Advertisement
ಕೇಂದ್ರದ ಎನ್‌ಡಿಎ ಸರ್ಕಾರದ ಪ್ರಮುಖ ಪಿಲ್ಲರ್‌ಗಳು ಎಂದೇ ಬಿಂಬಿತವಾದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ, ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮೋದಿ 3.0 ಸರ್ಕಾರಕ್ಕೆ ಕಾರಣೀಭೂತವಾದವು. ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಕ್ಕೆ ಕುಸಿದಾಗ ತಲಾ 16 ಮತ್ತು 12 ಜನ ಲೋಕಸಭಾ ಸದಸ್ಯರನ್ನು ಹೊಂದಿರುವ ಈ ಪಕ್ಷಗಳು ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಹೆಗಲಾದವು. ಇದನ್ನೇ ಅಸ್ತ್ರವಾಗಿಟ್ಟುಕೊಂಡ ಈ ಎರಡು ಪಕ್ಷಗಳು ಈಗ ಕೇಂದ್ರ ಬಜೆಟ್‌ನಲ್ಲಿ ಸಾಕಷ್ಟು ಅನುದಾನ ಪಡೆಯುವ ಮೂಲಕ ಗೆಲುವಿನ ನಗೆ ಬೀರಿವೆ.
Related Articles
Advertisement
ವಿದ್ಯುತ್‌ಗಾಗಿ 21 ಸಾವಿರ ಕೋಟಿ ರೂ.: ಬಿಹಾರದಲ್ಲಿ ವಿದ್ಯುತ್ ಸ್ಥಾವರಕ್ಕಾಗಿ 21,400 ಕೋಟಿ ರೂ. ಅನುದಾನ ಘೋಷಣೆಯಾಗಿದ್ದು, ಪೀರ್‌ಪೈಂತಿಯಲ್ಲಿ 2400 ಮೆಗಾ ವ್ಯಾಟ್‌ನ ವಿದ್ಯುತ್ ಸ್ಥಾವರವನ್ನು ನಿರ್ಮಿಸಲಾಗುವುದು. ಜತೆಗೆ ಬಿಹಾರದಲ್ಲಿ ಹೊಸ ವಿಮಾನ ನಿಲ್ದಾಣಗಳು, ವೈದ್ಯಕೀಯ ಕಾಲೇಜುಗಳು ಹಾಗೂ ಕ್ರೀಡಾ ಮೂಲಸೌಕರ್ಯಕ್ಕೂ ಒತ್ತು ನೀಡಲಾಗಿದೆ.
ಬಿಹಾರ ಪ್ರವಾಸೋದ್ಯಮಕ್ಕೆ ಒತ್ತು: ಬಿಹಾರದಲ್ಲಿ ಜಾಗತಿಕ ಪ್ರವಾಸೋದ್ಯಮ ವೃದ್ಧಿಯಾಗುವ ಸಲುವಾಗಿ ಇಲ್ಲಿನ ಪುರಾತನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮನ್ನಣೆ ನೀಡಲಾಗಿದೆ. ಕಾಶಿ ವಿಶ್ವನಾಥ ಕಾರಿಡಾರ್ ರೀತಿಯಲ್ಲಿಯೇ ಬೋಧಗಯಾದಲ್ಲಿರುವ ಮಹಾಬೋಧಿ ದೇವಾಲಯದಲ್ಲೂ ವಿಶ್ವ ದರ್ಜೆಯ ಕಾರಿಡಾರ್ ನಿರ್ಮಿಸಲು ಅನುದಾನ ಘೋಷಣೆಯಾಗಿದೆ. ಭಾರತದ ಪ್ರಾಚೀನ ವಿಶ್ವವಿದ್ಯಾಯಲವಾದ ನಳಂದಾವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಇದರ ಜತೆಗೆ ನಳಂದ-ರಾಜಗೀರ್ ಕಾರಿಡಾರ್ ಅಡಿ ರಾಜ್‌ಗೀರ್ ಅಥವಾ “ಪುರಾತನ ರಾಜಗೃಹ’ದ ಸರ್ವತೋಮುಖ ಬೆಳವಣಿಗೆಗಾಗಿ ಒತ್ತು ನೀಡಲಾಗಿದೆ.
“ವಿಕಸಿತ ಭಾರತ’ ಸಾಧನೆಗಾಗಿ ಪೂರ್ವೋದಯ ಯೋಜನೆಯನ್ನು ಪರಿಚಯಿಸಿದ್ದು, ಇದರ ಅಡಿಯಲ್ಲಿ ಪೂರ್ವ ರಾಜ್ಯಗಳಾದ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಆಂಧ್ರ ಪ್ರದೇಶಗಳ ಮೂಕಸೌಕರ್ಯಕ್ಕಾಗಿ ವಿಶೇಷ ಅನುದಾನ ನೀಡಲಾಗುತ್ತಿದೆ. ಇದಲ್ಲದೇ ಬಿಹಾರದ ಸರ್ವತೋಮುಖ ಅಭಿವೃದ್ಧಿಗಾಗಿ ಬಾಹ್ಯ ಸಹಾಯದ ಘೋಷಣೆಯಾಗಿದ್ದು, ಬಂಡವಾಳ ಹೂಡಿಕೆಗಳನ್ನು ಬೆಂಬಲಿಸುವ ಸಲುವಾಗಿ ಹೆಚ್ಚುವರಿ ಆರ್ಥಿಕ ಸಹಾಯ ಒದಗಿಸಲಾಗುವುದು.
ಆತ್ಮನಿರ್ಭರ ಬಿಹಾರ ನಿರ್ಮಾಣ
ಬಿಹಾರಕ್ಕೆ ನೀಡಿರುವ ಕೊಡುಗೆಗಳನ್ನು ಸ್ವಾಗತಿಸಿರುವ ಆಡಳಿತಾರೂಡ ಜೆಡಿಯು, ರಾಜ್ಯವನ್ನು ಆತ್ಮನಿರ್ಭರಗೊಳಿಸುವಲ್ಲಿ ಈ ಯೋಜನೆಗಳು ಮಹತ್ವದ ಹೆಜ್ಜೆಯಾಗಿವೆ ಎಂದಿದೆ. ಬಿಹಾರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 26,000 ಕೋಟಿ ರೂ. ಹಾಗೂ ಪ್ರವಾಹಪೀಡಿತ ಪ್ರದೇಶಗಳ ನಿರ್ವಹಣೆಗಾಗಿ 11,500 ಕೋಟಿ ರೂ. ನೀಡುವ ಮೂಲಕ ವಿಶೇಷ ಆರ್ಥಿಕ ನೆರವು ನೀಡಲಾಗಿದೆ ಎಂದು ಉಲ್ಲೇಖೀಸಿದೆ.