Advertisement

ಎಎನ್‌ಎಫ್‌ಗೆ ಸಿಗದ ನಕ್ಸಲರು ಸಿಎಂಗೆ ಸಿಕ್ಕಿದ್ದು ಹೇಗೆ?: ಶಾಸಕ ಸುನೀಲ್‌ ಕುಮಾರ್‌

04:22 AM Jan 09, 2025 | Team Udayavani |

ಬೆಂಗಳೂರು: ಕಾನೂನು ಪ್ರಕ್ರಿಯೆಗೂ ಮೊದಲೇ ನಕ್ಸಲರಿಗೆ ಪ್ಯಾಕೇಜ್‌ ಘೋಷಿಸಿ ಶರಣಾಗತಿಗೆ ಆಹ್ವಾನಿಸಿರುವ ಸರಕಾರದ ಕ್ರಮವನ್ನು ಬಿಜೆಪಿ ಶಾಸಕ ವಿ.ಸುನೀಲ್‌ ಕುಮಾರ್‌ ಖಂಡಿಸಿದ್ದು, ನಕ್ಸಲ್‌ ನಿಗ್ರಹ ಪಡೆಗೆ ಸಿಗದ ನಕ್ಸಲರು ಸಿಎಂ ಕಚೇರಿ ಸಂಪರ್ಕಕ್ಕೆ ಸಿಕ್ಕಿರುವುದು ಹಲವು ಅನುಮಾನಗಳಿಗೆ ಆಸ್ಪದ ಕೊಟ್ಟಿದೆ ಎಂದಿದ್ದಾರೆ.

Advertisement

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿ, ನಕ್ಸಲರು ಕಾನೂನಿನ ಮುಂದೆ ಶರಣಾದರೆ ನಮ್ಮ ತಕರಾರಿಲ್ಲ. ಅದನ್ನು ಬಿಟ್ಟು ಶಾಂತಿಗಾಗಿ ನಾಗರಿಕರು ವೇದಿಕೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗುವುದು ಅನುಮಾನ ಮೂಡಿಸಿದೆ. ಕಾನೂನು ಪ್ರಕ್ರಿಯೆಗೂ ಮೊದಲೇ ಎ, ಬಿ, ಸಿ ಎಂದು ಸರಕಾರ ಹೇಗೆ ಪ್ಯಾಕೇಜ್‌ ಘೋಷಿಸಿತು?

ಅದರಲ್ಲೂ ವಿಕ್ರಂ ಗೌಡ ಹತ್ಯೆಯ ಅನಂತರ ಸಿಎಂ ಕೊಟ್ಟ ಕರೆಯ ಮೇರೆಗೆ ಒಂದೇ ವಾರದಲ್ಲಿ ಶರಣಾಗತಿ ಪ್ರಕ್ರಿಯೆಗಳು ನಡೆದಿರುವುದು ಅಚ್ಚರಿ ಹುಟ್ಟಿಸಿದೆ ಎಂದರು. ಇದರಿಂದ ಹಗಲು-ರಾತ್ರಿ ಕೂಂಬಿಂಗ್‌ ಕಾರ್ಯಾಚರಣೆ ಮಾಡುತ್ತ ನಾಗರಿಕರನ್ನು ರಕ್ಷಿಸುತ್ತಿರುವ ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್)ಯ ನೈತಿಕ ಸ್ಥೈರ್ಯ ಕಳೆದುಕೊಳ್ಳುವುದಿಲ್ಲವೇ? ಎಂದು ಪ್ರಶ್ನಿಸಿದರು.

ನಕ್ಸಲೀಯರಿಗೆ ರಾಜಾತಿಥ್ಯ ನೀಡಿ ಶರಣು: ಬಿಜೆಪಿ
ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರಕಾರವು ನಕ್ಸಲೀಯರಿಗೆ ರಾಜಾತಿಥ್ಯ ನೀಡಿ ಶರಣಾಗತಿ ಮಾಡಿಸಿದ್ದು ಎಷ್ಟು ಸರಿ ಎಂದು ವಿಧಾನಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಪ್ರಶ್ನಿಸಿದ್ದಾರೆ. ನಕ್ಸಲೀಯರು ಕರ್ನಾಟಕ ರಾಜ್ಯದಿಂದ ಸಂಪೂರ್ಣ ಶರಣಾಗತಿ ಆಗುತ್ತಿದ್ದರೆ ಮತ್ತು ಅವರ ಸಮಸ್ಯೆ ಪರಿಹಾರ ಆಗುತ್ತಿದ್ದರೆ ಅದು ಒಳ್ಳೆಯ ವಿಷಯ.

ಆದರೆ, ಮುಖ್ಯಮಂತ್ರಿಗಳು ಅವರನ್ನು ಶರಣಾಗುವಂತೆ ಮಾಡಿಕೊಳ್ಳಬೇಕಿತ್ತೇ? ಸಿಎಂ ಕಚೇರಿಯಲ್ಲಿ ಬಂದು ಶರಣಾಗುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಅವರು, ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳ ಉಪಸ್ಥಿತಿ, ಸಿಎಂ ಗೃಹ ಕಚೇರಿ ಬಳಕೆ, ಪೊಲೀಸ್‌ ಇಲಾಖೆ ಉಪಸ್ಥಿತಿ, ಜೊತೆಗೆ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಕೊಟ್ಟು ಶರಣಾಗತಿ ಕಾರ್ಯಕ್ರಮ ನಡೆಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next