“ಟಗರು’ ಚಿತ್ರದಲ್ಲಿ ಡಾಲಿ, ಚಿಟ್ಟೆ, ಕಾನ್‍ಸ್ಟಬಲ್ ಸರೋಜ ಪಾತ್ರಗಳು ಜನಪ್ರಿಯವಾದಂತೆ, ಜನಪ್ರಿಯವಾದ ಮತ್ತೊಂದು ಪಾತ್ರ ಎಂದರೆ ಅದು ಸುಧೀರ್ ಅಲಿಯಾಸ್ ಕಾಕ್ರೋಚ್‍ದು. ಕಾಕ್ರೋಚ್ ಪಾತ್ರ ಅದೆಷ್ಟು ಜನಪ್ರಿಯವಾಗಿದೆಯೆಂದರೆ, ಸುಧಿ ಮುಖ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದುಬಿಟ್ಟಿದೆಯಂತೆ. ಆದರೆ, ಅದಕ್ಕೂ ಮುನ್ನ ಸುಧಿ, ಕಾಕ್ರೋಚ್ ಆದ ವಿಷಯವೇ ಸ್ವಾರಸ್ಯಕರ.
ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸುಧಿಗೆ ಒಂದು ದೊಡ್ಡ ಬ್ರೇಕ್ ಬೇಕಿತ್ತಂತೆ. ಒಮ್ಮೆ ನಿರ್ದೇಶಕ ಎ.ಪಿ. ಅರ್ಜುನ್ ಅವರ ಆಫೀಸಿಗೆ ಒಬ್ಬರ ಪರಿಚಯವಾಯಿತಂತೆ. ಅವರು ಸುಧಿಗೆ ಹೆಸರು ಬದಲಿಸಿಕೊಳ್ಳುವುದಕ್ಕೆ ಸಲಹೆ ನೀಡಿದ್ದಾರೆ. ಹೆಸರು ಬದಲಾಯಿಸಿಕೊಂಡರೆ, ಲಕ್ಕು ಕುದುರುವುದಾಗಿಯೂ ಅವರು ಹೇಳಿದರಂತೆ.
ಸರಿ, ಒಂದೊಳ್ಳೆಯ ಹೆಸರಿಗಾಗಿ ಸುಧಿ ತಮ್ಮ ಗುರು ಸೂರಿ ಬಳಿ ಹೋಗಿದ್ದಾರೆ. ಹೆಸರು ಬದಲಾಯಿಸಿಕೊಂಡರೆ ಯೋಗ ಬರುತ್ತದಂತೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಒಂದು ಒಳ್ಳೆಯ ಹೆಸರನ್ನಿಡುವುದಕ್ಕೂ ಕೇಳಿಕೊಂಡಿದ್ದಾರೆ. ಇದನ್ನು ಕೇಳಿ ಸೂರಿ ನಕ್ಕರಂತೆ. ಆ ನಂತರ ಒಂದು ದಿನ “ಟಗರು’ ಚಿತ್ರ ಮಾಡುವ, ಸುಧಿಯನ್ನು ಕರೆದು ಒಂದು ಪಾತ್ರ ಕೊಟ್ಟರಂತೆ.
ಆಗ ಹೆಸರು ಬದಲಾವಣೆಯ ಬಗ್ಗೆ ಸುಧಿ ಜ್ಞಾಪಿಸಿದಾಗ, ಯಾವ ಹೆಸರಿಟ್ಟರೂ ಓಕೆನಾ ಎಂದು ಕೇಳಿದರಂತೆ ಸೂರಿ. ಯಾವ ಹೆಸರಾದರೂ ಓಕೆ ಅಂತ ಸುಧಿ ಹೇಳಿದ್ದಾರೆ. ಆಗ ಸೂರಿ, ಸುಧಿಗೆ ಪಾತ್ರ ಮಾಡಿಸುವುದರ ಜೊತೆಗೆ ಕಾಕ್ರೋಚ್ ಎಂದು ನಾಮಕರಣ ಮಾಡಿದ್ದಾರೆ. ಜನ ನಿನ್ನ ಹೆಸರು ಮರೆಯೋದಿಲ್ಲ ಎಂದು ಹೇಳಿದ್ದಾರೆ. ಈಗ ನೋಡಿದರೆ, ಅವರ ಮಾತು ನಿಜವಾಗಿಬಿಟ್ಟಿದೆ.
ಸುಧಿಗೆ ನಿಜಕ್ಕೂ ಯೋಗ ಬಂದಿದೆ. ಯಾರು ನೋಡಿದರೂ, ಕಾಕ್ರೋಚ್ ಅಂತಲೇ ಕರೆಯುತ್ತಾರಂತೆ. ಹೆಸರು ಬದಲಾಯಿಸಿಕೊಂಡರೆ ಯೋಗ ಬರತ್ತೆ ಅಂತ ಹೇಳಿದ್ದರು. ಈಗ ನಿಜಕ್ಕೂ ಯೋಗ ಬಂದಿದೆ. ಎಲ್ಲರೂ ಕಾಕ್ರೋಚ್ ಅಂತಲೇ ಕರೆಯುತ್ತಾರೆ. ರಸ್ತೇಲಿ ಓಡಾಡೋದೇ ಕಷ್ಟವಾಗಿದೆ’ ಎನ್ನುತ್ತಾರೆ ಸುಧಿ.