ಬೀಜಿಂಗ್: ಚೀನದ ವುಹಾನ್ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು “ಅದೃಶ್ಯ ಮೇಲಂಗಿ’ ಸಂಶೋಧಿಸಿದ್ದಾರೆ. ಇದನ್ನು ಧರಿಸಿದರೆ ಬೆಳಗಿನ ಸಮಯದಲ್ಲಿ ಕ್ಯಾಮೆರಾಗಳು ಮತ್ತು ರಾತ್ರಿ ವೇಳೆ ಇನಾರೆಡ್ ಕ್ಯಾಮೆರಾಗಳಿಂದ ಅದೃಶ್ಯವಾಗಬಹುದಾಗಿದೆ.
ಮೇಲಂಗಿ ಅಥವಾ ಕೋಟ್ ರೂಪದಲ್ಲಿ ಇರುವ ಈ ಅದೃಶ್ಯ ಕವಚವು ಕೃತಕ ಬುದ್ಧಿಮತ್ತೆ(ಎಐ) ಸಹಾಯದಿಂದ ಕಾರ್ಯನಿರ್ವಹಿಸುವ ಕ್ಯಾಮೆರಾಗಳಿಂದ ಹಗಲು ಮತ್ತು ರಾತ್ರಿ ಎರಡರಲ್ಲೂ ಮಾನವನ ದೇಹವನ್ನು ಮರೆಮಾಚಬಹುದಾಗಿದೆ.
ವುಹಾನ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊ. ವಾಂಗ್ ಜೆಂಗ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಡೆಸಿರುವ ಈ ಸಂಶೋಧನೆಗೆ “ಇನ್ವಿಸ್ ಡಿಫೆನ್ಸ್ ಕೋಟ್’ ಎಂದು ಕರೆಯಲಾಗಿದೆ. “ಅದೃಶ್ಯ ಮೇಲಂಗಿ’ಯು ಮಾನವರ ಕಣ್ಣಿಗೆ ಕಾಣಲಿದೆ. ಆದರೆ ಸಿಸಿಟಿವಿಗಳ ಕಣ್ಣುಗಳಿಂದ ಮಾನವನ ದೇಹ ಅದೃಶ್ಯವಾಗಲಿದೆ.
“ಇತ್ತೀಚಿನ ದಿನಗಳಲ್ಲಿ, ಅನೇಕ ಕಣ್ಗಾವಲು ಸಾಧನಗಳು ಮಾನವ ದೇಹಗಳನ್ನು ಪತ್ತೆ ಮಾಡುತ್ತವೆ. ರಸ್ತೆಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳು ಪಾದಚಾರಿಗಳನ್ನು ಪತ್ತೆ ಮಾಡುವ ಕ್ಷಮತೆ ಹೊಂದಿವೆ. ಸ್ಮಾರ್ಟ್ ಕಾರುಗಳಿಂದ ಪಾದಚಾರಿಗಳು, ರಸ್ತೆಗಳು ಮತ್ತು ಅಡೆತಡೆಗಳನ್ನು ಗುರುತಿಸಬಹುದು. “ಅದೃಶ್ಯ ಮೇಲಂಗಿ’ಯನ್ನು ಕ್ಯಾಮೆರಾ ಸೆರೆಹಿಡಿಯುತ್ತದೆ. ಆದರೆ ಅದನ್ನು ಧರಿಸಿರುವವರು ಮನುಷ್ಯರೇ ಎಂದು ಗುರುತಿಸಲು ಕ್ಯಾಮೆರಾಗಳಿಗೆ ಸಾಧ್ಯವಾಗುವುದಿಲ್ಲ,’ ಎಂದು ಪ್ರೊ. ವಾಂಗ್ ಜೆಂಗ್ ವಿವರಿಸಿದ್ದಾರೆ.