Advertisement
ಕರಿಬೇವು, ನಮ್ಮ ದೇಶದಲ್ಲಿ ಯಥೇತ್ಛವಾಗಿ ಬೆಳೆಯುವ ಸೊಪ್ಪು ಅಡುಗೆಗಳಲ್ಲಿಯೂ ಹೇರಳವಾಗಿ ಸುವಾಸನೆಗೆ ಹಾಗೂ ರುಚಿಗೆಂದು ಇದನ್ನು ಉಪಯೋಗಿಸುತ್ತಾರೆ. ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ “ಘಮ…’ ಎನ್ನುವ ಸುವಾಸನೆಗೆ ಕಾರಣ. ಇದಲ್ಲದೇ ಆಯುರ್ವೇದ ಔಷಧಗಳ ತಯಾರಿಕೆಗೂ ಇದನ್ನು ಬಳಸಲಾಗುತ್ತದೆ. ಕರಿಬೇವು, ಕಬ್ಬಿಣ ಮತ್ತು ಸುಣ್ಣದ ಅಂಶ ಹಾಗೂ “ಎ’ ಜೀವಸತ್ವವನ್ನು ತುಂಬಿಕೊಂಡಿರುತ್ತದೆ.
ಪ್ರತಿ ಹೆಕ್ಟೇರ್ ಕರಿಬೇವಿನ ಬೆಳೆಗೆ ಎರಡು ಸಾವಿರಕ್ಕೂ ಹೆಚ್ಚು ಸಸಿಗಳನ್ನು 1.50 ಹಾಗೂ 3 ಮೀ ಉದ್ದ ಮತ್ತು ಅಗಲದ ಅಂತರದಲ್ಲಿ ಹಾಕಬೇಕು. 25 ಟನ್ ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಮಾಡಬೇಕು. ಬಹುವಾರ್ಷಿಕ ಬೆಳೆಯಾದ್ದರಿಂದ ಪ್ರತಿ ಸಸಿಗೆ, ಮೊದಲ ವರ್ಷಕ್ಕೆ ರಾಸಾಯನಿಕ ಗೊಬ್ಬರಗಳಾದ ಸಾರಜನಕ-50 ಗ್ರಾಂ, ಎರಡನೆ ವರ್ಷಕ್ಕೆ 150 ಗ್ರಾಂ, ಮೂರನೆ ವರ್ಷಕ್ಕೆ 300 ಗ್ರಾಂ ಹಾಗೂ ರಂಜಕವನ್ನು ಮೊದಲ ವರ್ಷಕ್ಕೆ -25 ಗ್ರಾಂ, ಎರಡನೇ ವರ್ಷಕ್ಕೆ 35-37 ಗ್ರಾಂ, ಮೂರನೇ ವರ್ಷಕ್ಕೆ 50 ಗ್ರಾಂ ಮತ್ತು ಪೊಟ್ಯಾಷ್ ಗೊಬ್ಬರವನ್ನು ಮೊದಲ ವರ್ಷಕ್ಕೆ -25 ಗ್ರಾಂ, ಎರಡನೆ ವರ್ಷಕ್ಕೆ 35-37 ಗ್ರಾಂ, ಮೂರನೆ ವರ್ಷಕ್ಕೆ 50 ಗ್ರಾಂನಷ್ಟು ನೀಡಬೇಕು.
Related Articles
ಮೊದಲು ಭೂಮಿಯನ್ನು ಹದಗೊಳಿಸಿ, 60 ಸೆಂ.ಮೀ ತಗ್ಗನ್ನು (ಗುಣಿ) ತೋಡಿ 3 ಮೀ. ಅಂತರದ ಸಾಲುಗಳಲ್ಲಿ ಮಣ್ಣು ಮಿಶ್ರಿತ ಕೊಟ್ಟಿಗೆ ಗೊಬ್ಬರವನ್ನು ಗುಣಿಯಲ್ಲಿ ಹಾಕಿ, 1.5 ಮೀ. ದೂರದಲ್ಲಿ ಸಸಿಗಳನ್ನು ನೆಡಬೇಕು. ನಂತರ ಸಸಿಗಳು ಚಿಗುರುವವರೆಗೂ ದಿನೋಪಚಾರ ಮಾಡಬೇಕು.
Advertisement
ಚಿಗುರು ಚಿವುಟುವುದುಸಸಿಗಳು 120 ಸೆಂ.ಮೀ. ಎತ್ತರ ಬೆಳೆದಾಗ, ಭೂಮಿಯಿಂದ 45ಸೆಂ.ಮೀ ಅಂತರದ ಮೇಲೆ ಚಿಗುರನ್ನು ಚಿವುಟಬೇಕು. ಇದರಿಂದ ಅದರ ಟೊಂಗೆಗಳು ಸದೃಢವಾಗಿ ಬೆಳೆಯಲು ಪೂರಕವಾಗುತ್ತದೆ. ಇದಾದ ಮೇಲೆ ಸಸಿಗಳು 150 ಸೆಂ.ಮೀ. ಬೆಳವಣಿಗೆ ಕಂಡಾಗ ಅದರ ಟೊಂಗೆಗಳನ್ನು 100-120 ಸೆಂ.ಮೀ. ಎತ್ತರ ಬಿಟ್ಟು ಸವರಬೇಕು. ಇದು ಕವಲು ಕಂಟಿಯಂತೆ ಬೆಳೆಯಲು ಬಿಟ್ಟಾಗ, ನಂತರ 100-120 ಸೆಂ.ಮೀ. ಎತ್ತರದ ಬೆಳೆಯನ್ನೆ ಕಟಾವು ಮಾಡಬಹುದು. ಗೊಬ್ಬರ ನೀಡುವುದು
ಮೊದಲಿಗೆ ಸಸಿಗಳನ್ನು ನಾಟಿ ಮಾಡಿದ ನಂತರ ಪ್ರತಿ ಸಸಿಗೆ ಶೇ.25ರಷ್ಟು ರಾಸಾಯನಿಕ ಗೊಬ್ಬರವನ್ನು ನೀಡಬೇಕು. ಅದನ್ನು ನಾಟಿ ಮಾಡಿದಾಗಿನಿಂದ ಮೂರು ತಿಂಗಳಿಗೊಮ್ಮೆ ನಾಲ್ಕು ಬಾರಿ ನೀಡಿದರೆ ಸೂಕ್ತ. ಕಳೆ ಮತ್ತು ನೀರಿನ ನಿಯಂತ್ರಣ
ಬೆಳೆಯಲ್ಲಿನ ಕಳೆ ನಿಯಂತ್ರಣಕ್ಕೆ ಒಂದು ಲೀ. ನೀರಿನಲ್ಲಿ, 3 ಮಿ.ಲೀ. ಪ್ಯಾರಾಕ್ವಾಟ್ ಮಿಶ್ರಣ ಮಾಡಿ ಸಿಂಪಡಿಸಬೇಕು. ಇದನ್ನು ಸಿಂಪಡಣೆ ಮಾಡುವಾಗ ಸಸಿಗಳ ಬೊಡ್ಡೆಗೆ ತಗುಲದಂತೆ ಎಚ್ಚರ ವಹಿಸಬೇಕು. ಇದರಿಂದ ಕಳೆಯನ್ನು ಹತೋಟಿಗೆ ತರಬಹುದು. ಅಲ್ಲದೆ, ಸಸಿಗಳು ನೆಲೆಗೊಂಡಾಗ ಸಾಮಾನ್ಯವಾಗಿ ಒಣಹವೆಯನ್ನು ತಡೆಯುವ ಶಕ್ತಿಯಿರುವುದರಿಂದ ತಿಂಗಳಿಗೊಮ್ಮೆ ನೀರನ್ನು ಹಾಯಿಸಬೇಕು. ರೋಗ ಮತ್ತು ಕೀಟ ನಿಯಂತ್ರಣ
ಬೆಳೆಗಳಿಗೆ ಕೊಯ್ಲಿನ ಸಮಯದಲ್ಲಿ ರೋಗಗಳು ಮತ್ತು ಹೇನು, ಎಲೆ ತಿನ್ನುವಂಥ ಕೀಟಗಳ ಕಾಟ ಬಾಧಿಸುವುದು ಸಾಮಾನ್ಯ. ಅದಕ್ಕೆ ಪ್ರತಿಯಾಗಿ, ಕಟಾವಿಗೆ ಇನ್ನು 15 ದಿನಗಳ ಮುಂಚೆ ಕೀಟಬಾಧೆಗೆ 2 ಮಿ.ಲೀ. ಮಾಲಾಥಿಯಾನ್ ಲಿಕ್ವಿಡ್, 1 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ರೋಗ ನಿಯಂತ್ರಣಕ್ಕೆ 1 ಗ್ರಾಂ. ಕಾರ್ಬೆಂಡಾಜಿಮ್ ಅಥವಾ 2 ಗ್ರಾಂ. ಮ್ಯಾಂಕೊಝೆಬ್ ಪುಡಿಯನ್ನು ಪ್ರತಿ ಲೀ. ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. - ಶ್ರೀನಾಥ ಮರಕುಂಬಿ