Advertisement

ಗಂಧಕಯುಕ್ತ ಕರಿಬೇವು ಬೆಳೆಯುವುದು ಹೇಗೆ?

06:09 PM Dec 01, 2019 | Sriram |

ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ “ಘಮ್‌’ ಎನ್ನುವ ಸುವಾಸನೆಗೆ ಕಾರಣ. ಇದನ್ನು ಅಡುಗೆ ಮನೆಯಲ್ಲಿ ಮಾತ್ರವೇ ಅಲ್ಲದೆ, ಆಯುರ್ವೇದ ಔಷಧಗಳ ತಯಾರಿಕೆಗೂ ಬಳಸಲಾಗುತ್ತದೆ.

Advertisement

ಕರಿಬೇವು, ನಮ್ಮ ದೇಶದಲ್ಲಿ ಯಥೇತ್ಛವಾಗಿ ಬೆಳೆಯುವ ಸೊಪ್ಪು ಅಡುಗೆಗಳಲ್ಲಿಯೂ ಹೇರಳವಾಗಿ ಸುವಾಸನೆಗೆ ಹಾಗೂ ರುಚಿಗೆಂದು ಇದನ್ನು ಉಪಯೋಗಿಸುತ್ತಾರೆ. ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ “ಘಮ್‌’ ಎನ್ನುವ ಸುವಾಸನೆಗೆ ಕಾರಣ. ಇದಲ್ಲದೇ ಆಯುರ್ವೇದ ಔಷಧಿಗಳ ತಯಾರಿಕೆಗೂ ಇದನ್ನು ಬಳಸಲಾಗುತ್ತದೆ. ಕರಿಬೇವು, ಕಬ್ಬಿಣ ಮತ್ತು ಸುಣ್ಣದ ಅಂಶ ಹಾಗೂ “ಎ’ ಜೀವಸತ್ವವನ್ನು ತುಂಬಿಕೊಂಡಿರುತ್ತದೆ.

ಇದರ ಸಸಿಗಳನ್ನು ವಾರ್ಷಿಕವಾಗಿ ಯಾವುದೇ ಕಾಲದಲ್ಲಿಯೂ ನಾಟಿ ಮಾಡಬಹುದು. ಇವನ್ನು ಬೆಳೆಯಲು ಜೂನ್‌- ಜುಲೈ ಮಾಸ ಹೆಚ್ಚು ಸೂಕ್ತ. ಬಹುವಾರ್ಷಿಕವಾಗಿ ಬೆಳೆಯುವ ಈ ಬೆಳೆಗೆ, ಎಲ್ಲಾ ಬಗೆಯ ಮಣ್ಣೂ ಸೂಕ್ತ. ಆದರೆ, ಅಳಕು ಕಪ್ಪು ಮಣ್ಣನ್ನು ಹೊರತುಪಡಿಸಿ. ಕರಿಬೇವಿನ ವೈಶಿಷ್ಟ್ಯವೆಂದರೆ, ಎಲೆಯ ವಾಸನೆ, ಬಣ್ಣದ ಆಧಾರದಲ್ಲಿ ಇದರ ತಳಿಯನ್ನು ಗುರುತಿಸಬಹುದು.

ಇಷ್ಟೆಲ್ಲಾ ಪೂರಕ ಅಂಶಗಳನ್ನು ಒಳಗೊಂಡಿರುವ ಈ ಕರಿಬೇವು ಬೆಳೆಸುವ ವಿಧಾನಗಳು ಇಂತಿವೆ…
1.ಸಸಿಮಡಿಗೆ ಸಿದ್ಧತೆ
ಪ್ರತಿ ಹೆಕ್ಟೇರ್‌ ಕರಿಬೇವಿನ ಬೆಳೆಗೆ ಎರಡು ಸಾವಿರಕ್ಕೂ ಹೆಚ್ಚು ಸಸಿಗಳನ್ನು 1.50 ಹಾಗೂ 3 ಮೀ ಉದ್ದ ಮತ್ತು ಅಗಲದ ಅಂತರದಲ್ಲಿ ಹಾಕಬೇಕು. 25 ಟನ್‌ ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಮಾಡಬೇಕು. ಬಹುವಾರ್ಷಿಕ ಬೆಳೆಯಾದ್ದರಿಂದ ಪ್ರತಿ ಸಸಿಗೆ, ಮೊದಲ ವರ್ಷಕ್ಕೆ ರಾಸಾಯನಿಕ ಗೊಬ್ಬರಗಳಾದ ಸಾರಜನಕ-50 ಗ್ರಾಂ, ಎರಡನೆ ವರ್ಷಕ್ಕೆ 150 ಗ್ರಾಂ, ಮೂರನೆ ವರ್ಷಕ್ಕೆ 300 ಗ್ರಾಂ, ಹಾಗೂ ರಂಜಕವನ್ನು ಮೊದಲ ವರ್ಷಕ್ಕೆ -25 ಗ್ರಾಂ, ಎರಡನೇ ವರ್ಷಕ್ಕೆ 35-37 ಗ್ರಾಂ, ಮೂರನೇ ವರ್ಷಕ್ಕೆ 50 ಗ್ರಾಂ ಮತ್ತು ಪೊಟ್ಯಾಷ್‌ ಗೊಬ್ಬರವನ್ನು ಮೊದಲ ವರ್ಷಕ್ಕೆ -25 ಗ್ರಾಂ, ಎರಡನೆ ವರ್ಷಕ್ಕೆ 35-37 ಗ್ರಾಂ, ಮೂರನೆ ವರ್ಷಕ್ಕೆ 50 ಗ್ರಾಂನಷ್ಟು ನೀಡಬೇಕು.
2. ಸಸಿ ನಾಟಿ ಮಾಡುವುದು
ಮೊದಲು ಭೂಮಿಯನ್ನು ಹದಗೊಳಿಸಿ, 60 ಸೆಂ.ಮೀ ತಗ್ಗನ್ನು (ಗುಣಿ) ತೋಡಿ 3ಮೀ. ಅಂತರದ ಸಾಲುಗಳಲ್ಲಿ ಮಣ್ಣುಮಿಶ್ರಿತ ಕೊಟ್ಟಿಗೆ ಗೊಬ್ಬರವನ್ನು ಗುಣಿಯಲ್ಲಿ ಹಾಕಿ, 1.5 ಮೀ. ದೂರದಲ್ಲಿ ಸಸಿಗಳನ್ನು ನೆಡಬೇಕು. ನಂತರ ಸಸಿಗಳು ಚಿಗುರುವವರೆಗೂ ದಿನೋಪಚಾರ ಮಾಡಬೇಕು.
3. ಚಿಗುರು ಚಿವುಟುವುದು
ಸಸಿಗಳು 120 ಸೆಂ.ಮೀ. ಎತ್ತರ ಬೆಳೆದಾಗ, ಭೂಮಿಯಿಂದ 45ಸೆಂ.ಮೀ ಅಂತರದ ಮೇಲೆ ಚಿಗುರನ್ನು ಚಿವುಟಬೇಕು. ಇದರಿಂದ ಅದರ ಟೊಂಗೆಗಳು ಸದೃಢವಾಗಿ ಬೆಳೆಯಲು ಪೂರಕವಾಗುತ್ತದೆ. ಇದಾದ ಮೇಲೆ ಸಸಿಗಳು 150 ಸೆಂ.ಮೀ ಬೆಳವಣಿಗೆ ಕಂಡಾಗ ಅದರ ಟೊಂಗೆಗಳನ್ನು 100-120 ಸೆಂ.ಮೀ. ಎತ್ತರ ಬಿಟ್ಟು ಸವರಬೇಕು. ಇದು ಕವಲು ಕಂಟಿಯಂತೆ ಬೆಳೆಯಲು ಬಿಟ್ಟಾಗ, ನಂತರ 100-120 ಸೆಂ.ಮೀ. ಎತ್ತರದ ಬೆಳೆಯನ್ನೆ ಕಟಾವು ಮಾಡಬಹುದು.
4. ಗೊಬ್ಬರ ನೀಡುವುದು
ಮೊದಲಿಗೆ ಸಸಿಗಳನ್ನು ನಾಟಿ ಮಾಡಿದ ನಂತರ ಪ್ರತಿ ಸಸಿಗೆ ಶೇ.25ರಷ್ಟು ರಾಸಾಯನಿಕ ಗೊಬ್ಬರವನ್ನು ನೀಡಬೇಕು. ಅದನ್ನು ನಾಟಿ ಮಾಡಿದಾಗಿನಿಂದ ಮೂರು ತಿಂಗಳಿಗೊಮ್ಮೆ ನಾಲ್ಕು ಬಾರಿ ನೀಡಿದರೆ ಸೂಕ್ತ.
5. ಕಳೆ ಮತ್ತು ನೀರಿನ ನಿಯಂತ್ರಣ
ಬೆಳೆಯಲ್ಲಿನ ಕಳೆ ನಿಯಂತ್ರಣಕ್ಕೆ ಒಂದು ಲೀ. ನೀರಿನಲ್ಲಿ, 3 ಮಿ.ಲೀ. ಪ್ಯಾರಾಕ್ವಾಟ್‌ ಮಿಶ್ರಣ ಮಾಡಿ ಸಿಂಪಡಿಸಬೇಕು. ಇದನ್ನು ಸಿಂಪಡಣೆ ಮಾಡುವಾಗ ಸಸಿಗಳ ಬೊಡ್ಡೆಗೆ ತಗುಲದಂತೆ ಎಚ್ಚರ ವಹಿಸಬೇಕು. ಇದರಿಂದ ಕಳೆಯನ್ನು ಹತೋಟಿಗೆ ತರಬಹುದು. ಅಲ್ಲದೆ, ಸಸಿಗಳು ನೆಲೆಗೊಂಡಾಗ ಸಾಮಾನ್ಯವಾಗಿ ಒಣಹವೆಯನ್ನು ತಡೆಯುವ ಶಕ್ತಿಯಿರುವುದರಿಂದ ತಿಂಗಳಿಗೊಮ್ಮೆ ನೀರನ್ನು ಹಾಯಿಸಬೇಕು.
6. ರೋಗ ಮತ್ತು ಕೀಟ ನಿಯಂತ್ರಣ
ಬೆಳೆಗಳಿಗೆ ಕೊಯ್ಲಿನ ಸಮಯದಲ್ಲಿ ರೋಗಗಳು ಮತ್ತು ಹೇನು, ಎಲೆ ತಿನ್ನುವಂಥ ಕೀಟಗಳ ಕಾಟ ಬಾಧಿಸುವುದು ಸಾಮಾನ್ಯ. ಅದಕ್ಕೆ ಪ್ರತಿಯಾಗಿ, ಕಟಾವಿಗೆ ಇನ್ನು 15 ದಿನಗಳ ಮುಂಚೆ ಕೀಟಬಾಧೆಗೆ 2 ಮಿ.ಲೀ. ಮಾಲಾಥಿಯಾನ್‌ ಲಿಕ್ವಿಡ್‌, 1 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ರೋಗ ನಿಯಂತ್ರಣಕ್ಕೆ 1 ಗ್ರಾಂ. ಕಾರ್ಬೆಂಡಾಜಿಮ್‌ ಅಥವಾ 2 ಗ್ರಾಂ. ಮ್ಯಾಂಕೊಝೆಬ್‌ ಪುಡಿಯನ್ನು ಪ್ರತಿ ಲೀ. ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು.
7. ಕೊಯ್ಲು ವಿಧಾನ
ಸಸಿ ನಾಟಿಸಿ ಎರಡು ವರ್ಷಗಳ ನಂತರ ಕರಿಬೇವಿನ ಗಿಡಗಳು ಉತ್ತಮ ಇಳುವರಿಯನ್ನು ಕೊಡುತ್ತವೆ. ಪ್ರತಿ ಗಿಡದಿಂದ 2ರಿಂದ 3 ಕೆ.ಜಿ ಎಲೆಯನ್ನು ಪಡೆಯಬಹುದು. ಮತ್ತು ಇದನ್ನು ಒಂದು ವರ್ಷದಲ್ಲಿ ನಾಲು ಸಲ ಕಟಾವು ಮಾಡಬಹುದಾಗಿದೆ.

– ಶ್ರೀನಾಥ ಮರಕುಂಬಿ

Advertisement
Advertisement

Udayavani is now on Telegram. Click here to join our channel and stay updated with the latest news.

Next