Advertisement

1962..ಅಂದು ಭಾರತದ ಮೇಲೆ ಮುಗಿಬೀಳಲು ಚೀನಾ ಹೇಗೆ ಸಿದ್ಧತೆ ಮಾಡಿಕೊಂಡಿತ್ತು ಗೊತ್ತಾ?

05:37 PM Jun 27, 2020 | Nagendra Trasi |

ಮಣಿಪಾಲ;ಲಡಾಖ್ ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿನ ಸಂಘರ್ಷದ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ಹಲವಾರು ಸುತ್ತಿನ ಮಾತುಕತೆ ನಡೆದಿದ್ದರೂ ಕೂಡಾ ಯಾವುದೇ ಅಂತಿಮ ತೀರ್ಮಾನ ಇನ್ನೂ ಹೊರಬಿದ್ದಿಲ್ಲ. ಲಡಾಖ್, ಗಾಲ್ವಾನ್ ಪ್ರದೇಶದಲ್ಲಿ ಚೀನಾ ಕೂಡಾ ಸೇನೆಯನ್ನು ಹೆಚ್ಚಿಸುತ್ತಿದೆ, ಭಾರತ ಕೂಡಾ ಗಡಿಭಾಗದಲ್ಲಿ ಸೇನೆಯನ್ನು ಜಮಾವಣೆ ಮಾಡುತ್ತಿದೆ. ಏತನ್ಮಧ್ಯೆ 1962ರಲ್ಲಿ ಚೀನಾ ಗಡಿಯಲ್ಲಿ ಹೇಗೆ ಸಿದ್ಧತೆ
ನಡೆಸಿಕೊಂಡಿತ್ತು ಎಂಬ ಹೈಲೈಟ್ಸ್ ಇಲ್ಲಿದೆ…

Advertisement

* 1962ರ ಮೇ ತಿಂಗಳ ಹೊತ್ತಿಗಾಗಲೇ ಚೀನಾ ಗಡಿಯಲ್ಲಿ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿಕೊಂಡು ಕಾದು ಕುಳಿತಿತ್ತು. ಆದರೆ ಅಂದು ಭಾರತ ಮಾತ್ರ ಎನ್ ಇಎಫ್ ಎನ ಗಡಿಯಲ್ಲಿ, ಕಚ್ಚಾ ರಸ್ತೆಗಳನ್ನು ಸರಿಪಡಿಸುವ ಹೆಣಗಾಟದಲ್ಲಿದ್ದಿತ್ತು. ಗಡಿಯಲ್ಲಿ ರಸ್ತೆ ನಿರ್ಮಿಸಲು ಬಂದ ನೂರಾರು ಟಿಬೆಟಿಯನ್ ಕೂಲಿಕಾರರಲ್ಲಿ ಚೀನಿಯರು ಕಳುಹಿಸಿದ್ದ ಗೂಢಚಾರರು ಇದ್ದಿದ್ದರು! ಅವರಿಗೆ ನಾವು ಕೂಲಿ ಕೊಡುತ್ತಿದ್ದೇವು. ಅವರು ನಮ್ಮ ರಸ್ತೆಗಳ ಪ್ರತಿ ತಿರುವು, ಪ್ರತಿ ಬಂಕರು, ಪ್ರತಿ ತಾತ್ಕಾಲಿಕ ಸೈನಿಕ ನೆಲೆಯ ಬಗ್ಗೆ ಚೀನಾ ಕಮಾಂಡರ್ ಗಳಿಗೆ ಮಾಹಿತಿ ರವಾನಿಸುತ್ತಿದ್ದರು. ಹೀಗಾಗಿ ಚೀನಿಯರಿಗೆ ನಮ್ಮ ಎಲ್ಲಾ ಚಲನವಲನ ಗೊತ್ತಾಗುತ್ತಿದ್ದವು.

*ಕೊರಿಯಾ ಯುದ್ಧದಲ್ಲಿ ಮಹತ್ತರ ವಿಜಯಗಳನ್ನು ಸಾಧಿಸಿದ್ದ ವಿಖ್ಯಾತ ಜನರಲ್ ಒಬ್ಬನನ್ನು ಚೀನಾ ಸರ್ಕಾರ ಈ ಯುದ್ಧದ ನೇತೃತ್ವ ವಹಿಸಲು ನೇಮಿಸಿತ್ತು. ನಮ್ಮ ಸೈನ್ಯಕ್ಕೆ ದೊರಕಿದ್ದು ನೆಹರೂ ಅವರ ದುರದೃಷ್ಟಕರ ಆಯ್ಕೆಯಾದ ಬಿಎಂ ಕೌಲ್!

*1962ರ ಮೇ ತಿಂಗಳಿನಲ್ಲಿ ಭಾರತದ ಎಲ್ಲ ಭಾಷೆಗಳನ್ನೂ ಮಾತನಾಡಬಲ್ಲ ಮತ್ತು ತರ್ಜುಮೆ ಮಾಡಬಲ್ಲ. ಅನೇಕರನ್ನು ಆಯ್ಕೆ ಮಾಡಿ ಅವರನ್ನು ಟಿಬೆಟ್ ನ ಲಾಸಾ ನಗರದಲ್ಲಿ ತಂದು ಕೂರಿಸಿತ್ತು ಚೀನಾ. ಯುದ್ಧ ಶುರುವಾದ ಮೇಲೆ ಯಾವುದೇ ಭಾಷೆಯಲ್ಲಿ ನಾವು ವೈರ್ ಲೆಸ್ ಮೆಸೇಜ್ ನೀಡಿದರೂ, ಅದನ್ನು ಇಂಟರ್ ಸೆಪ್ಟ್ ಮಾಡಿ, ಕೇಳಿಸಿಕೊಂಡು ತರ್ಜುಮೆ ಮಾಡಲು ಅವರಿಗೆ ಜನ ಇದ್ದರು. ಅದಕ್ಕಿಂತ ಹೆಚ್ಚಾಗಿ, ಯುದ್ಧ ಕೈದಿಗಳಾಗಿ ಸಿಕ್ಕಿಹಾಕಿಕೊಂಡ ನಮ್ಮ ಯೋಧರ ಬಾಯಿ ಬಿಡಿಸುವ ಜವಾಬ್ದಾರಿಯೂ ಅವರದೇ ಆಗಿತ್ತು. ಈ ವಿಷಯದಲ್ಲಿ ಚೀನಾದ ಗುಪ್ತದಳ ವ್ಯವಸ್ಥೆ ಬಲಿಷ್ಠವಾಗಿತ್ತು.

Advertisement

*ಯುದ್ಧ ಆರಂಭಗೊಳ್ಳುತ್ತಿದ್ದಂತೆಯೇ ಫೋಟೊಗ್ರಾಫರುಗಳನ್ನು ಭಾರತದ ಗಡಿಯೊಳಕ್ಕೆ ಕರೆತಂದ ಚೀನಾ ಸೈನ್ಯ, ಭಾರತೀಯ ಸೈನ್ಯ ತನ್ನ ಮೇಲೆ ದಾಳಿ ನಡೆಸಲು ಅಣಿಯಾಗಿತ್ತು ಎಂಬುದನ್ನು ಸಾಬೀತು ಪಡಿಸುವ ರೀತಿಯಲ್ಲಿ ಸಾವಿರಾರು ಫೋಟೊಗಳನ್ನು ತೆಗೆಸಿಟ್ಟುಕೊಂಡಿತ್ತು!

*1952ರಿಂದಲೇ (ಹತ್ತು ವರ್ಷಕ್ಕೆ ಮುಂಚಿನಿಂದಲೇ) ಚೀನಾ ಅತ್ಯಂತ ಬಲಶಾಲಿಯಾದ ಹೇಸರಗತ್ತೆಗಳನ್ನು ತಮ್ಮ ಬ್ರೀಡಿಂಗ್ ಫಾರ್ಮ್ ಗಳಲ್ಲಿ ಸಾಕಿಕೊಂಡಿದ್ದರು. ಅವೆಲ್ಲದಕ್ಕೂ ತರಬೇತಿ ನೀಡಲಾಗಿತ್ತಂತೆ.

*ಭಾರತೀಯ ಸೈನಿಕರ ಪೋಷಾಕು ಅರೆಬರೆಯಾಗಿ ಧರಿಸಿದ ಸುಮಾರು ಒಂದು ಸಾವಿರ ಕೂಲಿಗಳು ಪ್ರತಿ ನಿತ್ಯ ಭಾರತ-ಚೀನ ಗಡಿಯನ್ನು ಹಾಯ್ದು ಇಲ್ಲಿಂದಲ್ಲಿಗೆ ಓಡಾಡುತ್ತಿದ್ದರು. ಅವರು ಚೀನಿ ಸೈನಿಕರ ಪಾಲಿನ ಕೂಲಿಗಳೂ ಹೌದು, ಗಡಿ ದಾಟಿ ಬರುವ ಗುಪ್ತಚಾರರು ಹೌದು!

*ಅವರ ಯುದ್ಧ ನೆಲೆಗಳಾದ ಲೀ, ಮಾರ್ಮಂಗ್ ಮತ್ತು ಸೋನಾ ಡಿ ಚಾಂಗ್ ಗಳು ಎಷ್ಟು ಎತ್ತರನೆಯ ಸ್ಥಳಗಳಲ್ಲಿದ್ದವೆಂದರೆ ಅವುಗಳ ಮೇಲೆ ನಾವು ದಾಳಿ ಮಾಡುವ ಸಾಧ್ಯತೆಗಳೇ ಇರಲಿಲ್ಲ. ಆದರೆ ಭಾರತದ ಕಡೆ ನಾವು ಮಿಸಾಮಾರಿಯಿಂದ ಹಿಡಿದು ತವಾಂಗ್ ನ ತನಕ ಪ್ರತಿಯೊಂದು ಸೈನಿಕ ನೆಲೆಯನ್ನೂ ರಕ್ಷಿಸಿಕೊಳ್ಳಲೇ ಬೇಕಿತ್ತು.

*ಇವೆಲ್ಲಕ್ಕಿಂತ ಹೆಚ್ಚಾಗಿ ಮಲಗಲು ಹಾಸಿಗೆ, ಹೊದಿಕೆ, ಬಟ್ಟೆ ಇತರೆ ಸವಲತ್ತುಗಳೆಲ್ಲವೂ ಇದ್ದ ಅವರ ಯುದ್ಧ ಕೈದಿಗಳ  ಶಿಬಿರದಲ್ಲಿ ಏನೇನೂ ತೊಂದರೆ ಇಲ್ಲದೆ ನಮ್ಮ ಕಡೆಯ 3000 ಸಾವಿರ ಸೈನಿಕರನ್ನು ಅವರು ತಿಂಗಳುಗಟ್ಟಲೆ ಬಂಧಿಸಿಡಬಲ್ಲಂತಹ ವ್ಯವಸ್ಥೆ ಮಾಡಿಕೊಂಡಿದ್ದರು. ಅದರರ್ಥ ಚೀನಿಗಳು ಒಂದು ಬೃಹತ್ ಪ್ರಮಾಣದ ಯುದ್ಧಕ್ಕೆ ಸಿದ್ದರಾಗಿದ್ದರು. ವಿಪರ್ಯಾಸವೆಂದರೆ ನಮ್ಮ ಕಡೆ ಪೂರ್ತಿ 3000 ಸೈನಿಕರೇ ಯುದ್ಧಕ್ಕೆ ಅಣಿಯಾಗಿರಲಿಲ್ಲವಾಗಿತ್ತು!

ಒಂದೇ ಮಾತಿನಲ್ಲಿ ಹೇಳುವುದಾದರೆ ಚೀನಿಯರ ಪಾಲಿಗೆ ಯುದ್ಧವೆಂಬುದು ಆಕಸ್ಮಿಕವಾಗಿರಲಿಲ್ಲ, ಅವರದು ಕೊನೆಯ ಘಳಿಗೆಯ ನಿರ್ಣಯವೂ ಆಗಿರಲಿಲ್ಲ. 1962ರ ಸೆಪ್ಟೆಂಬರ್ 8ರಂದು ಬೆಳಗಿನ ಜಾವ ಚೀನಿ ಸೈನ್ಯದ ಒಂದು ಬಲಿಷ್ಠ ತುಕಡಿ ಭಾರತದ ಗಡಿಯೊಳಕ್ಕೆ ಅನಾಯಾಸವಾಗಿ ನುಗ್ಗಿ ಬಂದು ಥಗ್ಗಾ ಪರ್ವತದ ಮೇಲೆ ತನ್ನ ಬಾವುಟ ಹಾರಿಸಿ..ನಮ್ಮ ಧೋಲಾ ಪೋಸ್ಟ್ ನತ್ತ ಬಂದೂಕು ತಿರುಗಿಸಿದಾಗ
ರಜೆಯಲ್ಲಿತ್ತು ದಿಲ್ಲಿ!
ರಜೆಯಲ್ಲಿತ್ತು ಸೇನೆ!
ಇಡೀ ಭಾರತ ದೇಶವೇ ಆಳುವವರು ಗತಿಯಿಲ್ಲದೆ ನಿಸ್ಸಾಹಾಯಕವಾಗಿ ನಿಂತಿತ್ತು!

(ಹಿಮಾಲಯನ್ ಬ್ಲಂಡರ್ ಪುಸ್ತಕದ ಆಯ್ದ ಭಾಗ)

Advertisement

Udayavani is now on Telegram. Click here to join our channel and stay updated with the latest news.

Next