Advertisement

20 ಸಾವಿರ ಕೋಟಿಯಲ್ಲಿ ಟೀ ಕುಡಿದ್ರಾ?

12:31 PM May 15, 2017 | Karthik A |

ಹೊಸದಿಲ್ಲಿ: ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿರಿಸಿದ್ದ 20,000 ಕೋಟಿ ರೂ. ಅನುದಾನ ಎಲ್ಲಿ ಹೋಯ್ತು? ಚಹಾ ಕೂಟಗಳಿಗೆ ಖರ್ಚು ಮಾಡಿದಿರಾ? ಅಥವಾ ಅಧಿಕಾರಿಗಳ ಪ್ರವಾಸಕ್ಕೆ ಬಳಕೆಯಾಯಿತಾ? ಸುಪ್ರೀಂಕೋರ್ಟ್‌ ಹಾಕಿದ ಈ ಪ್ರಶ್ನೆಗಳಿಗೆ ಕಂಟ್ರೋಲರ್‌ ಹಾಗೂ ಆಡಿಟರ್‌ ಜನರಲ್‌ (ಸಿಎಜಿ) ಬಳಿ ಉತ್ತರವೇ ಇರಲಿಲ್ಲ! ಇದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ ನ್ಯಾಯಾಲಯ, ಹಾಗಾದರೆ ಇಷ್ಟೊಂದು ದೊಡ್ಡ ಮೊತ್ತದ ಹಣ ಎಲ್ಲಿ ಹೋಯಿತು? ಎಂದು ಪ್ರಶ್ನಿಸಿತು. ರಿಯಲ್‌ ಎಸ್ಟೇಟ್‌ ಸಂಸ್ಥೆಗಳಿಂದ ಸಂಗ್ರಹಿಸಿರುವ ಸೆಸ್‌ ಹಣ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕೆ ಬಳಕೆಯಾಗಿಲ್ಲ ಎಂದು ಆರೋಪಿಸಿ ಎನ್‌ಜಿಒವೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಮದನ್‌ ಬಿ. ಲೋಕೂರ್‌ ಮತ್ತು ನ್ಯಾ| ದೀಪಕ್‌ ಗುಪ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಸುಪ್ರೀಂಕೋರ್ಟ್‌, ’20 ಸಾವಿರ ಕೋಟಿಯಷ್ಟು ದೊಡ್ಡ ಮಟ್ಟದ ಹಣ ಏನಾಗಿದೆ ಎಂಬುದು ಸ್ವತಃ ಸಿಎಜಿಗೇ ಗೊತ್ತಿಲ್ಲ! ಹಣ ಏನಾಗಿದೆ ಎಂದು ಮೊದಲು ಪತ್ತೆಹಚ್ಚಿ’ ಎಂದು ಸಿಎಜಿಗೆ ಸೂಚಿಸಿತು.

Advertisement

‘1996ರ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಸೆಸ್‌ ಕಾಯ್ದೆ’ ಅಡಿಯಲ್ಲಿ ಪ್ರತಿಯೊಂದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು 1996ರಿಂದ 2017ರ ಮೇ 31ರವರೆಗೆ ಎಷ್ಟು ಹಣ ಸಂಗ್ರಹಿಸಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹಣ ಸಂಗ್ರಹಿಸಿದ್ದು, ಅದನ್ನು ಈವರೆಗೂ ಮಂಡಳಿಗೆ ಸಲ್ಲಿಸದಿದ್ದರೆ, ಹಣವನ್ನು ಆರು ವಾರಗಳ ಒಳಗೆ ಮಂಡಳಿಗೆ ಸಲ್ಲಿಸಿ, ಸಿಎಜಿಗೆ ಮಾಹಿತಿ ನೀಡಬೇಕು’ ಎಂದು ಪೀಠ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next