಿಬಿಟರ್‌ಗಳು ಅಥವಾ ಎಆರ್‌ಬಿಗಳನ್ನು ವೈದ್ಯರ ಮೇಲ್ವಿಚಾರಣೆಯಡಿ ಉಪಯೋಗಿಸಬಹುದು.
- ದಿನಕ್ಕೆ 5 ಗ್ರಾಂಗಿಂತ ಕಡಿಮೆ ಉಪ್ಪು ಸೇವಿಸುವ ಕಡಿಮೆ ಉಪ್ಪಿನ ಪಥ್ಯಾಹಾರ
- ಪ್ರೊಟೀನ್ ಅಂಶ ಕಡಿಮೆಯಿರುವ ಪಥ್ಯಾಹಾರ ದೇಹತೂಕದ ಮೇಲೆ ನಿಯಂತ್ರಣ ಹೊಂದಿರುವುದು
ಡಾ| ರವೀಂದ್ರ ಪ್ರಭು
ಪ್ರೊಫೆಸರ್, ನೆಫ್ರಾಲಜಿ ವಿಭಾಗ,
ಕೆಎಂಸಿ ಆಸ್ಪತ್ರೆ, ಮಣಿಪಾಲ