ಕೋಲ್ಕತಾ: “ನಾವು ಯಾರನ್ನೂ ಅವರ ನೋಟದಿಂದ ನಿರ್ಣಯಿಸುವುದಿಲ್ಲ, ನಾವು ಭಾರತದ ರಾಷ್ಟ್ರಪತಿ ಕಚೇರಿಯನ್ನು ಗೌರವಿಸುತ್ತೇವೆ. ಆದರೆ ನಮ್ಮ ರಾಷ್ಟ್ರಪತಿ ಹೇಗೆ ಕಾಣುತ್ತಾರೆ?” ಎಂದು ಟಿಎಂಸಿ ನಾಯಕ ಅಖಿಲ್ ಗಿರಿ ವಿವಾದಕ್ಕೆ ಸಿಲುಕಿದ್ದಾರೆ.
ಪಶ್ಚಿಮ ಬಂಗಾಳದ ಸಚಿವ ಮತ್ತು ಟಿಎಂಸಿ ನಾಯಕ ಅಖಿಲ್ ಗಿರಿ ನಂದಿಗ್ರಾಮ್‌ನಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡುವ ವೇಳೆ ಮಾತಿನ ಭರದಲ್ಲಿ ಈ ಹೇಳಿಕೆ ನೀಡಿದ್ದು, ಹೇಳಿಕೆ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಹೇಳಿಕೆ ವಿಡಿಯೋ ವೈರಲ್ ಆಗಿದ್ದು ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಗಿರಿ ಹೇಳಿಕೆಗಾಗಿ ಕ್ಷಮೆಯಾಚಿಸಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ ಕೂಡ ಖಂಡನೆ ವ್ಯಕ್ತಪಡಿಸಿದೆ. ಇದು ಬೇಜವಾಬ್ದಾರಿ ಕಾಮೆಂಟ್ ಮತ್ತು ಟಿಎಂಸಿ ಅವರ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ. ನಾವು ಭಾರತದ ರಾಷ್ಟ್ರಪತಿಗಳ ಬಗ್ಗೆ ಅತ್ಯಂತ ಹೆಮ್ಮೆಪಡುತ್ತೇವೆ ಮತ್ತು ಅವರ ಕಚೇರಿಯನ್ನು ಉನ್ನತ ಗೌರವದಿಂದ ನೋಡಿಕೊಳ್ಳುತ್ತೇವೆ” ಎಂದು ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಸಂಸದೆ ಸೌಮಿತ್ರಾ ಅವರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (NCW) ಪತ್ರ ಬರೆದು, ಅಧ್ಯಕ್ಷೆ ದ್ರೌಪದಿ ಮುರ್ಮು ಅವರ ಕುರಿತು ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಅಖಿಲ್ ಗಿರಿಯನ್ನು ತಕ್ಷಣ ಬಂಧಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಶಾಸಕ ಸ್ಥಾನದಿಂದ ವಜಾಗೊಳಿಸಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದ್ದಾರೆ.