Advertisement
ಮನೆ ತುಂಬ ಬರೀ ಪುಸ್ತಕಗಳು. ರಾತ್ರಿಯ ಚಂದಿರನೂ, ಬೆಳಗಿನ ಸೂರ್ಯನೂ ಕೂಡ ಅದರಲ್ಲಿ ಸೇರಿಕೊಂಡಿದ್ದರು. ಹಲವಾರು ರಾಕೆಟ್‌ಗಳು, ವಿಮಾನಗಳು ಜೊತೆಯಾಗಿದ್ದವು. ಈ ರಾಕೆಟ್ ಸೂರ್ಯ, ಚಂದ್ರರಿಗೆ ಡಿಕ್ಕಿ ಹೊಡೆಯಲ್ವಾ? ಎಂಬೊಂದು ಅನುಮಾನ ಶುರುವಾಗಿದ್ದೇ ಆವಾಗ. ಪುಸ್ತಕಗಳಲ್ಲಿ ನೋಡಿದ್ದನ್ನು ಆಕಾಶದಲ್ಲಿ ಹುಡುಕಾಡುತ್ತಿದ್ದೆ. ವಿಮಾನವನ್ನು ಇಲ್ಲಿ ನೋಡಿ, ಅದರ ಸದ್ದನ್ನು ಗಗನದಲ್ಲಿ ಕೇಳುತ್ತಿದ್ದೆ. ಆಗ ಏನೋ ಒಂಥರ ಅಚ್ಚರಿ.
Related Articles
Advertisement
ಏಳನೇ ತರಗತಿಗೆ ಬಂದಾಗ ಬ್ರೈನ್‌ಕೆಫೆ ಅನ್ನೋ ವಿಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಅದಕ್ಕಾಗಿ ಒಂದು ಮಾಡೆಲ್ ಕೂಡ ಮಾಡಿದೆ. ಅದೊಂದು ವಿಶಿಷ್ಟ ಅನುಭವವಾಯಿತಾದರೂ, ಗೆಲುವೇನೂ ದಕ್ಕಲಿಲ್ಲ. ನಾನು ಇಷ್ಟಕ್ಕೇ ಸುಮ್ಮನಾಗಲಿಲ್ಲ. ಅಪ್ಪ-ಅಮ್ಮನನ್ನು ಪೀಡಿಸಿ ವಿಜ್ಞಾನ ಸ್ಪರ್ಧೆಗಳು, ಪ್ರಬಂಧ ಸ್ಪರ್ಧೆಗಳು, ಮಾಡೆಲ್ ಮಾಡೋದು ಹೀಗೆಲ್ಲ ಮಾಡುತ್ತಲೇ ಇದ್ದೆ. ಯಶಸ್ಸುಗಳೇನೂ ಒಲಿಯದಿದ್ದರೂ, ನನ್ನಲ್ಲಿದ್ದ ಕುತೂಹಲವನ್ನು ಇವು ತಣಿಸುತ್ತಾಹೋದವು.
ಹುಚ್ಚು ಹುಚ್ಚಾಗಿ ಆಡ್ತಾನೆಬದುಕಿನ ಟರ್ನಿಂಗ್ ಪಾಯಿಂಟ್ ಅಂದರೆ, 8ನೇ ತರಗತಿಯಲ್ಲಿ ಇದ್ದಾಗ ನನ್ನ ಈ ಹುಚ್ಚನ್ನು ನೋಡಿ ಅಪ್ಪ-ಅಮ್ಮ ಲ್ಯಾಪ್‌ಟಾಪ್ ಕೊಡಿಸಿದ್ದು. ಅದಕ್ಕೆ ಇಂಟರ್‌ನೆಟ್ ಕೂಡ ಹಾಕಿಸಿಕೊಟ್ಟರು. ಜಗದ ಬೆಳಕು ನನ್ನೊಳಗೆ ಇಣುಕಲು ಶುರುವಾಗಿದ್ದು ಆವಾಗಲೇ. ನನ್ನ ಅಪ್ಪ-ಅಮ್ಮಗೆ ಬಹುಶಃ ಕೌತುಕದ ಹಿಂದೆ ಬೀಳುವ, ಅದಕ್ಕೆ ಉತ್ತರ ಕಂಡುಕೊಳ್ಳುವ ನನ್ನ ಉತ್ಸಾಹ ಹುಚ್ಚು ಅಂತ ಅನ್ನಿಸಿರಬೇಕು ಅಥವಾ ನನ್ನ ಪ್ರಶ್ನೆಗಳಿಂದ ಅವರು ಬಿಡುಗಡೆ ಹೊಂದಲೋ ಏನೋ ಲ್ಯಾಪ್‌ಟಾಪ್ ಕೊಡಿಸಿಬಿಟ್ಟರೋ ಏನೋ… ಬಾಲ್ಯದಿಂದ ನೋಡಿದ್ದ ವಿಜ್ಞಾನದ ಚಿತ್ರಗಳು, ಅಡಗಿದ್ದ ಕೌತುಕ ಎಲ್ಲದಕ್ಕೂ ಆಗ ಉತ್ತರ ಕಂಡುಹಿಡಿಯಲು ಶುರುಮಾಡಿದೆ. ಎಂ.ಐಟಿ. ಓಸಿ ಡಬ್ಲೂ, ಕೋಡ್ಸರ, ವಿಕಿಪಿಡಿಯಾ, ಗೂಗಲ್ಸ್ ಸ್ಕಾಲರ್ ಹೀಗೆ ಅನೇಕ ಸೈನ್ಸ್ ಸೈಟ್‌ಗಳು ನನ್ನ ಎಷ್ಟೋ ಅನುಮಾನಗಳಿಗೆ ಎದುರಿಗೆ ನಿಂತು ಉತ್ತರ ಕೊಟ್ಟವು. ಅವು ಬಹಳ ಅಪ್ಡೆಟ್ ಸೈಟ್ಸ್‌ಗಳು. ನಮ್ಮ ಶಾಲೆಯ ಪಠ್ಯಕ್ಕಿಂತ ಮೂರು ನಾಲ್ಕು ವರ್ಷ ಮುಂದಿರುತ್ತವೆ. ರಾಜ್ಯವಿಜ್ಞಾನ ಪರಿಷತ್ ಏರ್ಪಡಿಸುವ ರಾಜ್ಯ ಮಟ್ಟದ ಸೈನ್ಸ್ ಫೆಸ್ಟಿವಲ್‌ನಲ್ಲಿ ಮಾನವನ ನಡಿಗೆಯಿಂದ ವಿದ್ಯುತ್ ಹೇಗೆ ಉತ್ಪಾದಿಸಬಹುದು ಅನ್ನೋ ಸಂಶೋಧನಾ ಪ್ರಬಂಧ ಮಂಡಿಸಿದೆ.
11ನೇ ಕ್ಲಾಸಿಗೆ ಬಂದೆ. ಸ್ವಲ್ಪ ಖುಷಿಯಾಯ್ತು. ಏಕೆಂದರೆ, ಆಗ ಪಿಸಿಎಂಬಿ ತಗೊಂಡಿದ್ದೆ. ಇಲ್ಲಾದರೂ ಟೀಚರ್‌ಗೆ ಏನಾದರೂ ಪ್ರಶ್ನೆ ಕೇಳಬಹುದಲ್ಲ ಅಂತ ಖುಷಿ ಪಟ್ಟೆ, ಆದರೆ, ನಿರಾಸೆ ಆಗಲು ಬಹಳ ಸಮಯ ಹಿಡಿಯಲಿಲ್ಲ. ಅವರು, ಪುಸ್ತಕದಲ್ಲಿ ಏನಿದೆಯೋ ಅದನ್ನು ಓದೊRಳಪ್ಪ. ಉಳಿದದ್ದು ಆಮೇಲೆ ನೋಡೋಣ ಅನ್ನೋ ರೀತಿ ಇದ್ದರು. ಈ ಮಧ್ಯೆ ನಾನು ಐರೀಷ್ ನ್ಯಾಷನಲ್ ಫೇರ್‌ನಲ್ಲಿ ಭಾಗವಹಿಸಿ ಮಕ್ಕಳ ಅಪೌಷ್ಠಿಕತೆಯ ಬಗ್ಗೆ ಪ್ರಬಂಧ ಮಂಡಿಸಿದ್ದೆ. ಅಮೇರಿಕಾದಲ್ಲಿ ನಡೆಯುವ ಇಂಟರ್‌ನ್ಯಾಷನಲ್ ಸೈನ್ಸ್ ಎಂಜಿನಿಯರಿಂಗ್ ಫೇರ್‌ನಲ್ಲಿ ಎರಡನೇ ಪ್ರಶಸ್ತಿ ಬಂತು. ಅಲ್ಲಿನ ಎಂಐಟಿಯ ಲಿಂಕನ್ ಲ್ಯಾಬರೋಟರಿ, ಒಂದು ನಕ್ಷತ್ರಕ್ಕೆ ನನ್ನ ಹೆಸರು ಇಟ್ಟಿತು. ನಮ್ಮ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ “ರಾಷ್ಟ್ರೀಯ ಬಾಲ ಪುರಸ್ಕಾರ’ ಕೊಟ್ಟಿತು. ಪ್ರಧಾನಿ ಮೋದಿ ಅವರು ಕೈ ಕುಲಕಿ,ಬೆನ್ನು ತಟ್ಟಿ ಭೇಷ್ ಅಂದರು. ಜಗತ್ತಿನೆಲ್ಲೆಡೆ ಇದು ಪ್ರಚಾರ ಆಯ್ತು. ಐಸ್ಯಾಕ್ ನನ್ನ ಜ್ಞಾನವನ್ನು ಗುರುತಿಸಿತು. ಆಗ, “ಇವನು ಏನೇನೋ ಪ್ರಶ್ನೆ ಕೇಳ್ತಾನೆ ಹುಚ್ಚನ ಥರ’ ಅಂತ ಅಂದು ಕೊಂಡಿದ್ದವರಿಗೆಲ್ಲಾ, ನಾನು ಅಂದು ಕೇಳಿದ ಪ್ರಶ್ನೆಗಳೆಲ್ಲ ಮತ್ತೆ ನೆನಪಾಗಿ, ಮನದ ತಕ್ಕಡಿಯಲ್ಲಿ ಅವುಗಳನ್ನು ತೂಕ ಮಾಡತೊಡಗಿದರು. ಅಲ್ಲಿಯ ತನಕ ಅವರ ತಲೆಯಲ್ಲಿದ್ದ “ಹುಚ್ಚ’ ಅನ್ನೋದು ಬಿಟ್ಟು ಹೋಯಿತು. ಮಾಸ್ಟರ್ ಆಫ್ ಬಂಕರ್
ಈ ಮಧ್ಯೆ ಇನ್ನೊಂದು ಘಟನೆ ನಡೆಯಿತು. ನಾನು ಸಂಶೋಧನೆಯ ಹಿಂದೆ ಬಿದ್ದಿದ್ದರಿಂದ ಕಾಲೇಜಿಗೆ ಸರಿಯಾಗಿ ಹೋಗಲು ಆಗುತ್ತಿರಲಿಲ್ಲ. ಸಮಾಜದ ಕಣ್ಣಿಗೆ ನಾನೊಬ್ಬ “ಮಾಸ್ಟರ್ ಆಫ್ ಬಂಕರ್’ ಥರ ಕಾಣಿ¤ದ್ದೆ. ಆದರೆ, ನನ್ನೊಳಗಿನ ಜ್ಞಾನದ ಹಸಿವಿಗೆ ಸಂಶೋಧನೆಯೇ ಪುಷ್ಕಳ ಭೋಜನ ಅಂತ ಅವರಿಗೆ ತಿಳಿದಿರಲಿಲ್ಲ. ಹಾಗಂತ ನಾನೇನೂ ಓದಿನಲ್ಲಿ ಹಿಂದುಳಿದಿರಲ್ಲ. ಹೀಗಾಗಿ, ಕಾಲೇಜಲ್ಲಿ ಪರೀಕ್ಷೆಗೆ ಕೂಡಿಸಲು ಆಗಲ್ಲ ಅಂದಾಗ ನನಗೆ ಎರಡು ದಾರಿಗಳು ಕಣ್ಣ ಮುಂದಿದ್ದವು. ಒಂದು, ಸಂಶೋಧನೆ, ಇನ್ನೊಂದು ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸುವುದು. ಒಂದು ಆಯ್ಕೆ ಮಾಡಿಕೊಂಡರೆ ಇನ್ನೊಂದು ಬಿಡಬೇಕು. ಬಹಳ ಯೋಚನೆ ಮಾಡಿ, ನನಗೆ ಕಾಲೇಜು ಇಲ್ಲದೇ ಇದ್ದರೂ ಪರವಾಗಿಲ್ಲ, ಸಂಶೋಧನೆ ಮುಂದುವರಿಸುತ್ತೇನೆ ಅನ್ನೋ ತೀರ್ಮಾನಕ್ಕೆ ಬಂದೆ. ಎಲ್ಲರಿಗೂ ಶಾಕ್ ಆಯಿತು. ಇವನಿಗೇನು ಹುಚ್ಚು? ವರ್ಷ ಪೂರ್ತಿ ಓದಿ, ಪರೀಕ್ಷೆ ಸಮಯದಲ್ಲಿ ಈ ತೀರ್ಮಾನ ತಗೊಂಡನಲ್ಲ ಅಂತ. ಕೊನೆಗೆ, ಹೇಗೋ ಈ ವರ್ಷ ಪರೀಕ್ಷೆ ಬರೆಯುವ ಸುಯೋಗ ದೊರೆತಿದೆ. ಈಗ ಸಿದ್ಧತೆಯಲ್ಲಿ ಇದ್ದೇನೆ. ಇದು ಮುಗಿದ ನಂತರ ಅಮೆರಿಕದ ಎಂ.ಐ.ಟಿಯಲ್ಲಿ ಮಕ್ಕಳ ಅಪೌಷ್ಠಿಕತೆ ತಡೆಯಲು ತಂತ್ರಜ್ಞಾನವನ್ನು ಹೇಗೆಲ್ಲಾ ಬಳಸಿಕೊಳ್ಳುವುದು ಅನ್ನೋ ವಿಷಯದ ಮೇಲೆ ಉನ್ನತ ಅಧ್ಯಯನ ನಡೆಸಲು ಹೋಗುತ್ತಿದ್ದೇನೆ. ನಮ್ಮ ಅಪ್ಪ-ಅಮ್ಮನಿಗೆ, ನನ್ನ ಮಗ ಲ್ಯಾಪ್‌ಟಾಪ್, ಇಂಟರ್‌ನೆಟ್ ಅನ್ನು, ಬದುಕಲ್ಲಿ ಮೇಲೇರೋದಕ್ಕೆ ಬಳಸಿಕೊಂಡಿದ್ದಾನೆ ಅನ್ನೋ ಹೆಮ್ಮೆ ಇದೆ. ಅವರ ನಿರೀಕ್ಷೆಯನ್ನು ಹುಸಿ ಮಾಡದ ಖುಷಿ ನನಗಿದೆ. ಕೆ.ಜಿ