Advertisement
ಅಧಿಕಾರಿಗಳ ಮನೆ ಮೇಲೆ ಹಠಾತ್ ದಾಳಿ ನಡೆಸಿದ ಕರ್ನಾಟಕ ಎಸಿಬಿ ವಶಪಡಿಸಿಕೊಂಡ ಅಪಾರ ಚಿನ್ನಾಭರಣ, ಕೋಟಿ ಗಟ್ಟಲೆ ಹಣ, ನೋಟಿನ ಅಟ್ಟಿಗಳನ್ನು ಟಿ.ವಿ. ಚಾನೆಲ್‌ಗಳಲ್ಲಿ ಕಂಡಾಗ ಎಂಥವರಿಗೂ ಮೂಡಬಹುದಾದ ಅನುಮಾನವೆಂದರೆ ಇದು ಒಂದೆರಡು ದಿನ ಅಲ್ಲ, ಒಂದೆರಡು ವರ್ಷ ಅಲ್ಲ, ಹಲವಾರು ವರ್ಷಗಳಿಂದ ಸಂಗ್ರಹಿಸುತ್ತಾ ಬಂದಿರುವ ಸಂಪತ್ತು ಎಂಬುದು. ಪ್ರಸಕ್ತ ದಾಳಿಗೊಳಗಾದ ಅಧಿಕಾರಿಗಳೆಂದರೆ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್. ಸ್ವಾಮಿ ಹಾಗೂ ಬಿಡಿಎ ಇಂಜಿನಿಯರ್ ಎನ್.ಜಿ. ಗೌಡಯ್ಯ. ಮಾಧ್ಯಮಗಳು ಈ ಅಪಾರ ಅನಧಿಕೃತ ಎಂದು ಹೇಳಲಾದ ನಗದುಗಳನ್ನು ಟೆಲಿಕಾಸ್ಟ್ ಮಾಡುತ್ತಾ ವೈಭವೀಕರಿಸಿದವಷ್ಟೆ. ಈ ಕುಳಗಳ ಅಕ್ರಮ ಗಳಿಕೆಗೆ ಪೂರಕವಾದ ಅಥವಾ ಸಹಕಾರಿಯಾದ ಸನ್ನಿವೇಶಗಳ ಹಾಗೂ ಅದರ ಹಿಂದಿರುವ ಶಕ್ತಿಗಳ ಕುರಿತ ಮಾಹಿತಿ ಬಿತ್ತರಿಸಲು ಮಾತ್ರ ಆಸಕ್ತಿ ತೋರಿಸಲಿಲ್ಲ. ಅದು ಎಸಿಬಿ ತನಿಖೆಗೆ ಬಿಟ್ಟ ವಿಚಾರವೆಂಬ ಹಾಗೆ ನಿಶ್ಚಿಂತೆಯಿಂದ ಇರುವುದನ್ನು ಕಾಣುತ್ತಿದ್ದೇವೆ.
Related Articles
Advertisement
ಸರಕಾರಿ ಅಧಿಕಾರಿ, ನೌಕರರೆಲ್ಲರಿಗೂ ಲಂಚ ಸ್ವೀಕರಿಸುವ ಅವಕಾಶವಿರುವುದಿಲ್ಲ. ಕೆಲವೇ ಇಲಾಖೆಯ ಹಾಗೂ ಆ ಇಲಾಖೆಗಳ ಕೆಲವೇ ಹುದ್ದೆಗಳಿಗೆ ಮಾತ್ರ ತಮ್ಮ ಸ್ಥಾನಕ್ಕೆ ದತ್ತವಾದ ಅಧಿಕಾರದ ದುರ್ಬಳಕೆ ಮಾಡಿಕೊಂಡು ಅನಧಿಕೃತ ಸಂಪಾದನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅರ್ಥಾತ್ ವಿಶಾಲ ನೌಕರಶಾಹಿಯೊಳಗೆ ಕೇವಲ ಶೇಕಡಾ 20 ರಿಂದ 25ರಷ್ಟು ಅಧಿಕಾರಿ ನೌಕರರುಗಳಿಗೆ ಈ ಅವಕಾಶವಿರಬಹುದು.
ಬಹುಪಾಲು ಸರಕಾರಿ ನೌಕರರು ತಮ್ಮ ವೇತನದ ಮಿತಿಯ ಲ್ಲಿಯೇ ಜೀವನ ಸಾಗಿಸುತ್ತಿರುವಾಗ, ಅಲ್ಲಿಯೋ ಇಲ್ಲಿಯೋ ಕೆಲವೇ ಮಂದಿ ಸರಕಾರಿ ಅಧಿಕಾರಿಗಳ ಜೀವನ ಶೈಲಿಯಲ್ಲಿ ಆಗುತ್ತಿ ರುವ ಬದಲಾವಣೆಗಳು ಜಾಗೃತಿ ದಳದ ಗಮನಕ್ಕೆ ತಕ್ಷಣ ಬಂದೇ ಬರುತ್ತದೆ. ಅದರಲ್ಲಿಯೂ ಜಾಗೃತಿ ದಳದ ಮುಖ್ಯ ಕಾರ್ಯವೇ ಬೇಹುಗಾರಿಕೆ. ದೂರಿಗಾಗಿ ಕಾಯುವುದಲ್ಲ. ಅಂಥ ಕಮಟು ವಾಸನೆ ಜಾಗೃತ ದಳದ ಮೂಗಿಗೆ ಬಡಿಯುತ್ತಲೇ ಕಾರ್ಯೋನ್ಮುಖ ವಾಗಬೇಕಾದುದು ಕರ್ತವ್ಯ. ಈಗ ಸ್ವಾಮಿಯನ್ನು ಹಾಗೂ ಗೌಡಯ್ಯನನ್ನು ಗುರಿ ಇಟ್ಟುಕೊಂಡು ದಾಳಿ ನಡೆಸಿದ್ದಾರೆ ಎಂದರೆ ಇಲ್ಲಿಯ ತನಕ ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಗಿಲ್ಲ. ಹಾಗೆ ತಡೆಹಿಡಿಯುವಲ್ಲಿ ಯಾರೋ ಪ್ರಭಾವ ಬೀರಿದ್ದಾರೆ ಮತ್ತು ಈಗ ಆ ಪ್ರಭಾವಿಗಳು ಸೂಚನೆ ನೀಡಿರಬಹುದೆಂತಲೂ ಹಾಗೂ ಈ ನಡುವೆ ಎಸಿಬಿಯ ಕೃಪೆಯೂ ಇತ್ತು ಎಂದು ಹಲವು ರೀತಿಯಲ್ಲಿ ಅನುಮಾನಿಸಲು ಅವಕಾಶ ಉಂಟು.
ಈಗ ಹೇಳಿ, ಸ್ವಯಂ ಪ್ರೇರಣೆಯಿಂದ, ನಿಷ್ಪಕ್ಷಪಾತವಾಗಿ, ಸಕಾಲದಲ್ಲಿ ಕ್ರಮಕೈಗೊಳ್ಳದಿರುವ ಭ್ರಷ್ಟಾಚಾರ ನಿಗ್ರಹ ದಳಗಳು ನಮಗೆ ಬೇಕೇ? ಇಂಥ ದುರ್ಬಲ ವ್ಯವಸ್ಥೆ ಇರುವುದರಿಂದಲೇ, ಸರಕಾರಿ ಬಕಾಸುರರು ಬೆಳೆಯಲು ಸಾಧ್ಯವಾಯಿತಲ್ಲವೇ. ಮಾಧ್ಯಮದವರು ಇಂಥ ಗಹನವಾದ ಮಾಹಿತಿಗಳನ್ನು ಸಂಗ್ರಹಿಸಿ ಸಾರ್ವಜನಿಕರಿಗೆ ತಲುಪಿಸುವ ವ್ಯವಸ್ಥೆ ಮಾಡುವುದು ಆಡಳಿತವನ್ನು ನಿಯಂತ್ರಿಸಲು ಸಹಕಾರಿ. ದುರದೃಷ್ಟವೇನೆಂದರೆ ನಮ್ಮ ಮಾಧ್ಯಮಗಳು ವಿಷಯ ಮೂಲಕ್ಕೆ ಇಳಿಯುವುದೇ ಇಲ್ಲ. ದಾಳಿ ಮಾಡಿದ ದಿನ ಇಡೀ ಆ ಚಿನ್ನದ ಗಂಟು, ನೋಟಿನ ಕಂತೆಯನ್ನು ತೋರಿಸಿದರು.
ಹೇಳಿದ್ದನ್ನೇ ನೂರಾರು ಸಲ ಹೇಳಿದರು. ಮರುದಿನ ಅವರಿಗೆ ಬೇರೆ ವಿಷಯ ಇದೆ. ಬೆಂಗಳೂರಿನಲ್ಲಿ ನೆರೆ, ಮಂಗಳೂರಿನಲ್ಲಿ ಮೀನುಗಾರರಿಗೆ ಎಚ್ಚರಿಕೆ, ಸಮ್ಮಿಶ್ರ ಸರಕಾರದಲ್ಲಿ ಬಿರುಕು ಇತ್ಯಾದಿ. ಸುದ್ದಿಯ ಬೆನ್ನುಹತ್ತಿ ಹೋಗುವ ಪರಿಪಾಠವಿಲ್ಲ. ಉದಾ: ಸರಕಾರಿ ನೌಕರರ ವರ್ಗಾವಣೆಯನ್ನು ಪ್ರಕಟಪಡಿಸುವುದು ಮಾಧ್ಯಮಗಳಿಗೆ ಅದೊಂದು ಸುದ್ದಿ ಎಂಬ ಹಾಗೆ. ಆದರೆ ಗೊತ್ತುಗುರಿಯಿಲ್ಲದೆ, ವರ್ಷದ ಎಲ್ಲ ಕಾಲದಲ್ಲಿಯೂ ನಡೆಯುವ ಸರಕಾರಿ ಅಧಿಕಾರಿಗಳ ವರ್ಗಾವಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆಯೋ ಎನ್ನುವ ವಿಷಯದ ಮೇಲೆ ಕ್ಷ-ಕಿರಣ ಬೀರುವ ಪ್ರಯತ್ನವನ್ನು ಮಾಧ್ಯಮದವರು ಮಾಡುತ್ತಿಲ್ಲ. ಭಾರತದಲ್ಲಿ ಮಾಧ್ಯಮಗಳು ನಿಜ ನಾಲ್ಕನೇ ಅಂಗ ಎಂಬ ಹಾಗೆ ಶ್ರುತಪಡಿಸಲು ಇನ್ನೂ ಶಕ್ತವಾಗಿಲ್ಲ ಎಂದರೆ ಅವಸರದ ಹೇಳಿಕೆಯಾಗಲಾರದು. ಆತಂಕಗಳಿರಬಹುದು. ಆದರೆ ಜವಾಬ್ದಾರಿಯನ್ನು ಮರೆಯುವಂತಿಲ್ಲ.
ಬೇಳೂರು ರಾಘವ ಶೆಟ್ಟಿ